ಮಜುಲಿ ದ್ವೀಪದ ಗರಮೂರ್ ಮಾರುಕಟ್ಟೆ ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಬಣ್ಣದ ದೀಪಗಳು ಮತ್ತು ಮಣ್ಣಿನ ದೀಪಗಳಿಂದ ಬೆಳಗತೊಡಗುತ್ತದೆ. ಚಳಿಗಾಲದ ಆರಂಭದ ಸಂಜೆ ಪ್ರಾರಂಭವಾಗುತ್ತಿದ್ದಂತೆ, ಖೋಲ್ ಡೋಲುಗಳ ಬಡಿತ ಮತ್ತು ತಾಳಗಳ ಸದ್ದು ಸುತ್ತಲೂ ಹರಡಿರುವ ಧ್ವನಿವರ್ಧಕಗಳ ಮೂಲಕ ಮೊಳಗುತ್ತದೆ.
ಹೀಗೆ ರಾಸ್ ಮಹೋತ್ಸವ ಆರಂಭವಾಗುತ್ತದೆ.
ಈ ಉತ್ಸವವನ್ನು ಅಸ್ಸಾಮಿ ತಿಂಗಳಾದ ಕಟಿ-ಅಘುನ್ ನ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಂದು ನಡೆಸಲಾಗುತ್ತದೆ - ಇದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬರುತ್ತದೆ - ಪ್ರತಿವರ್ಷ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಈ ದ್ವೀಪಕ್ಕೆ ಆಕರ್ಷಿಸುತ್ತದೆ. ಇದು ಎರಡು ದಿನಗಳವರೆಗೂ ಮುಂದುವರಿಯುತ್ತದೆ.
"ಈ ಹಬ್ಬ ಇಲ್ಲದಿದ್ದರೆ, ನಮಗೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಇದು [ರಾಸ್ ಮಹೋತ್ಸವ] ನಮ್ಮ ಸಂಸ್ಕೃತಿ" ಎಂದು ಬೋರುನ್ ಚಿಟಾದಾರ್ ಚುಕ್ ಗ್ರಾಮದಲ್ಲಿ ಉತ್ಸವವನ್ನು ಆಯೋಜಿಸುವ ಸಮಿತಿಯ ಕಾರ್ಯದರ್ಶಿ ರಾಜಾ ಪಾಯೆಂಗ್ ಹೇಳುತ್ತಾರೆ. "ಜನರು ವರ್ಷವಿಡೀ ಇದಕ್ಕಾಗಿ ಕುತೂಹಲದಿಂದ ಕಾಯುತ್ತಾರೆ" ಎಂದು ಅವರು ಹೇಳುತ್ತಾರೆ.
ಅಸ್ಸಾಂನ ಹಲವಾರು ವೈಷ್ಣವ ಮಠಗಳಲ್ಲಿ ಒಂದಾದ ಗರಮೂರ್ ಸಾರು ಸತ್ರದ ಬಳಿ ನೂರಾರು ನಿವಾಸಿಗಳು ತಮ್ಮಲ್ಲಿರುವ ಒಳ್ಳೆಯ ಬಟ್ಟೆಯನ್ನು ಧರಿಸಿ ನೆರೆದಿದ್ದಾರೆ.





































