ನವಶ್ಯಾ ಕುವ್ರಾ ದಕ್ಷಿಣ ಮುಂಬಯಿಯ ಆಜಾದ್ ಮೈದಾನದಲ್ಲಿ ನೃತ್ಯ ಮಾಡುತ್ತಿದ್ದ 40 ಚಳುವಳಿಗಾರರಿಗಾಗಿ ತಮ್ಮ ಧುಮ್ಸಿ (ಡ್ರಮ್) ನುಡಿಸುತ್ತಿದ್ದರು.ಇನ್ನೇನು ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ, ರಾತ್ರಿ 11 ಗಂಟೆಗೆ ಮೂವರು ಜನರು ಅವರ ಬಳಿ ಬಂದರು.
“ಇದು ಮದುವೆ ಕಾರ್ಯವೇ? ಯಾವ ತಾರೀಕಿಗೆ ಇದೆ? ಎಂದು ನವಶ್ಯಾ ಕೇಳಿದರು. ಅವರು ಮಾತುಕತೆ ನಡೆಸಿ ಪೋನ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡ ನಂತರ ಅಲ್ಲಿಂದ ಮೂವರು ಹೊರಟು ಹೋದರು. ಜನವರಿ 25 ರಂದು ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಜೊತೆಗಿದ್ದ ರೈತರ ಗುಂಪಿನತ್ತ ತಿರುಗಿ ನವಶ್ಯಾ, “ನನಗೆ ಸುಪಾರಿ ಕೆಲಸ ಸಿಕ್ಕಿತು.” ಎಂದು ಅಚ್ಚರಿಯಿಂದ ಹೇಳಿದರು.
ದಹನು ತಾಲೂಕಿನ ಕಿನ್ಹಾವಲಿ ಗ್ರಾಮದಲ್ಲಿರುವ ತಮ್ಮ ಐದು ಎಕರೆ ಅರಣ್ಯ ಭೂಮಿಯಲ್ಲಿ ನವಶ್ಯಾ ಮತ್ತು ಅವರ ಪತ್ನಿ ಬಿಜ್ಲಿ ಅವರು ಜೋಳ, ಅಕ್ಕಿ ಮತ್ತು ತೊಗರಿ ಬೆಳೆಯುತ್ತಾರೆ. ಒಂದು ವೇಳೆ ಗದ್ದೆ ಕೆಲಸದಲ್ಲಿ ನಿರತರಾಗದೆ ಇದ್ದಲ್ಲಿ 55 ವರ್ಷದ ರೈತರಾಗಿರುವ ನವಶ್ಯಾ ಇಂತಹ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಅವರು ತಿಂಗಳಿಗೆ 10-15 ವಿವಾಹಗಳಲ್ಲಿ ಡೋಲು ನುಡಿಸುತ್ತಾರೆ, ಇದಕ್ಕಾಗಿ ಅವರು ಶುಲ್ಕವನ್ನು ನಿಗದಿಪಡಿಸುತ್ತಾರೆ. ಕಾರ್ಯಕ್ರಮದ ಸಂಘಟಕರು ಅವರಿಗೆ ಪ್ರಯಾಣ, ಆಹಾರ ಮತ್ತು ವಸತಿ ವೆಚ್ಚವನ್ನು ಭರಿಸುತ್ತಾರೆ. ”ಹೆಚ್ಚಾಗಿ ನಾನು ನಾಸಿಕ್‌ನಲ್ಲಿ ಕಾರ್ಯಕ್ರಮ ನೀಡುತ್ತೇನೆ, ಆದರೆ ನಾನು ಥಾಣೆ ಮತ್ತು ಗುಜರಾತ್ ಗೂ ಕೂಡ ಹೋಗಿದ್ದೇನೆ” ಎಂದು ನವಶ್ಯಾ ಹೇಳುತ್ತಾರೆ.
ಅವರು 40 ವರ್ಷಗಳಿಂದ ಧುಮ್ಸಿ ನುಡಿಸುತ್ತಿದ್ದಾರೆ. "ನಮ್ಮೂರಿನಲ್ಲಿನ ಇತರ ಸಂಗೀತಗಾರರನ್ನು ನೋಡಿ ನಾನು ನುಡಿಸುವುದನ್ನು ಕಲಿತಿದ್ದೇನೆ” ಎನ್ನುತ್ತಾರೆ.





