ಬೆಲ್ಡಾಂಗ ಪಟ್ಟಣದಿಂದ ಕೋಲ್ಕತಾಗೆ ಹೋಗುವ ಹಜಾರದ್ವಾರಿ ಎಕ್ಸಪ್ರೆಸ್ ರೈಲು ಪ್ಲಾಸಿ ನಿಲುದಾಣದಿಂದ ನಿಧಾನವಾಗಿ ಹೊರಟದ್ದೇ ತಡ, ಏಕತಾರಿಯ ನಾದವೊಂದು ಬೋಗಿಯ ತುಂಬಾ ತೇಲುತ್ತಾ ತೇಲುತ್ತಾ ಹರಿಯಿತು. ಸಂಜಯ ಬಿಸ್ವಾಸ್ ತಮ್ಮ ಚೀಲದ ತುಂಬ ಮರದಿಂದ ತಾವೇ ತಯಾರಿಸಿದ ಕರಕುಶಲ ವಸ್ತುಗಳನ್ನು ತಂದಿದ್ದರು, ಅದರಲ್ಲಿ ಚರಕ, ಮೇಜು ದೀಪ, ಕಾರು, ಬಸ್ಸು ಮತ್ತು ಒಂದು ತಂತಿಯ ಏಕತಾರಿ ಇದ್ದವು.
ಗೊಂಬೆಗಳು, ಕೀಚೈನುಗಳು, ಕೊಡೆಗಳು, ಟಾರ್ಚುಗಳು ಲೈಟರುಗಳಂತಹ- ಚೀನಾಮಾಲು ಮತ್ತು ಕರ್ಚೀಫು, ಪಾಕೆಟ್ ಕ್ಯಾಲೆಂಡರ್ ಡೈರಿ, ಮೆಹಂದಿ ಡಿಸೈನಿನ ಪುಸ್ತಕಗಳು, ಚುರುಮುರಿ, ಬೇಯಿಸಿದ ಮೊಟ್ಟೆ, ಚಹಾ, ಕಡಲೆಕಾಯಿ, ಸಮೋಸ, ಬಾಟಲಿ ನೀರು ಇನ್ನೂ ಮುಂತಾದವುಗಳಿಗೆ ಹೋಲಿಸಿದರೆ, ಅಚ್ಚುಕಟ್ಟಾಗಿ ತಯಾರಿಸಿದ್ದ ಇವರ ಕಲಾಕೃತಿಗಳು ವಿಶಿಷ್ಟವಾಗಿದ್ದವು. ರೈಲಿನ ಪ್ರತಿಯೊಬ್ಬ ವ್ಯಾಪಾರಿಗೂ ಒಂದು ನಿರ್ದಿಷ್ಟ ಮಾರ್ಗ ಮತ್ತು ಬೋಗಿಗಳನ್ನು ನಿಗದಿ ಮಾಡಲಾಗಿರುತ್ತದೆ.
ಪ್ರಯಾಣಿಕರು ಕಡಿಮೆ ಬೆಲೆಗಾಗಿ ಸಾಕಷ್ಟು ಚೌಕಾಸಿ ಮಾಡುತ್ತಾರೆ. ಮುರ್ಶಿದಾಬಾದ್ ಜಿಲ್ಲೆಯ ಬೆಹರಾಂಪುರ ಉಪವಿಭಾಗದ ಬೆಲ್ಡಾಂಗದಿಂದ ರಾಣಾಘಾಟವರೆಗೆ ರೈಲು ಎರಡು ಗಂಟೆಯಲ್ಲಿ 100 ಕಿಮೀ ಕ್ರಮಿಸುವುದರೊಳಗೆ ಸಾಕಷ್ಟು ವ್ಯಾಪಾರ ನಡೆಯುತ್ತದೆ. ಬಹುಪಾಲು ಮಂದಿ ವ್ಯಾಪಾರಿಗಳು ರಾಣಾಘಾಟಿನಲ್ಲಿ, ಇನ್ನು ಕೆಲವರು ಕೃಷ್ಣಾನಗರದಲ್ಲಿ ಇಳಿದುಕೊಳ್ಳುತ್ತಾರೆ, ಎರಡೂ ಈ ಮಾರ್ಗದ ಮುಖ್ಯ ರೈಲ್ವೆ ಜಂಕ್ಷನ್ನುಗಳು, ಅಲ್ಲಿಂದ ಅವರ ಹಳ್ಳಿಗಳಿಗೆ ಮತ್ತು ಪಟ್ಟಣಗಳಿಗೆ ಲೋಕಲ್ ಟ್ರೈನುಗಳಲ್ಲಿ ಹೋಗುತ್ತಾರೆ.
ಯಾರೋ ಒಬ್ಬರು ಸುಂದರವಾದ ಏಕತಾರಿಯನ್ನು ನೋಡಿ ಬೆಲೆಯೆಷ್ಟು ಎಂದು ಸಂಜಯರನ್ನು ಕೇಳಿದರು. 300 ರೂಪಾಯಿ ಎಂದರು. ಬೆಲೆ ಕೇಳಿದವರಿಗೆ ದುಬಾರಿಯೆನಿಸಿತು, ಮನದಾಸೆಯನ್ನು ಅಡಗಿಸಿ ಮರುಮಾತಾಡದೆ ಸುಮ್ಮನೆ ಕೂತರು. ಸಂಜಯರು ಪ್ರಾರಂಭಿಸಿದರು, “ಇದು ಅಗ್ಗದ ಆಟಿಕೆಯಲ್ಲ, ನಾನಿದನ್ನು ತುಂಬಾ ಕಷ್ಟಪಟ್ಟು, ತಾಳ್ಮೆಯಿಂದ ಮಾಡಿದ್ದೇನೆ. ಇದಕ್ಕಾಗಿ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಬಳಸಿದ್ದೇನೆ. ಈ ಏಕತಾರಿಯ ಕೆಳಗೆ ಕಾಣುತ್ತಿದೆಯಲ್ಲ ಇದು ನಿಜವಾದ ಚರ್ಮದಿಂದ ಮಾಡಿದ್ದು.” ಮತ್ತೊಬ್ಬರು ಪ್ರಶ್ನೆ ಎತ್ತಿದರು: “ನಮಗೆ ಜಾತ್ರೆಯಲ್ಲಿ ಇದಕ್ಕಿಂತಾ ಅಗ್ಗವಾಗಿ ಸಿಗುತ್ತೆ ಬಿಡಿ,” ಸಂಜಯರು ಉತ್ತರಿಸಿದರು, “ಇದು ಜಾತ್ರೇಲಿ ಸಂತೇಲಿ ಮಾರೋ ಅಗ್ಗದ ಸಾಮಾನಲ್ಲ, ನಾನು ವ್ಯಾಪಾರದಲ್ಲಿ ಜನರಿಗೆ ಮೋಸ ದಗಾ ಮಾಡೋದಿಲ್ಲ”
ಸೀಟುಗಳ ನಡುವಿನ ಓಣಿಯಲ್ಲಿ ತಮ್ಮ ಕಲಾಕೃತಿಗಳನ್ನು ತೋರಿಸುತ್ತಾ, ಚಿಕ್ಕ ಪುಟ್ಟ ಕೆಲವನ್ನು ಮಾರುತ್ತಾ ಮುಂದೆ ಮುಂದೆ ಹೋದರು. “ತಗೋಳಿ, ಕೈಯಲ್ಲಿ ಹಿಡಕೊಂಡು ನೋಡಿ, ನೋಡೋಕೆ ದುಡ್ಡಿಲ್ಲ.” ಅಷ್ಟರಲ್ಲಿ ಕುತೂಹಲದಿಂದ ಗಮನಿಸುತ್ತಿದ್ದ ದಂಪತಿಗಳಿಬ್ಬರು ಏಕತಾರಿಯೊಂದನ್ನು ಚೌಕಾಸಿ ಮಾಡದೆ ಹೇಳಿದ ಬೆಲೆಗೆ ಕೊಂಡುಕೊಂಡರು. ಸಂಜಯರ ಮುಖ ಅರಳಿತು. “ಇದನ್ನು ಮಾಡೋಕೆ ತುಂಬಾ ಶ್ರಮ ಬೇಕು – ಕೇಳಿ, ಎಷ್ಟು ಚೆನ್ನಾಗಿದೆ ಇದರ ನಾದ.”




