“ಹೊಳೆಯಲ್ಲಿ ಬೇಸಾಯ ಮಾಡುವುದು ಹೆಚ್ಚು ಅನುಕೂಲಕರ. ಇಲ್ಲಿ ಕೊಯ್ಲಿನ ನಂತರ ಯಾವುದೇ ಕಸ ಉಳಿಯುವುದಿಲ್ಲ. ಅಲ್ಲದೆ ಇಲ್ಲಿ ಕಳೆ ಕೂಡಾ ಬೆಳೆಯುವುದಿಲ್ಲ.”
ಕುಂತಿ ಪಾಣೆ ಮಹಾಸಮುಂದ್ ಜಿಲ್ಲೆಯ ಘೋಡಾರಿ ಗ್ರಾಮದವರಾಗಿದ್ದು, ರಾಯ್ಪುರ ಜಿಲ್ಲೆಯ ನಾಗ್ರಿ ಪಟ್ಟಣದ ಬಳಿಯ ಫಾರ್ಸಿಯಾ ಗ್ರಾಮದಲ್ಲಿ ಹರಿಯುವ ಮಹಾನದಿ ನದಿಯ ದಡದಲ್ಲಿ ಕೃಷಿ ಮಾಡುವ 50ರಿಂದ 60ಕ್ಕೂ ಹೆಚ್ಚು ರೈತರಲ್ಲಿ ಇವರೂ ಒಬ್ಬರು. "ಈಗ ಒಂದು ದಶಕದಿಂದ ಇದನ್ನು ಮಾಡುತ್ತಿದ್ದೇನೆ. ನನ್ನ ಪತಿ ಮತ್ತು ನಾನು ಇಲ್ಲಿ ಬೆಂಡೆಕಾಯಿ, ಬೀನ್ಸ್ ಮತ್ತು ಕಲ್ಲಂಗಡಿ ಕೃಷಿ ಮಾಡುತ್ತೇವೆ" ಎಂದು 57 ವರ್ಷದ ಅವರು ಹೇಳುತ್ತಾರೆ.
ಅವರು ಹೊಳೆಯ ಪಕ್ಕದಲ್ಲಿ ಕಟ್ಟಿದ್ದ ಕಾವಲು ಗುಡಿಸಲಿನಲ್ಲಿ ಕುಳಿತು ನಮ್ಮೊಡನೆ ಮಾತನಾಡುತ್ತಿದ್ದರು. ಅದು ಒಬ್ಬ ವ್ಯಕ್ತಿ ಮಲಗಲು ಸಾಕಾಗುವಷ್ಟು ಜಾಗವನ್ನು ಹೊಂದಿತ್ತು. ಸಣ್ಣ ಮಳೆಯಿಂದ ಒಬ್ಬರನ್ನು ಕಾಪಾಡುವುದಕ್ಕೂ ಅದು ಸಾಕು. ಆದರೆ ಅದರ ಮುಖ್ಯ ಉದ್ದೇಶ ರಾತ್ರಿ ಅಲ್ಲಿ ಉಳಿದು ಬೆಳೆ ತಿನ್ನಲು ಬರಬಹುದಾದ ಹಸುಗಳು ಮತ್ತು ಇತರ ಪ್ರಾಣಿಗಳನ್ನು ಓಡಿಸುವುದು.
ಮಹಾನದಿಯ ಮೇಲಿನ ಸೇತುವೆಯು ರಾಯ್ಪುರ ಜಿಲ್ಲೆಯ ಪರಗಾಂವ್ ಮತ್ತು ಮಹಾಸಮುಂದ್ ಜಿಲ್ಲೆಯ ಘೋಡಾರಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಸೇತುವೆಯ ಕೆಳಗೆ ತೇಲುವ ಹಸಿರು ತೇಪೆಗಳನ್ನು ನೋಡಬಹುದು. ಎರಡೂ ಹಳ್ಳಿಗಳ ರೈತರು ಮರಳು ನದಿ ಪಾತ್ರವನ್ನು ಡಿಸೆಂಬರ್ ತಿಂಗಳಿನಿಂದ ಮೇ ಅಂತ್ಯದ ಮೊದಲ ಮಳೆಯವರೆಗೆ ಕೃಷಿ ಮಾಡಲು ತಮ್ಮೊಳಗೆ ಪಾಲು ಮಾಡಿಕೊಂಡಿದ್ದಾರೆ.














