ತನ್ನ ಮಗಳ ದುರಂತ ಸಾವಿನ ನಂತರದ ಐದು ವರ್ಷಗಳಲ್ಲಿ ಕಾಂತ ಭಿಸೆಯ ಆಕ್ರೋಶವು ಮಾತಾಗಿ ಹೊರಹೊಮ್ಮಲು ನಿರ್ಧರಿಸಿದೆ."ನಮ್ಮ ಬಡತನದಿಂದಾಗಿ ನನ್ನ ಮಗು ಸತ್ತಿದೆ" ಎಂದು ಕಾಂತಾ ಹೇಳುತ್ತಾರೆ, ಅವರ ಮಗಳು ಮೋಹಿನಿ ಭಿಸೆ ಜನವರಿ 20, 2016ರಂದು ಆತ್ಮಹತ್ಯೆ ಮಾಡಿಕೊಂಡರು.
18 ವರ್ಷದ ಮೋಹಿನಿ ಮೃತಪಟ್ಟಾಗ ಆಕೆ 12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. "12ನೇ ತರಗತಿಯ ನಂತರ ಆಕೆಗೆ ಶಿಕ್ಷಣ ನೀಡಲು ನಮಗೆ ಸಾಧ್ಯವಾಗಲಿಲ್ಲ, ಹೀಗಾಗಿ ನಾವು ಅವಳಿಗೆ ಮದುವೆ ಮಾಡಿಸಲು ಸೂಕ್ತ ಗಂಡಿನ ಹುಡುಕಾಟದಲ್ಲಿ ತೊಡಗಿದ್ದೆವು" ಎಂದು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಭೀಸೆವಘೋಲಿ ಗ್ರಾಮದ 42 ವರ್ಷದ ಕಾಂತಾ ಹೇಳುತ್ತಾರೆ.
ಮದುವೆ ಎಂದರೆ ಖರ್ಚಿನ ಕೆಲಸ ಇದ್ದ ಹಾಗೆ, ಹೀಗಾಗಿ ಕಾಂತಾ ಮತ್ತು ಅವರ 45 ವರ್ಷದ ಪತಿ ಪಾಂಡುರಂಗ ಚಿಂತಿತರಾಗಿದ್ದರು. “ನಾನು ಮತ್ತು ನನ್ನ ಪತಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಮೋಹಿನಿಯ ಮದುವೆಗೆ ಬೇಕಾದ ಹಣವನ್ನು ಸಂಗ್ರಹಿಸುವುದು ಅಸಾಧ್ಯವೆಂದು ನಾವು ಭಾವಿಸಿದ್ದೆವು. ಆಗ ವರದಕ್ಷಿಣೆ ದರ ಸುಮಾರು 1 ಲಕ್ಷ ರೂಗಳಿಷ್ಟಿತ್ತು” ಎಂದು ಅವರು ಹೇಳುತ್ತಿದ್ದರು.
ದಂಪತಿಗಳು ಈಗಾಗಲೇ ಖಾಸಗಿ ಲೇವಾದೇವಿದಾರರಿಂದ ತಿಂಗಳಿಗೆ ಶೇ 5ರಷ್ಟು ಬಡ್ಡಿದರದಲ್ಲಿ 2.5 ಲಕ್ಷ ರೂ ಸಾಲವನ್ನು ತೆಗೆದುಕೊಂಡಿದ್ದಾರೆ. 2013ರಲ್ಲಿ ಅವರ ಹಿರಿಯ ಮಗಳು ಅಶ್ವಿನಿಯ ಮದುವೆಗಾಗಿ ಈ ಮೊತ್ತವನ್ನು ಸಾಲವಾಗಿ ಪಡೆಯಲಾಗಿತ್ತು. ಮೋಹಿನಿಯ ಮದುವೆಗೆ ತಂದಿದ್ದ 2 ಲಕ್ಷ ರೂ. ಸಾಲವನ್ನು ತೀರಿಸಲು ಈಗ ಅವರಿಗೆ ತಮ್ಮ ಜಮೀನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ.
ಭೀಸೆ ವಾಘೋಲಿಯಲ್ಲಿ ಅವರ ಒಂದು ಎಕರೆ ಜಮೀನು ಸಾಗುವಳಿಯಾಗುತ್ತಿಲ್ಲ. "ಇಲ್ಲಿ ನೀರಾವರಿ ವ್ಯವಸ್ಥೆಯಿಲ್ಲ ಮತ್ತು ನಮ್ಮ ಪ್ರದೇಶದಲ್ಲಿ ಯಾವಾಗಲೂ ಬರ ಇರುತ್ತದೆ" ಎಂದು ಕಾಂತಾ ವಿವರಿಸುತ್ತಾರೆ. 2016ರಲ್ಲಿ, ಅವರು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿ ದಿನಕ್ಕೆ 150 ರೂ ದುಡಿಯುತ್ತಿದ್ದರೆ, ಪಾಂಡುರಂಗ ಅವರು 300 ರೂ. ಸಂಪಾದಿಸುತ್ತಿದ್ದರು.ಇಬ್ಬರೂ ಸೇರಿ ತಿಂಗಳಿಗೆ 2,000-2,400 ರೂ.ಗಳನ್ನು ಸಂಪಾದಿಸುತ್ತಿದ್ದರು.



