"ನಮ್ಮ ಬದುಕೇ ಒಂದು ಜೂಜಾಟದಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಾವು ಹೇಗೆ ಬದುಕನ್ನು ನಿರ್ವಹಿಸಿದ್ದೇವೆ ಎನ್ನುವುದು ದೇವರಿಗೆ ಮಾತ್ರ ಗೊತ್ತು" ಎಂದು ವಿ. ಧರ್ಮ ಹೇಳುತ್ತಾರೆ. "ನನ್ನ 47 ವರ್ಷಗಳ ಜಾನಪದ ಕಲೆಯ ಬದುಕಿನಲ್ಲಿ, ಇದೇ ಮೊದಲ ಬಾರಿಗೆ ಈ ಎರಡು ವರ್ಷಗಳಲ್ಲಿ ನಮಗೆ ಬದುಕಲೂ ಯಾವ ಮಾರ್ಗವೂ ಇದ್ದಿರಲಿಲ್ಲ."
60 ವರ್ಷದ ಧರ್ಮ ಅಮ್ಮ ತಮಿಳುನಾಡಿನ ಮಧುರೈ ನಗರದಲ್ಲಿ ವಾಸಿಸುವ ಟ್ರಾನ್ಸ್ ಮಹಿಳಾ ಜಾನಪದ ಕಲಾವಿದೆ. ಅವರು "ನಮಗೆ ನಿಗದಿತ ಸಂಬಳವೇನೂ ಇರುವುದಿಲ್ಲ", ಎಂದು ಮುಂದುವರೆದು ಹೇಳುತ್ತಾರೆ. ಮತ್ತು ಈ ಕೊರೊನಾ (ಮಹಾಮಾರಿ) ಕಾರಣದಿಂದಾಗಿ ನಾವು ನಮಗೆ ಬದುಕು ನಡೆಸಲು ಇದ್ದ ಕೆಲವು ಅವಕಾಶಗಳನ್ನು ಸಹ ಕಳೆದುಕೊಂಡಿದ್ದೇವೆ."
ಮಧುರೈ ಜಿಲ್ಲೆಯ ಟ್ರಾನ್ಸ್ ಜಾನಪದ ಕಲಾವಿದರ ಪಾಲಿಗೆ ವರ್ಷದ ಮೊದಲ ಆರು ತಿಂಗಳುಗಳು ಬಹಳ ನಿರ್ಣಾಯಕ. ಈ ಅವಧಿಯಲ್ಲಿ, ಹಳ್ಳಿಗಳು ತಮ್ಮ ಊರ ಹಬ್ಬಗಳನ್ನು ಆಯೋಜಿಸುತ್ತವೆ ಮತ್ತು ದೇವಾಲಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆದರೆ ಲಾಕ್ ಡೌನ್ ಸಮಯದಲ್ಲಿ, ದೊಡ್ಡ ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳು ರಾಜ್ಯದ ಟ್ರಾನ್ಸ್ ಮಹಿಳಾ ಕಲಾವಿದರ ವೃತ್ತಿ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ. ಸುಮಾರು 500 ಮಂದಿ ಟ್ರಾನ್ಸ್ ಕಲಾವಿದರಿದ್ದಾರೆ ಎಂದು ಹೇಳುವ ಅಂದಾಜು 60 ವರ್ಷದ ಧರ್ಮ ಅಮ್ಮ (ಜನರು ಸಾಮಾನ್ಯವಾಗಿ ಅವರನ್ನು ಕರೆಯುವ ಹೆಸರು), ಅವರು ನಾಟಕ ಮತ್ತು ಜಾನಪದ ಕಲೆಯ ಟ್ರಾನ್ಸ್ ಮಹಿಳೆಯರ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿದ್ದಾರೆ.
ಧರ್ಮ ಅಮ್ಮ ಮಧುರೈ ರೈಲ್ವೆ ನಿಲ್ದಾಣದ ಬಳಿಯ ಬಾಡಿಗೆ ಕೋಣೆಯಲ್ಲಿ, ಹೂವಿನ ಮಾರಾಟಗಾರನಾಗಿರುವ ಸೋದರಳಿಯ ಮತ್ತು ಅವನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಮಧುರೈ ನಗರದಲ್ಲಿ ಹುಟ್ಟಿ ಬೆಳೆದ ಅವರ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದರು. ಈ ಸಮಯದಲ್ಲಿ ಇತರ ಟ್ರಾನ್ಸ್ ವ್ಯಕ್ತಿಗಳು ದೇವಾಲಯಗಳಲ್ಲಿ ಮತ್ತು ಹತ್ತಿರದ ಹಳ್ಳಿಗಳಲ್ಲಿನ ಹಬ್ಬಗಳಲ್ಲಿ ಕಲಾ ಪ್ರದರ್ಶನ ಮಾಡುವುದನ್ನು ಅವರು ನೋಡುತ್ತಿದ್ದರು.












