ಮಧುರೈ ಜಿಲ್ಲೆಯ ಟ್ರಾನ್ಸ್ ಜಾನಪದ ಕಲಾವಿದರ ಪಾಲಿಗೆ ವರ್ಷದ ಮೊದಲ ಆರು ತಿಂಗಳುಗಳು ನಿರ್ಣಾಯಕವಾದುದು. ಏಕೆಂದರೆ ಈ ಅವಧಿಯಲ್ಲಿ, ಹಳ್ಳಿಗಳು ತಮ್ಮ ಊರಿನ ಹಬ್ಬಗಳನ್ನು ಆಯೋಜಿಸುತ್ತವೆ ಮತ್ತು ದೇವಾಲಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆದರೆ ಲಾಕ್‌ಡೌನ್ ಸಮಯದಲ್ಲಿ, ದೊಡ್ಡ ಸಾರ್ವಜನಿಕ ಕೂಟಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳು ತಮಿಳುನಾಡಿನ ಸರಿಸುಮಾರು 500 ಟ್ರಾನ್ಸ್ ಮಹಿಳಾ ಕಲಾವಿದರ ಮೇಲೆ ತೀವ್ರ ಪರಿಣಾಮ ಬೀರಿವೆ.
ಅಂತಹ ಒಬ್ಬ ಜಾನಪದ ಕಲಾವಿದರಾದ ಮ್ಯಾಗಿಯವರ ಮನೆ ಮಧುರೈನಿಂದ 10 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ವಿಲಂಗುಡಿ ಪಟ್ಟಣದಲ್ಲಿದೆ. ಇಂದು ಅವರ ಎರಡು ಕೋಣೆಗಳ ಮನೆ ಇತರ ಟ್ರಾನ್ಸ್ ಮಹಿಳೆಯರಿಗೆ ನೆಲೆ ಮತ್ತು ಪರಸ್ಪರ ಭೇಟಿಯ ಸ್ಥಳವಾಗಿದೆ. ಬೀಜ ಮೊಳಕೆಯೊಡೆಯುವ ಸಂದರ್ಭದ ಆಚರಣೆಯ ಭಾಗವಾಗಿ ಬಿತ್ತನೆಯ ನಂತರ ಸಾಂಪ್ರದಾಯಿಕ ಕುಮ್ಮಿ ಪಾಟ್ಟು ಹಾಡುಗಳನ್ನು ಪ್ರದರ್ಶಿಸುವ ಜಿಲ್ಲೆಯ ಕೆಲವು ಟ್ರಾನ್ಸ್ ಮಹಿಳೆಯರಲ್ಲಿ ಮ್ಯಾಗಿ ಒಬ್ಬರು. ಈ ನೃತ್ಯ-ಸಂಗೀತವನ್ನು ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ನಡೆಯುವ 10 ದಿನಗಳ ಮುಲೈಪರಿ ಹಬ್ಬದಲ್ಲಿ ಆಚರಿಸಲಾಗುತ್ತದೆ, ಈ ಹಾಡನ್ನು ಮಳೆ, ಮಣ್ಣಿನ ಫಲವತ್ತತೆ ಮತ್ತು ಉತ್ತಮ ಫಸಲಿಗಾಗಿ ಗ್ರಾಮ ದೇವತೆಗಳ ಪ್ರಾರ್ಥನೆಯಾಗಿ ಹಾಡಲಾಗುತ್ತದೆ.
ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳೆಲ್ಲರೂ ಈ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಇದು ಅವರ ಬಹುಕಾಲದ ಆದಾಯ ಮೂಲವಾಗಿದೆ. ಆದರೆ ಕೊರೋನಾ-ಲಾಕ್‌ಡೌನ್‌ಗಳ ಕಾರಣ ಈ ಹಬ್ಬವು ಜುಲೈ 2020ರಲ್ಲಿ ನಡೆಯಲಿಲ್ಲ ಮತ್ತು ಈ ಬಾರಿಯೂ ನಡೆಯಲಿಲ್ಲ (ನೋಡಿ: In Madurai: the trauma of trans folk artists). ಅವರ ಇತರ ನಿಯಮಿತ ಆದಾಯದ ಮೂಲವಾಗಿದ್ದ ಮಧುರೈ ಮತ್ತು ಸುತ್ತಮುತ್ತಲಿನ ಅಂಗಡಿಗಳಿಂದ ಅಥವಾ ಬೆಂಗಳೂರಿನಲ್ಲಿ ಹಣವನ್ನು ಸಂಗ್ರಹಿಸುವುದು ಸಹ ನಿಂತುಹೋಯಿತು. ಇದರೊಂದಿಗೆ, ಅವರ ಸರಿಸುಮಾರು ರೂ. 8,000ದಿಂದ 10,000 ರೂ. ತನಕ ಇದ್ದ ಮಾಸಿಕ ಆದಾಯವು ಲಾಕ್‌ಡೌನ್‌ಗಳ ಅವಧಿಯಲ್ಲಿ ಬಹುತೇಕ ಸೊನ್ನೆಗೆ ಬಂದು ನಿಂತಿತು.







