ಮಲ್ಲಿಗೆ ಒಂದು ಗದ್ದಲದ ಹೂ. ಇದು ಬೆಳ್ಳಂಬೆಳಗ್ಗೆ ಇಲ್ಲಿನ ಮಾರುಕಟ್ಟೆಗೆ ಬರುತ್ತದೆ. ಮಧುರೈ ಮಟ್ಟಥವಾನಿ ಮಾರುಕಟ್ಟೆಯಲ್ಲಿ ಬಂದು ಸುರಿಯುವ ಚೀಲಗಟ್ಟಲೆ ಮುತ್ತಿನಂತಹ ಮಲ್ಲಿಗೆ ಮೊಗ್ಗುಗಳು ಇಲ್ಲಿನ ಗದ್ದಲಕ್ಕೆ ಕಾರಣ. “ವಾಳಿ, ವಾಳಿ” ಎಂದು ಗಂಡಸರು ಹೂಗಳನ್ನು ಸುರಿಯುವಾಗ ಕೂಗುತ್ತಾರೆ. ಪ್ಲಾಸ್ಟಿಕ್ ಶೀಟಿನ ಮೇಲೆ ಹೂವನ್ನು ಸುರಿದ ನಂತರ ಅದನ್ನು ಒಟ್ಟುಗೂಡಿಸಿ ಮಾರಾಟಗಾರರು ತೂಕ ಮಾಡುತ್ತಾರೆ. ಒಂದು ಕಿಲೋ ಹೂವನ್ನು ಗ್ರಾಹಕರ ಚೀಲಕ್ಕೆ ಸುರಿಯುತ್ತಾರೆ. ಅಲ್ಲಿ ಇನ್ಯಾರೋ ದರವನ್ನು ಕೂಗುತ್ತಾರೆ. ಟಾರ್ಪಲಿನ್ ಮೇಲೆ ಉಳಿದು ಹೋದ ಹೂವುಗಳನ್ನು ತುಳಿಯುತ್ತಾ ಸಾಗುತ್ತಾರೆ ಜಂಗುಳಿಯಲ್ಲಿನ ಜನರು. ಏಜೆಂಟರು ಖರೀದಿ ಮತ್ತು ಮಾರಾಟದ ಮೇಲೆ ಗಮನವಿಡುತ್ತಾರೆ. ತೀವ್ರ ಕಣ್ಣೋಟದೊಡನೆ ನೋಟ್ ಪುಸ್ತಕದ ಮೇಲೆ ಗಡಿಬಿಡಿಯಿಂದ ಬರೆದುಕೊಳ್ಳುತ್ತಾರೆ. ಈ ಯಾರೋ ಒಬ್ಬರು ಜಂಗುಳಿಯಿಂದ “ನನಗೆ ಐದು ಕಿಲೋ ಬೇಕು” ಎಂದು ಕೂಗುತ್ತಾರೆ.
ಮಹಿಳೆಯರು ಒಳ್ಳೆಯ ಹೂವಿಗಾಗಿ ಮಾರುಕಟ್ಟೆಯಲ್ಲಿ ಹುಡುಕುತ್ತಾರೆ. ಅವರು ಮೊಗ್ಗನ್ನು ಕೈಯಲ್ಲಿ ತೆಗೆದುಕೊಂಡು ಮತ್ತೆ ರಾಶಿಗೆ ಚೆಲ್ಲುತ್ತಾರೆ. ಅವರ ಕೈಯಿಂದ ಮೊಗ್ಗುಗಳು ಉದುರುವುದು ಹೂಮಳೆಯಂತೆ ಕಾಣುತ್ತದೆ. ಓರ್ವ ಹೂ ಮಾರಾಟಗಾರ ಹೆಂಗಸು ಗುಲಾಬಿ ಮತ್ತು ಚೆಂಡು ಹೂವನ್ನು ಸೇರಿಸಿ ಹಲ್ಲಿನಿಂದ ಕಚ್ಚಿ ಕ್ಲಿಪ್ ಅಗಲಿಸಿ ಹೂ ತಲೆಗಿಟ್ಟು ಕ್ಲಿಪ್ ಸೇರಿಸಿ ಮುಡಿದುಕೊಳ್ಳುತ್ತಾರೆ. ನಂತರ ಆಕೆ ತನ್ನ ಚೆಂಡು ಹೂ, ಮಲ್ಲಿಗೆ ಮತ್ತು ಗುಲಾಬಿ ತುಂಬಿದ ಬುಟ್ಟಿಯನ್ನು ಎತ್ತಿಕೊಂಡು ಮಾರುಕಟ್ಟೆಯಿಂದ ಮೆಲ್ಲನೆ ಹೊರನಡೆಯುತ್ತಾಳೆ.
ಆಕೆ ರಸ್ತೆ ಬದಿಯಲ್ಲಿ ಕೊಡೆಯೊಂದರ ಅಡಿ ಕುಳಿತು ಅವುಗಳನ್ನು ಬಿಡಿಬಿಡಿಯಾಗಿ ಮಾರತೊಡಗುತ್ತಾಳೆ. ಹಸಿರು ದಾರದಲ್ಲಿ ಬಂಧಿಯಾದ ಮಲ್ಲಿಗೆ ಮೊಗ್ಗುಗಳು ತಮ್ಮ ದಳಗಳ ಒಳಗೆ ಪರಿಮಳವನ್ನು ಮುಚ್ಚಿಟ್ಟುಕೊಂಡಿವೆ. ಒಮ್ಮೆ ಅವು ತಮ್ಮನ್ನು ಕೊಂಡವರ ಕಾರಿನಲ್ಲಿ, ದೇವರ ಫೋಟೊಗಳ ಎದುರು ಅರಳಿ ಅಲ್ಲಿ ಸುಳಿದು ಹೋಗುವವರಿಗೆಲ್ಲ ತಮ್ಮ ಹೆಸರು ಮಧುರೈ ಮಲ್ಲಿ ಎಂದು ಪರಿಮಳದ ಮೂಲಕ ಸಾರಿ ಹೇಳುತ್ತವೆ.
ಪರಿ ಮಟ್ಟುತವಾನಿ ಮಾರುಕಟ್ಟೆಗೆ ಮೂರು ವರ್ಷದಲ್ಲಿ ಒಟ್ಟು ಮೂರು ಸಲ ಭೇಟಿ ನೀಡಿತು. ಮೊದಲ ಭೇಟಿ 2021ರ ಸೆಪ್ಟೆಂಬರ್ ತಿಂಗಳಿನಲ್ಲಿ. ಆಗ ಗಣೇಶ ಚತುರ್ಥಿಗೆ ನಾಲ್ಕು ದಿನಗಳು ಬಾಕಿಯಿದ್ದವು. ಆಗ ಹೇರಲಾಗಿದ್ದ ಕೋವಿಡ್ ನಿರ್ಬಂಧಗಳು ಇದಕ್ಕೆ ಕಾರಣ. ಆಗ ಮಾರುಕಟ್ಟೆ ತಾತ್ಕಾಲಿಕವಾಗಿ ಮಟ್ಟುತವಾನಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಜಂಗಳಿಯನ್ನು ನಿಯಂತ್ರಿಸಿ ಸಾಮಾಜಿಕ ಅಂತರವನ್ನು ಕಾಪಾಡುವುದು ಇದರ ಹಿದಿನ ಉದ್ದೇಶವಾಗಿತ್ತು. ಆದರೆ ಮಾರುಕಟ್ಟೆ ಗಿಜಿಗುಡುತ್ತಿತ್ತು.
ಈ ಜಗತ್ತಿನ ಕುರಿತಾದ ನನ್ನ ಮೊದಲ ತರಗತಿಗೆ ಮೊದಲು, ಮಧುರೈ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷರು ತಮ್ಮ ಹೆಸರನ್ನು ಘೋಷಿಸಿದರು: "ನಾನು ಪೂಕಡೈ ರಾಮಚಂದ್ರನ್. ಮತ್ತು ಇದು ನನ್ನ ವಿಶ್ವವಿದ್ಯಾಲಯ" ಎಂದು ಅವರು ಹೂವಿನ ಮಾರುಕಟ್ಟೆಯ ಕಡೆ ಕೈ ತೋರಿಸಿ ಹೇಳಿದರು.






























