ಈ ನಗರದ ಮಕ್ಕಳು ಅನಾಥರೇ?
ಕ್ಯಾಲೆಂಡರ್ ಕಡೆ ನೋಡಿ
ಆಗಸ್ಟ್ ಬರುತ್ತದೆ, ಹೋಗುತ್ತದೆ
ಆದರೆ ಕೆಲವರ ಪಾಲಿಗೆ ಹಾಗಿಲ್ಲ
ಅವರ ಪಾಲಿಗೆ ಆಗಸ್ಟ್
ಕಣ್ಣೀರಾಗಿ ಹರಿಯುತ್ತದೆ
ಕೆಲವರಿಗೆ ಆಗಸ್ಟ್ ಎಂದರೆ
ಕೈ ನಡುಗುತ್ತವೆ, ಹೃದಯ ಒಡೆಯುತ್ತದೆ
ಉಸಿರುಗಟ್ಟಿದಂತಾಗಿ ಸಾಯುವ ಅನುಭವವಾಗುತ್ತದೆ.
ಕೆಲವರ ಪಾಲಿಗೆ ಅದು ಕೆಟ್ಟ ಕನಸು
ಕೆಲವರಿಗೆ ಕುತ್ತಿಗೆಯ ಸುತ್ತಲಿನ ಕುಣಿಕೆ
ಗೋರಖಪುರದ ತಾಯಂದಿರಿಗೆ
ಇದು ಗರ್ಭದೊಳಗಿನ ಭಯ
ಯಾಕೆಂದರೆ, ಅವರ ಪಾಲಿಗೆ ಆಗಸ್ಟ್
ಕೇವಲ ತಿಂಗಳಲ್ಲ ಒಂದಿಡೀ ವರ್ಷ.
ಅವರು ಹೇಳುತ್ತಾರೆ, ತಾಯಂದಿರ ಭಯ ಸುಳ್ಳೆಂದು
ಅಪ್ಪಂದಿರು ಸುಳ್ಳರೆಂದು
ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲವೆನ್ನುವುದು
ಮೊಘಲರ ಹುಟ್ಟಿಸಿದ ಪಿತೂರಿ
ನಿಜವೆಂದರೆ ಎಲ್ಲೆಡೆ ಆಮ್ಲಜನಕದ ಸಮೃದ್ಧಿಯಿದೆ
ಪ್ರತಿ ಬೀದಿಯಲ್ಲೂ, ರಸ್ತೆಯಲ್ಲೂ
ಗೋಮಾತೆ ಆಮ್ಲಜನಕವನ್ನೇ ಉಸಿರಾಡಿ ಹೊರಗೆ ಬಿಡುತ್ತಾಳೆ.
ನಿಜವಾಗಿ ಕೊಲ್ಲುತ್ತಿರುವುದು ಅತಿಯಾದ ಆಮ್ಲಜನಕ
ಪ್ರತಿ ಮಾತೂ ಉಸಿರುಗಟ್ಟಿಸುತ್ತದೆ
ಅನಾಥರಂತೆ ಕಾಣುವ ಈ ಮಕ್ಕಳು ಯಾರು?
ತೆರೆದ ಚರಂಡಿಗಳ
ಸೊಳ್ಳೆಗಳಿಂದ ಕಚ್ಚಿಸಿಕೊಂಡಿರುವ ಈ ಮಕ್ಕಳು ಯಾರವು?
ಕೈಯಲ್ಲಿ ಕೊಳಲಿಲ್ಲ ಈ ಮಕ್ಕಳು ಯಾರವು?
ಯಾರ ಮಕ್ಕಳು ಇವರು?
ಎಲ್ಲಿಂದ ಬಂದರಿವರು?
ಇವರ ಸ್ಲಮ್ಮುಗಳಲ್ಲಿ ಹಾಲಿನ ಹೊಳೆ ಹರಿಯುವುದಿಲ್ಲ
ಇವರ ಮನೆಗಳಲ್ಲಿ ಕೃಷ್ಣ ಅವತಾರ ಎತ್ತುವುದಿಲ್ಲ
ತಡರಾತ್ರಿಗಳಲ್ಲಿ
ಆದರೆ ಕೇವಲ ಬೆತ್ತಲೆಯಾಗಿ ಜಗತ್ತಿಗೆ ಬರುತ್ತವೆ ಈ ಮಕ್ಕಳು
ಮತ್ತೆ ಇವರಿಗೆ ಆಕ್ಸಿಜನ್ ಬೇಕಂತೆ
ಆಸ್ಪತ್ರೆಯ ಬೆಡ್ ಬೇಕಂತೆ
ಎಷ್ಟು ವಿಚಿತ್ರವಿದು
ಗೋರಖನ ನೆಲವು ಸಿಡಿಯುವುದರಲ್ಲಿದೆ
ಕಬೀರ ನೋವಿಗೆ ಹೆಪ್ಪುಗಟ್ಟಿದ್ದಾನೆ
ರಫ್ತಿಯ ಅಲೆಗಳಲ್ಲಿ ಜ್ವಾಲೆ ತುಂಬಿಕೊಂಡಿವೆ
ಸಂಭ್ರಮದಿಂದ ನಲಿಯಬೇಕಿದ್ದ ನಗರ
ಮೌನದಲ್ಲಿ ಮುಳುಗಿದೆ
ಪ್ರಾಂತ್ಯದ ಮಹಾಂತ ಹೇಳುತ್ತಾರೆ
ಇದು ವಿಗ್ರಹದ ಪ್ರತಿಷ್ಟಾಪನೆ ಬೇಡುತ್ತಿದೆಯೆಂದು
ಇದು ನಮ್ಮ ಮಕ್ಕಳ ರಕ್ತದ ಬಲಿ ಕೇಳುತ್ತದೆಯೆಂದು



