ಮಾರುತಿ ವ್ಯಾನ್ ತುಂಬಿದ್ದು ಚಲಿಸಲು ಸಿದ್ಧವಾಗಿದೆ. ರೈತರು ಲಭ್ಯವಿರುವ ಪ್ರತಿಯೊಂದು ಮೂಲೆಯನ್ನೂ ಆಕ್ರಮಿಸಿಕೊಂಡಿದ್ದಾರೆ, ಕೆಲವರು ಪರಸ್ಪರರ ಮಡಿಲಲ್ಲಿ ಕುಳಿತಿದ್ದಾರೆ. ಅವರ ಚೀಲಗಳು ಮತ್ತು ವಾಕಿಂಗ್ ಸ್ಟಿಕ್‌ಗಳನ್ನು ಹಿಂಬದಿಯ ಆಸನದ ಬಳಿ ಉಳಿದಿರುವ ಜಾಗದಲ್ಲಿ ಇರಿಸಿದ್ದಾರೆ.
ಆದರೆ ಮಂಗಲ್ ಘಡ್ಗೆ ಪಕ್ಕದಲ್ಲಿ ಒಂದು ಆಸನವು ಖಾಲಿ ಉಳಿದಿತ್ತು. ಅವರು ಯಾರನ್ನೂ ಅಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ - ಅದನ್ನು ‘ಕಾಯ್ದಿರಿಸಲಾಗಿತ್ತು.ʼ ನಂತರ ಮೀರಾಬಾಯಿ ಲಂಗೆ ವ್ಯಾನ್ ತನಕ ನಡೆದು ಬಂದು, ಆ ಖಾಲಿ ಜಾಗದಲ್ಲಿ ಕುಳಿತು ತನ್ನ ಸೀರೆಯನ್ನು ಸರಿಹೊಂದಿಸಿಕೊಳ್ಳುತ್ತಿದ್ದರೆ, ಮಂಗಲ್ ತನ್ನ ತೋಳನ್ನು ಅವರ ಭುಜಗಳನ್ನು ಬಳಸುತ್ತಾರೆ. ಮಾರುತಿ ವ್ಯಾನಿನ ಬಾಗಿಲು ಮುಚ್ಚುತ್ತದೆ ಆಗ ಮಂಗಲ್ ಡ್ರೈವರ್‌ಗೆ, “ಚಲ್ ರೆ [ಹೊರಡೋಣ]” ಎಂದು ಹೇಳುತ್ತಾರೆ..
ಮಂಗಲ್, 53, ಮತ್ತು ಮೀರಾಬಾಯಿ, 65, ಇಬ್ಬರೂ ನಾಸಿಕ್‌ನ ದಿಂಡೋರಿ ತಾಲ್ಲೂಕಿನ ಶಿಂಡ್ವಾಡ್ ಗ್ರಾಮದವರು ಅವರೇನೂ ಒಂದೇ ಹಳ್ಳಿಯಲ್ಲಿ ದಶಕಗಳನ್ನು ಕಳೆದಿದ್ದರಿಂದಲ್ಲ ಆದರೆ ಕಳೆದ ಕೆಲವು ವರ್ಷಗಳು ಅವರ ನಡುವಿನ ಅನ್ಯೋನ್ಯತೆಯನ್ನು ಗಟ್ಟಿಗೊಳಿಸಿದೆ. "ನಾವು ಹಳ್ಳಿಯಲ್ಲಿ ಕೆಲಸ ಮತ್ತು ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ ಮುಳುಗಿ ಹೋಗಿರುತ್ತೇವೆ" ಎಂದು ಮಂಗಲ್ ಹೇಳುತ್ತಾರೆ. "ಪ್ರತಿಭಟನೆಯಲ್ಲಿ, ನಮಗೆ ಮಾತನಾಡಲು ಹೆಚ್ಚು ಸಮಯ ಸಿಗುತ್ತದೆ.”
ಮಾರ್ಚ್ 2018ರಲ್ಲಿ ನಾಸಿಕ್‌ನಿಂದ ಮುಂಬೈಗೆ ಕಿಸಾನ್ ಲಾಂಗ್ ಮಾರ್ಚ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ಕಿಸಾನ್ ಮುಕ್ತಿ ಮೋರ್ಚಾಕ್ಕಾಗಿ ಅವರು 2018ರ ನವೆಂಬರ್‌ನಲ್ಲಿ ದೆಹಲಿಗೆ ಒಟ್ಟಿಗೆ ಪ್ರಯಾಣಿಸಿದ್ದರು ಮತ್ತು ಈಗ, ಅವರು ನಾಸಿಕ್‌ನಿಂದ ದೆಹಲಿಗೆ ವಾಹನ ಮೆರವಣಿಗೆಯ ಜಾಥಾದಲ್ಲಿ ಜೊತೆಯಾಗಿದ್ದಾರೆ. "ಪೊಟಾಸತಿ [ನಮ್ಮ ಹೊಟ್ಟೆಪಾಡಿಗೆ]," ಮಂಗಲ್ ಅವರು ಈ ಪ್ರತಿಭಟನೆಯಲ್ಲಿ ಏಕೆ ಭಾಗವಹಿಸುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದಾಗ ಹೀಗೆ ಹೇಳಿದರು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಯುದ್ದಕ್ಕೂ ಮೂರು ವಿಭಿನ್ನ ತಾಣಗಳಲ್ಲಿ ಹತ್ತಾರು ಸಾವಿರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲು ಡಿಸೆಂಬರ್ 21ರಂದು ಮಹಾರಾಷ್ಟ್ರದ ಸುಮಾರು 2,000 ರೈತರು ಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ದೆಹಲಿಗೆ ಹೋಗುವ ಜಾಥಾದಲ್ಲಿ ಭಾಗವಹಿಸಲು ನಾಸಿಕ್‌ನಲ್ಲಿ ಒಟ್ಟುಗೂಡಿದರು. ಇವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಜೊತೆಗೆ ಸಂಯೋಜಿತವಾಗಿರುವ ಅಖಿಲ ಭಾರತ ಕಿಸಾನ್ ಸಭೆಯಡಿ ಸಂಘಟಿಸಲಾಗಿದೆ.
ಉತ್ಸಾಹಭರಿತ ಪ್ರತಿಭಟನಾಕಾರರ ಈ ತಂಡದಲ್ಲಿ ಮಂಗಲ್ ಮತ್ತು ಮೀರಾಬಾಯಿ ಕೂಡ ಸೇರಿದ್ದಾರೆ.




