ರಾಧಾ ತೋರಿದ ಧೈರ್ಯಕ್ಕೆ ಬೆಲೆ ತೆತ್ತಿದ್ದು ಮಾತ್ರ ಅವರ ಬಳಿಯಿದ್ದ ನಾಲ್ಕು ನಾಯಿಗಳು. ಮೊದಲ ನಾಯಿಯ ಕುತ್ತಿಗೆ ಕೊಯ್ದಿದ್ದರು. ಎರಡನೆಯದಕ್ಕೆ ವಿಷವಿಕ್ಕಿದ್ದರು, ಮೂರನೆಯದು ಕಾಣೆಯಾದರೆ ನಾಲ್ಕನೇ ನಾಯಿಯನ್ನು ಅವರ ಕಣ್ಣ ಮುಂದೆಯೇ ಕೊಲ್ಲಲಾಯಿತು. “ನನ್ನ ಮೇಲೆ ಎಸಗಿದ ಕ್ರೌರ್ಯಕ್ಕಾಗಿ ನಮ್ಮೂರಿನ ನಾಲ್ಕು ಬಲಶಾಲಿ ಜನರು ಜೈಲಿನಲ್ಲಿದ್ದಾರೆ, ಅದಕ್ಕಾಗಿ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ” ಎನ್ನುತ್ತಾರೆ ರಾಧಾ
ಸುಮಾರು ಆರು ವರ್ಷಗಳ ಹಿಂದೆ ನಾಲ್ವರು ಪುರುಷರು ರಾಧಾ ಅವರ(ಹೆಸರು ಬದಲಾಯಿಸಲಾಗಿದೆ) ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅವರು ತನ್ನ ಹಳ್ಳಿಯಿಂದ ಬೀಡ್ ನಗರಕ್ಕೆ ಹೋಗುತ್ತಿದ್ದರು - ಸುಮಾರು 100 ಕಿಲೋಮೀಟರ್ ದೂರದಲ್ಲಿ, ಬೀಡ್ ಜಿಲ್ಲೆಯಲ್ಲಿ - ಖಾಸಗಿ ವಾಹನದ ಚಾಲಕ ಲಿಫ್ಟ್ ನೀಡುವ ನೆಪವೊಡ್ಡಿ ಅವರನ್ನು ಅಪಹರಿಸಿದ್ದನು. ನಂತರ ಅವನು ಮತ್ತು ಅದೇ ಗ್ರಾಮದ ಅವನ ಮೂವರು ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದರು.
"ಅದರ ನಂತರ ನಾನು ವಾರಗಳವರೆಗೆ ವಿಚಲಿತಳಾಗಿದ್ದೆ" ಎಂದು 40 ವರ್ಷದ ರಾಧಾ ತನಗಾಗಿದ್ದ ಆಘಾತದ ಕುರಿತು ಹೇಳುತ್ತಾರೆ. "ಅವರನ್ನು ಕಾನೂನಿನ ಮೂಲಕ ಶಿಕ್ಷಿಸುವ ನಿರ್ಧಾರಕ್ಕೆ ಬಂದ ನಾನು ಪೊಲೀಸ್ ದೂರು ದಾಖಲಿಸಿದೆ."
ಅವರ ಮೇಲೆ ಹಿಂಸಾತ್ಮಕ ಹಲ್ಲೆ ನಡೆದ ಸಮಯದಲ್ಲಿ, ರಾಧಾ ತನ್ನ ಪತಿ ಮತ್ತು ಮಕ್ಕಳೊಂದಿಗೆ ಬೀಡ್ ನಗರದಲ್ಲಿ ನೆಲೆಸಿದ್ದರು. "ನನ್ನ ಪತಿ ಅಲ್ಲಿನ ಫೈನಾನ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಕೃಷಿಭೂಮಿಯನ್ನು ನೋಡಿಕೊಳ್ಳಲು ನಾನು ಆಗೊಮ್ಮೆ ಈಗೊಮ್ಮೆ ಹಳ್ಳಿಗೆ ಹೋಗುತ್ತಿದ್ದೆ" ಎಂದು ಅವರು ಹೇಳುತ್ತಾರೆ.
ದೂರು ದಾಖಲಿಸಿದ ನಂತರ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ರಾಧಾರ ಮೇಲೆ ಒತ್ತಡ ಹೇರಲಾಯಿತು. ದುಷ್ಕರ್ಮಿಗಳು ಮತ್ತು ಅವರ ಸಂಬಂಧಿಕರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮದ ಪ್ರಭಾವಿ ವ್ಯಕ್ತಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆಂದು ಅವರು ಹೇಳುತ್ತಾರೆ. "ನಾನು ಒತ್ತಡವನ್ನು ಎದುರಿಸಿದ್ದೇನೆ. ಆದರೆ ನಾನು ಹಳ್ಳಿಯಿಂದ ದೂರದಲ್ಲಿ ವಾಸಿಸುತ್ತಿದ್ದೆ. ನಗರದಲ್ಲಿ ಜನರು ನನ್ನನ್ನು ಬೆಂಬಲಿಸಿದ್ದರು. ಇದು ನನ್ನಲ್ಲಿ ಸ್ವಲ್ಪ ಮಟ್ಟಿಗೆ ಸುರಕ್ಷಿತ ಮತ್ತು ಆತ್ಮವಿಶ್ವಾದ ಭಾವವನ್ನು ಹುಟ್ಟಿಸಿತ್ತು."
ಆದರೆ ಮಾರ್ಚ್ 2020ರಲ್ಲಿ ಕೋವಿಡ್ -19 ಪ್ರಕೋಪಕ್ಕೇರಿದ ನಂತರ, ಅವರ ಭದ್ರತೆಯ ಪರದೆ ಹರಿದುಬಿದ್ದಿತು. ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಕೂಡಲೇ, ಅವರ ಪತಿ ಮನೋಜ್ (ಹೆಸರು ಬದಲಾಯಿಸಲಾಗಿದೆ) ತನ್ನ ಕೆಲಸವನ್ನು ಕಳೆದುಕೊಂಡರು. ರಾಧಾ ಹೇಳುತ್ತಾರೆ, “ಅವರು ತಿಂಗಳಿಗೆ 10,000 ರೂ ಗಳಿಸುತ್ತಿದ್ದರು ಮತ್ತು ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು, ಆದರೆ ಮನೋಜ್ ನಿರುದ್ಯೋಗಿಯಾದ ನಂತರ ನಮಗೆ ಬಾಡಿಗೆ ಕಟ್ಟುವುದು ಕಷ್ಟವಾಯಿತು. ದಿನ ಕಳೆದಂತೆ ನಮಗೆ ಹೊಟ್ಟೆ ಹೊರೆದುಕೊಳ್ಳುವುದಕ್ಕೂ ಕಷ್ಟವಾಗತೊಡಗಿತು.”
ಬೇರೆ ಆಯ್ಕೆಗಳಿಲ್ಲದ ಕಾರಣ ರಾಧಾ, ಮನೋಜ್ ಮತ್ತು ಅವರ ಮಕ್ಕಳು ಒಲ್ಲದ ಮನಸ್ಸಿನಿಂದ ರಾಧಾ ಅತ್ಯಾಚಾರಕ್ಕೊಳಗಾದ ಸ್ಥಳವಾದ ತಮ್ಮ ಹಳ್ಳಿಯಲ್ಲಿ ವಾಸಿಸಲು ಹೋದರು. "ನಮಗೆ ಇಲ್ಲಿ ಮೂರು ಎಕರೆ ಭೂಮಿಯಿದೆ, ಇತರ ಆಯ್ಕೆಗಳ ಕುರಿತು ಹೆಚ್ಚು ಯೋಚಿಸದೆ ಇಲ್ಲಿ ಉಳಿಯಲು ಬಂದೆವು." ಎಂದು ಅವರು ಹೇಳುತ್ತಾರೆ. ಕುಟುಂಬವು ಈಗ ಹೊಲದಲ್ಲಿರುವ ಗುಡಿಸಲಿನಲ್ಲಿ ವಾಸಿಸುತ್ತಿದೆ, ಮತ್ತು ರಾಧಾ ತಮ್ಮ ಹೊಲದಲ್ಲಿ ಹತ್ತಿ ಮತ್ತು ಜೋಳವನ್ನು ಬೆಳೆಯುತ್ತಾರೆ.
ಮತ್ತೆ ಊರಿಗೆ ಬಂದ ಕೂಡಲೇ ಪಾತಕಿಗಳ ಕುಟುಂಬದವರು ರಾಧಾರನ್ನೇ ಟಾರ್ಗೆಟ್ ಮಾಡತೊಡಗಿದರು. ಅವರು ಹೇಳುತ್ತಾರೆ, "ಕೇಸ್ ನಡೆಯುತ್ತಿತ್ತು. ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ತುಂಬಾ ಹೆಚ್ಚಾಗತೊಡಗಿತು." ಆದರೆ ಅವರು ಹಿಂದೆ ಸರಿಯಲು ನಿರಾಕರಿಸಿದಾಗ, ಒತ್ತಡವು ಬಹಿರಂಗ ಬೆದರಿಕೆಗಳಾಗಿ ಪರಿವರ್ತನೆಗೊಂಡವು. ರಾಧಾ ಅವರ ಪ್ರಕಾರ, “ನಾನು ಊರಿನಲ್ಲಿ ಜನರ ಕಣ್ಣ ಮುಂದೆಯೇ ಇದ್ದೆ. ಇದರಿಂದಾಗಿ ನನಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವುದು ಅವರಿಗೆ ಸುಲಭವಾಗಿತ್ತು.’’ ಆದರೆ ರಾಧಾ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.




