ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ಅಜ್ಜಿಯಾದಾಗ ಶಾಂತಿ ಮಾಂಝಿಯವರ ವಯಸ್ಸು 36 ವರ್ಷ. ಆ ರಾತ್ರಿ, ಅವರು ಇನ್ನೂ ಒಂದನ್ನು ಮೊದಲ ಬಾರಿಗೆ ಸಾಧಿಸಿದರು - ಎರಡು ದಶಕಗಳ ಅವಧಿಯಲ್ಲಿ ಮನೆಯಲ್ಲಿ ಲಭ್ಯವಿರುವ ಖಾಸಗಿತನದ ಮಿತಿಯಲ್ಲೇ, ಯಾವುದೇ ವೈದ್ಯರು ಮತ್ತು ನರ್ಸ್ಗಳ ಸಹಾಯವಿಲ್ಲದೆ ಏಳು ಮಕ್ಕಳಿಗೆ ಜನ್ಮ ನೀಡಿದ ಗಟ್ಟಿ ಹೆಣ್ಣು, ಕೊನೆಗೂ ಆಸ್ಪತ್ರೆಯ ಮುಖ ನೋಡಿದರು.
"ನನ್ನ ಮಗಳು ಗಂಟೆಗಳ ಕಾಲ ನೋವಿನಿಂದ ಬಳಲುತ್ತಿದ್ದಳು ಆದರೆ ಮಗು ಹೊರಗೆ ಬರಲಿಲ್ಲ. ಕೊನೆಗೆ ನಾವು ಟೆಂಪೋ ತರಿಸಬೇಕಾಯಿತು,” ಎಂದು ಅವರು ಹೇಳುತ್ತಾರೆ, ಆಕೆಯ ಹಿರಿಯ ಮಗಳು ಮಮತಾ ಮನೆಯಲ್ಲಿ ಹೆರಿಗೆ ನೋವು ಎದುರಿಸಿದ ದಿನವನ್ನು ನೆನಪಿಸಿಕೊಂಡರು. ಇಲ್ಲಿ ʼಟೆಂಪೋʼ ಎಂದರೆ ಕೇವಲ ಮೂರು ಕಿಲೋಮೀಟರ್ ದೂರದ ಶಿಯೋಹರ್ ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದ ಊರನ್ನು ತಲುಪಲು ಸಂಜೆಯ ಹೊತ್ತಿನಲ್ಲಿ ಒಂದು ಗಂಟೆಯಷ್ಟು ಸಮಯ ತೆಗೆದುಕೊಂಡ ತ್ರಿಚಕ್ರ ಪ್ರಯಾಣಿಕ ವಾಹನ. ಮಮತಾರನ್ನು ತರಾತುರಿಯಲ್ಲಿ ಶಿಯೋಹರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಹಲವಾರು ಗಂಟೆಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿದರು.
“ಅವರು 800 ರೂಪಾಯಿಗಳ ಬಾಡಿಗೆ ಪಡೆದರು." ಶಾಂತಿ ಗೊಣಗುತ್ತಾರೆ, ಟೆಂಪೋ ಬಾಡಿಗೆ ಬಗ್ಗೆ ಈಗಲೂ ಆಕ್ರೋಶ ವ್ಯಕ್ತಪಡಿಸಿದರು."ನಮ್ಮ ತೋಲಾದಲ್ಲಿನ ಯಾರೂ ಆಸ್ಪತ್ರೆಗೆ ಹೋಗುವುದಿಲ್ಲ, ಹೀಗಾಗಿ ಆಂಬ್ಯುಲೆನ್ಸ್ ಇದೆಯೇ ಎನ್ನುವುದರ ಕುರಿತು ನಮಗೆ ತಿಳಿದಿಲ್ಲ."
ಆ ದಿನ ಶಾಂತಿ ತನ್ನ ಕೊನೆಯ ಮಗು, ನಾಲ್ಕು ವರ್ಷದ ಕಾಜಲ್‌ಗೆ ಮಲಗುವ ಮುನ್ನ ಏನಾದರೂ ತಿನ್ನಿಸಬೇಕಿದ್ದ ಕಾರಣ ರಾತ್ರಿಯ ನಂತರ ಮನೆಗೆ ಮರಳಬೇಕಾಯಿತು."ನಾನೀಗ ಅಜ್ಜಿಯಾಗಿದ್ದೇನೆ, ಆದರೆ ನನಗೆ ತಾಯಿಯ ಜವಾಬ್ದಾರಿಯೂ ಇದೆ." ಎಂದು ಅವರು ಹೇಳುತ್ತಾರೆ. ಮಮತಾ ಮತ್ತು ಕಾಜಲ್ ಜೊತೆಗೆ, ಅವರಿಗೆ ಇನ್ನೂ ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಮಾಂಝಿ ಕುಟುಂಬವು ಉತ್ತರ ಬಿಹಾರದ ಶಿಯೋಹರ್ ಬ್ಲಾಕ್ ಮತ್ತು ಜಿಲ್ಲೆಯ ಮಾಧೋಪುರ್ ಅನಂತ ಗ್ರಾಮದ ಹೊರಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಗುಡಿಸಲುಗಳ ಸಮೂಹವಾದ ಮುಸಹರ್ ತೋಲಾದಲ್ಲಿ ವಾಸಿಸುತ್ತಿದೆ. ತೋಲಾದಲ್ಲಿರುವ ಸುಮಾರು 40 ಮಣ್ಣು ಮತ್ತು ಬಿದಿರಿನ ಗುಡಿಸಲುಗಳು ಸುಮಾರು 300-400 ಜನರಿಗೆ ನೆಲೆಯಾಗಿವೆ. ಇವರೆಲ್ಲರೂ ಮುಸಹರ್ ಜಾತಿಗೆ ಸೇರಿದವರು, ಅವರನ್ನು ಬಿಹಾರದ ಅತ್ಯಂತ ಹಿಂದುಳಿದ ಜಾತಿಗಳ ಪಟ್ಟಿಯಾದ ಮಹಾದಲಿತ ಸಮುದಾಯದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲೇ ಮೂಲೆಗಳಲ್ಲಿ ಸುತ್ತಲೂ ಬೇಲಿಯಂತಹ ನಿರ್ಮಾಣದ ಒಳಗೆ ಆಡು ಅಥವಾ ಹಸುಗಳನ್ನು ಬಿಡಲಾಗಿತ್ತು.










