ಇಬ್ಬರಿಗೂ 17 ವರ್ಷ ಪ್ರಾಯ ಮತ್ತು ಇಬ್ಬರೂ ಗರ್ಭಿಣಿಯರು. ಅವರು ಕೆಲವೊಮ್ಮೆ ತಮ್ಮ ಪೋಷಕರು ತಮ್ಮ ಕಣ್ಣುಗಳು ಕೆಳಗೆ ನೋಡುತ್ತಿರಬೇಕೆಂದು ಕಲಿಸಿದ್ದನ್ನು ಮರೆತು ಜೋರಾಗಿ ನಗುತ್ತಿರುತ್ತಾರೆ. ಮುಂದಿನ ದಿನಗಳು ಹೇಗಿರುತ್ತವೋ ಎನ್ನುವ ಭಯದಲ್ಲಿ ಒಮ್ಮೊಮ್ಮೆ ನಡುಗುತ್ತಾರೆ.
ಸಲೀಮಾ ಪರ್ವೀನ್ ಮತ್ತು ಅಸ್ಮಾ ಖಾತೂನ್ (ಹೆಸರುಗಳನ್ನು ಬದಲಾಯಿಸಲಾಗಿದೆ) ಕಳೆದ ವರ್ಷ ಏಳನೇ ತರಗತಿಯಲ್ಲಿದ್ದರು, ಆದರೆ ಗ್ರಾಮದ ಸರ್ಕಾರಿ ಶಾಲೆ 2020ರಲ್ಲಿ ಇಡೀ ಶೈಕ್ಷಣಿಕ ವರ್ಷದ ಕಾಲ ಮುಚ್ಚಿತ್ತು. ಕಳೆದ ವರ್ಷ ಲಾಕ್ ಡೌನ್ ಪ್ರಾರಂಭವಾದ ತಕ್ಷಣ, ದೆಹಲಿ, ಪಾಟ್ನಾ, ಮತ್ತು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಅವರ ಕುಟುಂಬದ ಪುರುಷ ಸದಸ್ಯರು ಬಿಹಾರದ ಅರಾರಿಯಾ ಜಿಲ್ಲೆಯ ಬಂಗಾಳಿ ಟೋಲಾ ಬಸ್ತಿಯಲ್ಲಿರುವ ತಮ್ಮ ಮನೆಗೆ ಮರಳಿದರು. ಅದರ ನಂತರ, ಊರಿನಲ್ಲಿ ಮದುವೆಗಳ ಸಣ್ಣ ಗಡಿಬಿಡಿಯಿತ್ತು.
ಇಬ್ಬರು ಹುಡುಗಿಯರಲ್ಲಿ ಹೆಚ್ಚು ಮಾತುಗಾರ್ತಿಯಾದ ಅಸ್ಮಾ ಹೇಳುತ್ತಾಳೆ, "ಮದುವೆ ಕೊರೋನಾ ಸಮಯದಲ್ಲಿ ನಡೆಯಿತು. ಕೊರೋನಾ ಸಮಯದಲ್ಲಿ ನನಗೆ ಮದುವೆಯಾಯಿತು."
ಸಲೀಮಾಳ ನಿಕಾಹ್ (ಮುದುವೆ ಸಮಾರಂಭ) ಎರಡು ವರ್ಷಗಳ ಹಿಂದೆ ನಡೆಯಿತು. ಮತ್ತು ಅವಳಿಗೆ 18 ತುಂಬಿದ ನಂತರ ಗಂಡನೊಂದಿಗೆ ವಾಸಕ್ಕೆ ಹೋಗಬೇಕಿತ್ತು. ಆದರೆ ಇದರ ನಡುವೆ ಲಾಕ್ ಡೌನ್ ಬಂದಿತು. ಆಗ ಅವಳ 20 ವರ್ಷದ ಟೈಲರ್ ವೃತ್ತಿಯಲ್ಲಿರುವ ಗಂಡ ಮತ್ತು ಅದೇ ಊರಿನಲ್ಲಿ ವಾಸಿಸುವ ಅವರ ಕುಟುಂಬದವರು ಅವಳನ್ನು ಗಂಡನ ಮನೆಗೆ ಬರುವಂತೆ ಒತ್ತಾಯಿಸಿದರು. ಇದು ನಡೆದಿದ್ದು ಅಂದಾಜು ಜುಲೈ 2020ರ ಸಮಯದಲ್ಲಿ. ಆಗ ಅವನಿಗೆ ಕೆಲಸವೂ ಇರಲಿಲ್ಲ ಹಾಗೂ ಇಡೀ ದಿನ ಮನೆಯಲ್ಲಿರುತ್ತಿದ್ದ. ಅಲ್ಲದೆ ಉಳಿದ ಗಂಡಸರೂ ಮನೆಯಲ್ಲಿದ್ದ ಕಾರಣ ಅವಳು ಮನೆಗೆ ಬಂದಲ್ಲಿ ಒಂದು ದುಡಿಯುವ ಕೈ ಹೆಚ್ಚಾಗುತ್ತದೆನ್ನುವ ಆಲೋಚನೆ ಅವರದಾಗಿತ್ತು.
ಅಸ್ಮಾಳಿಗೆ ಅಷ್ಟು ಸಮಯವೂ ದೊರೆಯಲಿಲ್ಲ. ಅವಳ 23 ವರ್ಷದ ಅಕ್ಕ 2019ರಲ್ಲಿ ಕ್ಯಾನ್ಸರಿನಿಂದ ತೀರಿಕೊಂಡ ಕಾರಣ ಆಕೆಯ ಅಕ್ಕನ ಗಂಡ ಅಸ್ಮಾಳನ್ನು ಲಾಕ್ ಡೌನ್ ಸಮಯದಲ್ಲಿ ಮದುವೆ ಮಾಡಿಕೊಡುವಂತೆ ಒತ್ತಾಯಿಸತೊಡಗಿದ. ಈತ ವೃತ್ತಿಯಿಂದ ಪ್ಲಂಬರ್. ಮದುವೆಯ ಆಚರಣೆ ಜೂನ್ 2020ರಲ್ಲಿ ನಡೆಯಿತು.
ಇಬ್ಬರು ಹುಡುಗಿಯರಿಗೂ ಮಗು ಹೇಗೆ ಹುಟ್ಟುತ್ತದೆಯೆನ್ನುವುದು ತಿಳಿದಿಲ್ಲ. “ಇವೆಲ್ಲವೂ ತಾಯಿ ವಿವರಿಸಿ ಹೇಳಬೇಕಾದ ವಿಷಯವಲ್ಲ” ಎನ್ನುತ್ತಾರೆ ಅಸ್ಮಾಳ ತಾಯಿ ರುಕ್ಸಾನ. ಹುಡುಗಿಯರು ಇನ್ನಷ್ಟು ನಗುತ್ತಿದ್ದಂತೆ ಅವರು ಮುಂದುವರೆದು “ಲಾಜ್ ಕೀ ಬಾತ್ ಹೈ [ಮುಜುಗರ ತರಿಸುವ ವಿಷಯ]” ಎಂದರು. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಇಂತಹ ಮಾಹಿತಿಗಳನ್ನು ಹೆಣ್ಣು ಮಕ್ಕಳ ಅತ್ತಿಗೆಯರು (ಭಾಬಿ) ಹೇಳಿಕೊಡಬೇಕೆಂದು ನಿರೀಕ್ಷಿಸಲಾಗಿದೆ. ಆದರೆ ಸಲೀಮಾ ಮತ್ತು ಅಸ್ಮಾರ ಅತ್ತಿಗೆಯರು ಈ ಕುರಿತು ಮಾಹಿತಿ ನೀಡುವಂತಹ ಪರಿಸ್ಥಿತಿಯಲ್ಲಿಲ್ಲ.










