ಬೆಳಗಿನ 6 ಗಂಟೆಗೆಲ್ಲ ಸರಣ್ಯ ಬಲರಾಮನ್ ಗುಮ್ಮಿಡಿಪೂಂಡಿಯಲ್ಲಿರುವ ತನ್ನ ಮನೆಯಿಂದ ಹೊರಡುತ್ತಾರೆ. ಚೆನ್ನೈ ಬಳಿಯ ತಿರುವಳ್ಳೂರು ಜಿಲ್ಲೆಯ ಈ ಸಣ್ಣ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ, ಅವರು ತಮ್ಮ ಮೂವರು ಮಕ್ಕಳೊಂದಿಗೆ ಲೋಕಲ್ ಟ್ರೇನ್ ಏರುತ್ತಾರೆ. ಸುಮಾರು ಎರಡು ಗಂಟೆಗಳ ನಂತರ ಅವರು 40 ಕಿಲೋಮೀಟರ್ ದೂರದಲ್ಲಿರುವ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲುಪುತ್ತಾರೆ. ಇಲ್ಲಿಂದ, ಈ ತಾಯಿ, ಮಕ್ಕಳು ಶಾಲೆಯನ್ನು ತಲುಪಲು ಸ್ಥಳೀಯ ರೈಲಿನಲ್ಲಿ ಇನ್ನೂ 10ರಿಂದ 12 ಕಿ.ಮೀ ಪ್ರಯಾಣಿಸುತ್ತಾರೆ.
ಸಂಜೆ 4 ಗಂಟೆಗೆ, ಪ್ರಯಾಣವು ಹಿಮ್ಮುಖವಾಗಿ ನಡೆಯುತ್ತದೆ, ಮತ್ತು ಅವರು ಮನೆಗೆ ಹಿಂದಿರುಗುವ ಹೊತ್ತಿಗೆ ಸಂಜೆ 7 ಗಂಟೆಯಾಗಿರುತ್ತದೆ.
ಮನೆಯಿಂದ ಶಾಲೆಗೆ ಮತ್ತು ಅಲ್ಲಿಂದ ಹಿಂತಿರುಗಲು 100 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣವನ್ನು ವಾರಕ್ಕೆ ಐದು ಬಾರಿ ಮಾಡಲಾಗುತ್ತದೆ. ಸರಣ್ಯ ಅವರ ಪಾಲಿಗೆ ಇದೊಂದು ಸಾಧನೆಯಾಗಿದೆ, ಅವರು ವಿವರಿಸುತ್ತಾರೆ: "ಈ ಹಿಂದೆ [ಅವರು ಮದುವೆಯಾಗುವ ಮೊದಲು], ಬಸ್ ಅಥವಾ ರೈಲನ್ನು ಎಲ್ಲಿ ಹತ್ತಬೇಕು ಅಥವಾ, ಎಲ್ಲಿ ಇಳಿಯಬೇಕು ಎನ್ನುವುದು ನನಗೆ ತಿಳಿದಿರಲಿಲ್ಲ."

























