ದಿಲಾವರ್ ಶಿಕಲ್‌ಗಾರ್ ಅವರು 1960ರ ದಶಕದ ಮಧ್ಯದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ. ಅವರ ಕಮ್ಮಾರ ಸಾಲೆಯಲ್ಲಿ, ಕೆಲಸಗಾರರೊಬ್ಬರು ಕಬ್ಬಿಣವನ್ನು ಬಡಿಯುತ್ತಿದ್ದಾಗ ಅದರಿಂದ ಹಾರಿದ ತುಣುಕೊಂದು ಅವರ ತೋರುಬೆರಳನ್ನು ಗಾಯಗೊಳಿಸಿತ್ತು. ಆ ಗಾಯ ಒಣಗಿದೆಯಾದರೂ ಅದರ ಗುರುತು ಈಗಲೂ ಕಾಣಬಹುದು. "ನನ್ನ ಕೈಗಳನ್ನು ನೋಡಿ ಕಬ್ಬಿಣ ಬಡಿದು ಬಡಿದು ಅವೂ ಕಬ್ಬಿಣದಂತಾಗಿವೆ" ಅವರು ನಗುತ್ತಾ ಹೇಳುತ್ತಾರೆ.
50 ವರ್ಷಗಳಿಗಿಂತ ಹೆಚ್ಚು ಕಾಲ, 68 ವರ್ಷದ ದಿಲವಾರ್ ಅವರು ಕಾದಿರುವ ಕಬ್ಬಿಣ ಮತ್ತು ಕಾರ್ಬನ್ ಸ್ಟೀಲ್ ಹದಗೊಳಿಸಲು ದಿನಕ್ಕೆ ಕನಿಷ್ಠ 500 ಬಾರಿ ಸುತ್ತಿಗೆಯಿಂದ ಹೊಡೆದಿದ್ದಾರೆ. ಕಳೆದ 55 ವರ್ಷಗಳಲ್ಲಿ, ಅವರು ತಮ್ಮ ಸಾಂಪ್ರದಾಯಿಕ ಐದು ಕಿಲೋಗ್ರಾಂಗಳಷ್ಟು ಭಾರದ ಘನದಿಂದ (ಲೋಹದ ಸುತ್ತಿಗೆ) ಈ ಲೋಹಗಳ ಮೇಲೆ ಕನಿಷ್ಠ 80 ಲಕ್ಷ ಸಲ ಹೊಡೆದಿದ್ದಾರೆ.
ಸಾಂಗ್ಲಿ ಜಿಲ್ಲೆಯ ವಾಲ್ವಾ ತಾಲೂಕಿನ ಬಗಾನಿ ಗ್ರಾಮದಲ್ಲಿ ವಾಸಿಸುವ ಶಿಕಲ್‌ಗಾರ್ ಕುಟುಂಬದ ಕಮ್ಮಾರರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ - ಇವರು ವಿವಿಧ ರೀತಿಯ ಸಾಧನಗಳನ್ನು ಕೈಯಿಂದಲೇ ತಯಾರಿಸುತ್ತಾರೆ, ಇವುಗಳನ್ನು ಮನೆ ಮತ್ತು ಹೊಲಗಳಲ್ಲಿ ಬಳಸಲಾಗುತ್ತದೆ. ಎಲ್ಲಕ್ಕಿಂತ ಅವರು ಅತ್ಯುತ್ತಮವಾದ ಅಡಕತ್ತರಿಗಳನ್ನು ಅಥವಾ ಅಡ್ಕಿಟ್ಟಾಗಳನ್ನು (ಮರಾಠಿಯಲ್ಲಿ) ಕೈಯಿಂದ ತಯಾರಿಸುವುದರಲ್ಲಿ ಹೆಚ್ಚು ಹೆಸರುವಾಸಿ- ಅವುಗಳು ವಿನ್ಯಾಸ, ಬಾಳಿಕೆ ಮತ್ತು ತಮ್ಮ ಹರಿತವಾದ ತುದಿಗಳಿಂದ ವಿಶಿಷ್ಟವೆನ್ನಿಸಿಕೊಂಡಿವೆ.
ಈ ಅಡಕತ್ತರಿಗಳು ನಾಲ್ಕು ಇಂಚುಗಳಿಂದ ಎರಡು ಅಡಿಗಳ ತನಕ ವಿವಿಧ ಅಳತೆಗಳಲ್ಲಿ ಸಿಗುತ್ತವೆ. ಸಣ್ಣ ಅಡಕತ್ತರಿಗಳನ್ನು ಅಡಿಕೆ, ಕಾಚು(ಕತ್ತ) ಒಣಕೊಬ್ಬರಿ ಮತ್ತು ಸುತ್ತಲಿ ದಾರ ಕತ್ತರಿಸಲು ಬಳಸಲಾಗುತ್ತದೆ. ದೊಡ್ಡ ಅಡಕತ್ತರಿಗಳನ್ನು ಚಿನ್ನಾಭರಣ ಮತ್ತು ಬೆಳ್ಳಿಯ ತಯಾರಕರು ಚಿನ್ನ-ಬೆಳ್ಳಿ ಕತ್ತರಿಸಲು ಬಳಸುತ್ತಾರೆ. ಮತ್ತು ದೊಡ್ಡ ಅಡಿಕೆಯನ್ನು ಸಣ್ಣ ಚೂರುಗುಳಾಗಿ ಕತ್ತರಿಸಿ ಮಾರುವವರು ಸಹ ಬಳಸುತ್ತಾರೆ.
ಶಿಕಲ್‌ಗಾರ್ ಕುಟುಂಬವು ತಯಾರಿಸುವ ಅಡಕತ್ತರಿಗಳು ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದ್ದು, ಅವುಗಳನ್ನು ಖರೀದಿಸಲು ಸ್ಥಳೀಯ ಮತ್ತು ದೂರದ ಊರುಗಳ ಜನರು ಬಗಾನಿಗೆ ಹುಡುಕಿ ಬರುತ್ತಾರೆ. ಜನರು ಮಹಾರಾಷ್ಟ್ರದ ಅಕ್ಲುಜ್, ಕೊಲ್ಹಾಪುರ, ಉಸ್ಮಾನಾಬಾದ್, ಸಾಂಗೋಲ್, ಸಾಂಗ್ಲಿ ಮತ್ತು ಕರ್ನಾಟಕದ ಅಥಣಿ, ಬಿಜಾಪುರ, ರಾಯಭಾಗ್ ಮತ್ತು ಇತರ ಸ್ಥಳಗಳಿಂದ ಇಲ್ಲಿಗೆ ಬರುತ್ತಾರೆ.










