"ಅದು ಯಾವತ್ತೂ ನೂರು ದಿನಗಳ ಕೆಲಸವಲ್ಲ, ಈ ವರ್ಷ ಕೂಡ ಇದುವರೆಗೆ 50 ದಿನಗಳ ಕೆಲಸ ಮಾತ್ರ ಸಿಕ್ಕಿದೆಯಷ್ಟೇ," ಎಂದು ಆರ್. ವನಜಾ ಹೇಳಿದರು. 2019ರ ಡಿಸೆಂಬರ್ ತಿಂಗಳ ಬೆಳಿಗ್ಗೆ ಅವರು ಮತ್ತು ಸುಮಾರು 18 ಮಹಿಳೆಯರು ಮತ್ತು 2-3 ಪುರುಷರು ವೆಲಿಕಥನ್ (ಬಳ್ಳಾರಿ ಜಾಲಿ) ಮರದ ಕೆಳಗಿನ ತೆಳು ನೆರಳಿನಡಿ ಮಾತನಾಡುತ್ತಾ ಕುಳಿತಿದ್ದರು. ಇವರೆಲ್ಲರೂ ತಮಿಳುನಾಡಿನ ಬಂಗಾಳ ಮೇಡು ಹಾಡಿಗೆ ಸೇರಿದವರು. ಅವರು ʼನೂರು ನಾಳ್ ವೇಲೈʼ ಕುರಿತು ಚರ್ಚಿಸುತ್ತಿದ್ದರು. ನರೇಗಾ ಕೆಲಸವನ್ನು ಅವರು ತಮಿಳಿನಲ್ಲಿ ಹಾಗೆ ಕರೆಯುತ್ತಾರೆ. ಸುಮಾರು ಇಪ್ಪತ್ತು ವರ್ಷ ಪ್ರಾಯದ ವನಜಾ ಈ ಕಾಲೋನಿಯ ಇತರ ವಯಸ್ಕ ಮಹಿಳೆಯರಂತೆಯೇ ದಿನಗೂಲಿಯಾಗಿ ಕೆಲಸ ಮಾಡುತ್ತಾರೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತನಿ ಬ್ಲಾಕ್‌ನಲ್ಲಿರುವ ಚೆರುಕ್ಕನೂರ್ ಪಂಚಾಯತ್‌ನ ಒಂದು ಭಾಗವಾಗಿರುವ ಈ ಹಾಡಿಯ ಪುರುಷ ನರೇಗಾ ಹೊರತಾದ ಕೆಲಸಗಳನ್ನು ಹುಡುಕಿಕೊಳ್ಳುತ್ತಾರೆ. ಅವರು ಸಾಮಾನ್ಯವಾಗಿ ಕೃಷಿಭೂಮಿಯಲ್ಲಿ ಕಾಲುವೆ ತೋಡುವ ಕೆಲಸ, ಮಾವಿನ ಗಿಡಗಳಿಗೆ ನೀರು ಹಾಕುವುದು, ಕಟ್ಟಡ ಕೆಲಸ, ಅಟ್ಟಣಿಗೆ, ಪಲ್ಪ್ ಮತ್ತು ಸೌದೆಗಾಗಿ ಸವುಕ್ಕು(ಗಾಳಿ ಮರ) ಮರ ಕತ್ತರಿಸುವುದು ಇತ್ಯಾದಿ ಮಾಡುತ್ತಾರೆ. ಅವರಿಗೆ ಈ ಕೆಲಸಗಳಿಗೆ ದಿನಗೂಲಿಯಾಗಿ ದಿನಕ್ಕೆ 300 ರೂಪಾಯಿಗಳು ದೊರೆಯುತ್ತದೆ.
ಆದರೆ ಅವೆಲ್ಲವೂ ಕಾಲಾನುಗುಣವಾಗಿ ಮತ್ತು ಅನಿರೀಕ್ಷಿತವಾಗಿ ಸಿಗುವ ಕೆಲಸಗಳು. ಮಳೆಗಾಲದಲ್ಲಿ ಯಾವುದೇ ಕೆಲಸ ಇಲ್ಲದ ಸಮಯದಲ್ಲಿ, ತಮಿಳು ನಾಡಿನಲ್ಲಿ ವಿಶೇಷ ದುರ್ಬಲ ಬಡಕಟ್ಟು ಎಂದು ಪಟ್ಟಿ ಮಾಡಲಾಗಿರುವ ಈ ಇರುಳರು ಜೀವನ ನಿರ್ವಹಣೆಗೆ ಹಣವಿಲ್ಲದೆ ಸಮೀಪದ ಕಾಡಿನಲ್ಲಿ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಾರೆ ಅಥವಾ ಹಣ್ಣು ಮತ್ತು ಗಡ್ಡೆ ಗೆಣಸುಗಳನ್ನು ಹುಡುಕುತ್ತಾರೆ. (ನೋಡಿ, ಬಂಗಾಳಮೇಡುವಿನಲ್ಲಿ ಅವಿತ ಖಜಾನೆಗಳ ಹುಡುಕಾಟ ಮತ್ತು ಬಂಗಾಳಮೇಡುವಿನಲ್ಲಿ ಇಲಿಗಳ ವಿವಿಧ ದಾರಿಗಳು)
ಮತ್ತು ಇಲ್ಲಿ ಮಹಿಳೆಯರಿಗೂ ಕೆಲಸ ಸಿಗುವುದು ವಿರಳ. ಅವರು ತಮ್ಮ ಗಂಡಂದಿರೊಡನೆ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. ಜನವರಿ-ಫೆಬ್ರವರಿಯಿಂದ ಮೇ-ಜೂನ್ ವರೆಗೆ ಈ ಕೆಲಸ ಮಾಡುತ್ತಾರೆ. ಇದು ಕೂಡ ಆಗೊಮ್ಮೆ ಈಗೊಮ್ಮೆ ಸಿಗುವ ಕೆಲಸ. ಈ ಕೆಲಸದಿಂದ ದಂಪತಿಗಳಿಗೆ ಒಂದು ಹಂಗಾಮಿಗೆ ಸುಮಾರು 6,000 ರೂಪಾಯಿಗಳ ಸಂಪಾದನೆ ಸಿಗುತ್ತದೆ.














