"ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ...
ಪ್ಯಾರ್ ಕಿಯಾ ಕೋಯಿ ಚೋರಿ ನಹೀ... ಘುಟ್ ಘುಟ್ ಕರ್ ಯೂಂss
ಮರ್ನಾ
ಕ್ಯಾ..."
ಪ್ರೇಮಿಸಿದ ನಂತರ ಭಯವೇಕೆ? ಪ್ರೇಮವೆನ್ನುವುದು ಅಪರಾಧವಲ್ಲ... ಹೀಗೆ
ಉಸಿರುಗಟ್ಟಿ ಇಷ್ಟಿಷ್ಟೇ ಸಾಯುವುದ್ಯಾಕೆ...
60ರ ದಶಕದ ಅದ್ಭುತ ಚಿತ್ರಗಳಲ್ಲಿ ಒಂದಾದ ಮುಘಲ್-ಎ-ಆಜಮ್ ನ ಹಾಡೊಂದನ್ನು ವಿಧಿ ಕೆಲವು ಕ್ಷಣಗಳಿಂದ ಗುನುಗುತ್ತಿದ್ದಾರೆ. ತನ್ನ ಸೆಂಟ್ರಲ್ ಮುಂಬಯಿಯಲ್ಲಿನ ಕೋಣೆಯಲ್ಲಿ ಕುಳಿತು ಈ ಹಾಡು ಹಾಡುತ್ತಿದ್ದ ಆಕೆ ಒಂದು ಕ್ಷಣ ಹಾಡು ನಿಲ್ಲಿಸಿ, “ನಾವು ಕೂಡಾ ಯಾವುದೇ ತಪ್ಪು ಮಾಡಿಲ್ಲ, ಹೀಗಿರುವಾಗ ನಾವ್ಯಾಕೆ ಭಯದಿಂದ ಬದುಕಬೇಕು? ಎಂದು ಕೇಳಿದರು.
ಆಕೆಯ ಆ ಪ್ರಶ್ನೆಯಲ್ಲಿ ಕೇವಲ ಶಬ್ಧಾಡಂಬರವಷ್ಟೇ ಇದ್ದಿರಲಿಲ್ಲ. ಆಕೆಯ ಪಾಲಿಗೆ ಅದೊಂದು ಕಾಡುವ ಪ್ರಶ್ನೆಯಾಗಿತ್ತು. ಕೊಲ್ಲಬಹುದೆನ್ನುವ ಭಯವು ಆಕೆಯ ಪಾಲಿಗೆ ಕಟು ವಾಸ್ತವವಾಗಿತ್ತು. ಆಕೆ ಈ ಭಯವನ್ನು ಆಕೆ ತನ್ನ ಕುಟುಂಬದ ವಿರುದ್ಧ ಬಂಡೆದ್ದು ತನ್ನ ಸಹಪಾಟಿಯಾದ ಆರುಷಿಯೊಡನೆ ಮನೆ ಬಿಟ್ಟು ಓಡಿ ಬಂದ ದಿನದಿಂದ ಎದುರಿಸುತ್ತಿದ್ದಾರೆ. ಆರುಷಿ ಮತ್ತು ವಿಧಿ ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಮದುವೆಯಾಗುವ ಕನಸಿನಲ್ಲಿದ್ದಾರೆ. ಆದರೆ ಅವರಿಬ್ಬರ ಈ ಸಂಗಮವನ್ನು ಕಾನೂನುಬದ್ಧಗೊಳಿಸುವ ಹಾದಿಯ ತುಂಬಾ ತೊಡಕುಗಳಿವೆ, ಹೆಜ್ಜೆ ಹೆಜ್ಜೆಗೂ ಕಲ್ಲುಮುಳ್ಳುಗಳಿವೆ. ಅಲ್ಲದೆ ಅವರ ಕುಟುಂಬಗಳು ಸಹ ಅವರ ಸಂಬಂಧವನ್ನು ಒಪ್ಪುವುದಿಲ್ಲ ಅಥವಾ ಆರುಷಿಯ ಸ್ತ್ರೀ ಲಿಂಗದೊಡನೆಯ ಹೋರಾಟವನ್ನು ಅವರು ಅರ್ಥಮಾಡಿಕೊಳ್ಳಲಾರರು ಎನ್ನುವ ಭಯ ಅವರನ್ನು ಕಾಡುತ್ತಿದೆ. ಆರುಷಿ ಪ್ರಸ್ತುತ ತನ್ನನ್ನು ಟ್ರಾನ್ಸ್ ಮ್ಯಾನ್ ಎನ್ನುವ ಗುರುತಿನಿಂದ ಗುರುತಿಸಿಕೊಳ್ಳುತ್ತಿದ್ದು, ತನ್ನ ಹೆಸರನ್ನು ಆರುಷ್ ಎಂದು ಆಯ್ಕೆ ಮಾಡಿಕೊಂಡಿದ್ದಾರೆ.
ಮಹಾನಗರಕ್ಕೆ ತೆರಳಿದ ನಂತರ ಅವರು ತಮ್ಮ ಕುಟುಂಬಗಳಿಂದ ಸ್ವಾತಂತ್ರ್ಯ ಗಳಿಸಿರುವುದಾಗಿ ಭಾವಿಸಿದ್ದರು. ಆರುಷ್ ಅವರ ಕುಟುಂಬವು ಪಾಲ್ಘರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೆ, ವಿಧಿಯ ಕುಟುಂಬವು ಥಾಣೆ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸಿಸುತ್ತದೆ. ಇವರಿಬ್ಬರ ಊರಿನ ನಡುವಿನ ಅಂತರ ಅಜಮಾಸು 20 ಕಿಲೋಮೀಟರುಗಳು. 22 ವರ್ಷದ ವಿಧಿ ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ಪಟ್ಟಿ ಮಾಡಲಾದ ಅಗ್ರಿ ಸಮುದಾಯಕ್ಕೆ ಸೇರಿದವರಾದರೆ, 23 ವರ್ಷದ ಆರುಷ್ ಕುಣಬಿ ಸಮುದಾಯಕ್ಕೆ ಸೇರಿದವರಾಗಿದ್ದು, ಒಬಿಸಿ ಅಡಿಯಲ್ಲಿ ಬರುತ್ತಾರೆಯಾದರೂ ಅವರ ಹಳ್ಳಿಗಳಲ್ಲಿರುವ ಕಟ್ಟುನಿಟ್ಟಾದ ಜಾತಿ ಶ್ರೇಣೀಕರಣದಲ್ಲಿ ಸಾಮಾಜಿಕವಾಗಿ 'ಅಗ್ರಿ' ಸಮುದಾಯಕ್ಕಿಂತ ಕೆಳಗಿದ್ದಾರೆ.
ಈಗ ಅವರಿಬ್ಬರೂ ಮನೆ ತೊರೆದು ಒಂದು ವರ್ಷವಾಗಿದೆ ಮತ್ತು ಅವರು ಮತ್ತೆ ಮನೆಗೆ ಮರಳುವ ಯೋಚನೆಯಲ್ಲೂ ಇಲ್ಲ. ಆರುಷ್ ಹಳ್ಳಿಯಲ್ಲಿರುವ ತನ್ನವರ ಕುರಿತು ಹೆಚ್ಚು ಮಾತನಾಡಲಿಲ್ಲ, ಆದರೆ ಅವರು ಹೇಳುತ್ತಾರೆ, “ನಾನು ಕಚ್ಛಾ ಮನೆಯೊಂದರಲ್ಲಿ ವಾಸಿಸುತ್ತಿದ್ದೆ. ಈ ಕುರಿತು ನನಗೆ ಸದಾ ಮುಜುಗರವಿತ್ತಲ್ಲದೆ, ಮನೆಯ ವಿಷಯವಾಗಿ ಆಯಿ (ಅಮ್ಮ)ನೊಡನೆ ಆಗಾಗ ಜಗಳವಾಡುತ್ತಿದ್ದೆ.”
ಮೊಟ್ಟೆ ಕಾರ್ಖಾನೆಯೊಂದರಲ್ಲಿ ದುಡಿಯುವ ಆರುಷ್ ತಾಯಿ ತಿಂಗಳಿಗೆ 6,000 ರೂ.ಗಳನ್ನು ಗಳಿಸುತ್ತಾರೆ. “ಅಪ್ಪನ ಬಗ್ಗೆ ಕೇಳಲೇಬೇಡಿ. ಮರಗೆಲಸ, ಬೇಸಾಯದ ಕೆಲಸದಲ್ಲಿ ಅಷ್ಟು ಇಷ್ಟು ದುಡಿದು ಅದನ್ನು ಕುಡಿತಕ್ಕೆ ಬಳಸುತ್ತಿದ್ದರು. ನಂತರ ಮನೆಗೆ ಬಂದು ಆಯಿ ಮತ್ತು ನಮಗೆ ಹೊಡೆಯುತ್ತಿದ್ದರು,” ಎನ್ನುತ್ತಾರೆ ಆರುಷ್. ನಂತರ ಅನಾರೋಗ್ಯಕ್ಕೆ ಒಳಗಾದ ಅವರ ತಂದೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ತಾಯಿಯ ದುಡಿಮೆಯಿಂದಲೇ ಬದುಕತೊಡಗಿದರು. ಈ ದಿನಗಳಲ್ಲಿಯೇ ಆರುಷ್ ಶಾಲೆಗೆ ರಜಾ ಸಿಕ್ಕಿದಾಗಲೆಲ್ಲ ಇಟ್ಟಿಗೆ ಗೂಡು, ಕಾರ್ಖಾನೆಗಳು ಮತ್ತು ಮೆಡಿಕಲ್ ಸ್ಟೋರ್ ಹೀಗೆ ಹಲವೆಡೆ ಹಲವು ಬಗೆಯ ಕೆಲಸಗಳನ್ನು ಮಾಡತೊಡಗಿದರು.
*****
ಆರುಷ್ ವಿಧಿಯನ್ನು ಮೊದಲ ಸಲ ಭೇಟಿಯಾಗಿದ್ದು 2014ರಲ್ಲಿ, ಆಗಷ್ಟೇ ಅವರು ಅವರ ಮನೆಯಿಂದ 4 ಕಿಲೋಮೀಟರ್ ದೂರ ನಡೆದು ತಲುಪಬೇಕಿದ್ದ ಆ ಮಾಧ್ಯಮಿಕ ಶಾಲೆಗೆ ಸೇರಿದ್ದರು. “ನಮ್ಮ ಊರಿನಲ್ಲಿದ್ದ ಜಿಲ್ಲಾ ಪರಿಷತ್ ಶಾಲೆಯಲ್ಲಿ 7ನೇ ತರಗತಿಯವರೆಗೆ ಮಾತ್ರವೇ ಇತ್ತು. ನಂತರದ ಓದಿಗೆ ನಾವು ಹೊರಗೆ ಹೋಗಬೇಕಿತ್ತು,” ಎಂದು ಅವರು ಹೇಳುತ್ತಾರೆ. ಹೊಸ ಶಾಲೆಯಲ್ಲಿ ಆ ವರ್ಷ ಅವರು ಪರಸ್ಪರ ಹೆಚ್ಚು ಮಾತನಾಡಿರಲಿಲ್ಲ. “ನಮಗೆ ಅಗ್ರಿ ಜನರೊಡನೆ ಹೆಚ್ಚು ಒಡನಾಟವಿರಲಿಲ್ಲ. ಅವರು ಬೇರೆಯದೇ ಗುಂಪು ಮಾಡಿಕೊಂಡಿದ್ದರು ಮತ್ತು ವಿಧಿ ಅದರ ಭಾಗವಾಗಿದ್ದಳು,” ಎನ್ನುತ್ತಾರೆ ಆರುಷ್.
9ನೇ ತರಗತಿಯಲ್ಲಿರುವಾಗ ಅವರ ನಡುವೆ ಸ್ನೇಹ ಅರಳಿತು. ಆರುಷ್‌ಗೆ ವಿಧಿಯನ್ನು ಕಂಡರೆ ಇಷ್ಟವಾಗತೊಡಗಿತು.
ಒಂದು ದಿನ ಆಟವಾಡುವಾಗ ವಿಧಿಯೊಡನೆ ಆರುಷ್ ಕೂಡಾ ಸೇರಿಕೊಂಡು ತನ್ನ ಭಾವನೆಗಳನ್ನು ಆಕೆಯಲ್ಲಿ ಪಿಸುಗುಟ್ಟಿದರು. ಆತ ಆಕೆಯನ್ನು ಇಷ್ಟಪಡುತ್ತಿರುವುದಾಗಿ ಸಂಕೋಚದಿಂದ ಹೇಳಿದಾಗ, ಆ ಕ್ಷಣದಲ್ಲಿ ಏನು ಹೇಳುವುದೆಂದು ವಿಧಿಗೆ ತೋಚಿರಲಿಲ್ಲ. ಆಕೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು. “ಆರುಷ್ ಹುಡುಗಿಯೊಂದಿಗಿನ ಹಿಂದಿನ ಸಂಬಂಧದ ಕುರಿತು ತಿಳಿಸಿದರು. ಅದೇನೂ ತಪ್ಪಲ್ಲ. ಆದರೆ ಅವರು [ಇಬ್ಬರು ಹುಡುಗಿಯರು] ಒಟ್ಟಿಗಿರುವ ಕಲ್ಪನೆ ವಿಚಿತ್ರವೆನ್ನಿಸಿತು,” ಎಂದು ವಿಧಿ ಹೇಳುತ್ತಾರೆ.
“ಮೊದಲಿಗೆ ನಾನು ʼಆಗುವುದಿಲ್ಲʼ ಎಂದಿದ್ದೆ. ಆದರೆ ಬಹಳ ಸಮಯದ ನಂತರ ನಾನು ʼಒಪ್ಪಿಗೆʼ ನೀಡಿದೆ. ಯಾಕೆ ಒಪ್ಪಿಗೆ ನೀಡಿದೆ ಎಂದು ಕೇಳಿದರೆ ಗೊತ್ತಿಲ್ಲ ಎನ್ನುವುದಷ್ಟೇ ನನ್ನ ಉತ್ತರ. ಪ್ರೇಮ ತಾನಾಗಿಯೇ ಸಂಭವಿಸಿತ್ತು. ನಾನು ಅವನನ್ನು ಇಷ್ಟಪಟ್ಟೆ. ಆಗ ನನ್ನ ಮನಸಿನಲ್ಲಿ ಸರಿತಪ್ಪುಗಳ ಪ್ರಶ್ನೆಯಿರಲಿಲ್ಲ” ಎನ್ನುತ್ತಾರೆ ವಿಧಿ. “ತರಗತಿಯಲ್ಲಿ ನಮ್ಮ ಕುರಿತು ಯಾರಿಗೂ ತಿಳಿದಿರಲಿಲ್ಲ,” ಎನ್ನುತ್ತಾ ಸಮಾಧಾನದ ನಿಟ್ಟುಸಿರು ಬಿಟ್ಟ ಅವರು, “ಉಳಿದ ಜಗತ್ತು ನಮ್ಮನ್ನು ಇಬ್ಬರು ಹುಡುಗಿಯರು ಒಳ್ಳೆಯ ಸ್ನೇಹಿತರಾಗಿರುವುದನ್ನಷ್ಟೇ ಕಾಣುತ್ತಿದ್ದರು,” ಎಂದರು.
ಆದರೆ ಕೆಲವೇ ದಿನಗಳಲ್ಲಿ ನಮ್ಮ ಸಂಬಂಧಿಕರು ನಮ್ಮ ಜಾತಿ ವ್ಯತ್ಯಾಸ ಮತ್ತು ಸ್ನೇಹದ ಕುರಿತು ಮಾತನಾಡತೊಡಗಿದರು. "ನಮ್ಮ ಜನರು [ಕುಣಬಿ] ಒಂದು ಕಾಲದಲ್ಲಿ ಅಗ್ರಿ ಸಮುದಾಯದವರ ಮನೆಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಅವರನ್ನು ಕೆಳಜಾತಿಗೆ ಸೇರಿದವರೆಂದು ಪರಿಗಣಿಸಲಾಗುತ್ತಿತ್ತು. ಅದು ಬಹಳ ಹಿಂದೆಯೇ ಇತ್ತು, ಆದರೆ ಕೆಲವು ಜನರು ಈಗಲೂ ಅದೇ ಭಾವನೆಯನ್ನು ತಲೆಯಲ್ಲಿ ಹೊಂದಿದ್ದಾರೆ," ಎಂದು ಆರುಷ್ ವಿವರಿಸುತ್ತಾರೆ. ಕೆಲವು ವರ್ಷಗಳ ಹಿಂದೆ ತಮ್ಮ ಹಳ್ಳಿಯ ಭಿನ್ನಲಿಂಗೀಯ ದಂಪತಿಗಳು ಓಡಿಹೋದ ಭಯಾನಕ ಘಟನೆಯನ್ನು ಸಹ ಅವರು ನೆನಪಿಸಿಕೊಳ್ಳುತ್ತಾರೆ. ಒಬ್ಬರು ಕುಣಬಿ ಮತ್ತು ಇನ್ನೊಬ್ಬರು ಅಗ್ರಿ ಸಮುದಾಯಕ್ಕೆ ಸೇರಿದವರು; ಆಗ ಅವರ ಕುಟುಂಬಗಳನ್ನು ಜೋಡಿಯನ್ನು ಬೆನ್ನಟ್ಟಿ ಹೊಡೆದಿದ್ದರು.
ಆರಂಭದಲ್ಲಿ ಆರುಷ್‌ನ ತಾಯಿಗೆ ಅವರ ಸ್ನೇಹದ ಕುರಿತು ತಕರಾರು ಇದ್ದಂತಿರಲಿಲ್ಲ. ಅವರು ಅದನ್ನು ಇಬ್ಬರು ಹೆಣ್ಣುಮಕ್ಕಳ ನಡುವಿನ ಆಪ್ತ ಸ್ನೇಹವನ್ನಾಗಿಯಷ್ಟೇ ನೋಡುತ್ತಿದ್ದರು. ಆದರೆ ಆರುಷಿ ಪದೇಪದೇ ವಿಧಿಯ ಮನೆಗೆ ಹೋಗುವುದರ ಕುರಿತು ಅವರಿಗೆ ಆಕ್ಷೇಪವಿತ್ತು ಮತ್ತು ಅದನ್ನು ತಡೆಯಲು ಪ್ರಯತ್ನಿಸಿದ್ದರು.
ವಿಧಿಯ ತಂದೆ ಕಟ್ಟಡ ನಿರ್ಮಾಣದ ಕಚ್ಚಾ ವಸ್ತುಗಳ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಆಕೆಯ ಪೋಷಕರು ಆಕೆಗೆ 13 ವರ್ಷವಿರುವಾಗ ಬೇರ್ಪಟ್ಟಿದ್ದರು. ಹಾಗೂ ಆಕೆಯ ತಂದೆ ಇನ್ನೊಂದು ಮದುವೆಯಾಗಿದ್ದರು. ತನ್ನ ತಂದೆಯೊಡನೆ ಇದ್ದ ವಿಧಿ, ಮಲತಾಯಿ ಮತ್ತು ಮತ್ತು ನಾಲ್ಕು ಜನ ಒಡಹುಟ್ಟಿದವರೊಡನೆ ಬದುಕುತ್ತಿದ್ದರು. ಅವರಲ್ಲಿ ಒಬ್ಬ ಅಣ್ಣ, ಇಬ್ಬರು ಸಹೋದರಿಯರು ಮತ್ತು ಒಬ್ಬ ಮಲತಮ್ಮ ಸೇರಿದ್ದ. ವಿಧಿಯ ಮಲತಾಯಿಗೆ ಆರುಷ್‌ನನ್ನು ಕಂಡರೆ ಆಗುತ್ತಿರಲಿಲ್ಲ. ಆಗಾಗ ಆರುಷ್ ಜೊತೆ ವಾಗ್ವಾದಗಳು ನಡೆಯುತ್ತಿದ್ದವು. ವಿಧಿಯ ಅಣ್ಣ (ಪ್ರಸ್ತುತ 30 ವರ್ಷ) ಆಗಾಗ ತಂದೆಯೊಡನೆ ಕೆಲಸಕ್ಕೆ ಹೋಗುತ್ತಿದ್ದ ಮತ್ತು ಅವನು ಕುಟುಂಬದ ಮೇಲೆ ನಿಯಂತ್ರಣ ಸಾಧಿಸುವ ಪ್ರವೃತ್ತಿ ಹೊಂದಿದ್ದ. ಅವನು ತನ್ನ ತಂಗಿಯರನ್ನು ಹೊಡೆಯುವುದು ಮತ್ತು ನಿಂದಿಸುವುದನ್ನು ಮಾಡುತ್ತಿದ್ದ.
ಅದೇ ಅಣ್ಣ ಒಮ್ಮೊಮ್ಮೆ ವಿಧಿಯನ್ನು ಆರುಷ್ ಮನೆಗೆ ಡ್ರಾಪ್ ಮಾಡುತ್ತಿದ್ದ. “ನನ್ನಣ್ಣ ಅವಳ ಕುರಿತು ಏನಾದರೂ ಹೇಳುತ್ತಿರುತ್ತಿದ್ದ ಮತ್ತು ಅವಳನ್ನು ಇಷ್ಟಪಡುತ್ತಿರುವುದಾಗಿಯೂ ಹೇಳುತ್ತಿದ್ದ. ಇದು ನನ್ನಲ್ಲಿ ನಿರಾಶೆ ಮೂಡಿಸುತ್ತಿತ್ತು. ಆದರೆ ಏನು ಮಾಡಬೇಕೆಂದು ನಮಗೆ ತಿಳಿಯುತ್ತಿರಲಿಲ್ಲ.” ಎಂದು ವಿಧಿ ನೆನಪಿಸಿಕೊಳ್ಳುತ್ತಾರೆ. “ನಮ್ಮ ಭೇಟಿಯ ಸಲುವಾಗಿ ಆರುಷ್ ಅಣ್ಣನ ವರ್ತನೆಗಳನ್ನು ನಿರ್ಲಕ್ಷಿಸುತ್ತಿದ್ದ.”
ಕೊನೆಗೆ, ವಿಧಿಯ ಅಣ್ಣ ಕೂಡ ಆರುಷ್ ಮನೆಗೆ ಭೇಟಿ ನೀಡುವುದನ್ನು ವಿರೋಧಿಸಲು ಪ್ರಾರಂಭಿಸಿದ. "ಆರುಷ್‌ನ ನಿರ್ಲಕ್ಷ್ಯ ಅವನನ್ನು ಕೆರಳಿಸಿತೋ ಅಥವಾ ನಮ್ಮ ಬೆಳೆಯುತ್ತಿರುವ ನಿಕಟತೆಯೋ ಎನ್ನುವುದು ನಮಗೆ ತಿಳಿಯಲಿಲ್ಲ," ಎಂದು ಅವರು ಹೇಳುತ್ತಾರೆ. ಆರುಷ್ ಏಕೆ ಪದೇ ಪದೇ ಮನೆಗೆ ಬರುತ್ತಾನೆ ಅಥವಾ ದಿನಕ್ಕೆ ಅಷ್ಟೊಂದು ಸಲ ಏಕೆ ಮೆಸೇಜ್ ಮಾಡುತ್ತಾನೆ ಎಂದು ಅವಳ ಸಹೋದರಿ ಅವರನ್ನು ಕೇಳುತ್ತಿದ್ದಳು.
ಈ ನಡುವೆ ಆರುಷ್ ತನ್ನ ಲಿಂಗ ಆದ್ಯತೆಯ ಬಗ್ಗೆ ಮುಕ್ತವಾಗತೊಡಗಿದರು ಮತ್ತು ಪುರುಷ ದೇಹದ ಕುರಿತಾದ ತಮ್ಮ ಬಯಕೆಯನ್ನು ವ್ಯಕ್ತಪಡಿಸಲು ಆರಂಭಿಸಿದರು. ಆಗ ಅವರಿಗೆ ಈ ಕುರಿತು ಮಾತನಾಡಲು ಇದ್ದ ಒಂದೇ ಒಂದು ಜೀವವೆಂದರೆ ಅದು ವಿಧಿ. “ಆಗ ನನಗೆ ʼಟ್ರಾನ್ಸ್ ಮ್ಯಾನ್ʼ ಎಂದರೆ ಏನೆಂದು ತಿಳಿದಿರಲಿಲ್ಲ.” ಎಂದು ಆರುಷ್ ಹೇಳುತ್ತಾರೆ. “ನನ್ನ ಭಾವನೆಗಳಿಗೆ ನಾನು ಪುರುಷ ದೇಹ ಹೊಂದುವುದು ಸೂಕ್ತವೆಂದು ನನಗೆ ಆ ಕ್ಷಣಗಳಲ್ಲಿ ಅನ್ನಿಸುತ್ತಿತ್ತು.”
ಅವರಿಗೆ ಆ ದಿನಗಳಲ್ಲಿ ಟ್ರ್ಯಾಕ್ ಪ್ಯಾಂಟ್, ಕಾರ್ಗೊ ಪ್ಯಾಂಟುಗಳು ಮತ್ತು ಟಿ-ಶರ್ಟುಗಳನ್ನು ಧರಿಸುವುದು ಇಷ್ಟವಾಗುತ್ತಿತ್ತು. ಆರುಷ್‌ನ ಪುರುಷರಂತೆ ಬಟ್ಟೆ ತೊಡುವ ಪ್ರಯತ್ನವನ್ನು ತಡೆಯಲು ಅವರ ಅಮ್ಮ ಆ ಬಟ್ಟೆಗಳನ್ನುಹರಿಯುವುದು, ಬಚ್ಚಿಡುವುದನ್ನು ಮಾಡತೊಡಗಿದರು. ಅಲ್ಲದೆ ಪುರುಷರ ಉಡುಪು ಧರಿಸಿದಾಗ ಹೊಡೆಯುವುದು ಮತ್ತು ಗದರಿಸುವುದನ್ನು ಸಹ ಅವರ ತಾಯಿ ಪ್ರಯತ್ನಿಸಿದರು. ಅವರು ಹೆಣ್ಣು ಮಕ್ಕಳ ಬಟ್ಟೆಯನ್ನು ಸಹ ತಂದುಕೊಟ್ಟರು. “ನನಗೆ ಸಲ್ವಾರ್ ಕಮೀಜ್ ಧರಿಸಲು ಇಷ್ಟವಾಗುತ್ತಿರಲಿಲ್ಲ,” ಎಂದು ಅವರು ಹೇಳುತ್ತಾರೆ. ಆರುಷ್ ಸಲ್ವಾರ್ ಕಮೀಜ್ ಧರಿಸುತ್ತಿದ್ದ ಏಕೈಕ ಸ್ಥಳವೆಂದರೆ ಶಾಲೆಯಾಗಿತ್ತು. ಏಕೆಂದರೆ ಅಲ್ಲಿ ಅದು ಹೆಣ್ಣು ಮಕ್ಕಳ ಸಮವಸ್ತ್ರವಾಗಿತ್ತು. ಆದರೆ ಅದು ತನಗೆ “ಉಸಿರುಗಟ್ಟಿಸುತ್ತಿತ್ತು,” ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಹತ್ತನೇ ತರಗತಿಯಲ್ಲಿರುವಾಗ ಆರುಷ್ ಋತುಮತಿಯಾದ ಕಾರಣ ಅವರ ತಾಯಿ ಒಂದಷ್ಟು ನಿರಾಳರಾದರು, ಆದರೆ ಅದು ಹೆಚ್ಚು ದಿನ ಉಳಿಯಲಿಲ್ಲ. ಸುಮಾರು ಒಂದು ವರ್ಷದ ನಂತರ ಆರುಷ್‌ನ ಋತುಚಕ್ರವು ಅನಿಯಮಿತಗೊಂಡು ನಂತರ ಅದು ನಿಂತೇಹೋಯಿತು. ಅವರ ತಾಯಿ ಅವರನ್ನು ಹಲವು ವೈದ್ಯರು ಮತ್ತು ನಾಟಿ ಪಂಡಿತರುಗಳ ಬಳಿ ಕರೆದೊಯ್ದರಾದರೂ ಅವರು ನೀಡಿದ ವಿವಿಧ ಬಗೆಯ ಮಾತ್ರೆಗಳು ಮತ್ತು ಕಷಾಯಗಳು ಯಾವುದೇ ಪರಿಣಾಮ ಬೀರಲಿಲ್ಲ.
ನೆರೆಹೊರೆಯವರು, ಶಿಕ್ಷಕರು ಮತ್ತು ಸಹಪಾಠಿಗಳು ಅವರನ್ನು ನಿಂದಿಸುತ್ತಿದ್ದರು. “ಅವರು ನನಗೆ ʼಹೆಣ್ಣು ನೀನು, ಇತಿಮಿತಿಯಲ್ಲಿರು.ʼ ಎಂದು ಬಯ್ಯುತ್ತಿದ್ದರು. ಆಗ ನನಗೆ ಈಗ ಮದುವೆಯಾಗುವ ವಯಸ್ಸು ಬಂದಿದೆ ಎನ್ನುವ ಪ್ರಜ್ಞೆ ನನ್ನಲ್ಲಿ ಮೂಡತೊಡಗಿತು.” ಇದು ಅವರಿಗೆ ಅವರ ಮೇಲೆ ಅನುಮಾನಪಡುವಂತೆ ಮಾಡಿತು ಮತ್ತು ಅವರು ಒತ್ತಡಕ್ಕೆ ಒಳಗಾಗತೊಡಗಿದರು. “ನಾನೇನೊ ತಪ್ಪು ಮಾಡಿದ್ದೇನೆ ಎನ್ನುವ ಭಾವನೆ ನನ್ನಲ್ಲಿ ಮೂಡುತ್ತಿತ್ತು," ಎನ್ನುತ್ತಾರವರು.
11ನೇ ತರಗತಿಯಲ್ಲಿರುವಾಗ ಆರುಷ್ ಕೈಗೆ ಮೊಬೈಲ್ ದೊರಕಿತು. ಆಗ ಅವರು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಮೂಲಕ ಪುರುಷನಾಗಿ ಬದಲಾಗುವ ಸಾಧ್ಯತೆಗಳ ಕುರಿತಾಗಿ ಹಲವು ಗಂಟೆಗಳನ್ನು ಆನ್‌ಲೈನಿನಲ್ಲಿ ಕಳೆದರು. ವಿಧಿ ಈ ಕುರಿತು ಮೊದ ಮೊದಲು ಹಿಂಜರಿಯುತ್ತಿದ್ದರು. “ನಾನು ಅವನು ಹೇಗಿದ್ದನೋ ಹಾಗೆಯೇ ಇಷ್ಟಪಟ್ಟಿದ್ದೆ. ಅವನು ಮೊದಲಿನಿಂದಲೂ ಆ ಕುರಿತು ಪ್ರಾಮಾಣಿಕನಾಗಿದ್ದ. ಅವನು ಈಗ ದೈಹಿಕವಾಗಿ ಬದಲಾಗಲು ಬಯಸುತ್ತಿದ್ದ. ಅದರಿಂದ ಅವನ ಸ್ವಭಾವವೇನೂ ಬದಲಾಗುವುದಿಲ್ಲ,” ಎಂದು ಅವರು ಹೇಳುತ್ತಾರೆ.
*****
2019ರಲ್ಲಿ 12ನೇ ತರಗತಿಯ ನಂತರ ವಿದ್ಯಾ ತನ್ನ ಓದನ್ನು ನಿಲ್ಲಿಸಿದರು. ಪೊಲೀಸ್ ಅಧಿಕಾರಿಯಾಗಲು ಬಯಸಿದ್ದ ಆರುಷ್ ಪಾಲ್ಘರ್‌ನ ಕೋಚಿಂಗ್ ಸೆಂಟರ್ ಒಂದರಲ್ಲಿ ಸೇರಿಕೊಂಡರು. ಅವರು ಆರುಷಿಯಾಗಿ ಎಂದರೆ ಮಹಿಳಾ ಅಭ್ಯರ್ಥಿಯಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಿತ್ತು. 2020ರಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಯು ಕೊವಿಡ್ - 19 ಕಾರಣಕ್ಕೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ಬಂದ ಕಾರಣ ರದ್ದುಗೊಂಡಿತು. ಕೊನೆಗೆ ಅವರು ದೂರ ಶಿಕ್ಷಣದ ಮೂಲಕ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಗಾಗಿ ಓದಲು ನಿರ್ಧರಿಸಿದರು.
ಆರುಷ್ ಮತ್ತು ವಿಧೀಯ ಪಾಲಿಗೆ ಲಾಕ್ಡೌನ್ ಸಮಯವು ಬಹಳ ಕಠಿಣವಾಗಿತ್ತು. ವಿಧಿಯ ಮನೆಯಲ್ಲಿ ಆಕೆಗೆ ಮದುವೆ ಮಾಡಿಸುವ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ ವಿಧಿಗೆ ಆರುಷ್ ಜೊತೆ ಇರುವ ಬಯಕೆಯಿತ್ತು. ಅವರಿಗೆ ಆ ಸಮಯದಲ್ಲಿ ಮನೆಯಿಂದ ಓಡಿ ಹೋಗುವುದೊಂದೇ ದಾರಿಯಾಗಿ ಕಾಣಿಸಿತು. ಈ ಹಿಂದೆ ಆರುಷ್ ವಿಧಿಯ ಬಳಿ ಈ ಪ್ರಸ್ತಾವಿಟ್ಟಾಗ ವಿಧಿ ಅದಕ್ಕೆ ಒಪ್ಪಿರಲಿಲ್ಲ. “ಅದು ಹೆದರಿಕೆ ಹುಟ್ಟಿಸುತ್ತಿತ್ತು… ಹಾಗೆ ಹೊರಟುಬಿಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ,” ಎಂದು ಅವರು ಹೇಳುತ್ತಾರೆ.
ಲಾಕ್ ಡೌನ್ ಮುಗಿದ ನಂತರ, ಆರುಷ್ ಔಷಧ ಉತ್ಪಾದನಾ ಘಟಕವೊಂದರಲ್ಲಿ ಕೆಲಸ ಮಾಡಲಾರಂಭಿಸಿದರು. ಅಲ್ಲಿ ಅವರಿಗೆ ತಿಂಗಳಿಗೆ 5,000 ರೂ. ಸಂಬಳ ದೊರೆಯುತ್ತಿತ್ತು. “ನಾನು ಹೇಗೆ ಬದುಕಲು ಬಯಸುತ್ತೇನೆನ್ನುವುದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅದು ನನ್ನನ್ನು ಉಸಿರುಗಟ್ಟಿಸುತ್ತಿತ್ತು. ಕೊನೆಗೆ ಓಡಿ ಹೋಗುವುದೊಂದೇ ಉಳಿದ ಆಯ್ಕೆಯೆನ್ನುವುದು ನನಗೆ ತಿಳಿದಿತ್ತು,” ಎನ್ನುತ್ತಾರವರು. ಅವರು ವಿಧಿ ಮತ್ತು ತನಗೆ ಆಶ್ರಯ ನೀಡಬಲ್ಲ ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರೊಂದಿಗೆ ಕೆಲಸ ಮಾಡುವ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒ) ಸಂಪರ್ಕಿಸಲು ಪ್ರಾರಂಭಿಸಿದ್ದರು.
ಅಪಮಾನ ಮತ್ತು ಕಿರುಕುಳದ ಕಾರಣದಿಂದಾಗಿ ಅನೇಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮನೆಯನ್ನು ತೊರೆಯಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2021ರಲ್ಲಿ ಬಿಡುಗಡೆ ಮಾಡಿದ ಪಶ್ಚಿಮ ಬಂಗಾಳದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಕುರಿತಾದ ಅಧ್ಯಯನವು "ಕುಟುಂಬವು ತಮ್ಮ ಲಿಂಗ ಅಭಿವ್ಯಕ್ತಿಯನ್ನು ಮರೆಮಾಚಲು ಅವರ ಮೇಲೆ ಒತ್ತಡ ಹೇರುತ್ತದೆ," ಎಂದು ಹೇಳಿದೆ. ಮತ್ತು ಅವರ ಕುಟುಂಬ, ಸ್ನೇಹಿತರು ಮತ್ತು ಸಮಾಜದ ತಾರತಮ್ಯದ ವರ್ತನೆಯು ಅವರು ಮನೆ ಬಿಡಲು ಕಾರಣವೆಂದು ವರದಿ ಹೇಳುತ್ತದೆ.
ಆರುಷ್ ಮತ್ತು ವಿಧಿಯ ಪಾಲಿಗೆ ಮುಂಬಯಿ ಬದುಕಬಹುದಾದ ಊರಾಗಿ ಕಾಣಿಸಿತು. ಆರುಷ್ ಅಲ್ಲಿ ತನ್ನ ಸರ್ಜರಿಯನ್ನು ಸಹ ಮಾಡಿಸಿಕೊಳ್ಳಬಹುದಿತ್ತು. ಹೀಗಿರುವಾಗ ಮಾರ್ಚ್ 2021ರ ಒಂದು ದಿನ ವಿಧಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯಿಂದ ಹೊರಟರೆ, ಆರುಷ್ ಕೆಲಸಕ್ಕೆ ಹೊರಟರು. ಬಸ್‌ಸ್ಟ್ಯಾಂಡಿನಲ್ಲಿ ಜೋಡಿ ಒಂದೆಡೆ ಸೇರಿದರು. ಆರುಷ್ ಅಂದು ತನ್ನ ಬಳಿ ತನ್ನ ದುಡಿಮೆಯಿಂದ ಉಳಿಸಿದ 15,000 ರೂಪಾಯಿಗಳನ್ನು ಹೊಂದಿದ್ದರು. ಜೊತೆಗೆ ಅವರ ಬಳಿ ಅವರ ತಾಯಿಯ ಏಕೈಕ ಚಿನ್ನದ ಸರ ಹಾಗೂ ಒಂದು ಜೊತೆ ಓಲೆಯಿತ್ತು. ಅದನ್ನು ಮಾರುವ ಮೂಲಕ ಅವರಿಗೆ 13,000 ಸಾವಿರ ರೂ. ಹಣ ದೊರಕಿತು. “ನನಗೆ ಅವುಗಳನ್ನು ಮಾರುವುದು ಇಷ್ಟವಿರಲಿಲ್ಲ ಆದರೆ ನನಗೆ ಚಿಂತೆಯಾಗಿತ್ತು ಮತ್ತು ಸುರಕ್ಷತೆಗಾಗಿ ನಾನು ಹಣವನ್ನು ಇಟ್ಟುಕೊಂಡಿರಲೇಬೇಕಿತ್ತು. ನಾನು ಯಾವುದೇ ಅಪಾಯವನ್ನು ಎದುರುಹಾಕಿಕೊಳ್ಳಲು ಸಿದ್ಧನಿರಲಿಲ್ಲ,” ಎಂದು ಅವರು ವಿವರಿಸುತ್ತಾರೆ.
*****
ಮುಂಬೈಯ ಒಂದು ಎನ್‌ಜಿಒ ಸ್ವಯಂಸೇವಕರು ಊರ್ಜಾ ಟ್ರಸ್ಟ್ ನಡೆಸುತ್ತಿರುವ ನಗರದ ಮಹಿಳೆಯರ ಆಶ್ರಯಕ್ಕೆ ಈ ಜೋಡಿಯನ್ನು ಕರೆದೊಯ್ದರು. ಸ್ಥಳೀಯ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ಕೂಡಾ ನೀಡಲಾಯಿತು. "ಅವರು ವಯಸ್ಕರಾಗಿರುವುದರಿಂದ, ಕಾನೂನು ಪ್ರಕಾರ ಪೊಲೀಸರಿಗೆ ಮಾಹಿತಿ ನೀಡಬೇಕಾದ ಅಗತ್ಯವಿರಲಿಲ್ಲ. ಆದರೆ, ಕೆಲವೊಮ್ಮೆ, ಕೆಲವು ಸಂಕೀರ್ಣ ಪ್ರಕರಣಗಳಲ್ಲಿ, ಕುಟುಂಬವು ಅವರಿಗೆ ಹಾನಿ ಮಾಡಲು ಪ್ರಯತ್ನಿಸಬಹುದು, ಹೀಗಾಗಿ ನಾವು ಅವರ ಸುರಕ್ಷತೆಗಾಗಿ ಸ್ಥಳೀಯ ಪೊಲೀಸರನ್ನು ಒಳಗೊಳ್ಳಲು ಪ್ರಯತ್ನಿಸುತ್ತೇವೆ," ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಊರ್ಜಾ ಟ್ರಸ್ಟಿನ ಕಾರ್ಯಕ್ರಮ ವ್ಯವಸ್ಥಾಪಕಿ ಅಂಕಿತಾ ಕೊಹಿರ್ಕರ್ ಹೇಳುತ್ತಾರೆ.
ಆದರೆ, ಈ ಮುನ್ನೆಚ್ಚರಿಕೆಯೇ ಅವರಿಗೆ ಅಪಾಯವಾಗಿ ಪರಿಣಮಿಸಿತು. ಪೊಲೀಸ್ ಠಾಣೆಯಲ್ಲಿ, ಅಧಿಕಾರಿಗಳು ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದರು. "ಅವರು ನಮಗೆ ಹಳ್ಳಿಗೆ ಹಿಂತಿರುಗುವಂತೆ ಹೇಳುತ್ತಲೇ ಇದ್ದರು, ಇಂತಹ ಸಂಬಂಧಗಳು ಬಾಳುವುದಿಲ್ಲ, ಅದು ತಪ್ಪು,” ಎಂದು ಅವರು ಹೇಳಿದ್ದನ್ನು ಆರುಷ್ ನೆನಪಿಸಿಕೊಳ್ಳುತ್ತಾರೆ. ಪೊಲೀಸರು ಇಬ್ಬರ ಪೋಷಕರಿಗೂ ಸುದ್ದಿ ಮುಟ್ಟಿಸಿದರು. ಅವರು ಇನ್ನೂ ತಮ್ಮ ಮಕ್ಕಳು ಮನೆ ಬಿಟ್ಟು ಹೋದ ಕುರಿತು ಅಸಮಾಧಾನ ಹೊಂದಿದ್ದರು. ಆರುಷ್ ಅವರ ತಾಯಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು, ಮತ್ತು ವಿಧಿಯ ಕುಟುಂಬವು ಆರುಷ್ ಅವರ ಮನೆಗೆ ಆ ಕುಟುಂಬವನ್ನು ಬೆದರಿಸಲು ಹೋಗಿತ್ತು.
ಅವರಿಬ್ಬರೂ ಎಲ್ಲಿದ್ದಾರೆಂದು ಅವರಿಗೆ ತಿಳಿದ ನಂತರ, ಎರಡೂ ಕುಟುಂಬಗಳು ಅದೇ ದಿನ ಮುಂಬೈಗೆ ಬಂದಿಳಿದವು. " ಭಾಯಿ [ಹಿರಿಯ ಸಹೋದರ] ನನ್ನನ್ನು ಬಹಳ ಶಾಂತ ರೀತಿಯಲ್ಲಿ ಮನೆಗೆ ಬರುವಂತೆ ಕೇಳಿಕೊಂಡರು, ಅವರು ಹಾಗೆ ವರ್ತಿಸಿದ್ದನ್ನು ನಾನು ಎಂದೂ ಕಂಡಿರಲಿಲ್ಲ. ಆದರೆ ಅವರ ಆ ಸೌಮ್ಯ ವರ್ತನೆಗೆ ಪೊಲೀಸರು ಅಲ್ಲಿ ಇದ್ದಿದ್ದೇ ಕಾರಣವಾಗಿತ್ತು," ಎಂದು ವಿಧಿ ಹೇಳುತ್ತಾರೆ.
ಆರುಷ್‌ನ ತಾಯಿ ಕೂಡ ಅವರನ್ನು ಹಿಂತಿರುಗುವಂತೆ ಮನವೊಲಿಸಿದರು. "ಈ ಕೇಂದ್ರವು ಮಹಿಳೆಯರಿಗೆ ಸರಿಯಾದ ಸ್ಥಳವಲ್ಲದ ಕಾರಣ ನಮ್ಮನ್ನು ತಮ್ಮೊಂದಿಗೆ ಕರೆದೊಯ್ಯುವಂತೆ ಪೊಲೀಸರು ಆಯಿಗೆ ಹೇಳಿದರು," ಎಂದು ಆರುಷ್ ಅಂದಿನ ದಿನವನ್ನು ನೆನಪಿಸಿಕೊಳ್ಳುತ್ತಾರೆ. ಅದೃಷ್ಟವಶಾತ್, ಊರ್ಜಾದ ಕಾರ್ಯಕರ್ತರು ಮಧ್ಯಪ್ರವೇಶಿಸಿ ದಂಪತಿಗಳನ್ನು ಬಲವಂತದಿಂದ ಕರೆದೊಯ್ಯದಂತೆ ಪೋಷಕರನ್ನು ತಡೆದರು. ಆರುಷ್ ತನ್ನ ತಾಯಿಯ ಚಿನ್ನವನ್ನು ಮಾರಾಟ ಮಾಡಿ ಪಡೆದ ಹಣವನ್ನು ಸಹ ಹಿಂದಿರುಗಿಸಿದರು. "ಅದನ್ನು ಇಟ್ಟುಕೊಳ್ಳುವುದು ನನಗೆ ಸಮಾಧಾನ ಕೊಡುತ್ತಿರಲಿಲ್ಲ," ಎಂದು ಅವರು ಹೇಳುತ್ತಾರೆ.
ಅತ್ತ ಹಳ್ಳಿಯಲ್ಲಿ, ವಿಧಿಯ ಕುಟುಂಬವು ಆರುಷ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಮತ್ತು ವಿಧಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆಂದು ಆರೋಪಿಸಿದರು. ಅವರ ಅಣ್ಣ ಮತ್ತು ಸಂಬಂಧಿಕರು ಆರುಷ್ ಕುಟುಂಬಕ್ಕೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಯೆನ್ನುವ ಬೆದರಿಕೆ ಹಾಕುತ್ತಲೇ ಇದ್ದರು. “ಅವನು [ವಿಧಿಯ ಸಹೋದರ] ಪರಿಸ್ಥಿತಿಯನ್ನು ಪರಿಹರಿಸುವ ನೆಪದಲ್ಲಿ ನನ್ನ ಸಹೋದರನನ್ನು ಖಾಸಗಿಯಾಗಿ ಭೇಟಿಯಾಗುವಂತೆ ಕೇಳುತ್ತಿದ್ದಾನೆ. ಆದರೆ ಅವನು ಹೋಗುವುದಿಲ್ಲ; ಅವರು ಏನು ಬೇಕಾದರೂ ಮಾಡಬಹುದು,” ಎನ್ನುತ್ತಾರೆ ಆರುಷ್.
*****
ಅವರಿಬ್ಬರು ಮುಂಬಯಿ ಸೆಂಟ್ರಲ್‌ನ ಶೆಲ್ಟರಿನಲ್ಲಿ ವಾಸಿಸುತ್ತಿದ್ದರೂ ಅಸುರಕ್ಷಿತ ಭಾವವೊಂದು ಅವರನ್ನು ಕಾಡುತ್ತಲೇ ಇತ್ತು. “ನಾವು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿರಲಿಲ್ಲ. ಹಳ್ಳಿಯಿಂದ ಯಾರು ಯಾವಾಗ ಬೇಕಿದ್ದರೂ ಇಲ್ಲಿಗೆ ಬರಬಹುದಿತ್ತು,” ಎಂದು ಆರುಷ್ ಹೇಳುತ್ತಾರೆ. ಕೊನೆಗೆ ಆರುಷ್ ಮತ್ತು ವಿಧಿ 10,000 ರೂಗಳ ಮುಂಗಡ ಹಣ ನೀಡಿ 5,000 ಸಾವಿರ ರೂ. ಬಾಡಿಗೆಯ ಕೋಣೆಯನ್ನು ಬಾಡಿಗೆಗೆ ಪಡೆದರು. "ನಮ್ಮ ಸಂಬಂಧದ ಕುರಿತು ನಮ್ಮ ಕೋಣೆಯ ಮಾಲಕರಿಗೆ ತಿಳಿದಿಲ್ಲ. ನಾವು ಅದನ್ನು ಮರೆಮಾಚಬೇಕು. ನಾವು ಕೊಠಡಿಯನ್ನು ಖಾಲಿ ಮಾಡಲು ಬಯಸುವುದಿಲ್ಲ," ಎಂದು ಅವರು ಹೇಳುತ್ತಾರೆ.
ಆರುಷ್ ಈಗ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒಳಗೊಂಡಿರುವ ಲಿಂಗ ಮರುಸ್ಥಾಪನೆ ಕುರಿತು ಗಮನಹರಿಸುತ್ತಿದ್ದಾರೆ. ಈ ಪ್ರಕ್ರಿಯೆಯ ಕುರಿತು ಅವರಿಗಿರುವ ವೈದ್ಯರು ಮತ್ತು ಖರ್ಚುಗಳ ಕುರಿತಾದ ಮಾಹಿತಿ ಮೂಲವೆಂದರೆ ಗೂಗಲ್ ಮತ್ತು ವಾಟ್ಸಾಪ್ ಗುಂಪುಗಳು.
ಅವರು ಈ ವಿಷಯವಾಗಿ ಒಮ್ಮೆ ಸರ್ಕಾರಿ ಆಸ್ಪತ್ರೆಯನ್ನು ಸಹ ಸಂಪರ್ಕಿಸಿದ್ದರು. ಆದರೆ ಮತ್ತೆ ಅವರು ಅತ್ತ ಸುಳಿಯಲಿಲ್ಲ. “ವೈದ್ಯರು ನನಗೆ ಸಹಾಯ ಮಾಡುವ ಬದಲು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಅವರಿಗೆ ನನ್ನ ಪರಿಸ್ಥಿತಿ ಅರ್ಥವಾಗುತ್ತಿರಲಿಲ್ಲ. ಹೆತ್ತವರ ಅನುಮೋದನೆ ಪಡೆಯುವ ಸಲುವಾಗಿ ಅವರನ್ನು ಕರೆತರುವಂತೆ ಹೇಳಿದರು. ಇದರಿಂದ ನನಗೆ ಬಹಳ ಸಿಟ್ಟು ಬಂದಿತು. ಅವರು ನನ್ನ ಪಾಲಿಗೆ ಪರಿಸ್ಥಿತಿಯನ್ನುಇನ್ನಷ್ಟು ಕಠಿಣಗೊಳಿಸುತ್ತಿದ್ದರು.” ಎಂದು ಆರುಷ್ ಹೇಳುತ್ತಾರೆ.
ಸದ್ಯ ಆರುಷ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾಲೋಚನೆಗೆ ಒಳಗಾದ ನಂತರ, ಅವರು ಜೆಂಡರ್ ಡಿಸ್ಫೊರಿಯಾದಿಂದ ಬಳಲುತ್ತಿರುವುದು ಕಂಡುಬಂದಿತು - ಜೈವಿಕ ಲಿಂಗ ಮತ್ತು ಲಿಂಗ ಗುರುತಿನ ನಡುವಿನ ಅಸಾಮರಸ್ಯದಿಂದ ಉಂಟಾಗುವ ಆತಂಕ ಮತ್ತು ಯಾತನೆ. ವೈದ್ಯರು ಆರುಷ್ ಅವರನ್ನು ಹಾರ್ಮೋನ್ ಚಿಕಿತ್ಸೆಗೆ ಒಳಪಡಿಸಿದರು. ಆದಾಗ್ಯೂ, ಲಿಂಗ ಬದಲಾವಣೆ ಪ್ರಕ್ರಿಯೆಯು ದೀರ್ಘ ಕಾಲ ಹಿಡಿಯುವಂತಹದ್ದು ಮತ್ತು ದುಬಾರಿ.
ಟೆಸ್ಟೋಸ್ಟೆರಾನ್ ಚುಚ್ಚುಮದ್ದನ್ನು ಪ್ರತಿ 21 ದಿನಗಳಿಗೊಮ್ಮೆ ನೀಡಬೇಕು, ಅದಕ್ಕಾಗಿ ಕಿಟ್ ಒಂದಕ್ಕೆ 420 ರೂ.ಗಳು ಖರ್ಚಾಗುತ್ತವೆ, ಮತ್ತು ಚುಚ್ಚುಮದ್ದನ್ನು ನೀಡಲು ವೈದ್ಯರ ಶುಲ್ಕ 350 ರೂ. ಪ್ರತಿ ಹದಿನೈದು ದಿನಗಳಿಗೊಮ್ಮೆ ಮೌಖಿಕ ಔಷಧೋಪಚಾರಕ್ಕಾಗಿ 200 ರೂ.ಗಳು ಬೇಕಾಗುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ, ಹಾರ್ಮೋನ್ ಥೆರಪಿಯ ಅಡ್ಡಪರಿಣಾಮಗಳನ್ನು ಪರೀಕ್ಷಿಸಲು ಆರುಷ್ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ; ಈ ಪರೀಕ್ಷೆಗಳ ಒಟ್ಟು ವೆಚ್ಚವು ಸರಿಸುಮಾರು 5,000 ರೂ.ಗಳವರೆಗೆ ಬರುತ್ತದೆ. ಸಮಾಲೋಚಕರ ಶುಲ್ಕಗಳು ರೂ. 1,500 ಮತ್ತು ವೈದ್ಯರ ಸಮಾಲೋಚನಾ ಶುಲ್ಕವು ಪ್ರತಿ ಭೇಟಿಗೆ ರೂ. 800-1,000.
ಇದೆಲ್ಲದರ ನಡುವೆ, ಚಿಕಿತ್ಸೆಯು ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ. "ನನ್ನೊಳಗೆ ಆಗುತ್ತಿರುವ ಬದಲಾವಣೆಗಳನ್ನು ನಾನು ಅನುಭವಿಸಬಲ್ಲೆ," ಎಂದು ಅವರು ಹೇಳುತ್ತಾರೆ. "ಈಗ ನನ್ನ ಧ್ವನಿ ಗಡಸಾಗಿದೆ. ನಾನು ಸಂತೋಷವಾಗಿದ್ದೇನೆ," ಎಂದು ಅವರು ಹೇಳುತ್ತಾರೆ, ಮತ್ತು "ನಾನು ಕೆಲವೊಮ್ಮೆ ಕಿರಿಕಿರಿಗೊಳಗಾಗಿ ತಾಳ್ಮೆ ಕಳೆದುಕೊಳ್ಳುತ್ತೇನೆ," ಎಂದು ಔಷಧಿಯ ಅಡ್ಡಪರಿಣಾಮಗಳನ್ನು ವಿವರಿಸುತ್ತಾರೆ.
ಆರುಷ್‌ಗೆ ವಿಧಿ ತನ್ನೊಂದಿಗೆ ಬಂದಿದ್ದಕ್ಕಾಗಿ ಪಶ್ಚತ್ತಾಪ ಪಡಬಹುದು ಅಥವಾ ತನ್ನನ್ನು ಇಷ್ಟಪಡುವುದನ್ನು ನಿಲ್ಲಿಸಬಹುದೆನ್ನುವು ಹೆದರಿಕೆ ಕಾಡುತ್ತದೆ. “ಅವಳು ಉತ್ತಮ [ಮೇಲ್ಜಾತಿ] ಕುಟುಂಬದಿಂದ ಬಂದವಳು,” ಎಂದುಆರುಷ್ ಹೇಳುತ್ತಾರೆ. “ಆದರೆ ಅವಳು ಎಂದೂ ನನಗೆ ಕೊರತೆಯೆನ್ನಿಸುವಂತೆ ನಡೆದುಕೊಂಡಿಲ್ಲ. ಅವಳು ನಮಗಾಗಿ [ಸಂಪಾದಿಸಲು] ದುಡಿಯುತ್ತಿದ್ದಾಳೆ.”
ಆರುಷ್‌ನ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುವ ವಿಧಿ, “ಜಗಳಗಳು ನಡೆಯುತ್ತಿರುತ್ತವೆ, ಆದರೆ ಆ ಕುರಿತು ನಾವು ಕುಳಿತು ಚರ್ಚಿಸುತ್ತೇವೆ. ಇದು ನನ್ನ ಮೇಲೂ ಪರಿಣಾಮ ಬೀರುತ್ತದೆ. ಆದರೆ ನಾನು ಅವನೊಂದಿಗೆ ಇದ್ದೇನೆ,” ಎನ್ನುವ ಆಕೆ ತನ್ನ ಕಂಪ್ಯೂಟರ್ ಅಥವಾ ನರ್ಸಿಂಗ್ ವಿಷಯದಲ್ಲಿ ವೃತ್ತಿಪರ ಕೋರ್ಸ್ ತೆಗೆದುಕೊಳ್ಳುವ ಕನಸನ್ನು ಬದಿಗಿಟ್ಟು, ಮನೆ ನಡೆಸಲು ಸಹಾಯ ಮಾಡುವ ಸಲುವಾಗಿ ಸಿಕ್ಕ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರು ದಕ್ಷಿಣ ಭಾರತೀಯ ರೆಸ್ಟಾರೆಂಟ್ ಒಂದರಲ್ಲಿ ಪಾತ್ರೆ ತೊಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಕೆಲಸಕ್ಕೆ ಅವರಿಗೆ ತಿಂಗಳಿಗೆ 10,000 ಸಂಬಳ ದೊರಕುತ್ತಿದ್ದುಬ ಅದರಲ್ಲಿ ಒಂದು ಭಾಗ ಆರುಷ್‌ನ ಚಿಕಿತ್ಸೆಗೆ ಹೋಗುತ್ತದೆ.
ಆರುಷ್ ಪ್ರತಿ ತಿಂಗಳು 11,000 ರೂ. ಸಂಬಳ ತರುವ ಕಟ್ಟಡವೊಂದರ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದ್ಯೋಗಿಗಳು ಅವರನ್ನು ಪುರುಷನಾಗಿ ಗುರುತಿಸುತ್ತಿದ್ದಾರೆ. ಆರುಷಿ ಅಲ್ಲಿ ತನ್ನ ಎದೆಯನ್ನು ಮರೆಮಾಚುವ ಸಲುವಾಗಿ ಬೈಂಡರ್ ಬಳಸುತ್ತಾರೆ, ಆದರೆ ಅದು ಬಹಳ ನೋವುಂಟು ಮಾಡುತ್ತದೆ.
“ಈಗ ನಾವಿಬ್ಬರೂ ಒಟ್ಟಿಗೆ ಸಮಯ ಕಳೆಯುವುದು ಬಹಳ ಕಡಿಮೆ. ಯಾಕೆಂದರೆ ಇಬ್ಬರೂ ಬೇಗನೆ ಕೆಲಸಕ್ಕೆ ಹೊರಡುತ್ತೇವೆ ಮತ್ತು ತಡವಾಗಿ ದಣಿದು ಮನೆಗೆ ಮರಳುತ್ತೇವೆ. ಮತ್ತು ವಾದದಲ್ಲಿ ತೊಡಗುತ್ತೇವೆ,” ಎನ್ನುತ್ತಾರೆ ವಿಧಿ.
ಸೆಪ್ಟೆಂಬರ್ 2022ರಿಂದ ಡಿಸೆಂಬರ್ 2022ರವರೆಗೆ, ಆರುಷ್ ಚಿಕಿತ್ಸೆಗಾಗಿ ಸುಮಾರು 25,000 ರೂ.ಗಳನ್ನು ಖರ್ಚು ಮಾಡಿದ್ದಾರೆ. ಹಾರ್ಮೋನ್ ಥೆರಪಿ ಚಿಕಿತ್ಸೆಯ ನಂತರ, ಅವರು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ (gender affirmation surgery/ಲಿಂಗ ಮರುವಿನ್ಯಾಸ ಚಿಕಿತ್ಸೆ) (ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಅಥವಾ ಎಸ್ಆರ್‌ಎಸ್ ಎಂದೂ ಕರೆಯಲಾಗುತ್ತದೆ) ಒಳಗಾಗಲು ಬಯಸುತ್ತಾರೆ, ಇದು ಎದೆ ಮತ್ತು ಜನನಾಂಗದ ಪುನರ್ನಿರ್ಮಾಣವನ್ನು ಒಳಗೊಂಡಿರುತ್ತದೆ ಮತ್ತು ಇದಕ್ಕೆ 5 ಲಕ್ಷ-8 ಲಕ್ಷ ರೂ.ಗಳ ವೆಚ್ಚವಾಗುತ್ತದೆ. ಅವರು ಮತ್ತು ವಿಧಿಗೆ ಸದ್ಯಕ್ಕೆ ಅಷ್ಟು ಉಳಿಸುವುದು ಕಷ್ಟವಾದ ಕಾರಣ ಇದನ್ನು ಭರಿಸಲು ಸಾಧ್ಯವಾಗುತ್ತಿಲ್ಲ.
ಆರುಷ್‌ಗೆ ತನ್ನ ಕುಟುಂಬದ ಸದಸ್ಯರಿಗೆ ಶಸ್ತ್ರಚಿಕಿತ್ಸೆಗೆ ಮುನ್ನ ತನ್ನ ಚಿಕಿತ್ಸೆಯ ಕುರಿತು ತಿಳಿಯುವುದು ಇಷ್ಟವಿಲ್ಲ. ಒಮ್ಮೆ ತನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದಕ್ಕಾಗಿ ಅಮ್ಮ ಫೋನ್‌ನಲ್ಲಿ ಅವನನ್ನು ಗದರಿಸಿದ್ದು ಅವರಿಗೆ ಇನ್ನೂ ಚೆನ್ನಾಗಿ ನೆನಪಿದೆ. "ಮುಂಬಯಿಯ ಜನರು ನನ್ನ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಭಾವಿಸುತ್ತಾರೆ," ಎಂದು ಆರುಷ್ ಹೇಳುತ್ತಾರೆ. ಒಮ್ಮೆ ಅವರು ತನ್ನ ಪಕ್ಕದ ಹಳ್ಳಿಯಲ್ಲಿ ತಂತ್ರಿಯೊಬ್ಬನ ಬಳಿ ನನ್ನನ್ನು ಕರೆದುಕೊಂಡು ಹೋಗಿದ್ದಳು. "ಆ ವ್ಯಕ್ತಿ ನನ್ನನ್ನು ಹೊಡೆಯಲು ಪ್ರಾರಂಭಿಸಿದ ಮತ್ತು ಪದೇ ಪದೇ ನನ್ನ ಹಣೆಯ ಮೇಲೆ ಕೈಯಿಟ್ಟು ತಳ್ಳುತ್ತಾ ʼನೀನು ಹುಡುಗನಲ್ಲ ಹುಡುಗಿ ಎಂದು ಹೇಳುತ್ತಿದ್ದʼ," ಗಾಬರಿಗೊಂಡ ಆರುಷ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದರು.
*****
ಆರುಷ್ ಹೇಳುತ್ತಾರೆ, "ಸರ್ಕಾರಿ ವೈದ್ಯರು ಸರಿಯಿದ್ದಿದ್ದರೆ, ನಾನು ಚಿಕಿತ್ಸೆಗಾಗಿ ಇಷ್ಟು ಹಣವನ್ನು ಖರ್ಚು ಮಾಡಬೇಕಾಗಿರಲಿಲ್ಲ." ಲಿಂಗ-ದೃಢೀಕರಣ ಶಸ್ತ್ರಚಿಕಿತ್ಸೆಗಳು ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಮತ್ತು ಸಹಾಯವನ್ನು ಒದಗಿಸಲು 2019ರ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ ಸರ್ಕಾರಕ್ಕೆ ನಿರ್ದೇಶಿಸುತ್ತದೆ. ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರದ ಸಮಾಲೋಚನೆ ಮತ್ತು ಹಾರ್ಮೋನ್ ಥೆರಪಿಯಂತಹ ಸೌಲಭ್ಯಗಳು ಇದರಲ್ಲಿ ಸೇರಿವೆ. ಚಿಕಿತ್ಸೆಯ ವೆಚ್ಚವನ್ನು ಆರೋಗ್ಯ ವಿಮಾ ಯೋಜನೆಯ ಮೂಲಕ ಭರಿಸಲಾಗುವುದು ಎಂದು ಕಾನೂನು ಹೇಳುತ್ತದೆ. ರೋಗಿಗೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತದೆ ಮತ್ತು ಯಾವುದೇ ರೂಪದಲ್ಲಿ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ಕಾನೂನು ಖಾತರಿ ನೀಡುತ್ತದೆ.
ಈ ಕಾನೂನನ್ನು ಜಾರಿಗೊಳಿಸಿದ ನಂತರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವಾಲಯವು 2022ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕಾಯಿದೆಯ ಮೂಲಕ, 2020ರಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಯಿತು, ಅಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿ ಯಾವುದೇ ಕಚೇರಿಗೆ ಭೇಟಿ ನೀಡದೆ ತನ್ನ ಗುರುತಿನ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯನ್ನು ಪಡೆಯಬಹುದು.
ಈ ಯೋಜನೆಗಳಲ್ಲಿ ಹೆಚ್ಚಿನವುಗಳ ಬಗ್ಗೆ ಆರುಷ್‌ಗೆ ತಿಳಿದಿಲ್ಲವಾದರೂ ತನ್ನ ಗುರುತಿಗೆ ಸಂಬಂಧಿಸಿದ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ದಾಖಲೆ ಅವರಿಗೆ ತಲುಪಿಲ್ಲ, ಆದರೆ ಪೋರ್ಟಲ್ ಸ್ಪಷ್ಟವಾಗಿ "ಜಿಲ್ಲಾ ಕಚೇರಿಗಳು ಅರ್ಜಿಯನ್ನು ಸ್ವೀಕರಿಸಿದ 30 ದಿನಗಳಲ್ಲಿ ಟ್ರಾನ್ಸ್‌ಜೆಂಡರ್ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯ," ಎಂದು ಉಲ್ಲೇಖಿಸುತ್ತದೆ. ಜನವರಿ 2, 2023ರಂತೆ, ಗುರುತಿನ ಚೀಟಿ ಮತ್ತು ಪ್ರಮಾಣಪತ್ರಗಳಿಗಾಗಿ ಮನವಿಯಾಗಿ ಮಹಾರಾಷ್ಟ್ರ ರಾಜ್ಯವು 2,080 ಅರ್ಜಿಗಳನ್ನು ಸ್ವೀಕರಿಸಿದೆ, ಅವುಗಳಲ್ಲಿ 452 ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.
ಈಗ ಗುರುತಿನ ಪ್ರಮಾಣಪತ್ರ ನೀಡದೆ ಹೋದರೆ ಬಿಎ ಪದವಿಯನ್ನು ಆರುಷಿ ಎನ್ನುವ ಹೆಸರಿನಡಿ ನೀಡಲಾಗುತ್ತದೆ. ಮತ್ತೆ ಅದನ್ನು ಬದಲಾಯಿಸಲು ಸಂಕೀರ್ಣವಾದ ದಾಖಲೆ ಪತ್ರಗಳ ವ್ಯವಹಾರ ಮಾಡಬೇಕಾಗುತ್ತದೆ. ಇದು ಆರುಷ್ ಅವರಲ್ಲಿ ಕಳವಳ ಮೂಡಿಸಿದೆ. ಅವರಿಗೆ ಈಗಲೂ ಪೊಲೀಸ್ ಪಡೆಗೆ ಸೇರುವ ಬಯಕೆಯಿದೆ. ಆದರೆ ಅದಕ್ಕೂ ಮೊದಲು ಅವರು ಲಿಂಗ ಪರಿವರ್ತನೆ ಮಾಡಿಸಿಕೊಂಡು ಪುರುಷನಾಗಲು ಬಯಸುತ್ತಾರೆ. ಇತ್ತೀಚೆಗೆ ಬಿಹಾರದ ಟ್ರಾನ್ಸ್ ಮ್ಯಾನ್ ಒಬ್ಬರ ರಾಜ್ಯದ ಮೊದಲ ಟ್ರಾನ್ಸ್ ಮ್ಯಾನ್ ಪೊಲೀಸ್ ಆಗಿ ಇಲಾಖೆಗೆ ಭರ್ತಿಯಾಗಿರುವುದು ಅವರ ಈ ಕುರಿತಾದ ನಿರೀಕ್ಷೆಗಳನ್ನು ಹೆಚ್ಚಿಸಿದೆ. “ಆ ಸುದ್ದಿಯನ್ನು ನೋಡಿ ಬಹಳ ಸಂತೋಷವಾಯಿತು. ಈಗ ನನ್ನೊಳಗೂ ಭರವಸೆ ಹುಟ್ಟಿದೆ,” ಎಂದು ಆರುಷ್ ಹೇಳುತ್ತಾರೆ. ಅವರು ಈ ನಿಟ್ಟಿನಲ್ಲಿ ತಮ್ಮ ಶಸ್ತ್ರಚಿಕಿತ್ಸೆಗಾಗಿ ಹಣ ಉಳಿಸುವ ಸಲುವಾಗಿ ದುಡಿಯುತ್ತಿದ್ದಾರೆ.
ಪ್ರತಿಯೊಬ್ಬ ಮನುಷ್ಯರನ್ನೂ ಒಪ್ಪಿಕೊಳ್ಳುವ ಕೌಶಲವನ್ನು ಜನ ಕಲಿಯಬೇಕು ಎಂಬುದು ಅವರ ಆಶಯ. ಆಗ ಯಾರೂ ಮನೆ, ಊರು ತೊರೆಯಬೇಕಾಗುವುದಿಲ್ಲ, ಹೀಗೆ ಲೋಕಕ್ಕೆ ಮುಖ ಮರೆಮಾಚಿ ಬದುಕಬೇಕಾಗುವುದಿಲ್ಲ. "ನಾನು ತುಂಬಾ ಅಳುತ್ತಿದ್ದೆ ಮತ್ತು ಬದುಕುವ ಇಚ್ಛೆಯನ್ನೇ ಕಳೆದುಕೊಂಡಿದ್ದೆ. ಅಷ್ಟಕ್ಕೂ, ನಾವು ಯಾಕೆ ಭಯದಿಂದ ಬದುಕಬೇಕು? ಒಂದು ದಿನ ನಾವು ನಮ್ಮ ಗುರುತನ್ನು ಮುಚ್ಚಿಟ್ಟುಕೊಳ್ಳದೆ ಮುಕ್ತವಾಗಿ ನಮ್ಮ ಕಥೆಯನ್ನು ಹೇಳಲು ಬಯಸುತ್ತೇವೆ," ಎಂದು ಆರುಷ್ ಹೇಳುತ್ತಾರೆ.
"ಮುಘಲ್-ಎ-ಅಜಮ್ ಚಿತ್ರದ ಅಂತ್ಯವು ದುಃಖಕರವಾಗಿತ್ತು. ನಮ್ಮದು ಹಾಗಾಗುವುದಿಲ್ಲ," ಎಂದು ವಿಧಿ ಮುಗುಳುನಗೆಯೊಂದಿಗೆ ಹೇಳುತ್ತಾರೆ.
ಖಾಸಗಿತನವನ್ನು ರಕ್ಷಿಸುವ ಸಲುವಾಗಿ ವಿಧಿ ಮತ್ತು ಆರುಷ್ ಅವರ ಹೆಸರುಗಳನ್ನು ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು