ಎರಡು ಬುಲ್ಡೋಜರ್‌ಗಳು ಬಂದಾಗ ಮಧ್ಯಾಹ್ನವಾಗಿತ್ತು. "ಬುಲ್ಡೋಜರ್, ಬುಲ್ಡೋಜರ್ ... ಸರ್ ... ಸರ್..." ಶಾಲೆಯ ಮೈದಾನದಲ್ಲಿದ್ದ ಮಕ್ಕಳು ಕೂಗಿದರು. ಅವರ ಅಳಲನ್ನು ಕೇಳಿ ಪ್ರಾಂಶುಪಾಲರಾದ ಪ್ರಕಾಶ್ ಪವಾರ್ ಮತ್ತು ಸಂಸ್ಥಾಪಕ ಮತೀನ್ ಭೋಸಲೆ ಶಾಲೆಯ ಕಚೇರಿಯಿಂದ ಓಡಿ ಬಂದರು.
"ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ?" ಎಂದು ಪವಾರ್ ಪ್ರಶ್ನಿಸಿದರು. “ನಾವು ಹೆದ್ದಾರಿಗಾಗಿ [ತರಗತಿ ಕೊಠಡಿಗಳನ್ನು] ಶಾಲೆಯ ಕಟ್ಟಡವನ್ನು ಕೆಡಗಲು ಬಂದಿದ್ದೇವೆ. ದಯವಿಟ್ಟು ಪಕ್ಕಕ್ಕೆ ಸರಿಯಿರಿ,” ಎಂದು ಬುಲ್ಡೋಜರ್ ಚಾಲಕರೊಬ್ಬರು ಹೇಳಿದರು. ಆದರೆ ಇಲ್ಲಿಯವರೆಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಭೋಸಲೆ ಪ್ರತಿಭಟಿಸಿದರು." [ಅಮರಾವತಿ ಜಿಲ್ಲಾಧಿಕಾರಿಗಳ ಕಚೇರಿ] ಮೇಲಿನಿಂದ ಆದೇಶ ಬಂದಿದೆ," ಎಂದು ಚಾಲಕರು ಹೇಳಿದರು.
ಶಾಲೆಯ ಸಿಬ್ಬಂದಿ ಬೆಂಚುಗಳು ಮತ್ತು ಹಸಿರು ಬರವಣಿಗೆಯ ಬೋರ್ಡ್‌ಗಳನ್ನು ತ್ವರಿತವಾಗಿ ಹೊರತೆಗೆದರು. ಅವರು ಅಂಬೇಡ್ಕರ್, ಫುಲೆ, ಗಾಂಧಿ, ವಿಶ್ವ ಇತಿಹಾಸ ಮತ್ತು ಹೆಚ್ಚಿನವುಗಳ ಕುರಿತು ಮರಾಠಿಯಲ್ಲಿ ಸುಮಾರು 2,000 ಪುಸ್ತಕಗಳಿಂದ ತುಂಬಿದ್ದ ತಾತ್ಕಾಲಿಕ ಗ್ರಂಥಾಲಯವನ್ನು ಖಾಲಿ ಮಾಡಿದರು. ವಿದ್ಯಾರ್ಥಿಗಳನ್ನು ಸಮೀಪದ ಶಾಲಾ ಹಾಸ್ಟೆಲ್‌ಗೆ ಕರೆದೊಯ್ಯಲಾಯಿತು. ಶೀಘ್ರದಲ್ಲೇ, ಬುಲ್ಡೋಜರ್ಗಳು ಕಟ್ಟಡವನ್ನು ಒಡೆಯಲು ಪ್ರಾರಂಭಿಸಿದವು ಒಂದು ಗೋಡೆ ನೆಲಕ್ಕುರುಳಿತು.
ಇದು ಜೂನ್ 6ರಂದು ಪ್ರಶ್ನಚಿನ್ಹ್ ಆದಿವಾಸಿ ಆಶ್ರಮಶಾಲೆಯಲ್ಲಿ (ಪ್ರಶ್ನೆ ಚಿಹ್ನೆ ಆದಿವಾಸಿ ವಸತಿ ಶಾಲೆ) ಎರಡು ಗಂಟೆಗಳ ಕಾಲ ಮುಂದುವರೆಯಿತು. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರುವ ಮಕ್ಕಳು - ಏಪ್ರಿಲ್‌ನಿಂದ ಬೇಸಿಗೆ ರಜೆಯಲ್ಲಿ - ತಮ್ಮ ತರಗತಿ ಕೊಠಡಿಗಳು ನಾಶವಾಗುವುದನ್ನು ವೀಕ್ಷಿಸಿದರು. “ಹಾಗಾದರೆ ನಮ್ಮ ಶಾಲೆ ಜೂನ್ 26ರಂದು ಪ್ರಾರಂಭವಾಗುವುದಿಲ್ಲವೇ? ಅವರು ಈ ರೀತಿ ಏಕೆ ಮಾಡುತ್ತಿದ್ದಾರೆ?” ಎಂದು ಕೆಲವು ಮಕ್ಕಳು ಕೇಳಿದರು.












