“ತಮ್ಮ ಮನೆ ಬಾಗಿಲಿಗೆ ಬರಬೇಡಿರೆಂದು ಹಳ್ಳಿಗರು ನಮ್ಮ ಮೇಲೆ ರೇಗಾಡುತ್ತಿದ್ದಾರೆ. ಯಾವುದೋ ಖಾಯಿಲೆ ಬಂದಿದೆಯೆಂಬುದಾಗಿ ಅವರು ಹೇಳುತ್ತಾರೆ. ನಮಗೆ ಯಾರೂ ಆ ಖಾಯಿಲೆಯ ಬಗ್ಗೆ ತಿಳಿಸುತ್ತಿಲ್ಲ. ನನಗೆ ಯಾವುದೇ ಖಾಯಿಲೆಯಿಲ್ಲ. ಅವರು ನನ್ನನ್ನು ತಡೆಯುತ್ತಿರುವುದಾದರೂ ಏಕೆ?”
ಫಾನ್ಸೆ ಪಾರ್ಧಿ ಆದಿವಾಸಿಯಾದ ಗೀತ ಕಾಳೆಗೆ ಒಂದು ವಾರದಿಂದಲೂ ಯಾವುದೇ ಆಹಾರ ದೊರೆತಿಲ್ಲ. ಸಾಮಾನ್ಯ ದಿನಗಳಲ್ಲೂ ಸಹ 78ರ ಆಕೆಯು ತನ್ನ ಹಸಿವನ್ನು ನೀಗಿಸಿಕೊಳ್ಳುವುದು ಭಿಕ್ಷಾಟನೆಯಿಂದಲೇ. ಲಾಕ್‍ಡೌನ್ ಕಾಣದಿಂದಾಗಿ ಆಕೆಗೆ ಆಧಾರವೇ ಇಲ್ಲದಂತಾಗಿದೆ. ಕೋವಿಡ್-19ರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲವಾದರೂ, ಆಕೆ ಹಾಗೂ ಇತರೆ ಪಾರ್ಧಿಗಳು, ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ.
ಆಕೆಗೆ ನೆನಪಿರುವಂತೆ, ಮಾರ್ಚ್ 25ರಂದು ಕೊನೆಯ ಬಾರಿಗೆ ತಂಗಳು ಬಾಜ್ರಾ ಭಖ್ರಿಯನ್ನು ಆಕೆಗೆ ನೀಡಲಾಯಿತು. “ನನಗೆ ಪರಿಚಯವಿಲ್ಲದ ಕೆಲವು ಹುಡುಗರು ಐತ್ವಾರದಂದು (ಮಾರ್ಚ್ 22ನೇ ಭಾನುವಾರ) ಬಂದು ನಾಲ್ಕು ಭಕ್ರಿಗಳನ್ನು ನೀಡಿದರು. ನಾನು ಅವನ್ನು ನಾಲ್ಕು ದಿನಗಳವರೆಗೂ ತಿಂದೆ”, ಎಂದು ಆಕೆ ತಿಳಿಸಿದರು. ಅಂದಿನಿಂದಲೂ ಇವರು ತನ್ನ ಹಸಿವನ್ನು ನಿಗ್ರಹಿಸುತ್ತಿದ್ದಾರೆ. “ಆ ನಂತರ ಇಲ್ಲಿಗೆ ಯಾರೂ ಬಂದಿಲ್ಲ. ಹಳ್ಳಿಗರು ನನಗೆ ಹಳ್ಳಿಯನ್ನು ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ”, ಎಂದು ಸಹ ಅವರು ತಿಳಿಸಿದರು.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಶಿರೂರಿನ ಮುಖ್ಯ ರಸ್ತೆಯಲ್ಲಿ, ತಗಡಿನ ಗುಡಾರವೊಂದರಲ್ಲಿ ಗೀತಾಬಾಯಿ ಒಬ್ಬಂಟಿಯಾಗಿದ್ದಾರೆ. ಎರಡು ಕಿ.ಮೀ. ದೂರದ ಚೌಹನ್ವಾಡಿ ಹಳ್ಳಿಗೆ ಆಕೆ ಭಿಕ್ಷೆ ಬೇಡಲು ತೆರಳುತ್ತಾರೆ. “ಜನರು ನಮಗೆ ಕೊಟ್ಟ ಅಳಿದುಳಿದ ಆಹಾರವನ್ನು ನಾವು ತಿನ್ನುತ್ತಿದ್ದೆವು”, ಎನ್ನುತ್ತಾರೆ ಆಕೆ. “ಸರ್ಕಾರವು ರೇಷನ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುತ್ತಿದೆಯೆಂಬುದಾಗಿ ಯಾರೋ ಹೇಳುತ್ತಿರುವುದನ್ನು ಕೇಳಿದೆ. ನನ್ನ ಬಳಿ ರೇಷನ್ ಕಾರ್ಡ್ ಇಲ್ಲ”, ಎಂದು ಅವರು ಅಲವತ್ತುಕೊಂಡರು.
ಫಾನ್ಸೆ ಪಾರ್ಧಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದ್ದು, ಅವರು ಬಡ ಹಾಗೂ ಅವಕಾಶವಂಚಿತ ಪಾರ್ಧಿ ಆದಿವಾಸಿ ಗುಂಪುಗಳಲ್ಲಿನ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವ ಜನರಾಗಿದ್ದಾರೆ. ಸ್ವಾತಂತ್ರದ ನಂತರದಲ್ಲಿ, 70ಕ್ಕೂ ಹೆಚ್ಚಿನ ವರ್ಷಗಳಿಂದಲೂ ಬರ್ಬರವೆನಿಸಿದ್ದ ವಸಾಹತುಶಾಹಿ ಕಾನೂನಿನ ಪರಂಪರೆ ಹಾಗೂ ಹೊರೆಯನ್ನು ಅವರು ಅನುಭವಿಸುತ್ತಲೇ ಇದ್ದಾರೆ. ದಂಗೆಯೆದ್ದು ತಮ್ಮ ಅಧಿಪತ್ಯಕ್ಕೆ ಸವಾಲನ್ನೊಡ್ಡಿದ ಅನೇಕ ಆದಿವಾಸಿ ಮತ್ತು ಪಶುಚಾರಣಿಕರನ್ನು ಶಿಕ್ಷಿಸಿ, ಅವರನ್ನು ದಮನಗೊಳಿಸಲು 1871ರಲ್ಲಿ, ಬ್ರಿಟಿಷರು ಬುಡಕಟ್ಟು ಜನರ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಿ, ಸುಮಾರು 200 ಸಮುದಾಯಗಳನ್ನು ಜನ್ಮಜಾತ ಅಪರಾಧಿಗಳೆಂದು ಘೋಷಿಸಿದರು. ವಿನಾಶಕಾರಿಯಾಗಿ ಪರಿಣಮಿಸಿದ ಈ ಕಾನೂನಿನಿಂದಾಗಿ ಇವರು ಸಮಾಜದಿಂದ ಬೇರ್ಪಡುವಂತಾಯಿತು.
ಸ್ವತಂತ್ರ ಭಾರತವು 1952ರಲ್ಲಿ ಈ ಕಾನೂನನ್ನು ರದ್ದುಪಡಿಸಿ, ‘ದಂಡಾರ್ಹ ಬುಡಕಟ್ಟುಗಳ’ ಪಟ್ಟಿಯನ್ನು ‘ಅಧಿಸೂಚನೆಯಿಂದ ತೆಗೆದುಹಾಕಿತು.’ ಆದರೆ ಸಮಾಜದಲ್ಲಿನ ಇವರ ಬಗೆಗಿನ ಕಳಂಕ, ಪೂರ್ವಾಗ್ರಹ ಮತ್ತು ಹಿಂಸೆಗಳು ಮುಂದುವರಿಯುತ್ತಲೇ ಇವೆ. ಈ ಸಮುದಾಯದ ಅನೇಕರಿಗೆ ಪ್ರಮುಖ ಗ್ರಾಮಗಳ ಪ್ರವೇಶ ಹಾಗೂ ಅಲ್ಲಿನ ಬಾವಿಯಿಂದ ನೀರನ್ನು ಪಡೆಯುವುದು ಅಸಾಧ್ಯ. ಅವರು ಆ ಪ್ರದೇಶದಿಂದ ಸುಮಾರು 2-3 ಕಿ.ಮೀ.ಗಳಾಚೆ ನೆಲೆಸುತ್ತಾರೆ. ಇವರಿಗೆ ಕೆಲಸವು ದೊರೆಯುವುದಿಲ್ಲ. ಇವರ ಶೈಕ್ಷಣಿಕ ಮಟ್ಟವು ಶೋಚನೀಯವಾಗಿದೆ. ಅನೇಕರನ್ನು ಜೈಲಿಗೆ ತಳ್ಳಲಾಗಿದ್ದು ಅವರ ಮೇಲೆ ಸಣ್ಣಪುಟ್ಟ ಅಪರಾಧಗಳನ್ನು ಹೊರಿಸಲಾಗಿದೆ. ಹಲವರಿಗೆ ಭಿಕ್ಷಾಟನೆಯ ಹೊರತಾಗಿ ಜೀವನೋಪಾಯಕ್ಕೆ ಯಾವುದೇ ಆಯ್ಕೆಗಳಿಲ್ಲ.
ಆಯ್ಕೆಗಳೇ ಇಲ್ಲದವರಲ್ಲಿ ಗೀತಾಬಾಯಿ ಸಹ ಒಬ್ಬರು. ಪುಣೆ ಜಿಲ್ಲೆಯ ಶಿರೂರ್ ತಾಲ್ಲೂಕಿನ ಕರಡೆ ಗ್ರಾಮದ ಹೊರವಲಯದಲ್ಲಿ ಒಂದು ಕೊಠಡಿಯ ಮನೆಯೊಂದರಲ್ಲಿ ವಾಸಿಸುವ ೭೫ರ ವಯಸ್ಸಿನ ಶಾಂತಾಬಾಯಿಗೂ ಆಯ್ಕೆಗಳಿಲ್ಲ. ಫಾನ್ಸೆ ಪಾರ್ಧಿ ಸಮುದಾಯಕ್ಕೆ ಸೇರಿದ ಇವರ ಮನೆ ಗೀತಾಬಾಯಿಯ ಮನೆಯಿಂದ ಸುಮಾರು ೪ ಕಿ.ಮೀ. ದೂರದಲ್ಲಿದೆ. ಶಾಂತಾಬಾಯಿ, ಆಕೆಯ ಪತಿ ಹಾಗೂ ೨೦೧೦ರಲ್ಲಿ ರಸ್ತೆಯ ಅಪಘಾತವೊಂದರಿಂದಾಗಿ ಅಶಕ್ತಗೊಂಡ ಆಕೆಯ ಮಗ ಸಂದೀಪನಿಗೆ ಜೀವನೋಪಾಯಕ್ಕೆ ಕರಡೆಯಲ್ಲಿನ ಭಿಕ್ಷಾಟನೆಯೊಂದೇ ದಾರಿ.
೪೫ ವರ್ಷ ವಯಸ್ಸಿನ ಸಂತೋಷ್ ಹಾಗೂ ೫೦ ವರ್ಷ ವಯಸ್ಸಿನ ಮನೋಜ್ ಗೀತಾಬಾಯಿಯ ಮಕ್ಕಳು. ಇವರಿಬ್ಬರೂ ಸಫಾಯಿ ಕರ್ಮಚಾರಿಗಳಾಗಿದ್ದು ೭೭ ಕಿ.ಮೀ. ದೂರದ ಪಿಂಪ್ರಿ ಚಿಂಚ್ವಡ್ ಎಂಬಲ್ಲಿ ವಾಸಿಸುತ್ತಿದ್ದಾರೆ. ಆಕೆಗೆ ಅವರ ಬಗ್ಗೆ ಯಾವ ಸುದ್ದಿಯೂ ತಿಳಿಯುತ್ತಿಲ್ಲ. “ನನ್ನ ಮಕ್ಕಳು ನನ್ನನ್ನು ಭೇಟಿಯಾಗಲು ಬಂದೇ ಇಲ್ಲ. ಅವರು ಕನಿಷ್ಟ ತಿಂಗಳಿಗೊಮ್ಮೆಯಾದರೂ ಬರುತ್ತಿದ್ದರು”, ಎಂದು ಆಕೆ ತಿಳಿಸಿದರು. ಮಾರ್ಚ್ ೨೩ರಂದು ರಾಜ್ಯಾದ್ಯಂತದ ನಿಷೇಧಾಜ್ಞೆ ಹಾಗೂ ಮಾರ್ಚ್ ೨೪ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ತನಗೆ ಆಹಾರವನ್ನು ದೊರಕಿಸಿಕೊಳ್ಳುವ ಆಕೆಯ ಎಲ್ಲ ಪ್ರಯತ್ನಗಳೂ ನಿಷ್ಫಲವಾದವು. ಹಸಿವು ಆಕೆಯನ್ನು ಮತ್ತೆ ಮಾರ್ಚ್ ೨೮ರಂದು ಚೌಹನ್ವಾಡಿಗೆ ಕರೆತಂದಿತಾದರೂ ಆಕೆಯನ್ನು ಹಿಮ್ಮೆಟ್ಟಿಸಲಾಯಿತು.
ಶಾಂತಾಬಾಯಿಯನ್ನೂ ಕರಡೆಯಲ್ಲಿ ಹೀಗೆಯೇ ತಿರಸ್ಕರಿಸಲಾಯಿತು. ಅಗಣಿತ ಪಾರ್ಧಿ ಕುಟುಂಬಗಳು ಇದೇ ಪರಿಸ್ಥಿತಿಯಲ್ಲಿವೆ. ಕೋವಿಡ್-19ನಿಂದಾಗಿ ಫಾನ್ಸೆ ಪಾರ್ಧಿಗಳ ಭಿಕ್ಷೆಗೂ ತಡೆಯೊಡ್ಡಿದಂತಾಗಿದೆ.
“ಹಳ್ಳಿಗಳಲ್ಲಿನ ಜನರು ತಮ್ಮ ಮನೆಯ ಬಾಗಿಲಿಗೆ ಬರಬೇಡಿರೆಂದು ನಮ್ಮ ಮೇಲೆ ರೇಗುತ್ತಿದ್ದಾರೆ. ನನ್ನ ಮಗನಿಗಾದರೂ ತಿನ್ನಲು ಏನನ್ನಾದರೂ ನಾನು ಹವಣಿಸಲೇಬೇಕು.” ಸಂದೀಪನಿಗೆ ಸೊಂಟದಿಂದ ಕೆಳಗೆ ಪಾರ್ಶ್ವವಾಯು ತಗುಲಿದೆ. “ನಮಗೆ ಭಿಕ್ಷೆಯಿಂದೇನೂ ದೊರಕದಿದ್ದಲ್ಲಿ ತಿನ್ನುವುದಾದರೂ ಏನನ್ನು?”, ಎಂಬುದಾಗಿ ಶಾಂತಾಬಾಯಿ ಕಾಳೆ ದೂರವಾಣಿಯಲ್ಲಿ ನನ್ನನ್ನು ಪ್ರಶ್ನಿಸಿದರು. “ನನ್ನ ಮಗ ಹಾಸಿಗೆ ಹಿಡಿದಿದ್ದಾನೆ”, ಎಂದು ಅವರು ಚಿಂತಿತರಾದರು.
79ರ ವಯಸ್ಸಿನ ಆಕೆಯ ಪತಿ ಧುಲ್ಯ ಹಾಗೂ ಆಕೆ, ಮಗನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಿ, ಆತನ ಕಾಳಜಿವಹಿಸುತ್ತಾರೆ. “ಆತನು ಮೂರು ವರ್ಷಗಳವರೆಗೆ ಅನುಧ್ ಸರ್ಕಾರಿ ಆಸ್ಪತ್ರೆಯಲ್ಲಿದ್ದನು. ಮೆದುಳಿನ ನರಗಳು ಹಾನಿಗೀಡಾಗಿರುವ ಕಾರಣ, ಆತನಿಗೆ ತನ್ನ ಶರೀರದ ಚಲನೆ ಸಾಧ್ಯವಿಲ್ಲ”, ಎಂಬುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆಂದು ಮಾರ್ಚ್ 2018ರಲ್ಲಿ ಶಾಂತಾಬಾಯಿ ತನ್ನ ಒಂದು ಕೊಠಡಿಯ ಮನೆಯಲ್ಲಿ ನನಗೆ ತಿಳಿಸಿದ್ದರು. 4ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರುವ ಸಂದೀಪನು ತಾನು ಅಪಘಾತಕ್ಕೀಡಾಗುವುದಕ್ಕೂ ಮೊದಲು ಕಸ ಗುಡಿಸುವ, ರಸ್ತೆಯನ್ನು ಅಗೆಯುವ, ಟ್ರಕ್ಕುಗಳಿಗೆ ಸರಕುಗಳನ್ನು ಪೇರಿಸುವ ಹಾಗೂ ಅದರಿಂದ ಸರಕುಗಳನ್ನು ಇಳಿಸುವ, ಪುಣೆ ಜಿಲ್ಲೆಯ ಹೋಟೆಲ್ಲುಗಳಲ್ಲಿ ತಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯುವ… ಹೀಗೆ, ತನಗೆ ದೊರೆತ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದನು.
ಮಾಹೆಯಾನ ಆತನು ಗಳಿಸುತ್ತಿದ್ದ 6ರಿಂದ 7 ಸಾವಿರ ರೂಪಾಯಿಯಲ್ಲಿ ಕುಟುಂಬವನ್ನು ನಿರ್ವಹಿಸಲಾಗುತ್ತಿತ್ತು. “ನಮ್ಮ ಬಾಲ್ಯದಲ್ಲಷ್ಟೇ ಅಲ್ಲದೆ ಪ್ರಾಯಕ್ಕೆ ಬಂದಾಗಲೂ ಭಿಕ್ಷಾಟನೆಯನ್ನೇ ನಡೆಸುತ್ತಿದ್ದೆವು. ನಮ್ಮ ಮಗನ ಸಂಪಾದನೆಯಿಂದಾಗಿ ನಾವು ಅದರಿಂದ ದೂರವಿದ್ದೆವು. ಆತನಿಗೆ ಅಪಘಾತವಾದಾಗಿನಿಂದಲೂ ನಾವು ಮತ್ತೆ ಭಿಕ್ಷಾಟನೆಯಲ್ಲೇ ತೊಡಗಿದ್ದೇವೆ”, ಎಂಬುದಾಗಿ 2018ರಲ್ಲಿ ಶಾಂತಾಬಾಯಿ ನನಗೆ ತಿಳಿಸಿದ್ದರು. ಕರಡೆಯಲ್ಲಿ ಅಳಿದುಳಿದ ತಿನಿಸನ್ನು ಸಂಗ್ರಹಿಸಿದ್ದ ಆಕೆ, ತನ್ನ ಮನೆಯ ಹೊರಗಿನ ಜಾಗದಲ್ಲಿ ರಾಗಿ ಮತ್ತು ಬಾಜ್ರಾ ಅಥವ ಜೋಳದಿಂದ ತಯಾರಿಸಿದ ಹಳಸಿದ ರೊಟ್ಟಿಗಳನ್ನು ಒಣಗಿಸುತ್ತಿದ್ದರು. “ನಾವು ಅವನ್ನು ಬಿಸಿಲಿನಲ್ಲಿ ಒಣಗಿಸಿ ತಿನ್ನುವ ಮೊದಲು ಬಿಸಿ ನೀರಿನಲ್ಲಿ ಕುದಿಸುತ್ತೇವೆ. ಮುಂಜಾನೆ, ಮಧ್ಯಾಹ್ನ ಹಾಗೂ ರಾತ್ರಿ ನಾವು ತಿನ್ನುವುದು ಇದನ್ನೇ. ಇದೇ ನಮ್ಮ ಆಹಾರ”, ಎಂದರಾಕೆ.
ಮುಗ್ಗಲು ರೊಟ್ಟಿಗಳ ಜೊತೆಗೆ ಕೆಲವೊಮ್ಮೆ ಆಕೆಗೆ ಸ್ವಲ್ಪ ಅಕ್ಕಿಯೂ ದೊರೆಯುತ್ತದೆ. ಇದೀಗ ಆಕೆಯ ಬಳಿ ಕೇವಲ ಎರಡು ಕೆ.ಜಿ.ಗಳಷ್ಟು ಅಕ್ಕಿ ಉಳಿದಿದೆಯಷ್ಟೇ. ಯಾವುದೋ ಎಣ್ಣೆಯೊಂದಿಗೆ ಅನ್ನವನ್ನು ಸ್ವಲ್ಪ ಹುರಿದು, ತುಸು ಖಾರದ ಪುಡಿ ಮತ್ತು ಉಪ್ಪನ್ನು ಬೆರೆಸಿ, ಆಕೆ, ಧುಲ್ಯ ಹಾಗೂ ಸಂದೀಪ್, ದಿನಕ್ಕೊಮ್ಮೆ ಮಾತ್ರವೇ ಅದನ್ನು ತಿನ್ನುತ್ತಿದ್ದಾರೆ. “ಮಾರ್ಚ್ 22ರಿಂದ ನನಗೇನೂ ದೊರೆತಿಲ್ಲ. ಮುಗ್ಗಲು ರೊಟ್ಟಿಯೂ ಸಹ. ಈ ಅಕ್ಕಿಯೂ ಮುಗಿದುಹೋದಲ್ಲಿ ನಾವು ಉಪವಾಸವಿರಬೇಕಾಗುತ್ತದೆ”, ಎನ್ನುತ್ತಾರೆ ಆಕೆ.
ಜನರು ʼವೈರಸ್ ಅನ್ನುʼ ದೂರವಿರಿಸಲು ಬಯಸಿರುವುದರಿಂದ ಮರಗಳಿಂದ ತಯಾರಿಸಲಾದ ತಡೆಗಟ್ಟುಗಳು ಇಲ್ಲಿನ ಗ್ರಾಮಗಳ ಸುತ್ತ ಕಂಡುಬರುತ್ತಿವೆ. “ಯಾರಾದರೂ ರೊಟ್ಟಿಗಳು ಅಥವ ಇತರೆ ಖಾದ್ಯ ಪದಾರ್ಥಗಳನ್ನು ಎಸೆದಿದ್ದಾರೋ ಎಂದು ನೋಡಲು, ಶಾಂತಬಾಯಿ ಹಾಗೂ ಧುಲ್ಯ ಗ್ರಾಮಗಳ ಹೊರವಲಯದಲ್ಲಿ ಮಾತ್ರವೇ ತಿರುಗಾಡಬಹುದು.”
ಭಿಕ್ಷಾಟನೆ ಅಥವ ಸಾಧ್ಯವಾದಲ್ಲಿ ರಸ್ತೆಯನ್ನು ಅಗೆಯುವ ಕೆಲಸದಲ್ಲಿ ತೊಡಗಲು 66 ಕಿ.ಮೀ. ದೂರದ ಪುಣೆ ಜಿಲ್ಲೆಗೆ ತೆರಳುವ ತಮ್ಮ ಪ್ರಯತ್ನದ ಬಗ್ಗೆ ಧುಲ್ಯ ಹೀಗೆಂದರು: “ನಾನು ಪುಣೆಯ ಕಡೆಗೆ ನಡೆದು ಹೊರಟಿದ್ದಾಗ ಶಿಕ್ರಪುರ್ ಬಳಿ ಶನಿವಾರದಂದು ಪೊಲೀಸರು ನನ್ನನ್ನು ತಡೆದರು. ಅವರು ಯಾವುದೋ ವೈರಸ್ ಬಗ್ಗೆ ತಿಳಿಸಿ ನನ್ನ ಬಾಯಿಗೆ ಮುಸುಕನ್ನು ಧರಿಸುವಂತೆ ತಿಳಿಸಿದರು. ನಾನು ಹೆದರಿ ಮನೆಗೆ ವಾಪಸ್ಸು ಬಂದೆ.”
ಸೊಂಟದಿಂದ ಕೆಳಗೆ ಪಾರ್ಶ್ವವಾಯುವಿನಿಂದ ಪೀಡಿತರಾಗಿರುವ ಕಾರಣ, ಸಂದೀಪ್ ಹಾಸಿಗೆ ಹಿಡಿದಿದ್ದು, ಆತನಿಗೆ ಆಹಾರವನ್ನು ಒದಗಿಸುವ ಬಗ್ಗೆ ಶಾಂತಾಬಾಯಿ ಚಿಂತಿತರಾಗಿದ್ದಾರೆ (ಕಡತದಲ್ಲಿನ ಛಾಯಾಚಿತ್ರ).
1959ರ ಬಾಂಬೆ ಭಿಕ್ಷಾಟನೆ ನಿರ್ಮೂಲನ ಕಾಯಿದೆಯ ಅನುಸಾರ, ಮಹಾರಾಷ್ಟ್ರದಲ್ಲಿ ಭಿಕ್ಷಾಟನೆಯನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಭಿಕ್ಷಾಟನೆಯಲ್ಲಿ ನಿರತರಾದವರನ್ನು ಯಾವುದೇ ವಾರಂಟು ಇಲ್ಲದೆಯೂ ಬಂಧಿಸಬಹುದಾಗಿದ್ದು, ಯಾವುದಾದರೂ ಪ್ರಮಾಣೀಕೃತ (certified) ಸಂಸ್ಥೆಗಳಲ್ಲಿ 1-3 ವರ್ಷಗಳವರೆಗೆ ಅವರನ್ನು ಇರಿಸಬಹುದಾಗಿದೆ. ಭಿಕ್ಷಾಟನೆ ಹಾಗೂ ನಿರ್ಗತಿಕ ಸ್ಥಿತಿಯನ್ನು ಕುರಿತಂತೆ ಕೇಂದ್ರದ ಯಾವುದೇ ಕಾನೂನು ಲಭ್ಯವಿಲ್ಲದ ಕಾರಣ, ಅನೇಕ ರಾಜ್ಯಗಳು ಈ ನಿಯಮವನ್ನು ಅಳವಡಿಸಿಕೊಂಡಿವೆ ಅಥವ ಅದನ್ನು ಸಂಸ್ಕರಣಗೊಳಿಸಿವೆ.
ಈ ನಿಯಮದ ಉಪಬಂಧಗಳು ಸಾಂವಿಧಾನಿಕ ಸೂಕ್ಷ್ಮ ಪರಿಶೀಲನೆಯ ಸಂಧಾರಣೆ (sustain) ಮಾಡಲಾರದ ಕಾರಣ, ಅದನ್ನು ರದ್ದುಗೊಳಿಸಬೇಕೆಂದು ದೆಹಲಿ ಉಚ್ಛ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ (ಮಹಾರಾಷ್ಟ್ರದಲ್ಲಿ ಇದು ಕಾರ್ಯಾನ್ವಿತಗೊಳ್ಳಲಿಲ್ಲ).
“ಭಿಕ್ಷಾಟನೆಯು” ವ್ಯಕ್ತಿಯು ಸಾಮಾಜಿಕವಾಗಿ ನಿರ್ಮಿತಗೊಂಡ ಜಾಲಬಂಧದಿಂದ ಹೊರಬಿದ್ದ ಅಸ್ವಸ್ಥತೆಯ ಲಕ್ಷಣವೆಂಬುದಾಗಿ ನ್ಯಾಯಾಲಯವು ತಿಳಿಸುತ್ತದೆ. ಎಲ್ಲರಿಗೂ ಸಾಮಾಜಿಕ ರಕ್ಷಣೆಯನ್ನು ಒದಗಿಸಲು, ಎಲ್ಲ ಪ್ರಜೆಗಳಿಗೂ ಮೂಲಭೂತ ಸೌಲಭ್ಯಗಳ ಒದಗಣೆಯನ್ನು (provision) ಖಾತರಿಪಡಿಸಲು ಸರ್ಕಾರಕ್ಕೆ ಜನಾದೇಶವಿದೆ. ಭಿಕ್ಷುಕರ ಉಪಸ್ಥಿತಿಯು ಸರ್ಕಾರವು ಎಲ್ಲ ಪ್ರಜೆಗಳಿಗೂ ಈ ಒದಗಣೆಗಳ ತಲುಪುವಿಕೆಯನ್ನು ನಿರ್ವಹಿಸದಿರುವುದಕ್ಕೆ ಸಾಕ್ಷಿಯಾಗಿದೆ.”
ಹಣಕಾಸು ಸಚಿವರ ʼಪ್ಯಾಕೇಜ್‌ನಲ್ಲಿನʼ ಬಹುತೇಕ ಪ್ರಕಟಣೆಗಳು (ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆಗೆ ಸಂಬಂಧಿಸಿದ ಮಾರ್ಚ್ 26ರ ಪ್ರಕಟಣೆಗಳು) ಈ ಪ್ರಜೆಗಳಿಗೆ ಸಹಕಾರಿಯಾಗಿಲ್ಲ. ಇವರು ಪಡಿತರ ಚೀಟಿಗಳು, ಬ್ಯಾಂಕ್ ಖಾತೆಗಳು ಹಾಗೂ ಎಂ.ಜಿ.ಎನ್.ಆರ್.ಇ.ಜಿ.ಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನಿಯಮ) ಉದ್ಯೋಗ ಚೀಟಿಗಳನ್ನು ಹೊಂದಿರುವುದಿಲ್ಲ. ಇವರಿಗೆ ಆ ಐದು ಕೆ.ಜಿ. ‘ಉಚಿತ ಆಹಾರ ಧಾನ್ಯಗಳುʼ ಅಥವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ನೇರ ನಗದು ವರ್ಗಾವಣೆಯು ಲಭ್ಯವಾಗುವುದಾದರೂ ಹೇಗೆ? ಈ ಯಾವುದೇ ಸೌಲಭ್ಯಗಳು ಗೀತಾಬಾಯಿ ಹಾಗೂ ಶಾಂತಾಬಾಯಿಯವರಿಗೆ ತಲುಪುವುದಾದರೂ ಹೇಗೆ? ಜೊತೆಗೆ ಈ ಸಮುದಾಯಗಳಿಗೆ ಕೋವಿಡ್-19 ಸರ್ವವ್ಯಾಪಿ ವ್ಯಾಧಿಯನ್ನು ಕುರಿತ ತಿಳುವಳಿಕೆಯೂ ಕಡಿಮೆ. ಅವರು ವಹಿಸಬೇಕಾದ ಎಚ್ಚರಿಕೆಗಳ ಅರಿವಂತೂ ಇನ್ನೂ ಕಡಿಮೆಯೆಂದೇ ಹೇಳಬಹುದು.
ಸುನಿತ ಭೋಂಸ್ಲೆ, ಫಾನ್ಸೆ ಪಾರ್ಧಿ ಸಮುದಾಯಕ್ಕೆ ಸೇರಿದವರಾಗಿದ್ದು, ಪುಣೆಯ ನಿವಾಸಿಯಾದ ಇವರು ಈ ಸಮುದಾಯದ ಸಮಾಜ ಸೇವಕಿಯೂ ಹೌದು. “ಈ ಜನರು ತೀವ್ರ ಪರಿಣಾಮಗಳಿಗೆ ಈಡಾಗಿದ್ದಾರೆ. ಅವರಿಗೆ ತಿನ್ನಲು ಆಹಾರವೇ ಸಿಗುತ್ತಿಲ್ಲ… ನೀವು ಪ್ರಕಟಿಸಿರುವ ಯೋಜನೆಗಳು ನಮ್ಮನ್ನು ತಲುಪುವುದಾದರೂ ಹೇಗೆ”, ಎನ್ನುತ್ತಾರೆ ಆಕೆ.
ಲಾಕ್‌ಡೌನ್ ಅಷ್ಟೇ ಅಲ್ಲದೆ, ಪರಿಸ್ಥಿತಿಯು ಹತೋಟಿಯಲ್ಲಿದ್ದಾಗಲೂ ನಮಗೆ ಕೆಲಸವು ದೊರೆಯುವುದು ಕಷ್ಟವಾಗಿತ್ತು. “ನಾವು ಪಾರ್ಧಿಗಳೆಂಬ ಕಾರಣಕ್ಕೆ ಜನರು ನಮ್ಮನ್ನು ಸಂಶಯಿಸುತ್ತಾರೆ. ಈ ಭಿಕ್ಷಾಟನೆಯೂ ನಿಂತಲ್ಲಿ ನಮಗೆ ಸಾವೇ ಗತಿ”, ಎನ್ನುತ್ತಾರೆ ಧುಲ್ಯ.
ಅನುವಾದ: ಶೈಲಜ ಜಿ. ಪಿ.