ಸುರೇಶ್ ಮೆಹಂದಳೆ ತನ್ನ ನೆಚ್ಚಿನ ಬಸ್ ನಿಲ್ದಾಣದ ಕುರಿತು ಚಿಂತಿತರಾಗಿದ್ದಾರೆ. ಅವರಿಲ್ಲದಿದ್ದರೆ ಅದರ ಆವರಣವನ್ನು ಸ್ವಚ್ಛಗೊಳಿಸುವವರಿರುವುದಿಲ್ಲ. ಮತ್ತು ಅವರು ಪ್ರತಿದಿನ ಪ್ರೀತಿಯಿಂದ ಬಿಸ್ಕತ್ತುಗಳನ್ನು ತಿನ್ನಿಸುವ ನಾಯಿಗಳು ಸಹ ಹಸಿದಿರುತ್ತವೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಪೌಡ್ ಬಸ್ ನಿಲ್ದಾಣದಲ್ಲಿರುವ ಅವರ ವಿಚಾರಣೆ ಬೂತ್ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಮುಚ್ಚಲ್ಪಟ್ಟಿದೆ. ಅವರು ಅಲ್ಲಿಯೇ ಕುಳಿತುಕೊಂಡು ಅಲ್ಲಿ ಹಾದು ಹೋಗುವ ರಾಜ್ಯ ಸಾರಿಗೆ ಬಸ್ಸುಗಳ ಸಮಯದ ಮೇಲೆ ಕಣ್ಣಿಡುತ್ತಿದ್ದರು.
“ನಾನು ಕಳೆದ 28 ದಿನಗಳಿಂದ ಪೌಡ್‌ಗೆ ಹೋಗಿಲ್ಲ, ಅಲ್ಲಿ ಎಲ್ಲವೂ ಸರಿಯಾಗಿದ್ದರೆ ಸಾಕು,” ಎಂದು 54 ವರ್ಷದ ಮೆಹಂದಳೆ ಹೇಳಿದರು. ನಾನು ಅವರನ್ನು ಪುಣೆಯ ಸ್ವಾರ್ಗಟೆ ಬಸ್ ಡಿಪೋ ಬಳಿ ಭೇಟಿಯಾಗಿದ್ದೆ. ಅದು ಅವರ ಬಸ್ ನಿಲ್ದಾಣದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಅವರು ಅಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್ ಆರ್ ಟಿಸಿ) ಸಹ ಕಾರ್ಮಿಕರೊಂದಿಗೆ ಡಿಪೋದ ಪ್ರವೇಶದ್ವಾರದ ಬಳಿ ಹಾಕಲಾಗಿರುವ ಟೆಂಟಿನಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಎಮ್‌ಎಸ್‌ಆರ್‌ಟಿಸಿಯ ನೌಕರರು ರಾಜ್ಯಾದ್ಯಂತ ಈ ವರ್ಷದ ಅಕ್ಟೋಬರ್ 27ರಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ.
ಪುಣೆಯಲ್ಲಿ, ರಾಜ್ಯ ಸಾರಿಗೆ (ಎಸ್‌ಟಿ) ಬಸ್‌ಗಳ ಸುಮಾರು 250 ಕಂಡಕ್ಟರ್‌ಗಳು ಮತ್ತು 200 ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಮೆಹಂದಲೆ ಹೇಳುವಂತೆ, “ಇವೆಲ್ಲವೂ ರಾಜ್ಯ ಸಾರಿಗೆ ನೌಕರರ [ಆತ್ಮಹತ್ಯೆ] ಸಾವಿನ ವಿರುದ್ಧದ ಪ್ರತಿಭಟನೆಯೊಂದಿಗೆ ಪ್ರಾರಂಭವಾಯಿತು. ಕಳೆದ ವರ್ಷ ಕನಿಷ್ಠ 31 ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು." ನಾನು ಮೆಹೆಂದಲೆಯವರನ್ನು ಭೇಟಿಯಾದ ಮೂರು ದಿನಗಳ ನಂತರ ಮತ್ತೆ ಇಬ್ಬರು ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡರು. ವೇತನ ವಿಳಂಬವಾಗುತ್ತಿರುವುದರಿಂದ ಎಸ್‌ಟಿ ನೌಕರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ . ಕೋವಿಡ್ -19 ಸಾಂಕ್ರಾಮಿಕ ಪಿಡುಗಿನಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಸರಕುಗಳನ್ನು ಸಾಗಿಸುವುದನ್ನು ಹೊರತುಪಡಿಸಿ, ನಿಗಮದ ಉಳಿದ ಆದಾಯವೂ ನಿಂತುಹೋಗಿದೆ.
ಎಸ್ಟಿ ನೌಕರರ ಆತ್ಮಹತ್ಯೆ ಕುರಿತು ಗಮನ ಸೆಳೆಯುವ ಸಲುವಾಗಿ ಅಕ್ಟೋಬರ್ 27 ರಂದು ಮುಂಬೈನಲ್ಲಿ ನಿಗಮದ ನೌಕರರು ಉಪವಾಸ ಸತ್ಯಾಗ್ರಹ ನಡೆಸಿದ್ದರು ಮತ್ತು ಮರುದಿನ ರಾಜ್ಯಾದ್ಯಂತ ನೌಕರರು ವೇತನ ಹೆಚ್ಚಳ ಮತ್ತು ಬಾಕಿ ವೇತನಕ್ಕೆ ಒತ್ತಾಯಿಸಿ ಮುಷ್ಕರ ನಡೆಸಿದರು. ಮತ್ತು ಈಗ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದು ನಮ್ಮ ಬೇಡಿಕೆಯಾಗಿದೆ ಎಂದು ಮೆಹಂದಳೆ ಹೇಳುತ್ತಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸಮಾನವಾದ ಸ್ಥಾನಮಾನವನ್ನು ನೀಡಬೇಕು ಮತ್ತು ಅವರಂತೆಯೇ ವೇತನ ಮತ್ತು ಇತರ ಭತ್ಯೆಗಳನ್ನು ಪಡೆಯಬೇಕು ಎಂಬುದು ಅವರ ಬೇಡಿಕೆಯಾಗಿದೆ.
ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯನ್ನು ರಸ್ತೆ ಸಾರಿಗೆ ಕಾಯಿದೆ, 1950ರ ಅಡಿಯಲ್ಲಿ ಸ್ಥಾಪಿಸಲಾಯಿತು. ನಿಗಮವು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು, ಮಂಡಳಿಯು ರಾಜ್ಯಾದ್ಯಂತ 250 ಡಿಪೋಗಳು ಮತ್ತು 588 ಬಸ್ ನಿಲ್ದಾಣಗಳನ್ನು ಹೊಂದಿದೆ ಮತ್ತು ಸುಮಾರು 1,04,000 ಸಿಬ್ಬಂದಿಯನ್ನು ಹೊಂದಿದೆ. ‘ಗಾಂವ್ ತಿಥೇ ರಾಸ್ತಾ; ರಾಸ್ತಾ ತಿಥೇ ಎಸ್‌ಟಿ’(ಪ್ರತಿ ಹಳ್ಳಿಗೊಂದು ರಸ್ತೆ, ರಸ್ತೆಗೊಂದು ಎಸ್‌ಟಿ ಬಸ್) ಎಂಬ ಧ್ಯೇಯದೊಂದಿಗೆ ನಿಗಮವು ಪ್ರಯಾಣಿಕರ ಸೇವೆಯಲ್ಲಿ ಕೆಲಸ ಮಾಡುತ್ತಿದೆ.
ವೃಂದಾವನಿ ಡೋಲಾರೆ, ಮೀನಾ ಮೋರೆ ಮತ್ತು ಮೀರಾ ರಜಪೂತ್ ಮೂವತ್ತರ ಹರೆಯದ ನಡುವಿನಲ್ಲಿರುವ ಈ ಮೂವರೂ ನಿಗಮದಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ. ಈ ಮೂವರು ಕಾರ್ಮಿಕರು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಸ್ವರ್ಗೇಟ್ ಡಿಪೋದಲ್ಲಿ ಸುಮಾರು 45 ಮಹಿಳಾ ಉದ್ಯೋಗಿಗಳಿದ್ದಾರೆ. ನಿಗಮವನ್ನು ಸರ್ಕಾರದಲ್ಲಿ ವಿಲೀನಗೊಳಿಸಿದರೆ ಮಾತ್ರ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬುದು ಅವರ ನಂಬಿಕೆ. "ನಾವು 13-14 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ ಆದರೆ ನಮಗೆ ಕೇವಲ 8 ಗಂಟೆಗಳ ಸಂಬಳ ಸಿಗುತ್ತದೆ. ನಮ್ಮ ಕುಂದುಕೊರತೆಗಳನ್ನು ಹೇಳಲು ಯಾವುದೇ ಕಾರ್ಯವಿಧಾನವಿಲ್ಲ,” ಎಂದು ಮೀನಾ ಹೇಳುತ್ತಾರೆ. ‘‘ಅಕ್ಟೋಬರ್ 28ರಿಂದ ಯಾವುದೇ ಬಸ್ ಡಿಪೋದಿಂದ ಹೊರಬಂದಿಲ್ಲ. ಏನೇ ಆಗಲಿ, ವಿಲೀನದ ಬೇಡಿಕೆ ಈಡೇರುವವರೆಗೆ ನಾವು ಮುಷ್ಕರವನ್ನು ಹಿಂತೆಗೆದುಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.
"ಎಲ್ಲಾ 250 ಡಿಪೋಗಳನ್ನು ಮುಚ್ಚಲಾಗಿದೆ ಮತ್ತು ಚಾಲಕರು, ಕಂಡಕ್ಟರ್ ಗಳು ಮತ್ತು ಕಾರ್ಯಾಗಾರದ ನೌಕರರು ಸೇರಿದಂತೆ ಸುಮಾರು ಒಂದು ಲಕ್ಷ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಕೆಲವು ಗುತ್ತಿಗೆ ಕಾರ್ಮಿಕರು ಮಾತ್ರ ಕೆಲಸಕ್ಕೆ ಹಿಂತಿರುಗಿದ್ದಾರೆ" ಎಂದು ಕಳೆದ 12 ವರ್ಷಗಳಿಂದ ಸ್ವರ್ಗೇಟ್ ಡಿಪೋದಲ್ಲಿ ಕಂಡಕ್ಟರ್ ಆಗಿರುವ 34 ವರ್ಷದ ಅನಿತಾ ಅಶೋಕ್ ಮಂಕರ್ ಹೇಳುತ್ತಾರೆ. ಮೂಲತಃ ಅಮರಾವತಿ ಜಿಲ್ಲೆಯವರಾದ ಅನಿತಾ ಮುಲ್ಶಿಯ ಭೂಗಾಂವ್ ಬಳಿಯ ಮಾತಲ್ವಾಡಿ ಫಾಟಾದಲ್ಲಿ ವಾಸಿಸುತ್ತಿದ್ದಾರೆ. ಅವರು ಆಗಾಗ್ಗೆ ಪುಣೆ-ಕೋಲ್ವಾನ್ ಬಸ್ ಮಾರ್ಗದಲ್ಲಿ ಕರ್ತವ್ಯದಲ್ಲಿರುತ್ತಾರೆ.
ಆದಾಗ್ಯೂ, ಹಿರಿಯ ಕಾರ್ಮಿಕ ನಾಯಕ ಪನ್ನಾಲಾಲ್ ಸುರಾನಾ ಮಹಾರಾಷ್ಟ್ರ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ವಿಲೀನದ ಆಗ್ರಹವು ಕೆಟ್ಟ ಆಲೋಚನೆಎಂದು ಹೇಳಿದ್ದಾರೆ. ಸುಮಾರು 17 ವರ್ಷಗಳ ಕಾಲ ನಾಯಕರಾಗಿದ್ದ, ಮಹಾರಾಷ್ಟ್ರ ರಾಜ್ಯ ಎಸ್ ಟಿ ಕರ್ಮಚಾರಿ ಸಂಘಟಾನಾದ ಮಾಜಿ ಅಧ್ಯಕ್ಷ ಸುರನಾ ಅವರು ಹೆಚ್ಚಿನ ವೇತನದ ಬೇಡಿಕೆಯನ್ನು ಬೆಂಬಲಿಸುವುದಾಗಿ ಹೇಳಿದರು. ಸರ್ಕಾರಿ ಇಲಾಖೆಗಳ ಅನುಮತಿಗಾಗಿ ಕಾಯದೆ ತ್ವರಿತ ಮತ್ತು ಸ್ವತಂತ್ರ ನಿರ್ಧಾರಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಕೆಲವು ಮುಷ್ಕರ ನಿರತ ಕಾರ್ಮಿಕರು ಸಮಾನ ವೇತನಕ್ಕೆ ಒತ್ತಾಯಿಸುತ್ತಿದ್ದಾರೆ. “ನಾವು ನಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ವೇತನವನ್ನು ಪಡೆಯುತ್ತೇವೆ ಮತ್ತು ಅದನ್ನೂ ಸರಿಯಾದ ಸಮಯಕ್ಕೆ ನೀಡುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು,” ಎಂದು 24 ವರ್ಷದ ಪಾಯಲ್ ಚವಾಣ್ ಹೇಳುತ್ತಾರೆ. ಅವರು ಮತ್ತು ರೂಪಾಲಿ ಕಾಂಬ್ಳೆ ಮತ್ತು ನೀಲಿಮಾ ಧುಮಾಲ್ ಮೂರು ವರ್ಷಗಳ ಹಿಂದೆ ನೇರ ನೇಮಕಾತಿ ಮೂಲಕ ಎಸ್‌ಟಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಸ್ವಾರ್ಗೇಟ್ ಡಿಪೋದ ಕಾರ್ಯಾಗಾರದಲ್ಲಿ ವಾಹನಗಳ ಯಾಂತ್ರಿಕ ಮತ್ತು ವಿದ್ಯುತ್ ನಿರ್ವಹಣೆ ಕೆಲಸವನ್ನು ಮಾಡುತ್ತಾರೆ.
ಎಂಎಸ್‌ಆರ್‌ಟಿಸಿಯ ಪುಣೆ ವಿಭಾಗವು ಮುಷ್ಕರದಿಂದಾಗಿ ಪ್ರತಿದಿನ 1.5 ಕೋಟಿ ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ. ಖಾಸಗಿಯವರು ನಿರ್ವಹಿಸುವ ಹವಾನಿಯಂತ್ರಿತ ಬಸ್ಸುಗಳನ್ನು ಹೊರತುಪಡಿಸಿ, ಅದರ 8,500 ಬಸ್ಸುಗಳು ಇಂದು ಸೇವೆಯಲ್ಲಿಲ್ಲ, ಇದು ಅವರು ಪ್ರತಿದಿನ ಕರೆದೊಯ್ಯುವ ಸರಾಸರಿ 65,000 ಪ್ರಯಾಣಿಕರ ಚಲನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ.
ಪೌಡ್‌ನಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ, ಶಿವಾಜಿ ಬೋರ್ಕರ್ ಪೌಡ್‌ನಿಂದ ಶೇರ್ ಆಟೋ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಅವರು ಪುಣೆ ನಗರದಿಂದ ಮುಲ್ಶಿಯ ರಿಹೆ ಎಂಬ ಹಳ್ಳಿಯ ತಮ್ಮ ಜಮೀನಿಗೆ ಪ್ರತಿ ವಾರ 40 ಕಿಲೋಮೀಟರ್ ಪ್ರಯಾಣಿಸುತ್ತಾರೆ. ಪುಣೆಯ ಮಾರ್ಕೆಟ್ ಯಾರ್ಡ್‌ನಿಂದ ಪೌಡ್ ತಲುಪಲು ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ ನಿರ್ವಹಿಸುತ್ತಿರುವ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಸದ್ಯಕ್ಕೆ ಅವರಿಗೆ ಲಭ್ಯವಿರುವ ಏಕೈಕ ಸಾರ್ವಜನಿಕ ಸಾರಿಗೆ ಇದಾಗಿದೆ.
ನವೆಂಬರ್ 27ರಂದು ನಾನು ಪೌಡ್‌ನ ಅಂಗಡಿಯೊಂದರಲ್ಲಿ ಶಿವಾಜಿ ಬೋರ್ಕರ್ ಅವರನ್ನು ಭೇಟಿಯಾಗಿದ್ದೆ. ಅವರು ಮತ್ತು ಇತರ ಕೆಲವು ಪ್ರಯಾಣಿಕರು ರಿಕ್ಷಾ ತುಂಬುವುದನ್ನು ಕಾಯುತ್ತಿದ್ದರು. ರಿಕ್ಷಾ ಹೊರಡಲು ಕನಿಷ್ಠ 14 ಪ್ರಯಾಣಿಕರು ಬೇಕು- ಮಧ್ಯದಲ್ಲಿ 8, ಹಿಂದೆ 4 ಮತ್ತು ಚಾಲಕನ ಪಕ್ಕದಲ್ಲಿ ಇಬ್ಬರು. "ಕಾಯುವುದರ ಹೊರತು ಬೇರೇನಾದರೂ ದಾರಿ ಇದೆಯೇ?" ಬೋರ್ಕರ್ ಕೇಳುತ್ತಾರೆ. “ಎಸ್‌ಟಿ ಹಳ್ಳಿಯ ಜನರ ಬೆನ್ನೆಲುಬು. ಈಗ ಒಂದು ತಿಂಗಳು ಕಳೆದಿದೆ, ಒಂದೇ ಒಂದು ಬಸ್ಸು ಬಂದಿಲ್ಲ." ರಿಕ್ಷಾಗಳಿಗೆ ಬಸ್ ಟಿಕೆಟ್‌ಗಿಂತ ದುಪ್ಪಟ್ಟು ದರವಿದ್ದು, ಎಸ್‌ಟಿಗಳಲ್ಲಿ ಹಿರಿಯ ನಾಗರಿಕರಿಗೆ ಅರ್ಧ ಟಿಕೆಟ್ ಮಾತ್ರ ಪಡೆಯಲಾಗುತ್ತದೆ.
ಪೌಡ್ ಬಸ್ ನಿಲ್ದಾಣದಿಂದ ಕೊಲ್ವಾನ್ (ತಾಳ. ಮುಲ್ಶಿ), ಜವಾಣ್ ಮತ್ತು ತಾಳೆಗಾಂವ್ (ತಾಳ. ಮಾವಳ್)ಗೆ ಪ್ರತಿದಿನ ಕನಿಷ್ಠ ಐದು ಬಸ್‌ಗಳು ಬರುತ್ತವೆ. ಆದರೆ ಇಂದು ಈ ಬಸ್ ನಿಲ್ದಾಣ ನಿರ್ಜನವಾಗಿದೆ. ಖಾಲಿ ಸ್ಟ್ಯಾಂಡ್‌ನಲ್ಲಿ, ಮೂವರು ಹುಡುಗಿಯರು ತಮ್ಮ ಗೆಳತಿಯರನ್ನು ಭೇಟಿಯಾಗಲು ನಿಂತಿದ್ದರು. ಅವರು ತಮ್ಮ ಗುರುತನ್ನು ಬಹಿರಂಗಪಡಿಸಲು ಅಥವಾ ಫೋಟೋಗಳನ್ನು ತೆಗೆಯುವುದದನ್ನು ನಿರಾಕರಿಸಿದರು. "ಲಾಕ್‌ಡೌನ್ ನಂತರ, ಕುಟುಂಬವು ಅವರನ್ನು ಕಾಲೇಜಿಗೆ ಕಳುಹಿಸಲು ನಿರಾಕರಿಸಿತು. ರೈಲುಗಳಿಲ್ಲದ ಕಾರಣ ಪ್ರಯಾಣ ದುಬಾರಿಯಾಗಿತ್ತು. 12ರವರೆಗೆ ಬಸ್‌ಗೆ ಉಚಿತ ಪಾಸ್ ಇತ್ತು’ ಎಂದು ಅವರಲ್ಲಿ ಒಬ್ಬರು ಹೇಳುತ್ತಾರೆ. 12ನೇ ತರಗತಿಯ ನಂತರ ಈ ಮೂವರ ಶಿಕ್ಷಣ ನಿಂತು ಹೋಗಿದೆ. ಬಾಲಕಿಯರ ಉನ್ನತ ಶಿಕ್ಷಣವನ್ನು ಸ್ಥಗಿತಗೊಳಿಸುವುದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಪ್ರಯಾಣ ವೆಚ್ಚಗಳು ಒಂದೆನ್ನುವುದು ಕಂಡುಬಂದಿದೆ.
ಅದೇ ದಿನ, ಪೌಡ್ ಮತ್ತು ಕೋಲ್ವಾನ್ ನಡುವಿನ 12 ಕಿಲೋಮೀಟರ್ ವಿಸ್ತಾರದಲ್ಲಿ ಕನಿಷ್ಠ ಎಂಟು ವಿದ್ಯಾರ್ಥಿಗಳ ಗುಂಪುಗಳು ಶಾಲೆಗೆ ನಡೆದುಕೊಂಡು ಹೋಗುವುದನ್ನು ನಾನು ನೋಡಿದೆ. ಸಠೇಸಾಯಿ ಗ್ರಾಮದಲ್ಲಿ, ಪೌಡ್‌ನಲ್ಲಿರುವ ತನ್ನ ಶಾಲೆಗೆ ಧಾವಿಸುತ್ತಿದ್ದ ಹುಡುಗಿಯೊಬ್ಬಳು ನನಗೆ ಹೇಳಿದಳು, "ನಾವು ಶಾಲೆಗೆ ಹೋಗಲು ಕುತೂಹಲದಿಂದ ಕಾಯುತ್ತಿದ್ದೆವು (ಕೋವಿಡ್-19 ಲಾಕ್ ಡೌನ್ ನಂತರ ತೆರೆಯಲಾಯಿತು). ಆದರೆ ಈಗ ಬಸ್ಸುಗಳಿಲ್ಲ ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿದೆ." ರಾಜ್ಯ ಸಾರಿಗೆ ಬಸ್ 5-12ನೇ ತರಗತಿಗಳಲ್ಲಿ ಅಧ್ಯಯನ ಮಾಡುವ ಹುಡುಗಿಯರಿಗೆ ಉಚಿತ ಪ್ರಯಾಣದ ಪಾಸ್ ನೀಡುತ್ತದೆ, ಆದರೆ ಬಸ್ಸುಗಳು ರಸ್ತೆಯಲ್ಲಿದ್ದರೆ ಮಾತ್ರವೇ ಇದು ಕೆಲಸಕ್ಕೆ ಬರುತ್ತದೆ.
ಮೆಹೆಂದಲೆ ಹೇಳುತ್ತಾರೆ, “ನಾವು ಸಮಾಜದ ಬಡವರಿಗೆ ಸೇವೆಗಳನ್ನು ಒದಗಿಸುತ್ತೇವೆ. ಅವರು ಅಸಹಾಯಕರು ಎಂದು ನಮಗೆ ತಿಳಿದಿದೆ, ಆದರೆ ನಾವು ಈ ಮುಷ್ಕರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನಮ್ಮ ಜನರು ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ." ಮೆಹೆಂದಲೆ ಕಳೆದ 27 ವರ್ಷಗಳಿಂದ ಎಂಎಸ್‌ಆರ್‌ಟಿಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 2020ರಲ್ಲಿ ಸಂಚಾರ ನಿಯಂತ್ರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು; ಮತ್ತು ಅವರು ಆ ಹುದ್ದೆಗೆ ನೇಮಕಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಸ್ಟಿ ಬಸ್ಸುಗಳು ಮತ್ತೆ ರಸ್ತೆಗಿಳಿದರೆ ಮಾತ್ರ ಇದು ಸಂಭವಿಸುತ್ತದೆ ಎಂದು ಅವರು ತಿಳಿದಿದ್ದಾರೆ. ಸದ್ಯ ಅವರು ನೋಡಿಕೊಳ್ಳುವ ಬಸ್ ನಿಲ್ದಾಣವೇ ಅವರ ವಾಪಸಾತಿಗಾಗಿ ಕಾಯುತ್ತಿದೆ.
ಅನುವಾದ: ಶಂಕರ. ಎನ್. ಕೆಂಚನೂರು