ಪಟಚಿತ್ರವನ್ನು ರಚಿಸುವ ಮೊದಲ ಹಜ್ಜೆಯೆಂದರೆ ಹಾಡನ್ನು ರಚಿಸುವುದು. ಅದಕ್ಕೆ ಪಟಾರ್ ಗಾನ್ ಎಂದು ಕರೆಯಲಾಗುತ್ತದೆ. "ಚಿತ್ರ ಬರೆಯುವ ಮುನ್ನ ನಾವು ಹಾಡಿನ ಚರಣಗಳನ್ನು ರಚಿಸುತ್ತೇವೆ ... ಹಾಡಿನ ಲಯವು ಚಿತ್ರ ರಚನೆಯ ಪ್ರಕ್ರಿಯೆಗೆ ಒಂದು ಸಂರಚನೆಯನ್ನು ನೀಡುತ್ತದೆ" ಎಂದು ಮಾಮೋನಿ ಚಿತ್ರಕಾರ್ ಹೇಳುತ್ತಾರೆ. ಚಿತ್ರ ರಚನೆ ಮಾಡುವ ಪರಂಪರೆಯ ಎಂಟನೇ ತಲೆಮಾರಿನ ಕಲಾವಿದೆ ಮಾಮೋನಿ ಪಶ್ಚಿಮ ಬಂಗಾಳದ ಪೂರ್ವ ಕೋಲ್ಕತ್ತಾದ ಜೌಗು ಪ್ರದೇಶದ ಪಟಚಿತ್ರವನ್ನು ತಮ್ಮ ಮನೆಯಲ್ಲಿ ಕುಳಿತು ರಚಿಸುತ್ತಿದ್ದಾರೆ.

ಸಂಸ್ಕೃತ ಪದವಾದ 'ಪಟ್ಟ' ಅಂದರೆ ಬಟ್ಟೆಯ ತುಂಡು ಮತ್ತು 'ಚಿತ್ರ' ಅಂದರೆ ಚಿತ್ರಕಲೆಯಿಂದ ಈ ಕಲೆಗೆ ಪಟಚಿತ್ರ ಎಂಬ ಹೆಸರು ಬಂದಿದೆ. ಮಾಮೋನಿಯವರು ಜೌಗು ಪ್ರದೇಶದಲ್ಲಿ ಬೆಳೆದಿರುವ ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಚಿತ್ರಿಸುತ್ತಿದ್ದಂತೆ, ಅವರು ಪಟಚಿತ್ರವನ್ನು ಬಳಸಿ ಅಭಿನಯಿಸುತ್ತಾ ಪಟಾರ್ ಗಾನ್ ಅನ್ನು ಹಾಡುತ್ತಾರೆ. ಮಾಮೋನಿ ಅವರೇ ಸ್ವತಃ ಬರೆದು ಸಂಯೋಜಿಸಿರುವ ಈ ಹಾಡು "ಆಲಿಸಿ, ಓ ಎಲ್ಲಾ ಆಲಿಸಿ, ಗಮನವಿಟ್ಟು ಕೇಳಿ" ಎಂದು ಎಲ್ಲರನ್ನೂ ಬರಮಾಡಿಕೊಳ್ಳುವುದರೊಂದಿಗೆ ಆರಂಭವಾಗುತ್ತದೆ.

"ಹಲವು ಜನರ ಜೀವನಾಡಿ" ಆಗಿರುವ ಪೂರ್ವ ಕೋಲ್ಕತ್ತಾ ಜೌಗು ಪ್ರದೇಶಗಳ ಪ್ರಾಮುಖ್ಯತೆಯನ್ನು ಈ ಹಾಡು ಕಥಿಸುತ್ತದೆ. ಬಟ್ಟೆಯ ಮೇಲೆ ಜೋಡಿಸಲಾಗಿರುವ ಕಾಗದದ  ಮೇಲೆ  ಬೆಸ್ತರು, ರೈತರು ಮತ್ತು ಎದ್ದುಕಾಣುವ ಹೊಲಗಳನ್ನು ಚಿತ್ರಿಸಲಾಗುತ್ತದೆ. ಪ್ರದರ್ಶನದ ಸಂದರ್ಭದಲ್ಲಿ ಅಂತಿಮ ಪಟದ ಸುರುಳಿಯನ್ನು ಬಿಚ್ಚಿದಾಗ ಅವು ಹಾಡಿನ ಚರಣಗಳಿಗೆ ಅನುಗುಣವಾಗಿರುತ್ತವೆ. ಈ ರೀತಿ ಮಾಮೋನಿಯವರ ಈ ಕಲಾಪ್ರಕಾರ ಚಿತ್ರ ಮತ್ತು ಸಂಗೀತದ ಮೂಲಕ ಜೌಗು ಪ್ರದೇಶಗಳ ಕಥೆಯನ್ನು ಹೇಳುತ್ತದೆ.

ಮಾಮೋನಿಯವರ ಪ್ರಕಾರ ಅವರ ಗ್ರಾಮವಾದ ಪಿಂಗ್ಲಾ ತಾಲೂಕಿನ ಪಶ್ಚಿಮ ಮೇದಿನಿಪುರದ ನಯಾ ಗ್ರಾಮ ಸುಮಾರು 400 ಕುಶಲಕರ್ಮಿಗಳ ನೆಲೆಯಾಗಿದೆ. ಈ ತಾಲೂಕಿನ ಬೇರೆ ಯಾವ ಗ್ರಾಮದಲ್ಲಿಯೂ ಪಟಚಿತ್ರ ರಚನೆ ಮಾಡುವ ಕಲಾವಿದರಿಲ್ಲ. "ಗ್ರಾಮದಲ್ಲಿರುವ ಬಹುತೇಕ ಎಲ್ಲಾ 85 ಮನೆಗಳ ಗೋಡೆಗಳ ಮೇಲೆ ಭಿತ್ತಿಚಿತ್ರಗಳಿವೆ" ಎಂದು 32 ವರ್ಷದ ಮಾಮೋನಿ ಎಲೆಗಳು, ಕಾಡು ಪ್ರಾಣಿಗಳು ಮತ್ತು ಹೂವುಗಳ ಎದ್ದುಕಾಣುವ ವರ್ಣರೇಖಾಚಿತ್ರಗಳನ್ನು ಉಲ್ಲೇಖಿಸಿ ಹೇಳುತ್ತಾರೆ. "ಇಡೀ ನಮ್ಮ ಹಳ್ಳಿಯು ಸುಂದರವಾಗಿ ಕಾಣುತ್ತದೆ" ಎಂದು ಅವರು ಹೇಳುತ್ತಾರೆ.

PHOTO • Courtesy: Disappearing Dialogues Collective

ಪೂರ್ವ ಕೋಲ್ಕತ್ತಾದ ಜೌಗು ಪ್ರದೇಶವನ್ನು ಚಿತ್ರಿಸುವ ಪಟಚಿತ್ರ. ಪಟಚಿತ್ರದ‌ ಪ್ರತೀ ವಿಭಾಗವೂ ಸ್ವತಃ ಮಾಮೋನಿ ಬರೆದು ಸಂಯೋಜಿಸಿರುವ ಪಟಾರ್ ಗಾನ್‌ನ ಚರಣಗಳೊಂದಿಗೆ ತಾಳೆ ಹೊಂದುತ್ತವೆ

PHOTO • Courtesy: Mamoni Chitrakar
PHOTO • Courtesy: Mamoni Chitrakar

ಪಶ್ಚಿಮ ಮೇದಿನಿಪುರದ ನಯಾ ಗ್ರಾಮದ ಮನೆಗಳ ಗೋಡೆಗಳ ಮೇಲೆ ಹೂವುಗಳು, ಎಲೆಗಳು ಮತ್ತು ಹುಲಿಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳು. 'ನಮ್ಮ ಇಡೀ ಹಳ್ಳಿಯು ಸುಂದರವಾಗಿ ಕಾಣುತ್ತದೆ' ಎಂದು ಮಾಮೋನಿ ಹೇಳುತ್ತಾರೆ

ಈ ಗ್ರಾಮವು ರಾಜ್ಯದ ಪ್ರವಾಸಿ ಆಕರ್ಷಣೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬೇಟಿಕೊಡುತ್ತಾರೆ. "ನಮ್ಮೊಂದಿಗೆ ಮಾತನಾಡಲು, ನಮ್ಮ ಕರಕುಶಲತೆನ್ನು ಕಲಿಯಲು ಮತ್ತು ನಮ್ಮ ಜೀವನ ಹಾಗೂ ಕೌಶಲ್ಯಗಳ ಬಗ್ಗೆ ತಿಳಿಯಲು ಬರುವ ವಿದ್ಯಾರ್ಥಿಗಳನ್ನು ನಾವು ಎಂದೆಂದಿಗೂ ಸ್ವಾಗತಿಸುತ್ತೇವೆ. ನಾವು ಅವರಿಗೆ ಪಟಾರ್ ಗಾನ್, ಪಟಚಿತ್ರ ಶೈಲಿಯ ಚಿತ್ರಕಲೆ ಕಲಿಸುತ್ತೇವೆ ಮತ್ತು ನೈಸರ್ಗಿಕ ಮೂಲದ ಬಣ್ಣಗಳನ್ನು ತಯಾರಿಸುವ ಕಾರ್ಯಾಗಾರಗಳನ್ನು ನಡೆಸುತ್ತೇವೆ," ಎಂದು ಮಾಮೋನಿ ಹೇಳುತ್ತಾರೆ.

"ಪಟಚಿತ್ರದ ಕಲೆಯು ಗುಹಾಚಿತ್ರ ಅಥವಾ ಪ್ರಾಚೀನ ಗುಹೆಗಳಲ್ಲಿ ಇರುವ ವರ್ಣಚಿತ್ರಗಳ ಕಲೆಯಿಂದ ಬಂದಿದೆ" ಎಂದು ಮಾಮೋನಿ ಹೇಳುತ್ತಾರೆ. ಈ ಶತಮಾನಗಳಷ್ಟು ಹಳೆಯದಾದ ಕರಕುಶಲತೆಯು ನಿಜವಾದ ಪೇಂಟಿಂಗ್ ಕೆಲಸದ ಮೊದಲು ಮತ್ತು ನಂತರ ಕಾರ್ಮಿಕರು ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ.

ಪಟಾರ್ ಗಾನ್ ಅನ್ನು ಸಮರ್ಪಕವಾಗಿ ಸಂಯೋಜಿಸಿದ ನಂತರ ನಿಜವಾದ ಚಿತ್ರಕಲೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಮಾಮೋನಿ ವಿವರಿಸುತ್ತಾರೆ. "ನಮ್ಮ ಸಂಪ್ರದಾಯದಂತೆ, ನಾನು ಬಳಸುವ ಎಲ್ಲಾ ಬಣ್ಣಗಳೂ ನೈಸರ್ಗಿಕ ಮೂಲವಾಗಿವೆ,ʼ ಎನ್ನುತ್ತಾರೆ.  ಕಚ್ಚಾ ಅರಿಶಿನ, ಸುಟ್ಟ ಜೇಡಿಮಣ್ಣು ಮತ್ತು ಮಾರಿಗೋಲ್ಡ್ ಹೂವುಗಳಿಂದ ಬಣ್ಣವನ್ನು ತಯಾರಿಸಲಾಗುತ್ತದೆ. “ನಾನು ಗಾಢ ಕಪ್ಪು ಬಣ್ಣವನ್ನು ತಯಾರಿಸಲು ಅಕ್ಕಿಯನ್ನು ಸುಡುತ್ತೇನೆ; ಅಪರಾಜಿತ ಹೂವುಗಳನ್ನು ಕಡೆದು ನೀಲಿ ಬಣ್ಣವನ್ನು ಬಟ್ಟಿ ಇಳಿಸುತ್ತೇವೆ ಮತ್ತು ಹೀಗೆ ಬೇರೆ ಬೇರೆ ವಿಧಾನಗಳು,” ಎಂದು ಮಾಮೋನಿ ಹೇಳುತ್ತಾರೆ.

ಬಣ್ಣದ ಸಾರಗಳನ್ನು ತೆಂಗಿನ ಚಿಪ್ಪುಗಳಲ್ಲಿ ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಕೆಲವು ವಸ್ತುಗಳು ಎಲ್ಲಾ ಋತುಗಳಲ್ಲಿ ಸಿಗದೇ ಇರುವುದರಿಂದ ಈ ಕ್ಯೂರಿಂಗ್ ಪ್ರಕ್ರಿಯೆಯು ಒಂದು ವರ್ಷದವರೆಗೆ ನಡೆಯುತ್ತದೆ. ಈ ಪ್ರಕ್ರಿಯೆ ಒಂದು ತೆರನಾದ ಬೇಸರವನ್ನು ತರಿಸಿದರೂ  "ಪ್ರತೀ ಹಂತವೂ ಮುಖ್ಯ, ಹಾಗಾಗಿ ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ" ಎಂದು ಮಾಮೋನಿ ಹೇಳುತ್ತಾರೆ.

ಪೇಂಟಿಂಗ್ ಮಾಡುವ ಮೊದಲು ಬೇಲ್ (ಬೇಲದ ಮರ) ನಿಂದ ಹೊರತೆಗೆಯಲಾದ ನೈಸರ್ಗಿಕ ಅಂಟಿನೊಂದಿಗೆ ಬಣ್ಣಗಳನ್ನು ಬೆರೆಸಲಾಗುತ್ತದೆ. ತಾಜಾವಾಗಿ ಚಿತ್ರಿಸಲಾಗಿರುವ ಪಟಗಳು ಹೆಚ್ಚು ಸಮಯ ಬಾಳಿಕೆ ಬರಲು ಬಟ್ಟೆಗೆ ಅಂಟಿಸುವ ಅವನ್ನು ಮೊದಲು ಒಣಗಿಸಬೇಕು. ಹೀಗೆ ಸಿದ್ಧಪಡಿಸಿದ ಉತ್ಪನ್ನವು ಅಂತಿಮವಾಗಿ ಒಂದು ಪಟಚಿತ್ರವಾಗಿ ರೂಪುಗೊಳ್ಳುತ್ತದೆ.

PHOTO • Courtesy: Mamoni Chitrakar
PHOTO • Courtesy: Mamoni Chitrakar
PHOTO • Courtesy: Mamoni Chitrakar

ಎಡ ಮತ್ತು ಮಧ್ಯ: ಹೂವುಗಳು, ಹಸಿ ಅರಿಶಿನ ಮತ್ತು ಜೇಡಿಮಣ್ಣಿನಂತಹ ಸಾವಯವ ಮೂಲಗಳಿಂದ ತಯಾರಿಸಲಾದ ಬಣ್ಣಗಳೊಂದಿಗೆ ಮಾಮೋನಿ ಚಿತ್ರಬಿಡಿಸುತ್ತಿರುವುದು. ಬಲ: ಮಾಮೋನಿಯವರ ಪತಿ ಸಮೀರ್ ಚಿತ್ರಕಾರ್ ಅವರು ಬಿದಿರಿನಿಂದ ಮಾಡಿದ ಪಟಚಿತ್ರದ ಪ್ರದರ್ಶನದೊಂದಿಗೆ ಬಳಸುವ ಸಂಗೀತ ವಾದ್ಯವನ್ನು ತೋರಿಸುತ್ತಿದ್ದಾರೆ

ತನ್ನ ಹಳ್ಳಿಯ ಇತರರಂತೆ ಮಾಮೋನಿಯವರು ಚಿಕ್ಕ ವಯಸ್ಸಿನಿಂದಲೇ ಪಟಚಿತ್ರ ಕಲೆಯನ್ನು ಕಲಿಯಲು ಪ್ರಾರಂಭಿಸಿದರು. “ನಾನು ಏಳನೇ ವಯಸ್ಸಿನಲ್ಲೇ ಚಿತ್ರಕಲೆ ಮಾಡುತ್ತಿದ್ದೆ ಮತ್ತು ಹಾಡುತ್ತಿದ್ದೆ. ಪಟಚಿತ್ರ ನನ್ನ ಪೂರ್ವಜರ ಸಂಪ್ರದಾಯ ಮತ್ತು ನಾನು ಅದನ್ನು ನನ್ನ ತಾಯಿ ಸ್ವರ್ಣ ಚಿತ್ರಕಾರ್ ಅವರಿಂದ ಕಲಿತೆ.” ಎನ್ನುತ್ತಾರೆ. ಮಾಮೋನಿಯವರ ತಂದೆ ಐವತ್ತೆಂಟು ವರ್ಷ ಪ್ರಾಯದ ಸಂಭು ಚಿತ್ರಕಾರ್ ಅವರು ಸಹ ಪಟಾವು ಆಗಿ ಕೆಲಸ ಮಾಡುತ್ತಾರೆ. ಕುಟುಂಬದ ಇತರರಂತೆ ಅವರ ಪತಿ ಸಮೀರ್ ಮತ್ತು ಅವರ ಸಹೋದರಿ ಸೋನಾಲಿ ಕೆಲಸ ಮಾಡುತ್ತಾರೆ. ಮಾಮೋನಿ ಅವರ ಮಗ 8 ನೇ ತರಗತಿಯಲ್ಲಿ ಮತ್ತು ಅವರ ಮಗಳು 6 ನೇ ತರಗತಿಯಲ್ಲಿ ಕಲಿಯುತ್ತಿದ್ದು ಮಮೋನಿಯವರಿಂದ ಈ ಕಲೆಯನ್ನು ಕಲಿಯುತ್ತಿದ್ದಾರೆ.

ಸಾಂಪ್ರದಾಯಿಕವಾಗಿ ಸ್ಥಳೀಯ ಜಾನಪದದಿಂದ ಎರವಲು ಪಡೆದ ಪಟಚಿತ್ರದಲ್ಲಿ ಸಾಮಾನ್ಯವಾಗಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳಿಂದ ದೃಶ್ಯಗಳನ್ನು ಚಿತ್ರಿಸಲಾಗುತ್ತದೆ.  ಮಾಮೋನಿಯವರ ಅಜ್ಜಿ ಮತ್ತು ಅವರ ಪೂರ್ವಜರು ಸೇರಿದಂತೆ ಹಳೆಯ ಪಟುವಾಗಳು ಪಟಚಿತ್ರ ಶೈಲಿಯ ಚಿತ್ರಕಲೆಯ ಅಭ್ಯಾಸ ಮಾಡುತ್ತಿದ್ದರು. ಪಟಚಿತ್ರದಲ್ಲಿ ಚಿತ್ರಿಸಿದ ಕಥೆಗಳನ್ನು ಪ್ರದರ್ಶಿಸಲು ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದರು. ಪ್ರತಿಯಾಗಿ ಜನರು  ಹಣ ಅಥವಾ ಆಹಾರ ನೀಡಿ  ಪ್ರದರ್ಶನ ಕಲೆಯನ್ನು ಬೆಂಬಲಿಸುತ್ತಿದ್ದರು.

"ಅವು [ಪಟಚಿತ್ರಗಳು] ಮಾರಾಟಕ್ಕಿರುವ ವಸ್ತುಗಳಲ್ಲ” ಎಂದು ಮಾಮೋನಿ ವಿವರಿಸುತ್ತಾರೆ. ಪಟಚಿತ್ರವು ಎಂದಿಗೂ ಕೇವಲ ಚಿತ್ರಕಲೆಯ ಶೈಲಿಯಾಗಿರಲಿಲ್ಲ. ಬದಲಾಗಿ  ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳೆರಡನ್ನೂ ಬಳಸಿಕೊಂಡು ಕಥೆ ಹೇಳುವ ಒಂದು ವಿಧಾನವಾಗಿತ್ತು.

ಕಾಲಾನಂತರದಲ್ಲಿ ಮಾಮೋನಿಯಂತಹ ಪಟುವಾಗಳು ಪಟಚಿತ್ರ ಶೈಲಿಯ ಸಾಂಪ್ರದಾಯಿಕ ತತ್ವಗಳಿಗೆ ಸಮಕಾಲೀನ ವಿಚಾರಗಳನ್ನೂ ಸೇರಿಸಿದ್ದಾರೆ. "ನಾನು ಹೊಸ ವಿಷಯಗಳ ಮೇಲೆ ಕೆಲಸ ಮಾಡಲು ಇಷ್ಟಪಡುತ್ತೇನೆ" ಎಂದು ಅವರು ಹೇಳುತ್ತಾರೆ. “ನನ್ನ ಕೆಲವು ಕೆಲಸಗಳು ಸುನಾಮಿಯಂತಹ ನೈಸರ್ಗಿಕ ವಿಕೋಪಗಳನ್ನು ಆಧರಿಸಿವೆ. ಲಿಂಗ ಸಂಬಂಧಿ ಹಿಂಸಾಚಾರ ಮತ್ತು ಕಳ್ಳಸಾಗಣೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸಲು ನಾನು ನನ್ನ ಕೆಲಸವನ್ನು ಬಳಸುತ್ತೇನೆ,” ಎಂದು ಮಾಮೋನಿ ಹೇಳುತ್ತಾರೆ.

PHOTO • Courtesy: Mamoni Chitrakar
PHOTO • Courtesy: Mamoni Chitrakar

ಎಡ: ಮಾಮೋನಿ ಅವರು ಡಿಸ್ಸೆಪಿಯರಿಂಗ್ ಡೈಲಾಗ್ಸ್ ಕಲೆಕ್ಟಿವ್‌ನ ಸದಸ್ಯರೊಂದಿಗೆ ಮಾತನಾಡುತ್ತಿದ್ದಾರೆ. ಪೂರ್ವ ಕೋಲ್ಕತ್ತಾ ಜೌಗು ಪ್ರದೇಶಗಳಲ್ಲಿ ಪಟಚಿತ್ರವನ್ನು ರಚಿಸಲು ಇವರೊಂದಿಗೆ ಕೆಲಸ ಮಾಡುತ್ತಾರೆ. ಬಲ: ಪ್ರದರ್ಶನಕ್ಕಿಟ್ಟಿರುವ ವಿವಿಧ ಪಟಚಿತ್ರ ಸುರುಳಿಗಳು

PHOTO • Courtesy: Mamoni Chitrakar

ಮಾರಾಟವನ್ನು ಹೆಚ್ಚಿಸಲು ಮಾಮೋನಿ ತನ್ನ ಕೆಲಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಪೂರ್ವ ಕೋಲ್ಕತ್ತಾದ ಜೌಗು ಪ್ರದೇಶಗಳ ಪಟಚಿತ್ರದೊಂದಿಗೆ ಮಾಮೋನಿ

ಅವರ ಇತ್ತೀಚಿನ ಚಿತ್ರಗಳು ಕೋವಿಡ್ -19 ರ ಪರಿಣಾಮ, ಅದರ ರೋಗಲಕ್ಷಣಗಳನ್ನು ಮತ್ತು ಅದರ ಬಗೆಗಿನ ಜಾಗೃತಿಯನ್ನು ತೋರಿಸುತ್ತವೆ. ಕೆಲವು ಇತರ ಕಲಾವಿದರೊಂದಿಗೆ ಸೇರಿಕೊಂಡು ಮಾಮೋನಿ ಈ ಪಟಚಿತ್ರವನ್ನು ಆಸ್ಪತ್ರೆಗಳು, ಹಾಟ್‌ಗಳು (ವಾರದ ಮಾರುಕಟ್ಟೆಗಳು) ಮತ್ತು ನಯಾ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರದರ್ಶಿಸಿದ್ದರು.

ಪ್ರತಿ ನವೆಂಬರ್ ನಲ್ಲಿ ನಯಾದಲ್ಲಿ ಪಟ-ಮಯ ಎಂಬ ಮೇಳ ಆಯೋಜಿಸಲಾಗುತ್ತದೆ. "ಭಾರತ ಮತ್ತು ವಿದೇಶಗಳ ಪ್ರವಾಸಿಗರು ಮತ್ತು ಕಲಾಸಕ್ತರು ಬಂದು ಪೇಂಟಿಂಗ್‌ಗಳನ್ನು ಖರೀದಿಸುವುದು ಇದರ ಪ್ರಮುಖ ಆಕರ್ಷಣೆ" ಎಂದು ಮಾಮೋನಿ ಹೇಳುತ್ತಾರೆ. ಪಟಚಿತ್ರ ಶೈಲಿಯನ್ನು ಟೀ-ಶರ್ಟ್‌ಗಳು, ಪೀಠೋಪಕರಣಗಳು, ಪಾತ್ರೆಗಳು, ಸೀರೆಗಳು, ಇತರ ಉಡುಪುಗಳು ಮತ್ತು ನಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗೃಹೋಪಯೋಗಿ ವಸ್ತುಗಳ ಮೇಲೂ ಚಿತ್ರಿಸಲಾಗುತ್ತದೆ. ಇದರಿಂದಾಗಿ ಕರಕುಶಲತೆಯ ಬಗ್ಗೆ ಆಸಕ್ತಿ ಹೆಚ್ಚಾಗಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹೊಡೆತ ತಿಂದಿದ್ದ ಈ ಕರಕುಶಲ ವಸ್ತುಗಳ ಮಾರಾಟವನ್ನು ಈ ಮೇಳ ಸುಧಾರಿಸಿದೆ. ಮಾಮೋನಿ ತನ್ನ ಕೆಲಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ, ಹೆಚ್ಚಾಗಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇದರಿಂದಾಗಿ ವರ್ಷಪೂರ್ತಿ ಉತ್ಪನ್ನಗಳನ್ನು ಮಾರಾಟ ಮಾಡಲು ಸುಲಭವಾಗುತ್ತದೆ.

ಮಾಮೋನಿ ತನ್ನ ಕರಕುಶಲ ವಸ್ತುಗಳೊಂದಿಗೆ ಇಟಲಿ, ಬಹ್ರೇನ್, ಫ್ರಾನ್ಸ್ ಮತ್ತು ಯುಎಸ್‌ಗೆ ಭೇಟಿ ನೀಡಿದ್ದಾರೆ. "ನಮ್ಮ ಕಲೆ ಮತ್ತು ಹಾಡಿನ ಮೂಲಕ ನಾವು ಅನೇಕ ಜನರನ್ನು ತಲುಪಬಹುದು" ಎಂದು ಮಾಮೋನಿ ಹೇಳುತ್ತಾರೆ ಮತ್ತು ಈ ಕರಕುಶಲತೆಯ ಕಲೆಯು ಹೀಗೆ ಮುಂದುವರಿಯುತ್ತದೆ ಎಂಬ ಭರವಸೆ ಕೂಡ ಅವರಿಗಿದೆ.

ಡಿಸ್ಸೆಪಿಯರಿಂಗ್ ಡೈಲಾಗ್ಸ್ ಕಲೆಕ್ಟಿವ್ (dD) ಕಲೆ ಮತ್ತು ಸಂಸ್ಕೃತಿಯನ್ನು ಮಾಧ್ಯಮವಾಗಿ ಬಳಸಿ ಭಿನ್ನ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಅವುಗಳ ಮಧ್ಯೆ ಒಂದು ಸಂವಾದವನ್ನು ಆರಂಭಿಸಲು ಮತ್ತು ಹೊಸ ನಿರೂಪಣೆಗಳನ್ನು ಸೃಷ್ಟಿಸಲು ಕಲಸ ಮಾಡುತ್ತದೆ. ಮೌಲ್ಯವನ್ನು ವೃದ್ದಿಸುವುದು ಮತ್ತು ಅಸ್ತಿತ್ವದಲ್ಲಿರುವ ಪರಂಪರೆ, ಸಂಸ್ಕೃತಿ ಮತ್ತು ಪರಿಸರದ ಸಂರಕ್ಷಣೆ ಮಾಡುವುದು ಇದರ ಉದ್ದೇಶವಾಗಿದೆ.

ಇದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌ ತನ್ನ ಆರ್ಕೈವ್ಸ್ ಮತ್ತು ಮ್ಯೂಸಿಯಮ್ಸ್ ಕಾರ್ಯಕ್ರಮದ ಅಡಿಯಲ್ಲಿ ಸಿದ್ದ ಪಡಿಸಿದ ಯೋಜನೆ ಜೋಲ್-ಎ-ಭೂಮಿರ್ ಗೋಲ್ಪೋ ಓ ಕಥಾ - ಸ್ಟೋರೀಸ್ ಆಫ್ ದಿ ವೆಟ್‌ಲ್ಯಾಂಡ್ ಸಂಕಲನದ ಒಂದು ಲೇಖನವಾಗಿದೆ.  ಗೋಥೆ ಇನ್ಸ್ಟಿಟ್ಯೂಟ್‌ / ಮ್ಯಾಕ್ಸ್‌ ಮುಲ್ಲರ್‌ ಭವನ್ ನವದೆಹಲಿಯ ಬೆಂಬಲದೊಂದಿಗೆ ಈ ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಅನುವಾದಕರು: ಚರಣ್‌ ಐವರ್ನಾಡು

Nobina Gupta

ਨੋਬੀਨਾ ਗੁਪਤਾ ਇੱਕ ਵਿਜੂਅਲ ਆਰਟਿਸਟ, ਅਧਿਆਪਕ ਤੇ ਖ਼ੋਜਾਰਥੀ ਹਨ, ਜੋ ਸਮਾਜਿਕ-ਸਥਾਨਿਕ ਵਾਸਵਿਕਤਾਵਾਂ, ਜਲਵਾਯੂ ਨਾਲ਼ ਜੁੜੀਆਂ ਸੰਕਟਕਾਲੀਨ ਹਾਲਾਤਾਂ ਤੇ ਵਿਵਹਾਰਕ ਬਦਲਾਵਾਂ ਦਰਮਿਆਨ ਸਬੰਧਾਂ ਨੂੰ ਲੈ ਕੇ ਕੰਮ ਕਰ ਰਹੀ ਹਨ। ਰਚਨਾਤਮਕ ਵਾਤਾਵਰਣਕ ਗੱਲਾਂ ਵੱਲ ਸੇਧਤ ਕੰਮ ਕਰਨ ਦੀਆਂ ਪ੍ਰਕਿਰਿਆਵਾਂ ਵਿੱਚ ਉਨ੍ਹਾਂ ਨੂੰ ‘ਡਿਸਅਪੀਅਰਿੰਗ ਡਾਇਲਾਗ ਕਲੈਕਟਿਵ’ ਨੂੰ ਸ਼ੁਰੂ ਕਰਨ ਦੀ ਪ੍ਰੇਰਣਾ ਮਿਲ਼ੀ।

Other stories by Nobina Gupta
Saptarshi Mitra

ਸਪਤਰਸ਼ੀ ਮਿਤਰਾ, ਕੋਲਕਾਤਾ ਦੇ ਇੱਕ ਆਰਕੀਟੈਕਟ ਅਤੇ ਡਿਵਲਪਮੈਂਟ ਪ੍ਰੈਕਟੀਸ਼ਨਰ ਹਨ ਜੋ ਖਲਾਅ, ਸੱਭਿਆਚਾਰ ਤੇ ਸਮਾਜ ਦੇ ਅੱਡ-ਅੱਡ ਕਟਾਵਾਂ ਨੂੰ ਲੈ ਕੇ ਕੰਮ ਕਰ ਰਹੇ ਹਨ।

Other stories by Saptarshi Mitra
Editor : Dipanjali Singh

ਦਿਪਾਂਜਲੀ ਸਿੰਘ, ਪੀਪਲਜ਼ ਆਰਕਾਈਵ ਆਫ਼ ਰੂਰਲ ਇੰਡੀਆ ਵਿਖੇ ਸਹਾਇਕ ਸੰਪਾਦਕ ਹਨ। ਉਹ ਪਾਰੀ ਲਾਈਬ੍ਰੇਰੀ ਵਾਸਤੇ ਦਸਤਾਵੇਜਾਂ ਦੀ ਖੋਜ ਕਰਨ ਤੇ ਇਕੱਠੇ ਕਰਨ ਵਿੱਚ ਵੀ ਯੋਗਦਾਨ ਪਾਉਂਦੀ ਹਨ।

Other stories by Dipanjali Singh
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad