ತಾರಾವಂತಿ ಕೌರ್ ಆತಂಕಗೊಂಡಿದ್ದಾರೆ. "ಈಗಲೇ ನಮಗೆ ಕೆಲಸಗಳು ಸಿಗುತ್ತಿಲ್ಲ, ಮತ್ತೆ ಈ ಕೃಷಿ ಕಾನೂನುಗಳು ಜಾರಿಗೆ ಬಂದರೆ, ಇರುವ ಸ್ವಲ್ಪ ಕೆಲಸಗಳೂ ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ.
ಹೀಗಾಗಿ ಅವರು ಪಂಜಾಬ್‌ನ ಕಿಲಿಯನ್ವಾಲಿ ಗ್ರಾಮದಿಂದ ಪಶ್ಚಿಮ ದೆಹಲಿಯ ಟಿಕ್ರಿಯಲ್ಲಿನ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ. ಜನವರಿ 7ರ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಾದ ಬಟಿಂಡಾ, ಫರೀದ್‌ಕೋಟ್, ಜಲಂಧರ್, ಮೊಗಾ, ಮುಕ್ತಸರ್, ಪಟಿಯಾಲ ಮತ್ತು ಸಂಗ್ರೂರ್‌ಗಳಿಂದ ಇಲ್ಲಿಗೆ ಆಗಮಿಸಿದ 1,500 ಕೃಷಿ ಕಾರ್ಮಿಕರಲ್ಲಿ ತಾರಾವಂತಿ ಮತ್ತು ಸುಮಾರು 300 ಮಹಿಳೆಯರು ಸೇರಿದ್ದಾರೆ. ಇವರೆಲ್ಲರೂ ಪಂಜಾಬ್ ಖೇತ್ ಮಜ್ದೂರ್ ಒಕ್ಕೂಟದ ಸದಸ್ಯರಾಗಿದ್ದು, ಇದು ಜೀವನೋಪಾಯ, ದಲಿತರಿಗೆ ಭೂ ಹಕ್ಕು ಮತ್ತು ಜಾತಿ ತಾರತಮ್ಯ ಮುಂತಾದ ವಿಷಯಗಳ ಕುರಿತು ಕೆಲಸ ಮಾಡುತ್ತದೆ.
ಜೀವನಕ್ಕಾಗಿ ಕೃಷಿ ಕೆಲಸಗಳನ್ನು ಅವಲಂಬಿಸಿರುವ ಭಾರತದ ಲಕ್ಷಾಂತರ ಮಹಿಳೆಯರಲ್ಲಿ ಅವರೂ ಒಬ್ಬರು - ದೇಶದ 144.3 ಮಿಲಿಯನ್ ಕೃಷಿ ಕಾರ್ಮಿಕರಲ್ಲಿ ಕನಿಷ್ಠ 42 ಪ್ರತಿಶತ ಮಹಿಳೆಯರಿದ್ದಾರೆ.
ತಾರವಂತಿಯವರಿಗೆ 70 ವರ್ಷ. ಮುಕ್ತರ್ ಜಿಲ್ಲೆಯ ಮಾಲೌಟ್ ತಹಸಿಲ್‌ನಲ್ಲಿರುವ ತಮ್ಮ ಗ್ರಾಮದಲ್ಲಿನ ಗೋಧಿ, ಭತ್ತ ಮತ್ತು ಹತ್ತಿ ಹೊಲಗಳಲ್ಲಿ ಇಡೀ ದಿನ ದುಡಿದರೆ ಅವರಿಗೆ 250-300 ರೂ ಕೂಲಿ ದೊರೆಯುತ್ತದೆ. “ಆದರೆ ಈಗ ಮೊದಲಿನಂತೆ ಹೆಚ್ಚಿನ ಕೆಲಸಗಳು ಇಲ್ಲಿ ಲಭ್ಯವಿಲ್ಲ. ಹಸಿರು ಕ್ರಾಂತಿಯ ನಂತರ ಕಾರ್ಮಿಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ,” ಎಂದು ಅವರು ಹೇಳುತ್ತಾರೆ, 1960ರ ದಶಕ ಮತ್ತು ಅದಕ್ಕೂ ಅದರ ನಂತರದ ದಿನಗಳಲ್ಲಿ, ಇತರ ಕೃಷಿ ಬದಲಾವಣೆಗಳೊಂದಿಗೆ, ಕೃಷಿಯ ಯಾಂತ್ರೀಕರಣವು ಪಂಜಾಬ್‌ನಲ್ಲಿ ವ್ಯಾಪಕವಾಗಿ ಹರಡಿತು.






