"ಈ ಕಾಯ್ದೆ ಅಥವಾ ಅದರ ನಿಯಮಗಳ ಅಡಿಯಲ್ಲಿ ಯಾವುದೇ ಉತ್ತಮ ಅಥವಾ ಒಳ್ಳೆಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ, ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಉದ್ಯೋಗಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದರ ವಿರುದ್ಧವೂ ಯಾವುದೇ ಮೊಕದ್ದಮೆ ಅಥವಾ ಇತರ ಸಾಂವಿಧಾನಿಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ."

ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಸಂವರ್ಧನೆ ಮತ್ತು ಸರಳೀಕರಣ) ಕಾಯ್ದೆ 2020ರ ಸೆಕ್ಷನ್ 13ಕ್ಕೆ ಸುಸ್ವಾಗತ (ಇದು ಎಪಿಎಂಸಿ ಎಂದು ಕರೆಯಲ್ಪಡುವ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ).

ಮತ್ತೆ ನೀವು ಈ ಕಾನೂನುಗಳು ಕೇವಲ ರೈತರಿಗೆ ಸಂಬಂಧಿಸಿದ್ದು ಎಂದುಕೊಂಡಿದ್ದೀರಾ? ಸಹಜವಾಗಿ ಈಗಾಗಲೇ ಸರ್ಕಾರಿ ನೌಕರರು ತಮ್ಮ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುವ ಇತರ ಕಾನೂನುಗಳಿವೆ. ಆದರೆ ಇಲ್ಲಿ ಈ ವಿಷಯದಲ್ಲಿ ಒಂದಿಷ್ಟು ಮುಂದೆ ಹೋಗಲಾಗಿದೆ. ಈ ಕಾನೂನಿನಡಿ ಎಲ್ಲರಿಗೂ “ಒಳ್ಳೆಯ ಉದ್ದೇಶದಿಂದ" ಮಾಡುವ ಎಲ್ಲ ತಪ್ಪುಗಳಿಗೂ ಕಾನೂನು ಕ್ರಮದಿಂದ ರಕ್ಷಣೆ ನೀಡಿರುವುದರ ಜೊತೆಗೆ ಅವರು ಮುಂದೆ ಮಾಡಬಹುದಾದ ಅಪರಾಧಗಳಿಗೂ (ಹೌದು, ಖಂಡಿತ ಸದುದ್ದೇಶದ ಅಪರಾಧಗಳು!) ಕಾನೂನು ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಲಾಗಿದೆ.

ನ್ಯಾಯಾಲಯಗಳಲ್ಲಿ ಯಾವುದೇ ಸಾಂವಿಧಾನಿಕ ಪರಿಹಾರ ಲಭ್ಯವಿರುವುದಿಲ್ಲ ಎನ್ನುವ ಅಂಶ  ಅಂಶವನ್ನು ತಪ್ಪಿಹೋಗಿದೆಯೆಂದು ನಿಮಗೆ ಅನ್ನಿಸಿದಲ್ಲಿ ಇದನ್ನು ಮತ್ತೆ ಗಮನಿಸಿ - ಸೆಕ್ಷನ್ 15 ಹೀಗೆ ಹೇಳುತ್ತದೆ:

"ಈ ಕಾಯಿದೆಯಲ್ಲಿ ಅಥವಾ ನಿಯಮಗಳಲ್ಲಿ ಉಲ್ಲೇಖಿಸಲಾದ ಯಾವುದೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವಂತಹ ಅಧಿಕಾರಿಯ ವ್ಯಾಪ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ವಿಚಾರಣೆ ನಡೆಸಲು ಯಾವುದೇ ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ."

ಹಾಗಿದ್ದರೆ ಕಾನೂನುಬದ್ಧವಾಗಿ ಸವಾಲು ಮಾಡಲು ಸಾಧ್ಯವಿಲ್ಲದ ʼಸದುದ್ದೇಶದಿಂದʼ ಕೆಲಸ ಮಾಡುವ ʼಆ ಇತರ ವ್ಯಕ್ತಿʼ ಯಾರು? ಸುಳಿವು: ತಿಭಟನಾ ನಿರತ ರೈತರು ಜಪಿಸುತ್ತಿರುವ ಕಾರ್ಪೊರೇಟ್ ದೈತ್ಯರ ಹೆಸರುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿ. ಇದು ವ್ಯವಹಾರಗಳನ್ನು ಸರಳವಾಗಿಸುವ ವಿಷಯ - ತುಂಬಾ ದೊಡ್ಡ ವ್ಯವಹಾರ.

"ಯಾವುದೇ ಮೊಕದ್ದಮೆ, ಕಾನೂನು ಕ್ರಮ ಅಥವಾ ಇತರ ಸಾಂವಿಧಾನಿಕ ಕ್ರಮಗಳನ್ನು ಪರಿಗಣಿಸಲು ಸಾಧ್ಯವಿಲ್ಲ..." ಇಲ್ಲಿ ರೈತರಿಗೆ ಮಾತ್ರವಲ್ಲ, ಉಳಿದವರಿಗೂ ದಾವೆ ಹೂಡಲು ಸಾಧ್ಯವಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಅನ್ವಯಿಸುತ್ತದೆ. ಎಂದರೆ ಲಾಭೋದ್ದೇಶವಿಲ್ಲದ ಗುಂಪುಗಳು, ಅಥವಾ ರೈತರ ಸಂಘಗಳು ಅಥವಾ ಯಾವುದೇ ನಾಗರಿಕರು (ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳೊಂದಿಗೆ) ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.

ಖಂಡಿತವಾಗಿಯೂ 1975-77ರ ತುರ್ತು ಪರಿಸ್ಥಿತಿಯ ನಂತರ (ಆಗ ನಾವು ಎಲ್ಲಾ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ್ದೆವು) ಈ ರೀತಿಯಲ್ಲಿ ಯಾವ ಕಾನೂನು ಸಹ ನಾಗರರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿರಾಕರಿಸಿರಲಿಲ್ಲ.

The usurping of judicial power by an arbitrary executive will have profound consequences
PHOTO • Q. Naqvi

ಅನಿಯಂತ್ರಿತ ಕಾರ್ಯಾಂಗವು ನ್ಯಾಯಾಂಗದ ಅಧಿಕಾರವನ್ನು ಕಸಿದುಕೊಳ್ಳುವುದು ಆಳವಾದ ಪರಿಣಾಮಗಳಿಗೆ ಕಾರಣವಾಗುತ್ತದೆ

ಇದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೇಲೆ ಪರಿಣಾಮ ಬೀರಲಿದೆ. ಸರಳವಾಗಿ ಹೇಳುವುದಾದರೆ, ಕಾನೂನುಗಳು (ಕಿರಿಯ ಮಟ್ಟದ) ಕಾರ್ಯನಿರ್ವಾಹಕರನ್ನು ನ್ಯಾಯಾಂಗವಾಗಿ ಪರಿವರ್ತಿಸುತ್ತದೆ. ನ್ಯಾಯಾಧೀಶರು, ನ್ಯಾಯಪೀಠ ಮತ್ತು ಫಾಸಿ ನೀಡುವವನು ಎಲ್ಲವೂ ಕಾರ್ಯಾಂಗವೇ ಆಗಿಬಿಡುತ್ತದೆ. ರೈತರು ಮತ್ತು ಅವರು ಸ್ಪರ್ಧಿಸಲಿರುವ ದೈತ್ಯ ಕಂಪನಿಗಳ ನಡುವಿನ ಅಧಿಕಾರದ ಸಂಬಂಧಗಳು ಬಹಳ ಅಸಮತೋಲನದಲ್ಲಿದೆ. ಈ ನಿಬಂಧನೆಗಳು ಈ ಅಸಮತೋಲನವನ್ನು ಇನ್ನಷ್ಟು ಹೆಚ್ಚಿಸಲಿವೆ.

ಗಾಬರಿಗೊಳಗಾದ ದೆಹಲಿಯ ಬಾರ್ ಕೌನ್ಸಿಲ್ ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ "ಕಾರ್ಯಾಂಗದ ಅಧಿಕಾರಿಗಳಿಂದ ನಿಯಂತ್ರಿಸಲ್ಪಡುವ ಮತ್ತು ನಿರ್ವಹಿಸಲ್ಪಡುವ ಆಡಳಿತಾತ್ಮಕ ಏಜೆನ್ಸಿಗಳಿಗೆ ಸಂಬಂಧಿಸಿದ ರಚನೆಗಳಿಗೆ ನಾಗರಿಕರ ಮೇಲೆ ಪರಿಣಾಮಗಳನ್ನು ಉಂಟುಮಾಡುವಂತಹ ಯಾವುದೇ ಕಾನೂನು ಪ್ರಕ್ರಿಯೆಯನ್ನು ಹೇಗೆ ಒಪ್ಪಿಸಬಹುದು?” ಎಂದು ಕೇಳಿದೆ.

(ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ, ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್‌ಗಳು ಮತ್ತು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು - ಅವರ ಸ್ವತಂತ್ರ ಕೆಲಸ ಮತ್ತು ಉತ್ತಮ ಉದ್ದೇಶಗಳು ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದಾರೆನ್ನುವುದು ಪ್ರತಿಯೊಬ್ಬ ಭಾರತೀಯರಿಗೂ ತಿಳಿದಿದೆ). ದೆಹಲಿಯ ಬಾರ್ ಕೌನ್ಸಿಲ್ ನ್ಯಾಯಾಂಗದ ಅಧಿಕಾರವನ್ನು ಕಾರ್ಯಾಂಗಕ್ಕೆ ವರ್ಗಾವಣೆ ಮಾಡುವುದನ್ನು "ಅಪಾಯಕಾರಿ ಮತ್ತು ಪ್ರಮಾದ" ಎಂದು ಹೇಳುತ್ತದೆ. ಮತ್ತು ಕಾನೂನು ವೃತ್ತಿಯ ಮೇಲೆ ಅದರ ಪ್ರಭಾವವದ ಕುರಿತಾಗಿಯೂ ಅದು ಟಿಪ್ಪಣಿ ಬರೆದಿದೆ: “ಇದು ನಿರ್ದಿಷ್ಟವಾಗಿ ಜಿಲ್ಲಾ ನ್ಯಾಯಾಲಯಗಳನ್ನು ಗಣನೀಯವಾಗಿ ಹಾನಿಗೊಳಿಸುತ್ತದೆ ಮತ್ತು ವಕೀಲರನ್ನು ಬೇರುಸಹಿತ ನಿರ್ಮೂಲನೆ ಮಾಡುತ್ತದೆ”

ನೀವು ಈಗಲೂ ಇದು ಕೇವಲ ರೈತರಿಗೆ ಸಂಬಂಧಿಸಿದ್ದೆಂದು ಭಾವಿಸುತ್ತೀರಾ


ಇಂತಹ ಅನೇಕ ನ್ಯಾಯಾಂಗ ಅಧಿಕಾರವನ್ನು ಕಾರ್ಯನಿರ್ವಾಹಕರಿಗೆ ವರ್ಗಾವಣೆ ಮಾಡುವ ಒಪ್ಪಂದಗಳ ಬಗ್ಗೆ ಕಾನೂನಿನಲ್ಲಿದೆ - ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ. 2020.

ಸೆಕ್ಷನ್18 “ಸದುದ್ದೇಶದ” ವಾದವನ್ನು ಪುನರುಚ್ಛರಿಸುತ್ತದೆ.

ಸೆಕ್ಷನ್ 19 ಹೀಗೆ ಹೇಳುತ್ತದೆ: “ಉಪ-ವಿಭಾಗೀಯ ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರವು ಈ ಕಾಯ್ದೆಯ ಮೂಲಕ ಅಥವಾ ಅದರ ಅಡಿಯಲ್ಲಿ ತೀರ್ಮಾನಿಸಲು ಅಧಿಕಾರ ಹೊಂದಿರುವ ಯಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಮೊಕದ್ದಮೆ ಅಥವಾ ವಿಚಾರಣೆಯನ್ನು ನಡೆಸಲು ಯಾವುದೇ ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ ಮತ್ತು ಯಾವುದೇ ನ್ಯಾಯಾಲಯವು ಯಾವುದೇ ತಡೆಯಾಜ್ಞೆಯನ್ನು ನೀಡುವಂತಿಲ್ಲ ಅಥವಾ ಈ ಕಾಯ್ದೆಯ ಮೂಲಕ ನೀಡಲ್ಪಟ್ಟ ಯಾವುದೇ ಹಕ್ಕಿನ ಅನುಸಾರವಾಗಿ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ಯಾವುದೇ ತಡೆಯಾಜ್ಞೆಯನ್ನು ನೀಡಲು ಸಾಧ್ಯವಿಲ್ಲ. [ಈ ಅಂಶವನ್ನು ನಿರ್ದಿಷ್ಟವಾಗಿ ಒತ್ತಿಹೇಳಲಾಗಿದೆ.]"

ಮತ್ತು ಭಾರತೀಯ ಸಂವಿಧಾನದ 19ನೇ ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಮಾವೇಶ, ಪ್ರಸರಣ ಸ್ವಾತಂತ್ರ್ಯ, ಸಂಘ ಅಥವಾ ಒಕ್ಕೂಟವನ್ನು ರೂಪಿಸುವ ಹಕ್ಕಿನ ಕುರಿತಾಗಿ ಇದೆ….

ಈ ಕೃಷಿ ಕಾನೂನಿನ ಸೆಕ್ಷನ್ 19ರ ಸಾರವು ಭಾರತೀಯ ಸಂವಿಧಾನದ 32ನೇ ವಿಧಿಯ ಮೇಲೂ ದಾಳಿ ಮಾಡುತ್ತದೆ, ಇದು ಸಾಂವಿಧಾನಿಕ ಪರಿಹಾರಗಳ ಹಕ್ಕನ್ನು ಖಾತರಿಪಡಿಸುತ್ತದೆ (ಕಾನೂನು ಕ್ರಮಗಳು). 32ನೇ ವಿಧಿಯನ್ನು ಸಂವಿಧಾನದ ಮೂಲ ರಚನೆಯ ಭಾಗವೆಂದು ಪರಿಗಣಿಸಲಾಗಿದೆ.

'ಮುಖ್ಯವಾಹಿನಿಯ' ಮಾಧ್ಯಮಕ್ಕೆ (ಜನಸಂಖ್ಯೆಯ 70 ಪ್ರತಿಶತಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಒಳಗೊಳ್ಳದ ಪ್ಲಾಟ್‌ಫಾರ್ಮ್‌ಗಳ ವಿಚಿತ್ರ ಹೆಸರು) ಖಂಡಿತವಾಗಿಯೂ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಹೊಸ ಕೃಷಿ ಕಾನೂನುಗಳು ಬೀರಲಿರುವ ಈ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಅಥವಾ ಪ್ರಜಾಪ್ರಭುತ್ವ ತತ್ವಗಳಿಗೆ ಬದಲಾಗಿ, ಅವರ ಸಂಪೂರ್ಣ ಗಮನವು ಲಾಭ ಗಳಿಸುವತ್ತ ಇರುತ್ತದೆ.

Protestors at Delhi’s gates were met with barricades, barbed wire, batons, and water cannons – not a healthy situation at all
PHOTO • Q. Naqvi
Protestors at Delhi’s gates were met with barricades, barbed wire, batons, and water cannons – not a healthy situation at all
PHOTO • Q. Naqvi

ದೆಹಲಿಯ ಗಡಿಯಲ್ಲಿ ಪ್ರತಿಭಟನಾಕಾರರನ್ನು ಬ್ಯಾರಿಕೇಡ್‌ಗಳು, ಮುಳ್ಳುತಂತಿ, ಲಾಠಿ ಮತ್ತು ಜಲ ಫಿರಂಗಿಗಳೊಂದಿಗೆ ಸ್ವಾಗತಿಸಲಾಯಿತು - ಈ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಆರೋಗ್ಯಕರವಾದುದಲ್ಲ.

ಒಳಗೊಂಡಿರುವ ಆಸಕ್ತಿಯ ಸಂಘರ್ಷದ ಬಗ್ಗೆ ಯಾವುದೇ ಗೊಂದಲವನ್ನು ಬಿಡಿ (ಬಹುವಚನದಲ್ಲಿ). ಈ ಮಾಧ್ಯಮಗಳು ಸಹ ಕಾರ್ಪೋರೇಷನ್‌ಗಳಾಗಿವೆ. ಅತಿದೊಡ್ಡ ಭಾರತೀಯ ಕಾರ್ಪೋರೇಷನ್‌ನ ಬಿಗ್‌ಬಾಸ್ ದೇಶದ ಅತ್ಯಂತ ಶ್ರೀಮಂತ ಮತ್ತು ದೊಡ್ಡ ಮಾಧ್ಯಮ ಮಾಲೀಕ. ದೆಹಲಿಯ ಗಡಿಗಳಲ್ಲಿ  ಹಾಜರಿದ್ದ ರೈತರು ತಮ್ಮ ಘೋಷಣೆಗಳಲ್ಲಿ ಜಪಿಸಿರುವ ಹೆಸರುಗಳಲ್ಲಿ 'ಅಂಬಾನಿ' ಒಂದು. ಬೇರೆಡೆ, ಸಣ್ಣ ಮಟ್ಟದಲ್ಲಿಯೂ ಸಹ, ನಾವು ದೀರ್ಘಕಾಲದವರೆಗೆ ನಾಲ್ಕನೇ ಎಸ್ಟೇಟ್ (ಪ್ರೆಸ್) ಮತ್ತು ರಿಯಲ್ ಎಸ್ಟೇಟ್ (ರಿಯಲ್ ಎಸ್ಟೇಟ್) ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ನಿಗಮಗಳ ಹಿತಾಸಕ್ತಿಗಳನ್ನು ನಾಗರಿಕರ ಹಿತಾಸಕ್ತಿಗಿಂತ (ರೈತರು ಮಾತ್ರವಲ್ಲ) ಎತ್ತರದಲ್ಲಿ ಇರಿಸಲು 'ಮುಖ್ಯವಾಹಿನಿಯ' ಮಾಧ್ಯಮ ಹೃದಯಪೂರ್ವಕವಾಗಿ ಅವರೊಂದಿಗೆ ತೊಡಗಿಸಿಕೊಂಡಿದೆ.

ತಮ್ಮ ಪತ್ರಿಕೆಗಳಲ್ಲಿ ಮತ್ತು ಚಾನೆಲ್‌ಗಳಲ್ಲಿ, ರಾಜಕೀಯ ವರದಿಗಳಲ್ಲಿ (ಕೆಲವು ಅದ್ಭುತ ಮತ್ತು ಸಾಮಾನ್ಯ - ವಿನಾಯಿತಿಗಳೊಂದಿಗೆ), ರೈತರನ್ನು - ಶ್ರೀಮಂತ ರೈತರು, ಪಂಜಾಬ್, ಖಲಿಸ್ತಾನಿ, ಕಪಟರು, ಕಾಂಗ್ರೆಸ್ ಸಂಚುಕೋರರು ಇತ್ಯಾದಿ ಹೆಸರುಗಳಿಂದ ಕರೆಯುವ ಕೆಲಸ ಮಾತ್ರ - ವೇಗವಾಗಿ ಮತ್ತು ನಿರಂತರವಾಗಿ ನಡೆಯುತ್ತಿದೆ.

ದೊಡ್ಡ ಮೀಡಿಯಾಗಳ ಸಂಪಾದಕೀಯ ವಿಭಾಗಗಳು ಇದನ್ನು ಭಿನ್ನವಾದ ತಂತ್ರದೊಂದಿಗೆ ಎದುರಿಸುತ್ತಾರೆ. ಮೊಸಳೆ ಕಣ್ಣೀರು ಸುರಿಸುವಂತೆ ಅವರ ಕಾಳಜಿಯ ರೀತಿ.  ವಾಸ್ತವವಾಗಿ, ಸರ್ಕಾರವು ಅದನ್ನು ಉತ್ತಮವಾಗಿ ನಿರ್ವಹಿಸಬೇಕಾಗಿತ್ತು. ನಿಸ್ಸಂಶಯವಾಗಿ, ಇದು ಅರ್ಧಂಬರ್ಧ ಜ್ಞಾನವಿರುವ ಜನರ ಗುಂಪಾಗಿದೆ, ಆದರೆ ಈ ಜನರು ಸರ್ಕಾರಿ ಅರ್ಥಶಾಸ್ತ್ರಜ್ಞರು ಪ್ರಧಾನಮಂತ್ರಿಯವರ ಪ್ರತಿಭೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು - ಇಂತಹ ಉತ್ತಮ ಮತ್ತು ಕಾಳಜಿಯುಳ್ಳ ಕಾನೂನುಗಳನ್ನು ರಚಿಸಿದ ಅವರು ರೈತರನ್ನು ಪ್ರಬಲರನ್ನಾಗಿಸುತ್ತಾರೆ ಮತ್ತು ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇದೊಂದು ಮಹತ್ವಪೂರ್ಣ ಕಾನೂನು ಎಂದು ರೈತರಿಗೆ ಹೇಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಹೇಳಿದ ನಂತರ, ಈ ಕಾನೂನುಗಳು ಮುಖ್ಯ ಮತ್ತು ಅವಶ್ಯಕ ಮತ್ತು ಅದನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

"ಈ ಎಲ್ಲ ಘಟನಾವಳಿಗಳಲ್ಲಿ ದೋಷವು ಸುಧಾರಣೆಗಳಲ್ಲಿಲ್ಲ, [ಒತ್ತು ಸೇರಿಸಲ್ಪಟ್ಟಿದೆ] ಆದರೆ ಕೃಷಿ ಕಾನೂನುಗಳನ್ನು ಅಂಗೀಕರಿಸಿದ ರೀತಿ ಮತ್ತು ಸರ್ಕಾರದ ಸಂವಹನ ನೀತಿ ಅಥವಾ ಅಂತಹ ನೀತಿಯ ನ್ಯೂನತೆಗಳಲ್ಲಿದೆ" ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಸಂಪಾದಕರೊಬ್ಬರು ಹೇಳಿದ್ದಾರೆ. ಪರಿಸ್ಥಿತಿಯನ್ನು ಸರ್ಕಾರವು ಸರಿಯಾಗಿ ನಿರ್ವಹಿಸದಿದ್ದರೆ, "ಈ ಮೂರು ಕೃಷಿ ಕಾನೂನುಗಳಂತೆ ಭಾರತದ ಕೃಷಿ ಕ್ಷೇತ್ರದ ನೈಜ ಶಕ್ತಿಯನ್ನು ಮುಂದೆ ತರಲು" ಅಗತ್ಯವಿರುವ ಇತರ ಉತ್ತಮ ಉದ್ದೇಶಗಳಿಗೆ ಅದು ಅಪಾಯವನ್ನುಂಟು ಮಾಡುತ್ತದೆ ಎಂದು ಎಕ್ಸ್‌ಪ್ರೆಸ್ ಕಳವಳ ವ್ಯಕ್ತಪಡಿಸುತ್ತದೆ.

ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯವು ಈಗ ಎಲ್ಲಾ ಸರ್ಕಾರಗಳ ಪ್ರಾಥಮಿಕ ಕರ್ತವ್ಯವೆಂದರೆ "ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಕೊನೆಗೊಳ್ಳುತ್ತದೆಯೆನ್ನುವ  ರೈತರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ..." ಮತ್ತು ಈ ಸಣ್ಣ ಹಂತಗಳ ಯಶಸ್ಸು ರೈತರ ಆದಾಯವು ದ್ವಿಗುಣಗೊಳ್ಳುತ್ತದೆಯೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ... " ಅಲ್ಲದೆ, ಇಂತಹ ಸುಧಾರಣೆಗಳು "ಭಾರತದ ಆಹಾರ ಮಾರುಕಟ್ಟೆಯಲ್ಲಿನ ಅಪಾಯಕಾರಿ ಅಸಮತೋಲನವನ್ನು ನಿವಾರಿಸುತ್ತದೆ." ಎಂದು ಹೇಳಿದೆ.

PHOTO • Q. Naqvi

ದೆಹಲಿಯ ಗಡಿಗಳಲ್ಲಿ ಇರುವ ಈ ರೈತರು ಈ ಮೂರು ಅನ್ಯಾಯದ ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ದೊಡ್ಡ ಉದ್ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಅವರು ನಮ್ಮೆಲ್ಲರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ

ಹಿಂದೂಸ್ತಾನ್ ಟೈಮ್ಸ್ನ ಸಂಪಾದಕೀಯವು "ಈ ಹೆಜ್ಜೆಯು [ಹೊಸ ಕಾನೂನುಗಳು] ದೃಢ ಸಮರ್ಥನೆಯನ್ನು ಹೊಂದಿದೆ" ಎಂದು ಹೇಳಿದೆ. ಮತ್ತು "ಕಾನೂನುಗಳ ವಾಸ್ತವತೆ ಬದಲಾಗುವುದಿಲ್ಲ ಇದು ಸೂಕ್ಷ್ಮವಾಗಿರುತ್ತದೆ ಎನ್ನುವುದನ್ನು ರೈತರು ಅರ್ಥಮಾಡಿಕೊಳ್ಳಬೇಕು." ರೈತರ ಬಗ್ಗೆ, ಅವರು "ತೀವ್ರವಾದಿ-ಗುರುತಿನ ಸಮಸ್ಯೆಗಳೊಂದಿಗೆ ಆಡುತ್ತಿದ್ದಾರೆ" ಮತ್ತು ತೀವ್ರ ಚಿಂತನೆ ಮತ್ತು ಕ್ರಮವನ್ನು ಪ್ರತಿಪಾದಿಸುತ್ತಾರೆ ಎಂದು ಅವರು ನಂಬುತ್ತಾರೆ.

ಸರ್ಕಾರ ಬಹುಶಃ ರೈತರು ಅಜಾಗರೂಕತೆಯಿಂದ ಯಾವ ಪಿತೂರಿಗಾರರನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಯಾರ ಆಜ್ಞೆಯ ಮೇರೆಗೆ ಅವರು ವರ್ತಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ವ್ಯವಹರಿಸುತ್ತಿದೆ. ಸಂಪಾದಕೀಯ ಬರಹಗಾರರು ಅವರು ಯಾರನ್ನು ಪ್ರತಿನಿಧಿಸುತ್ತಾರೆಂದು ನಿಖರವಾಗಿ ತಿಳಿದಿದ್ದಾರೆ, ಹೀಗಾಗಿಯೇ ಅವರು ತಮ್ಮ ಹೊಟ್ಟೆಯನ್ನು ತುಂಬಿಸುವ ಕಾರ್ಪೊರೇಟ್ ಬೆರಳುಗಳನ್ನು ಕಚ್ಚಲು ಬಯಸುವುದಿಲ್ಲ.

ಉದಾರವಾಗಿರುವ ಮತ್ತು ಕನಿಷ್ಠ ಪಕ್ಷಪಾತದ ಟಿವಿ ಚಾನೆಲ್‌ಗಳಲ್ಲಿ ಸಹ, ಚರ್ಚಿಸಲಾಗುವ ಪ್ರಶ್ನೆಗಳು ಯಾವಾಗಲೂ ಸರ್ಕಾರ ಮತ್ತು ಅದರ ಗುಲಾಮ ತಜ್ಞರು ಮತ್ತು ಬುದ್ಧಿಜೀವಿಗಳ ಚೌಕಟ್ಟಿನೊಳಗೆ ಇರುತ್ತವೆ.

ಅಂತಹ ಚರ್ಚೆಗಳು ಈ ರೀತಿಯ ಪ್ರಶ್ನೆಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ: ಈಗಲೇ ಏಕೆ? ಮತ್ತು ಕಾರ್ಮಿಕ ಕಾನೂನುಗಳನ್ನು ಸಹ ಇಂತಹ ತರಾತುರಿಯಲ್ಲಿ ಏಕೆ ಅಂಗೀಕರಿಸಲಾಯಿತು? ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹುಮತದೊಂದಿಗೆ ಜಯಗಳಿಸಿದ್ದರು. ಅವರು ಕನಿಷ್ಠ 2-3 ವರ್ಷಗಳವರೆಗೆ ಈ ಬಹುಮತವನ್ನು ಹೊಂದಿರುತ್ತಾರೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತಕ್ಷಣದ ಗಮನ ಹರಿಸಬೇಕಾದ ಇತರ ಸಾವಿರಾರು ವಿಷಯಗಳಿರುವಾಗಲೂ ಸಾಂಕ್ರಾಮಿಕ ಪಿಡುಗಿನ ಪರಾಕಾಷ್ಠೆಯ ಸಮಯವು ಈ ಕಾನೂನುಗಳನ್ನು ಅಂಗೀಕರಿಸಲು ಉತ್ತಮ ಸಮಯ ಎಂದು ಭಾರತೀಯ ಜನತಾ ಪಕ್ಷದ ಸರ್ಕಾರವು ಏಕೆ ಭಾವಿಸಿತು?

ಕೋವಿಡ್ -19 ತಂದಿತ್ತಿರುವ ಸಂಕಷ್ಟಗಳಲ್ಲಿ ಬಳಲುತ್ತಿರುವ ಸಮಯದಲ್ಲಿ, ರೈತರು ಮತ್ತು ಕಾರ್ಮಿಕರು ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಸಂಘಟಿತರಾಗಲು ಮತ್ತು ಪ್ರತಿಭಟಿಸಲು ಸಾಧ್ಯವಾಗದ ಸಮಯ ಇದು ಎಂಬುದು ಅವರ ಊಹೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಒಳ್ಳೆಯ ಸಮಯ ಮಾತ್ರವಲ್ಲದೆ ಉತ್ತಮ ಸಮಯವೂ ಆಗಿತ್ತು. ಇದರಲ್ಲಿ ಅವರು ತಮ್ಮ ತಜ್ಞರ ಸಹಾಯವನ್ನೂ ಪಡೆದರು, ಅವರಲ್ಲಿ ಕೆಲವರು ಈ ಪರಿಸ್ಥಿತಿಯಲ್ಲಿ '1991ರ ನಂತರದ ಎರಡನೇ ಕ್ಷಣ'ವನ್ನು ಕಂಡರು, ಮೂಲಭೂತ ಸುಧಾರಣೆಗಳನ್ನು ಮಾಡಲು, ನಿರಾಶೆಗೊಳಿಸಲು, ಬಿಕ್ಕಟ್ಟು ಮತ್ತು ಅವ್ಯವಸ್ಥೆಯ ಲಾಭವನ್ನು ಪಡೆಯಲು ಅವಕಾಶವನ್ನು ಪಡೆದರು. ಮತ್ತು ಪ್ರಮುಖ ಸಂಪಾದಕರು ಆಡಳಿತವನ್ನು "ಉತ್ತಮ ಬಿಕ್ಕಟ್ಟನ್ನು ಹಾಳು ಮಾಡಬಾರದು" ಎಂದು ಒತ್ತಾಯಿಸಿದರು. ಮತ್ತು ನೀತಿ ಆಯೋಗದ ಮುಖ್ಯಸ್ಥರು ತಾನು ಭಾರತದಲ್ಲಿನ "ಅತಿಯಾದ ಪ್ರಜಾಪ್ರಭುತ್ವ"ದಿಂದ ಕಿರಿಕಿರಿಗೊಂಡಿದ್ದಾರೆಂದು ಘೋಷಿಸಿದರು.

ಈ ಕಾನೂನುಗಳು ಅಸಂವಿಧಾನಿಕ, ರಾಜ್ಯದ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ಶಾಸನ ಮಾಡುವ ಹಕ್ಕಿಲ್ಲದಿರುವ ಕೇಂದ್ರವು ಅಂತಹ ಕಾನೂನುಗಳನ್ನು ತಂದಿದೆ, ಈ ಮಹತ್ವದ ಪ್ರಶ್ನೆಗೆ ಮೇಲ್ಮಟ್ಟದ ಮತ್ತು ಕೃತಕ ಉಲ್ಲೇಖಗಳನ್ನು ಹೊರತುಪಡಿಸಿ ಏನನ್ನೂ ಹೇಳುವುದಿಲ್ಲ.

PHOTO • Binaifer Bharucha

ನವೆಂಬರ್ 2018ರಲ್ಲಿ, ಪಂಜಾಬ್‌ನಿಂದ ಮಾತ್ರವಲ್ಲದೆ 22 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ರೈತರುಪ್ರಸ್ತುತ ಪ್ರತಿಭಟನಾಕಾರರಂತೆ ಬೇಡಿಕೆಗಳೊಂದಿಗೆ ದೆಹಲಿಯ ಸಂಸತ್ತಿಗೆ ಮೆರವಣಿಗೆ ನಡೆಸಿದ್ದರು

ಸಮಸ್ಯೆಯನ್ನು ಪರಿಹರಿಸಲು ಸಮಿತಿಯನ್ನು ರಚಿಸುವ ಸರ್ಕಾರದ ಪ್ರಸ್ತಾವನೆಯನ್ನು ರೈತರು ಏಕೆ ತಿರಸ್ಕರಿಸಿದರು ಎಂಬ ಬಗ್ಗೆ ಸಂಪಾದಕೀಯಗಳಲ್ಲಿ ನಿರ್ದಿಷ್ಟ ಚರ್ಚೆಯಿಲ್ಲ. ದೇಶದ ಪ್ರತಿಯೊಬ್ಬ ರೈತರಿಗೆ ತಿಳಿದಿರುವ ಮತ್ತು ಅದರ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವ ಒಂದು ಸಮಿತಿಯ ವರದಿ ಇದ್ದರೆ, ಅದು ರಾಷ್ಟ್ರೀಯ ರೈತರ ಆಯೋಗದ ವರದಿಯಾಗಿದೆ - ಅದನ್ನು ಅವರು 'ಸ್ವಾಮಿನಾಥನ್ ವರದಿ' ಎಂದು ಕರೆಯುತ್ತಾರೆ. 2004ರಿಂದ ಕಾಂಗ್ರೆಸ್ ಮತ್ತು 2014ರಿಂದ ಬಿಜೆಪಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರೂ, ಅದನ್ನು ಸಮಾಧಿ ಮಾಡಲು ಅವರು ಪರಸ್ಪರ ಸ್ಪರ್ಧೆ ನಡೆಸುತ್ತಿದ್ದಾರೆ.

ಮತ್ತು, ಹೌದು, 2018 ರ ನವೆಂಬರ್‌ನಲ್ಲಿ, ದೆಹಲಿಯ ಸಂಸತ್ತಿನ ಬಳಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಜಮಾಯಿಸಿ ಆ ವರದಿಯ ಪ್ರಮುಖ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು. ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಯ ಖಾತರಿ, ಮತ್ತು ಕೃಷಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಇವು ದೆಹಲಿ ದರ್ಬಾರ್‌ಗೆ ಸವಾಲು ಹಾಕುತ್ತಿರುವ ರೈತರ ಹಲವು ಬೇಡಿಕೆಗಳಲ್ಲಿ ಕೆಲವು. ಮತ್ತು ಅವರು ಪಂಜಾಬ್‌ನಿಂದ ಮಾತ್ರವಲ್ಲ 22 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವರಾಗಿದ್ದರು.

ಈ ರೈತರು - ಸರ್ಕಾರದಿಂದ ಕಪ್ ಚಹಾವನ್ನು ಕೂಡಾ ತೆಗೆದುಕೊಳ್ಳಲು ನಿರಾಕರಿಸಿದವರು - ಇದು ಭಯ ಮತ್ತು ಹತಾಶೆ ತರಿಸಿ ಅವರನ್ನು ಕಟ್ಟಿಹಾಕಲಾಗದು ಎಂದು ತೋರಿಸಿದೆ. ಅವರು ಈಗ ತಮ್ಮ (ಮತ್ತು ನಮ್ಮ) ಹಕ್ಕುಗಳಿಗಾಗಿ ನಿಂತಿದ್ದಾರೆ ಮತ್ತು ಈ ಕಾನೂನುಗಳನ್ನು ವಿರೋಧಿಸಲು ಅವರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ.

'ಮುಖ್ಯವಾಹಿನಿಯ' ಮಾಧ್ಯಮಗಳು ಕಡೆಗಣಿಸುತ್ತಿರುವ ಮತ್ತೊಂದು ವಿಷಯವನ್ನು ಅವರು ಪದೇ ಪದೇ ಹೇಳಿದ್ದಾರೆ. ಆಹಾರದ ಮೇಲೆ ಕಾರ್ಪೋರೇಟ್ ನಿಯಂತ್ರಣವು ದೇಶದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ಅವರು ನಮಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಕುರಿತು ನೀವು ಇತ್ತೀಚೆಗೆ ಯಾವುದಾದರೂ ಸಂಪಾದಕೀಯವನ್ನು ನೋಡಿದ್ದೀರಾ?

ಈ ಮೂರು ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ಅವರು ತಮ್ಮ ಪರವಾಗಿ ಅಥವಾ ಪಂಜಾಬ್‌ಗಾಗಿ ದೊಡ್ಡ ಯುದ್ಧವನ್ನು ನಡೆಸುತ್ತಿದ್ದೇವೆ ಎಂದು ಅವರಲ್ಲಿ ಹಲವರಿಗೆ ತಿಳಿದಿದೆ. ಆ ಕಾನೂನುಗಳನ್ನು ರದ್ದುಗೊಳಿಸಿದಾಕ್ಷಣ ನಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ. ನಾವು ಮೊದಲಿದ್ದ ಪರಿಸ್ಥಿತಿಗೆ ಮತ್ತೆ ಮರಳುತ್ತೇವೆ. ಆ ಪರಿಸ್ಥಿತಿಯು ಬಿಕ್ಕಟ್ಟು ಮತ್ತು ಭಯಾನಕಕತೆಯಿಂದ ಕೂಡಿದೆ. ಆದರೆ ಈ ಕೃಷಿ ಕಾನೂನುಗಳು ರದ್ದಾದರೆ ಈಗಾಗಲೇ ಇರುವ ಬಿಕ್ಕಟ್ಟುಗಳಿಗೆ ಹೊಸ ಬಿಕ್ಕಟ್ಟುಗಳು ಸೇರಿಕೊಳ್ಳುವುದು ತಪ್ಪುತ್ತದೆ ಅಥವಾ ನಿಧಾನವಾಗುತ್ತದೆ. ಮತ್ತು ಹೌದು, 'ಮುಖ್ಯವಾಹಿನಿಯ ಮಾಧ್ಯಮ'ಕ್ಕಿಂತ ಭಿನ್ನವಾಗಿ, ರೈತರು ಈ ಕಾನೂನುಗಳಲ್ಲಿ ನಾಗರಿಕರ ಸಾಂವಿಧಾನಿಕ ನ್ಯಾಯದ ಹಕ್ಕನ್ನು ತೆಗೆದುಹಾಕುವ ಮತ್ತು ನಮ್ಮ ಹಕ್ಕುಗಳನ್ನು ರದ್ದುಗೊಳಿಸುವ ಮಹತ್ವವನ್ನು ನೋಡುತ್ತಿದ್ದಾರೆ. ಮತ್ತು ಅವರು ಅದನ್ನು ಆ ರೀತಿ ನೋಡದಿದ್ದರೂ ಅಥವಾ ನಿರೂಪಿಸದಿದ್ದರೂ ಸಹ - ಅವರದು ಸಂವಿಧಾನದ ಮೂಲ ರಚನೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟವಾಗಿದೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಈ ಲೇಖನದ ಇಂಗ್ಲಿಷ್ ಆವೃತ್ತಿಯನ್ನು ಮೊದಲ ಬಾರಿಗೆ ಡಿಸೆಂಬರ್ 09, 2020ರಂದು ದಿ ವೈರ್‌ನಲ್ಲಿ ಪ್ರಕಟಿಸಲಾಯಿತು.

ಅನುವಾದ: ಶಂಕರ ಎನ್. ಕೆಂಚನೂರು

ਪੀ ਸਾਈਨਾਥ People’s Archive of Rural India ਦੇ ਮੋਢੀ-ਸੰਪਾਦਕ ਹਨ। ਉਹ ਕਈ ਦਹਾਕਿਆਂ ਤੋਂ ਦਿਹਾਤੀ ਭਾਰਤ ਨੂੰ ਪਾਠਕਾਂ ਦੇ ਰੂ-ਬ-ਰੂ ਕਰਵਾ ਰਹੇ ਹਨ। Everybody Loves a Good Drought ਉਨ੍ਹਾਂ ਦੀ ਪ੍ਰਸਿੱਧ ਕਿਤਾਬ ਹੈ। ਅਮਰਤਿਆ ਸੇਨ ਨੇ ਉਨ੍ਹਾਂ ਨੂੰ ਕਾਲ (famine) ਅਤੇ ਭੁੱਖਮਰੀ (hunger) ਬਾਰੇ ਸੰਸਾਰ ਦੇ ਮਹਾਂ ਮਾਹਿਰਾਂ ਵਿਚ ਸ਼ੁਮਾਰ ਕੀਤਾ ਹੈ।

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru