“ನಾವು ಇಲ್ಲಿಗೆ ಬರಲು ಸೇಟ್‌ಗಳಿಂದ [ಕೃಷಿ ಮಾಲೀಕರಿಂದ] 1,000 ರೂಪಾಯಿ ಸಾಲ ಪಡೆದಿದ್ದೇವೆ. ಇದಕ್ಕೆ ಪ್ರತಿಯಾಗಿ, ನಾವು ಅವರ ಹೊಲಗಳಲ್ಲಿ 4-5 ದಿನಗಳ ಕಾಲ ಕೆಲಸ ಮಾಡುತ್ತೇವೆ” ಎಂದು 45 ವರ್ಷದ ವಿಜಯ್‌ಬಾಯಿ ಗಂಗೋರ್ಡೆ ಹೇಳಿದರು. ಅವರು ನೀಲಿ ಮತ್ತು ಕಿತ್ತಳೆ ಬಣ್ಣದ ಟೆಂಪೊದಲ್ಲಿ ಜನವರಿ 23ರಂದು ಮಧ್ಯಾಹ್ನ ನಾಸಿಕ್ ತಲುಪಿದರು, ಮುಂಬೈ ತಲುಪಲಿರುವ ವಾಹನ ಜಾಥಾವನ್ನು ಸೇರಿಕೊಳ್ಳಲು ನಗರದ ಗಾಲ್ಫ್ ಕ್ಲಬ್ ಮೈದಾನವನ್ನು ತಲುಪಿದ ಮೊದಲಿಗರಲ್ಲಿ ಇವರೂ ಇದ್ದಾರೆ.
ವಿಜಯಬಾಯಿಯವರ 41 ವರ್ಷದ ಸೋದರಸಂಬಂಧಿ, ತಾರಾಬಾಯಿ ಜಾಧವ್, ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನಲ್ಲಿರುವ ಅವರ ಹಳ್ಳಿಯಾದ ಮೊಹಾದಿಯಿಂದ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಅವರಿಬ್ಬರೂ ಅಲ್ಲಿ ಕೃಷಿ ಕಾರ್ಮಿಕರಾಗಿ ದಿನಕ್ಕೆ ರೂ. 200-250 ದುಡಿಯುತ್ತಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಇಲ್ಲಿಂದ 180 ಕಿ.ಮೀ ದೂರದಲ್ಲಿರುವ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿರುವ ಆಂದೋಲನದಲ್ಲಿ ಭಾಗವಹಿಸಲು ಇಬ್ಬರು ಸಹೋದರಿಯರು ಇಲ್ಲಿಗೆ ಬಂದಿದ್ದಾರೆ. ಮುಖ್ಯವಾಗಿ ನಾಂದೇಡ್, ನಂದೂರ್ಬಾರ್, ನಾಸಿಕ್ ಮತ್ತು ಪಾಲ್ಘರ್ ನಿಂದ ಸುಮಾರು 15 ಸಾವಿರ ರೈತರು ಇಲ್ಲಿ ಜಮಾಯಿಸಿದ್ದಾರೆ. "ನಾವು ನಮ್ಮ ಉಪಜೀವಿಕಕ್ಕಾಗಿ ( ಜೀವನೋಪಾಯಕ್ಕಾಗಿ) ಪ್ರದರ್ಶನ ಮೆರವಣಿಗೆ ಮಾಡುತ್ತಿದ್ದೇವೆ" ಎಂದು ತಾರಾಬಾಯಿ ಹೇಳುತ್ತಾರೆ.
ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ದಕ್ಷಿಣ ಮುಂಬೈಯಲ್ಲಿರುವ ರಾಜ್ಯಪಾಲರ ನಿವಾಸವಾದ ರಾಜ ಭವನದವರೆಗೆ ಮೆರವಣಿಗೆ ಮತ್ತು ಅಲ್ಲಿ ಧರಣಿಯನ್ನು ಜನವರಿ 25-26ರಂದು ಸಯುಂಕ್ತ ಶೆಟ್ಕರಿ ಕಮಗರ್ ಮೋರ್ಚಾ ಆಯೋಜಿಸಿದೆ. ಮಹಾರಾಷ್ಟ್ರದ 21 ಜಿಲ್ಲೆಗಳ ಸಂಘಟಿತ ರೈತರು ಈ ಪ್ರತಿಭಟನೆಗಳಿಗಾಗಿ ಮುಂಬೈಯಲ್ಲಿ ಸೇರುತ್ತಿದ್ದಾರೆ.









