“ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಕಂಪನಿಯ ಜನರು ಖಂಡಿತವಾಗಿಯೂ ಇರುಸುಮುರುಸುಗೊಂಡಿದ್ದಾರೆ. ಇದು ಸಾರಿಗೆಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿದೆ ಮತ್ತು ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ” ಎಂದು ಕುಂಡ್ಲಿ ಕೈಗಾರಿಕಾ ಪ್ರದೇಶದ ಗೃಹೋಪಯೋಗಿ ಉಪಕರಣಗಳ ಕಾರ್ಖಾನೆಯ ಭದ್ರತಾ ಮೇಲ್ವಿಚಾರಕ 22 ವರ್ಷದ ನಿಜಾಮುದ್ದೀನ್ ಅಲಿ ಹೇಳುತ್ತಾರೆ. ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಎಂಬಲ್ಲಿ ರೈತರ ಪ್ರತಿಭಟನಾ ಸ್ಥಳದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ. (ಕುಂಡ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಹಳೆಯ ಗ್ರಾಮ, ಈಗ ಪುರಸಭೆಯಾಗಿದೆ).
ರೈತರ ಪ್ರತಿಭಟನೆಯಿಂದಾದ ಉಂಟಾದ ಅಡ್ಡಿಯಿಂದಾಗಿ ನಿಜಾಮುದ್ದೀನ್‌ಗೆ ಅವರ ಕಂಪನಿಯು ಎರಡು ತಿಂಗಳಿನಿಂದ ಹಣ ಪಾವತಿಸಿಲ್ಲ, ಆದಾಗ್ಯೂ ಕೂಡ ಅವರು ಚಳುವಳಿ ನಿರತ ರೈತರಿಗೆ ಬೆಂಬಲವಾಗಿ ನಿಂತಿದ್ದಾರೆ. "ನನ್ನ ಕಾರ್ಖಾನೆ ಇದೀಗ ಎದುರಿಸುತ್ತಿರುವ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಅದು ನನ್ನ ಸಂಬಳದ ಮೇಲೆ ಪರಿಣಾಮ ಬೀರಿದೆ. ಅದೇ ಸಮಯದಲ್ಲಿ, ನಾನು ರೈತರನ್ನು ಬೆಂಬಲಿಸುತ್ತೇನೆ," ಎಂದು ಅವರು ಹೇಳುತ್ತಾರೆ. ಈ ವಿಚಾರದಲ್ಲಿ ಅವರ ನಿಷ್ಠೆ ಸಮಾನವಾಗಿ ವ್ಯಕ್ತವಾಗಿಲ್ಲ ." ನಾನು ಶೇ 20 ರಷ್ಟು ನನ್ನ ಕಾರ್ಖಾನೆಗೆ ಬೆಂಬಲ ವ್ಯಕ್ತಪಡಿಸಿದರೆ, ಶೇ 80 ರಷ್ಟು ರೈತರಿಗೆ ಬೆಂಬಲ ನೀಡುತ್ತೇನೆ" ಎಂದು ಹೇಳುತ್ತಾರೆ.
ನಿಜಾಮುದ್ದೀನ್ ಕೆಲವು ವರ್ಷಗಳ ಹಿಂದೆ ಬಿಹಾರದ ಸಿವಾನ್ ಜಿಲ್ಲೆಯ ಹಳ್ಳಿಯಿಂದ ಕುಂಡ್ಲಿಗೆ ಬಂದು ನೆಲೆಸಿದರು, ಅಲ್ಲಿ 6.5 ಬಿಘಾ ಭೂಮಿಯಲ್ಲಿ (ಬಿಹಾರದಲ್ಲಿ ಸರಿಸುಮಾರು 4 ಎಕರೆ), ಅವರ ಕುಟುಂಬವು ಗೋಧಿ, ಅಕ್ಕಿ, ತೊಗರಿಬೇಳೆ, ಸಾಸಿವೆ, ಹೆಸರುಬೇಳೆ ಮತ್ತು ತಂಬಾಕನ್ನು ಬೆಳೆಯುತ್ತದೆ. "ಈ ಬೆಳೆಗಳನ್ನು ಜೀವನೋಪಾಯಕ್ಕಾಗಿ ಬೆಳೆಯುವವರು ರೈತರೇ ಹೊರತು ಸರ್ಕಾರ ಅಥವಾ ಅಂಬಾನಿ ಮತ್ತು ಅದಾನಿಯವರಲ್ಲ. ಭಾರತದಾದ್ಯಂತ ಇರುವ ರೈತರ ನೋವು ನನಗೆ ಅರ್ಥವಾಗಿದೆ. ಈ ಹೊಸ ಕಾನೂನುಗಳು ಜಾರಿಗೆ ಬಂದಲ್ಲಿ ರೇಷನ್ ಗೆ ತೆರೆ ಬಿಳುತ್ತದೆ. ಶಾಲೆಗಳಲ್ಲಿರುವ ಮಧ್ಯಾಹ್ನದ ಬಿಸಿ ಊಟವನ್ನುಕೂಡ ಮುಂದುವರಿಸುವುದಿಲ್ಲ," ಎಂದು ಅವರು ಹೇಳುತ್ತಾರೆ.
“ಕೆಲವು ವರ್ಷಗಳ ಹಿಂದೆ ನಮಗೆ ಬಿಹಾರದಲ್ಲಿ ಪ್ರತಿ ಕಿಲೋಗ್ರಾಂ ಗೋಧಿ ಬೆಳೆಗೆ 25 ರೂಪಾಯಿ ಸಿಗಲಿದೆ ಎಂದು ಹೇಳಲಾಯಿತು. ಬಿಹಾರದ ಪ್ರತಿ ಕೃಷಿ ಕುಟುಂಬವು ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ತಮ್ಮ ಖಾತೆಗೆ 2,000 ರೂಪಾಯಿಗಳನ್ನು ಜಮಾ ಮಾಡಿಕೊಂಡಿದೆ. ಆದರೆ ನಂತರ ಆ 25 ರೂಪಾಯಿ ದರವನ್ನು ಪ್ರತಿ ಕಿಲೋಗೆ 7 ರೂಪಾಯಿಗೆ ಇಳಿಸಲಾಯಿತು. ನಾವು ಅಭಿವೃದ್ದಿ ಹೊಂದಲು ಬಯಸುತ್ತೇವೆ, ಆದರೆ ಸರ್ಕಾರ ಸ್ಪಷ್ಟವಾಗಿ ನಮ್ಮನ್ನು ಹಿಂದಕ್ಕೆ ತಳ್ಳುತ್ತಿದೆ" ಎಂದು ಹೇಳುತ್ತಾರೆ.
ಚಳುವಳಿ ಗುಂಪುಗಳ ಭಾಗವಾಗಿರದ ನಿಜಾಮುದ್ದೀನ್ ಅಲಿ ಮತ್ತು ಇತರರೊಂದಿಗೆ ಮಾತನಾಡಿದಾಗ ಅವರು ಸ್ಥಳಿಯರು ಚಳುವಳಿಗಾರರ ಜೊತೆ ಸಂಘರ್ಷಕ್ಕೆ ಇಳಿದಿದ್ದರು ಎನ್ನುವ ವಿಚಾರವಾಗಿ ಮಾಧ್ಯಮದಲ್ಲಿ ಬಿತ್ತರಿಸಿದ್ದಕಿಂತ ಭಿನ್ನವಾದ ಚಿತ್ರಣವನ್ನು ನೀಡುತ್ತಾರೆ.
ಪ್ರತಿಭಟನಾ ಸ್ಥಳದ ಹತ್ತಿರದಲ್ಲಿ ನ್ಯೂ ಕುಂಡ್ಲಿಯ ಸಿಂಘು ಗಡಿಯಿಂದ ಸುಮಾರು 3.6 ಕಿಲೋಮೀಟರ್ ದೂರದಲ್ಲಿ, 45 ವರ್ಷದ ಮಹಾದೇವ್ ತಾರಕ್ ಸಿಗರೇಟ್ ಮತ್ತು ಚಹಾ ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ಪ್ರಾರಂಭವಾದ ನಂತರ ಅವರ ದೈನಂದಿನ ಗಳಿಕೆ ಕಡಿಮೆಯಾಗಿದೆ. "ನಾನು ದಿನಕ್ಕೆ 500 ರಿಂದ 600 ರೂಪಾಯಿಗಳನ್ನು ಗಳಿಸುತ್ತಿದ್ದೆ, ಆದರೆ ಈ ದಿನಗಳಲ್ಲಿ ನಾನು ಅರ್ಧದಷ್ಟು ಗಳಿಸುತ್ತಿದ್ದೇನೆ." ಎಂದು ಅವರು ಹೇಳುತ್ತಾರೆ. ಅವರ ಪ್ರದೇಶದಲ್ಲಿ, ಸ್ಥಳೀಯರು ಕೆಲವು ಸಮಯದ ಹಿಂದೆ ಆಕ್ರೋಶಗೊಂಡ ರೈತರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಗಡಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಮಹಾದೇವ್ ಇನ್ನೂ ಕೂಡ ರೈತರನ್ನು ಬೆಂಬಲಿಸಲು ಇಷ್ಟಪಡುತ್ತಾರೆ.
"ಕೆಲವು ದಿನಗಳ ಹಿಂದೆ ಸ್ಥಳೀಯ ಜನರು ಎಂದು ಹೇಳಿಕೊಂಡು ಬಂದು ರೈತರೊಂದಿಗೆ ಘರ್ಷಣೆ ನಡೆಸಿದ 'ಜನರು ಈ ಪ್ರದೇಶಕ್ಕೆ ಸೇರಿದವರಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ,' ಎಂದು ಅವರು ಹೇಳುತ್ತಾರೆ. "ರೈತರು ಇಲ್ಲಿಯೇ ಇದ್ದರೆ ನಮಗೆ ಯಾವುದೇ ತೊಂದರೆಗಳಿಲ್ಲ. ಈ ಪ್ರದೇಶದಲ್ಲಿ ನೀವು ನೋಡುವ ಎಲ್ಲಾ ಅಂಗಡಿಯವರು ರೈತರನ್ನು ಬೆಂಬಲಿಸುತ್ತಾರೆ. ಅವರ ಚಳುವಳಿಯಿಂದ ಮಧ್ಯಮ ವರ್ಗದ ಜನರಿಗೆ ಸಹ ಅನುಕೂಲವಾಗುತ್ತದೆ. ಆದರೆ ಕೆಲವರು ಈ ಸರಳ ಸಂಗತಿಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ.” ಎಂದು ವಿವರಿಸುತ್ತಾರೆ.
ಮಹಾದೇವ್ ಅವರ ಹತ್ತಿರದಲ್ಲಿ ಮತ್ತೊಂದು ಸಣ್ಣ ಅಂಗಡಿಯನ್ನು ನಡೆಸುತ್ತಿದ್ದ ಮಹಿಳೆ, ಈ ವಿಚಾರವಾಗಿ ಪ್ರತಿಕ್ರಿಯಿಸಲು ಹಿಂಜರಿದರು. "ನಾನು ಮುಸ್ಲಿಂ, ನನ್ನ ಹೆಸರನ್ನು ನಿಮಗೆ ಹೇಳಲು ನಾನು ಬಯಸುವುದಿಲ್ಲ ಮತ್ತು ಇಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಲು ಬಯಸುವುದಿಲ್ಲ" ಎಂದು ಅವರು ಮುಖವನ್ನು ಮುಚ್ಚಿಕೊಂಡಂತೆ ಹೇಳುತ್ತಾರೆ. ನಂತರ ಅಲ್ಲಿನ ರೈತ ಗ್ರಾಹಕರಿಗೆ ಮಂದ ನಗೆ ಬೀರುತ್ತಾ ತಂಪು ಪಾನೀಯಗಳು, ಚಿಪ್ಸ್ ಮತ್ತು ಸಿಗರೇಟ್ ಮಾರಾಟ ಮಾಡುತ್ತಿದ್ದರು.
ಸಿಂಘು ಗಡಿ ಪ್ರಾರಂಭವಾಗುವ ಸ್ಥಳದಿಂದ ಎರಡು ಕಿಲೋಮೀಟರ್ ದೂರಳತೆಯಲ್ಲಿ 46 ವರ್ಷದ ರಾಮದಾರಿ ಶರ್ಮಾ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಾರೆ. ಈಗ ವ್ಯಾಪಾರವು ಈ ಹಿಂದಿನ 6-7 ಲಕ್ಷ ರೂ ಗೆ ಹೋಲಿಸಿದರೆ ದಿನಕ್ಕೆ 1 ಲಕ್ಷ ರೂ ಗೆ ಇಳಿದಿದೆ. ಗಡಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ಸೋನಿಪತ್ ಜಿಲ್ಲೆಯ ಜಟಿಕಲನ್ ಗ್ರಾಮದಿಂದ ರಾಮದಾರಿ ಪ್ರತಿದಿನ ಕೆಲಸ ಮಾಡಲು ಪ್ರಯಾಣಿಸುತ್ತಾರೆ. ಅವರ ಕುಟುಂಬವು ಹಳ್ಳಿಯಲ್ಲಿ 15 ಎಕರೆ ಭೂಮಿಯನ್ನು ಹೊಂದಿದ್ದು, ಅವರ ಸಹೋದರ ಗೋಧಿ, ಅಕ್ಕಿ ಮತ್ತು ಜೋವರ್ ಬೆಳೆಯುತ್ತಾರೆ.
"ಮಾರುಕಟ್ಟೆಯಲ್ಲಿರುವ ಪ್ರತಿಯೊಂದಕ್ಕೂ ತನ್ನದೇ ಆದ ಎಂಆರ್‌ಪಿ (ಗರಿಷ್ಠ ಚಿಲ್ಲರೆ ಬೆಲೆ) ಇದೆ" ಎಂದು ಅವರು ಹೇಳುತ್ತಾರೆ, "ಆದರೆ ನಮಗೆ ಯಾವುದು ಆ ರೀತಿ ಅನುಕೂಲ ಇಲ್ಲ. ನಾವು ಬೆಳೆಯುವ ಉತ್ಪನ್ನಗಳ ಬೆಲೆಗಳನ್ನು ನಿರ್ಧರಿಸುವುದು ನಮ್ಮ ಹಕ್ಕು. ನಾವು ಬೆಳೆಗಳನ್ನು ಬೆಳೆಯುತ್ತೇವೆ, ಹಾಗಾದರೆ ನಮ್ಮ ಉತ್ಪನ್ನಗಳನ್ನು ನಾವೇ ಮಾರಾಟ ಮಾಡುವ ಹಕ್ಕನ್ನು ಇನ್ನೊಬ್ಬರು ಯಾಕೆ ಕಸಿದುಕೊಳ್ಳಬೇಕು? ಒಂದು ಲೀಟರ್ ಕುಡಿಯುವ ನೀರಿನ ಬಾಟಲ್ 40 ರೂಪಾಯಿಗೆ ಮಾರಾಟವಾಗುತ್ತದೆ. ಒಂದು ಸಣ್ಣ ಜಮೀನು ಸಹ ಕೃಷಿ ಮಾಡಲು, ನಮಗೆ ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ಅದಕ್ಕೆ ಹಣ ಎಲ್ಲಿಂದ ಬರುತ್ತದೆ ? ಪ್ರವಾಹ ಸಂಭವಿಸುತ್ತದೆ, ಕೆಲವೊಮ್ಮೆ ಬರಗಾಲ ಬರುತ್ತದೆ. ಆಗ ಬೆಳೆಗಳು ನಾಶವಾಗುತ್ತವೆ. ಊಪರ್ ವಾಲಾ (ದೇವರು) ನಮ್ಮನ್ನು ರಕ್ಷಿಸುತ್ತಾನೆ ಎಂದು ನಾವು ಭಾವಿಸುತ್ತೇವೆ. ಮತ್ತು ಅವನು ನಮ್ಮನ್ನು ರಕ್ಷಿಸುತ್ತಾನೆ, ಆದರೆ ನಂತರ ಕೆಲವೊಬ್ಬರು ಮಧ್ಯದಲ್ಲಿ ಬಂದು ಎಲ್ಲವನ್ನೂ ಹಾಳುಗೆಡುವುತ್ತಾರೆ.
ತಮ್ಮ ಕುಟುಂಬದಲ್ಲಿನ ರೈತಾಪಿ ಜೀವನದ ಕಷ್ಟಗಳನ್ನು ನೋಡಿರುವ ರಾಮದಾರಿ, ಪ್ರತಿಭಟನಾ ನಿರತ ರೈತರಿಗೆ ಅವರ ಬೆಂಬಲ ಸದ್ಯಕ್ಕೆ ಮಾತ್ರವಲ್ಲ, ಆದರೆ ದೇಶದ ಉತ್ತಮ ಭವಿಷ್ಯಕ್ಕಾಗಿ ಎಂದು ಪ್ರತಿಪಾದಿಸುತ್ತಾರೆ. "ಭಗತ್ ಸಿಂಗ್ ಅವರನ್ನು ಭಾರತದಲ್ಲಿ ಗಲ್ಲಿಗೇರಿಸಲಾಯಿತು. ಆ ಕಾಲದ ತನ್ನ ದೇಶದ ಜನರ ಬಗ್ಗೆ ಅಷ್ಟೇ ಅಲ್ಲದೆ, ಸ್ವತಂತ್ರ ಭಾರತದ ಉತ್ತಮ ಭವಿಷ್ಯದ ಬಗ್ಗೆಯೂ ಚಿಂತಿಸಿದ್ದರು. ನನ್ನ ಜೀವನವು ಹೇಗಾದರೂ ನಡೆಯುತ್ತದೆ, ಆದರೆ ನಮ್ಮ ಭವಿಷ್ಯದ ಪೀಳಿಗೆಯ ಜೀವನವನ್ನು ಹೆಚ್ಚು ಸುರಕ್ಷಿತವಾಗಿಸಲು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾನು ಚಳುವಳಿಗಳನ್ನು ಬೆಂಬಲಿಸುತ್ತಿದ್ದೇನೆ," ಎಂದು ಅವರು ಹೇಳುತ್ತಾರೆ.
ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020 ; ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ,ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 . ಈ ಮೂರು ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳ ಮೂಲಕ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳ ರೂಪದಲ್ಲಿ ಪರಿಚಯಿಸಲಾಯಿತು, ಅದೇ ತಿಂಗಳ 20 ರಂದು ಅವುಗಳನ್ನು ಕಾಯ್ದೆ ರೂಪದಲ್ಲಿ ಪ್ರಸ್ತುತ ಸರ್ಕಾರವು ಜಾರಿಗೆ ತಂದಿತು.
ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ಪ್ರಾಬಲ್ಯವನ್ನುಸಾಧಿಸಲು ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕಲ್ಪಿಸುವುದರಿಂದಾಗಿ ರೈತರು ಈ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಪರಿಗಣಿಸಿದ್ದಾರೆ.ಇದರ ಜೊತೆಗೆ ಭಾರತೀಯ ಸಂವಿಧಾನದ 32 ನೇ ವಿಧಿಯನ್ನು ದುರ್ಬಲಗೊಳಿಸಿ , ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿಷ್ಕ್ರಿಯಗೊಳಿಸುವ ನಡೆ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗುತ್ತದೆ.
"ಯೆ ಕಿಸಾನ್ ಹೈ [ಇವರು ರೈತರು]" ಎಂದು 52 ವರ್ಷದ ರೀಟಾ ಅರೋರಾ ಹೇಳುತ್ತಾರೆ, ರೈತರ ಪ್ರತಿಭಟನೆಗೆ ಸಂಬಂಧಿಸಿದ ಬ್ಯಾಡ್ಜ್ ಗಳು, ಧ್ವಜಗಳು ಮತ್ತು ಸ್ಟಿಕ್ಕರ್‌ಗಳನ್ನು ಅವರು ಸಿಂಘು ಗಡಿಯಿಂದ 1.5 ಕಿಲೋಮೀಟರ್ ದೂರದಲ್ಲಿರುವ ಬೀದಿಯಲ್ಲಿ ಮಾರುತ್ತಾರೆ. “ಈ ಜನರು ಇಷ್ಟು ದಿನ ಈ ಭೀಕರ ಚಳಿಯಲ್ಲಿ ಕುಳಿತಿದ್ದಾರೆ. ಚುನಾವಣೆಗೂ ಮುನ್ನ ಮತ ಕೇಳುವ ಸಂದರ್ಭದಲ್ಲಿ ಸರ್ಕಾರದವರು ಒಳ್ಳೆಯ ಭರವಸೆ ನೀಡುತ್ತಾರೆ. ಆದರೆ ಅದೇ ಅವರು ಅಧಿಕಾರಕ್ಕೆ ಬಂದಾಗ? ಸರ್ಕಾರವು ಅಂಗೀಕರಿಸಿದ ಈ ಮೂರು ಕಾನೂನುಗಳು ಈ ಜನರಿಗೆ ಒಡ್ಡುವ ಅಪಾಯಗಳನ್ನು ನೋಡಿರಿ. ನಾವು ನಮ್ಮ ಆಹಾರವನ್ನು ರೈತರಿಂದ ಪಡೆಯುತ್ತೇವೆ. ಆದ್ದರಿಂದ ಅವರನ್ನು ನಿರ್ಲಕ್ಷಿಸುವುದು ಅಸಾಧ್ಯ" ಎಂದು ಹೇಳುತ್ತಾರೆ.
ರೀಟಾ ನವದೆಹಲಿಯ ಇಂಡಿಯಾ ಗೇಟ್ ಬಳಿ ಒಂದು ಸಣ್ಣ ಅಂಗಡಿಯನ್ನು ಹೊಂದಿದ್ದಾರೆ, ಅಲ್ಲಿ ಅವರು ತಂಪು ಪಾನೀಯಗಳು, ಚಿಪ್ಸ್, ಸಿಗರೇಟ್ ಮತ್ತು ಇನ್ನೂ ಹೆಚ್ಚಿನ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರ ವ್ಯಾಪಾರವು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ, ಮತ್ತು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಿದ ನಂತರ, ಅವರು ಸಿಂಘುಗೆ ಬಂದು ಆದಾಯವನ್ನು ಗಳಿಸಲು ಪ್ರಯತ್ನಿಸಿದರು . "ನಾನು ಚಳುವಳಿಯ ಆರಂಭದಲ್ಲಿ ಬೂಟುಗಳನ್ನು ಮಾರುತ್ತಿದ್ದೆ" ಎಂದು ಅವರು ಹೇಳುತ್ತಾರೆ, "ಮತ್ತು ಕಾನೂನುಗಳ ಬಗ್ಗೆ ಅಥವಾ ರೈತರು ಏಕೆ ಪ್ರತಿಭಟಿಸುತ್ತಿದ್ದಾರೆಂದು ತಿಳಿದಿರಲಿಲ್ಲ. ಆದರೆ ನಂತರ ನಾನು ಜನರೊಂದಿಗೆ ಮಾತನಾಡಿದ್ದೇನೆ ಮತ್ತು ಕಾನೂನುಗಳನ್ನು ಅರ್ಥಮಾಡಿಕೊಂಡಿದ್ದೇನೆ. ಆಗ ಸರ್ಕಾರ ಮಾಡುತ್ತಿರುವುದು ತಪ್ಪು ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ" ಎನ್ನುತ್ತಾರೆ.
ಅವರು ಈಗ ಇಲ್ಲಿ ಹೆಚ್ಚು ಸಂಪಾದಿಸುವುದಿಲ್ಲ, ಆದರೆ ಇಲ್ಲಿರುವುದಕ್ಕೆ ಸಂತೋಷವಾಗುತ್ತದೆ ಎನ್ನುತ್ತಾರೆ. "ನನ್ನ ಆದಾಯ ದಿನಕ್ಕೆ ಕೇವಲ 200-250 ರೂಪಾಯಿಗಳು. ಆದರೆ ನಾನು ಅದಕ್ಕಾಗಿ ದುಃಖಿಸುತ್ತಿಲ್ಲ. ನಾನು ಈ ಪ್ರತಿಭಟನೆಯ ಭಾಗವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸುವಂತೆ ನಾನು ಸರ್ಕಾರವನ್ನು ಕೋರುತ್ತೇನೆ." ಎಂದು ಅವರು ಆಗ್ರಹಿಸುತ್ತಾರೆ.
ದೀಪಕ್ ಸಿಂಘುವಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಬೀದಿಗಳಲ್ಲಿ ಸಾಕ್ಸ್ ಮಾರಾಟ ಮಾಡುತ್ತಿದ್ದಾರೆ. ಗಡಿಯಲ್ಲಿ ತನ್ನ ತಾತ್ಕಾಲಿಕ ಅಂಗಡಿಯನ್ನು ಸ್ಥಾಪಿಸಲು ಅವರು ಪ್ರತಿದಿನ ಆಟೋರಿಕ್ಷಾ ಮೂಲಕ ಪ್ರಯಾಣಿಸಬೇಕಾಗುತ್ತದೆ. ಕುಂಡ್ಲಿ ಮುನ್ಸಿಪಲ್ ಕೌನ್ಸಿಲ್ ಪ್ರದೇಶದಲ್ಲಿ ಅವರು ಹೊಂದಿರುವ ಸಣ್ಣ ಕೃಷಿ ಭೂಮಿಯಲ್ಲಿ ಎಲೆಕೋಸು ಬೆಳೆಯುತ್ತಾರೆ. “ಇಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿ ಎರಡು ತಿಂಗಳಿಗೂ ಅಧಿಕವಾಗಿದೆ. ನನ್ನ ಆದಾಯ ತೀವ್ರವಾಗಿ ಕುಸಿದಿದೆ. ಪ್ರತಿಭಟನೆಗೆ ಒಂದು ದಿನ ಮೊದಲು ನಾನು 500-600 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ, ಆದರೆ ಈಗ ನಾನು ದಿನಕ್ಕೆ 200-250 ರೂಪಾಯಿಗಳನ್ನು ಗಳಿಸುತ್ತೇನೆ. ಆದರೆ, ದಯವಿಟ್ಟು ನಾನು ರೈತರನ್ನು ಬೆಂಬಲಿಸುವುದಿಲ್ಲ ಎಂದು ಭಾವಿಸಬೇಡಿ. ಅವರ ಸಮಸ್ಯೆಗಳು ನನ್ನ ಸಮಸ್ಯೆಗಳಿಗಿಂತ ದೊಡ್ಡದಾಗಿವೆ ” ಎಂದು 35 ವರ್ಷದ ದೀಪಕ್ ಹೇಳುತ್ತಾರೆ.
ಸಿಂಘು ಗಡಿಯಿಂದ ಸರಿ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಖುಷ್ಮಿಲಾ ದೇವಿ (40) ಮತ್ತು ಅವರ ಪತಿ ರಾಜೇಂದರ್ ಪ್ರಜಾಪತಿ (45) ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರು ನವದೆಹಲಿಯ ನರೇಲಾದಿಂದ ಪ್ರತಿದಿನ ಆರು ಕಿಲೋಮೀಟರ್ ಪ್ರಯಾಣಿಸುತ್ತಾರೆ ಮತ್ತು ನಿರಂತರ ಪ್ರತಿಭಟನೆಯೊಂದಿಗೆ ಅವರ ಆದಾಯವು ತೀವ್ರವಾಗಿ ಕುಸಿದಿದೆ. "ನಾವು ತಿಂಗಳಿಗೆ ಸುಮಾರು 10,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆವು, ಆದರೆ ಈಗ ಆದಾಯ ಕೇವಲ 4,000-6,000 ರೂಪಾಯಿಗಳಿಗೆ ಇಳಿದಿದೆ. ಇದಲ್ಲದೆ, ದೆಹಲಿಯಿಂದ ಸಿಂಘುಗೆ ಹೋಗುವ ಮಾರ್ಗಕ್ಕೆ ಜನವರಿ 26 ರಿಂದ ಬ್ಯಾರಿಕೇಡ್ ಹಾಕಲಾಗಿದೆ, ಇದು ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಆದಾಗ್ಯೂ ಇನ್ನೂ, ನಾವು ರೈತರನ್ನು ಬೆಂಬಲಿಸುತ್ತೇವೆ "ಎಂದು ದಂಪತಿಗಳು ಹೇಳುತ್ತಾರೆ.
“ಸರ್ಕಾರದವರು ಮೊದಲು, ನೋಟು ಅಮಾನ್ಯೀಕರಣಕರಣವನ್ನು ತಂದರು. ನಂತರ ಜಿಎಸ್ಟಿಯನ್ನು ವಿಧಿಸಿದರು, ಮತ್ತು ನಾವು ಹಲವಾರು ತಿಂಗಳುಗಳ ಕಾಲ ನಿರಂತರ ಸಂಕಷ್ಟದಲ್ಲಿದ್ದಾಗಲೇ ಸಾಂಕ್ರಾಮಿಕ ರೋಗ ಕೊರೊನಾ ಮತ್ತು ಲಾಕ್ಡೌನ್ ಬಂದಿತು. ಅಲ್ಲದೆ, ಎಲ್ಲಾ ಸರಕುಗಳ ಬೆಲೆಗಳು ಏರುತ್ತಿವೆ. ರೈತರು ನಮಗೆ ಆಹಾರವನ್ನು ಒದಗಿಸುತ್ತಾರೆ. ಅವರು ನಮ್ಮ ಅಸ್ತಿತ್ವದ ಆಧಾರ. ನಾವು ಅವರ ಪರವಾಗಿ ನಿಲ್ಲದಿದ್ದರೆ, ಮತ್ತಿನ್ಯಾರು ನಿಲ್ಲುತ್ತಾರೆ?" ಎಂದು ಖುಷ್ಮಿಲಾ ಪ್ರಶ್ನಿಸುತ್ತಾರೆ.
ಅನುವಾದ: ಎನ್.ಮಂಜುನಾಥ್