ಐದು ದಿನಗಳು, 200 ಕಿಲೋಮೀಟರ್ ಮತ್ತು 27,000 ರೂ.ವ್ಯಯಿಸಿರುವುದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್‌ಗಾಗಿ ಹುಡುಕುತ್ತಿರುವ ರವಿ ಬೋಬ್ಡೆ ಅವರ ಹತಾಶೆಯ ಸಂಪೂರ್ಣ ಚಿತ್ರಣವನ್ನು ತಿಳಿಸುತ್ತದೆ.
ಈ ವರ್ಷದ ಏಪ್ರಿಲ್ ಕೊನೆಯ ವಾರದಲ್ಲಿ ಅವರ ಪೋಷಕರಿಗೆ ಕೋವಿಡ್ -19ನ ಲಕ್ಷಣಗಳು ಕಂಡು ಬಂದನಂತರ ಇದು ಪ್ರಾರಂಭವಾಯಿತು. "ಅವರು ತೀವ್ರವಾಗಿ ಕೆಮ್ಮಲು ಪ್ರಾರಂಭಿಸಿದರು ಮತ್ತು ಅವರಿಗೆ ಉಸಿರಾಟ ಮತ್ತು ಎದೆನೋವುಗಳ ಸಮಸ್ಯೆ ಇತ್ತು. ಇದರಿಂದಾಗಿ ನಾನು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು." ಎಂದು 25 ವರ್ಷದ ರವಿ, ಬೀಡ್‌ನ ಹರ್ಕಿ ನಿಮ್‌ಗಾಂವ್ ಗ್ರಾಮದಲ್ಲಿ ತಮ್ಮ ಏಳು ಎಕರೆ ಜಮೀನಿನಲ್ಲಿ ನಡೆದುಕೊಂಡು ಹೋಗುವಾಗ ನೆನಪಿಸಿಕೊಳ್ಳುತ್ತಿದ್ದರು.
ವೈದ್ಯರು ತಕ್ಷಣವೇ ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡಿದರು-ಕೋವಿಡ್ -19ಗೆ ಚಿಕಿತ್ಸೆ ನೀಡಲು ಬಳಸಲಾಗುವ ಆಂಟಿವೈರಲ್ ಔಷಧ-ಇದು ಬೀಡಿನಲ್ಲಿ ಅಷ್ಟಾಗಿ ಪೂರೈಕೆಯಲ್ಲಿರಲಿಲ್ಲ." ಇದಕ್ಕಾಗಿ ನಾನು ಐದು ದಿನಗಳ ಕಾಲ ಅಲೆದಾಡಿದೆ, ಆದರೆ ಆಗಲೇ ಸಮಯ ಮೀರಿತ್ತು, ಆಗ ಏನು ಮಾಡಬೇಕು ಎನ್ನುವುದು ನನಗೆ ತೋಚಿರಲಿಲ್ಲ. ಹಾಗಾಗಿ ನಾನು ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದುಕೊಂಡು ನನ್ನ ತಂದೆ ತಾಯಿ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ವರ್ಗಾಯಿಸಿದೆ." ಎಂದು ರವಿ ಹೇಳುತ್ತಿದ್ದರು. ಅವರು ತಮ್ಮ ಪ್ರಯಾಣದುದ್ದಕ್ಕೂ ಆತಂಕದಲ್ಲಿದ್ದರು. "ಆಂಬುಲೆನ್ಸ್‌ನಲ್ಲಿ ಕಳೆದ ಆ ನಾಲ್ಕು ಗಂಟೆಗಳನ್ನು ನಾನು ಎಂದಿಗೂ ಮರೆಯುವುದಿಲ್ಲ." ಎಂದು ಅವರು ಹೇಳುತ್ತಾರೆ.
ಆಂಬ್ಯುಲೆನ್ಸ್ ಚಾಲಕ ಮಜಲಗಾಂವ್ ತಾಲೂಕಿನಲ್ಲಿರುವ ಅವರ ಗ್ರಾಮದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಸೋಲಾಪುರ ನಗರಕ್ಕೆ ತಮ್ಮ ತಂದೆ ತಾಯಿಗಳಾಗಿರುವ 55 ವರ್ಷ ವಯಸ್ಸಿನ ಅರ್ಜುನ್, ಮತ್ತು 48 ವರ್ಷದ ಗೀತಾ, ಅವರನ್ನು ಕರೆದುಕೊಂಡು ಹೋಗಲು 27,000 ರೂ. ಚಾರ್ಜ್ ಮಾಡಿದ. "ನನಗೆ ದೂರದ ಸಂಬಂಧಿಯೊಬ್ಬರು ಸೊಲ್ಲಾಪುರದಲ್ಲಿ ವೈದ್ಯರಾಗಿದ್ದಾರೆ" ಎಂದು ರವಿ ವಿವರಿಸಿದರು. "ಅವರು ಇಂಜೆಕ್ಷನ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಬೀಡಿನಾದ್ಯಂತ ಜನರು ಔಷಧವನ್ನು ಪಡೆಯಲು ಹೆಣಗಾಡುತ್ತಿದ್ದರು”
ಮೂಲತಃ ಎಬೋಲಾ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ರೆಮ್‌ಡೆಸಿವಿರ್, ಸಾಂಕ್ರಾಮಿಕ ರೋಗದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಿಗೆ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆದಾಗ್ಯೂ, ನವೆಂಬರ್ 2020ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ರೆಮ್‌ಡೆಸಿವಿರ್ ಬಳಕೆಯ ವಿರುದ್ಧ ಷರತ್ತಿನ ಶಿಫಾರಸ್ಸನ್ನು ನೀಡಿತು. ರೋಗದ ತೀವ್ರತೆಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಲ್ಲಿ ಔಷಧವು ಬದುಕುಳಿಯುವಿಕೆ ಮತ್ತು ಇತರ ಫಲಿತಾಂಶಗಳನ್ನು ಸುಧಾರಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೆ ಆಂಟಿವೈರಲ್ ಔಷಧವನ್ನು ಇನ್ನು ಮುಂದೆ ಚಿಕಿತ್ಸಾ ಮಾರ್ಗಸೂಚಿಗಳಲ್ಲಿ ಸೇರಿಸದಿದ್ದರೂ, ಅದನ್ನು ನಿಷೇಧಿಸಲಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಮಹಾರಾಷ್ಟ್ರ ವಿಭಾಗದ ಮಾಜಿ ಅಧ್ಯಕ್ಷ ಡಾ. ಅವಿನಾಶ್ ಭೋಂಡ್ವೆ ಹೇಳುತ್ತಾರೆ. "ಹಿಂದಿನ ಕರೋನವೈರಸ್ ಸೋಂಕನ್ನು ನಿಭಾಯಿಸಲು ರೆಮ್‌ಡೆಸಿವಿರ್ ಅನ್ನು ಬಳಸಲಾಯಿತು, [SARS-CoV-1] ಮತ್ತು ಇದು ಪರಿಣಾಮಕಾರಿ ಎಂದು ಕಂಡುಬಂದಿತು, ಅದಕ್ಕಾಗಿಯೇ ಮೊದಲು ನಾವು ಹೊಸ ಕರೋನವೈರಸ್ ಕಾಯಿಲೆ [SARS-CoV-2 ಅಥವಾ Covid-19] ಭಾರತದ ಹೊರಗೆ ಕಾಣಿಸಿಕೊಂಡಾಗಿನಿಂದ ಅದನ್ನು ಬಳಸಲು ಪ್ರಾರಂಭಿಸಿದ್ದೇವೆ.” ಎಂದು ಅವರು ತಿಳಿಸಿದರು.









