ರಸ್ತೆಬದಿಯ ಧಾಬಾದಲ್ಲಿ ಕುಳಿತಿದ್ದ ರೈತರ ಗುಂಪು ಕೊಳಲಿನ ಶಬ್ದ ಕೇಳಿ ಬಂದಿದ್ದರಿಂದ ಸದ್ದು ಬಂದತ್ತ ಗಮನಹರಿಸಿತು. ಅಂದು ಡಿಸೆಂಬರ್ 22ರ ಬೆಳಿಗ್ಗೆ ನಾಸಿಕ್ ನಗರದಿಂದ ಸುಮಾರು 65 ಕಿ.ಮೀ ದೂರದ ಚಂದ್ವಾರ್ ಪಟ್ಟಣದಲ್ಲಿ ತುಂಬಾ ಚಳಿಯಿತ್ತು - ರೈತರು ಚಹಾಕ್ಕಾಗಿ ಕಾಯುತ್ತಿದ್ದರು. ಕೆಲವರು ಅರ್ಧ ನಿದ್ರೆಯಲ್ಲಿದ್ದರು ಮತ್ತು ಕೆಲವರು ಉಪಾಹಾರಕ್ಕಾಗಿ ಮಿಸಳ್ ಪಾವ್ ತಿನ್ನುತ್ತಿದ್ದರು. ಆದರೆ ಕೊಲ್ಹಾಪುರ ಜಿಲ್ಲೆಯ ಜಂಬಭಾಲಿ ಗ್ರಾಮದ 73 ವರ್ಷದ ನಾರಾಯಣ್ ಗಾಯಕ್‌ವಾಡ್ ತನ್ನ ಕೊಳಲು ನುಡಿಸುತ್ತಿದ್ದರು. ಅವರು ತಮ್ಮ ಮನೆಯಿಂದ 500 ಕಿಲೋಮೀಟರ್ ದೂರದಲ್ಲಿದ್ದರೂ ತನ್ನ ದಿನ ನಿತ್ಯದ ಬೆಳಗಿನ ಆಚರಣೆಯನ್ನು ಆಚರಿಸುತ್ತಿದ್ದರು. "ದೆಹಲಿಯ ಪ್ರತಿಭಟನೆಯು ಪಂಜಾಬ್ ಮತ್ತು ಹರಿಯಾಣದ ರೈತರಿಗಷ್ಟೇ ಸೀಮಿತವಾದುದೆಂದು ಜನರು ಹೇಳುತ್ತಾರೆ ಇದು ರಾಷ್ಟ್ರೀಯ ಸಮಸ್ಯೆಯೆಂದು ನಾವು ತೋರಿಸಲು ಬಯಸುತ್ತೇವೆ." ಎಂದು ಅವರು ಹೇಳಿದರು.
ದೆಹಲಿಯ ರೈತ ಚಳವಳಿಯ ಭಾಗವಾಗಲು ಡಿಸೆಂಬರ್ 21ರಂದು ನಾಸಿಕ್‌ನಿಂದ ದೆಹಲಿಗೆ ಹೊರಟಿದ್ದ ವಾಹನ ಜಾಥಾದಲ್ಲಿ ಪಾಲ್ಗೊಂಡಿದ್ದ 2,000 ರೈತರು, ಕೃಷಿ ಕಾರ್ಮಿಕರು ಮತ್ತು ಕಾರ್ಯಕರ್ತರ ಗುಂಪಿನ ಭಾಗವಾಗಿ ಗಾಯಕ್‌ವಾಡ್ ಅವರು ಸಹ ಹೋಗಿದ್ದರು. ಆದರೆ ಆದರೆ ಗಾಯಕ್‌ವಾಡ್ ಅವರ ಪಾಳಿನ ಪ್ರಯಾಣವು ಅದಕ್ಕೂ ಒಂದು ದಿನ ಮೊದಲೇ ಪ್ರಾರಂಭವಾಯಿತು. ನಾವು ಏಳು ಮಂದಿ ಟೆಂಪೋ ಹತ್ತಿಕೊಂಡು 20ರ ರಾತ್ರಿ ನಾಸಿಕ್‌ಗೆ ಬಂದು ತಲುಪಿದೆವು. ನಾಸಿಕ್ ತಲುಪಲು ನಮಗೆ ಸುಮಾರು 13 ಗಂಟೆಗಳ ಸಮಯ ಹಿಡಿಯಿತು," ಎಂದು ಅವರು ಹೇಳಿದರು. "ವಯಸ್ಸಾದಂತೆ ರಸ್ತೆಯ ಪ್ರಯಾಣವು ಕಠಿಣವೆನ್ನಿಸುತ್ತದೆ. ಆದರೆ ನಾನು ಭಗತ್ ಸಿಂಗ್ ಅವರ ಕಲ್ಪನೆಯ ಭಾರತದಲ್ಲಿ ನಂಬಿಕೆಯಿರಿಸಿರುವವನಾಗಿರುವುದರಿಂದ ಈ ಜಾಥಾದಲ್ಲಿ ಭಾಗವಹಿಸಲು ತೀರ್ಮಾನಿಸಿದೆ. ಕ್ರಾಂತಿಯಿಲ್ಲದೆ ರೈತರ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ.”
ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಲಕ್ಷಾಂತರ ರೈತರು ಅಶ್ರುವಾಯು ಶೆಲ್‌ಗಳು, ಲಾಠಿ ಚಾರ್ಜ್‌ಗಳಂತಹ ಪೊಲೀಸ್ ದೌರ್ಜನ್ಯವನ್ನು ಮತ್ತು ದೆಹಲಿಯಲ್ಲಿ ಸುರಿಯುವ ಮಂಜು ಮತ್ತು ಮಳೆಯನ್ನು ಎದುರಿಸುತ್ತಿದ್ದಾರೆ. ಈ ರೈತರು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.







