"ಜನವರಿ 24ರಂದು ಬೆಳಿಗ್ಗೆ ಮೂರು ಟ್ರಾಕ್ಟರುಗಳು, ಆರು ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು 2ರಿಂದ 3 ಕಾರುಗಳು ನಮ್ಮ ಗ್ರಾಮದಿಂದ ದೆಹಲಿಗೆ ಹೊರಡಲಿವೆ" ಎಂದು ಹರಿಯಾಣದ ಕಂದ್ರೌಲಿ ಗ್ರಾಮದ ಚಿಕು ಧಂಡಾ ತಿಳಿಸಿದರು. “ನಾವು ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದೇವೆ. ನಾನು ನನ್ನ ಟ್ರ್ಯಾಕ್ಟರನ್ನು ದೆಹಲಿಗೆ ಓಡಿಸಿಕೊಂಡು ಹೋಗುತ್ತೇನೆ” ಎಂದು 28 ವರ್ಷದ ರೈತ ಹೇಳಿದರು.
ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘುವಿಗೆ ಇದು ಚೀಕು ಅವರ ಆರನೇ ಭೇಟಿಯಾಗಿದೆ - ಅಲ್ಲಿ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ಯಮುನಾನಗರ ಜಿಲ್ಲೆಯ ಕಂದ್ರೌಲಿಯಿಂದ 150 ಕಿಲೋಮೀಟರ್ ಪ್ರಯಾಣಿಸುತ್ತಾರೆ, ಪ್ರತಿ ಬಾರಿಯೂ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಪ್ರತಿ ಬಾರಿಯೂ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಲು ಅವರು ಕನಿಷ್ಠ ಮೂರು ರಾತ್ರಿಗಳನ್ನು ಸಿಂಘುವಿನಲ್ಲಿ ಕಳೆದಿದ್ದಾರೆ.
ಪ್ರತಿ ಪ್ರಯಾಣದಲ್ಲೂ ಅವರಿಗೆ ಜೊತೆಯಾಗಿ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಕಲಿಯುತ್ತಿರುವ ಅವರ 22 ವರ್ಷದ ಸೋದರಸಂಬಂಧಿ ಮೋನಿಂದರ್ ಧಂಡಾ ಇದ್ದರು. ಅವರ ಕುಟುಂಬ ಸದಸ್ಯರಾದ ಅವರು ಹರಿಯಾಣದ ಬಹುಪಾಲು ಕೃಷಿಕರಾಗಿರುವ ಜಾಟ್ ಸಮುದಾಯಕ್ಕೆ ಸೇರಿದವರು. ಅವರ ಕೂಡು ಕುಟುಂಬ 16 ಎಕರೆ ಭೂಮಿಯನ್ನು ಹೊಂದಿದ್ದು ಅದರಲ್ಲಿ ತರಕಾರಿಗಳು, ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ.
"ಸ್ಥಳೀಯ ಎಪಿಎಂಸಿ ಮಂಡಿಗಳಲ್ಲಿ ನಮ್ಮ ಬೆಳೆಗಳನ್ನು ಮಾರಾಟ ಮಾಡುವ ಮೂಲಕ ನಾವು ಪ್ರತಿವರ್ಷ ಎಕರೆಗೆ 40,000 ರಿಂದ 50,000 ರೂಪಾಯಿಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಉತ್ಪಾದನಾ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಎಂಎಸ್‌ಪಿ [ಕನಿಷ್ಠ ಬೆಂಬಲ ಬೆಲೆ] ಏರಿಕೆಯಾಗುತ್ತಿಲ್ಲ" ಎಂದು ಮೋನಿಂದರ್ ಹೇಳಿದರು. ಈ ಗಳಿಕೆ ಅವರ ಎಂಟು ಜನರ ಕುಟುಂಬವನ್ನು ಪೋಷಿಸುತ್ತದೆ.
ಈ ಸೋದರಸಂಬಂಧಿ ಕುಟುಂಬಗಳಂತೆಯೇ, ಕಂದ್ರೌಲಿ ಗ್ರಾಮದ 1,314 ನಿವಾಸಿಗಳು ಬಹುತೇಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನವರಿ ಮಧ್ಯದಲ್ಲಿ, ಅವರಲ್ಲಿ ಕೆಲವರು ಕೃಷಿ ಪ್ರತಿಭಟನೆಗೆ ಸಂಬಂಧಿಸಿದ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಘಟಿಸಲು ಸಮಿತಿಯನ್ನು ಅನೌಪಚಾರಿಕವಾಗಿ ಸಂಘಟಿಸಿದರು. ಇದು ಭಾರತೀಯ ಕಿಸಾನ್ ಒಕ್ಕೂಟದ ವಲಯ ಉಪಸಮಿತಿಗಳ (ಹಳ್ಳಿಯ ಅನೇಕ ರೈತರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ) ವ್ಯಾಪಕ ವ್ಯಾಪ್ತಿಯಂತಲ್ಲದೆ ಸ್ಥಳೀಯ ಮಟ್ಟದ ನಿರ್ಧಾರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. "ಪ್ರತಿಭಟಿಸಲು ಹೋದವರ ಹೊಲಗಳನ್ನು ನೋಡಿಕೊಳ್ಳುವುದು ಯಾರ ಸರದಿ ಎಂದು ಗ್ರಾಮ ಸಮಿತಿ ನಿರ್ಧರಿಸುತ್ತದೆ" ಎಂದು ಚೀಕು ಹೇಳಿದರು. "ಅವರು ಸಿಂಘುವಿನಲ್ಲಿ ಜನರಿಗೆ ಆಹಾರ ಪೂರೈಕೆಯನ್ನು ಸಹ ನಿರ್ವಹಿಸುತ್ತಾರೆ."





