ಬಮ್ದಾಭಾಯಿಸಾ ಮೊಹಲ್ಲಾಕ್ಕೆ ಮೊಹಲ್ಲಾವೇ ನಹಕುಲ್ ಪಾಂಡೋಗೆ ಹೆಂಚು ತಯಾರಿಸಲು ಸಹಾಯ ಮಾಡಲೆಂದು ನೆರೆದಿತ್ತು. ಇದೊಂದು ಊರಿನ ಒಗ್ಗಟ್ಟಿನ ಪ್ರದರ್ಶನವಾಗಿತ್ತು, ಹೆಂಚು ತಯಾರಿಕೆಯಲ್ಲಿ ಕೂಡಿಕೊಂಡ ಜನರು ಸಮುದಾಯ ಸಹಾಯದ ಭಾಗವಾಗಿ ಉಚಿತವಾಗಿ ಇದನ್ನು ಮಾಡುತ್ತಿದ್ದರು. ನಹಕುಲ್ ತನಗೆ ಸಹಾಯ ಮಾಡಲು ಬಂದ ಜನರಿಗೆ ತನ್ನ ಮನೆಯಲ್ಲೇ ತಯಾರಿಸಿದ ವೈನ್ ನೀಡಿದ್ದನ್ನು ಹೊರತುಪಡಿಸಿದರೆ.
ಆದರೆ ಅವರೆಲ್ಲ ಸೇರಿ ಯಾಕೆ ಹೆಂಚು ತಯಾರಿಸುತ್ತಿದ್ದಾರೆ? ಎಲ್ಲಕ್ಕಿಂತಲೂ ಮುಖ್ಯವಾಗಿ ನಹಕುಲ್ ಮನೆಯ ಹೆಂಚುಗಳು ಎಲ್ಲಿ ಹೋದವು? ಅವರ ಮನೆಯತ್ತ ನೋಡಿದರೆ ಅದು ತನ್ನ ಹೆಂಚುಗಳನ್ನು ಕಳೆದುಕೊಂಡು ಬೋಳಾಗಿ ನಿಂತಿತ್ತು.
“ಇದು ಸರ್ಕಾರಿ ಲೋನಿನ ಕಥೆ” ಎಂದು ಬೇಸರದಿಂದ ಹೇಳಿದರು. “ನಾನು 4,800 ರೂಪಾಯಿಗಳನ್ನು ಸಾಲವಾಗಿ ಪಡೆದು ಎರಡು ಹಸುಗಳನ್ನು ಕೊಂಡಿದ್ದೆ.” ಇದು ಸಾಲದ ಅಧಿಕೃತ ತಿರುಳು - ʼಸಾಫ್ಟ್ʼ ಲೋನ್ ಎಂದು ಕರೆಯಲಾಗುವ ಇದರಲ್ಲಿ ಒಂದಿಷ್ಟು ಸಬ್ಸಿಡಿ ಸೌಲಭ್ಯವಿರುತ್ತದೆ ಹಾಗೂ ಬಡ್ಡಿಯೂ ಕಡಿಮೆ. ಆಗಿನ ಕಾಲದಲ್ಲಿ ಆ ಹಣಕ್ಕೆ 1994ರಲ್ಲಿ ಸುರ್ಗುಜಾದ ಈ ಭಾಗದಲ್ಲಿ ನಿಜವಾಗಿಯೂ ಎರಡು ಹಸುಗಳನ್ನು ಖರೀದಿಸಬಹುದಿತ್ತು.
ನಹಕುಲ್ ಅವರಿಗೆ ಮೂಲತಃ ಸಾಲ ತೆಗೆದುಕೊಳ್ಳುವ ಯೋಚನೆಯಲ್ಲೇ ಇದ್ದಿರಲಿಲ್ಲ. ಅವರ ಪಾಂಡೋ ಆದಿವಾಸಿ ಸಮುದಾಯದ ಹಲವರು ಸಾಲ ಮಾಡಿ ತಮ್ಮ ತಮ್ಮ ನೆಲವನ್ನೇ ಕಳೆದುಕೊಂಡಿದ್ದರು. ಹೀಗಾಗಿ ಅಲ್ಲಿನ ಹಲವರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದರು. ಆದರೆ ಇದು ಸರ್ಕಾರಿ ಸಾಲವಾಗಿದ್ದು, ವಿಶೇಷವಾಗಿ ಆದಿವಾಸಿಗಳ ವಿಶೇಷ ಪ್ರಯೋಜನಕ್ಕಾಗಿ ಸ್ಥಳೀಯ ಬ್ಯಾಂಕ್ ಮೂಲಕ ವಿತರಿಸಲಾಗುತ್ತದೆ. ಇದರರ್ಥ ಅದನ್ನು ಪಡೆಯುವುದರಿಂದ ಹೆಚ್ಚಿನ ಹಾನಿಯಾಗುವುದಿಲ್ಲವೆಂದು ಅವರು ಭಾವಿಸಿದರು. ಅದೊಂದು ಮಾತಿದೆ - ಆ ಕ್ಷಣಕ್ಕೆ ಅದು ಒಳ್ಳೆಯದಾಗಿಯೇ ತೋರುತ್ತದೆ.
ಆದರೆ ಆ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ ಎಂದು ನಹಕುಲ್ ಹೇಳಿದರು. ಪಾಂಡೋಗಳು ಅತ್ಯಂತ ಬಡವರು ಮತ್ತು ಅವರನ್ನು 'ವಿಶೇಷ ದುರ್ಬಲ ಬುಡಕಟ್ಟು ಗುಂಪು' ಎಂದು ವರ್ಗೀಕರಿಸಲಾಗಿದೆ. ಈ ಸಮುದಾಯದ ಸಾಮಾನ್ಯ ಸ್ಥಿತಿಗೆ ನಹಕುಲ್ ಅವರ ಬದುಕೂ ಹೊರತಾಗಿಲ್ಲ.



