ಅವರು ತಾನು ಗೆದ್ದಿರುವ ಬಹುಮಾನ ತೆಗೆದುಕೊಳ್ಳಲೆಂದು ವೇದಿಕೆಯೇರಿದ್ದರು. ಬಹುಮಾನ ಒಂದು ಪೈಸೆಯ ಹೊಳೆಯುವ ನಾಣ್ಯವಾಗಿತ್ತು. ಬಹುಮಾನ ಕೊಡುತ್ತಿದ್ದವರು ಮುನ್ಶಿ - ತನ್ನ ನಿಯಂತ್ರಣದಲ್ಲಿ ಹಲವು ಶಾಲೆಗಳನ್ನು ಹೊಂದಿರುವ ಹಿರಿಯ ಅಧಿಕಾರಿ. ಅದು 1939ನೇ ಇಸವಿ, ಪಂಜಾಬಿನಲ್ಲಿ 3ನೇ ತರಗತಿ ಓದುತ್ತಿದ್ದ ಅವರಿಗೆ ಆಗ ಕೇವಲ 11 ವರ್ಷ ವಯಸ್ಸಾಗಿತ್ತು. ಮುನ್ಷಿ ಆ ಹುಡುಗನ ತಲೆಯನ್ನು ನೇವರಿಸಿ ‘ಬ್ರಿಟಾನಿಯಾ ಜಿಂದಾಬಾದ್, ಹಿಟ್ಲರ್ ಮುರ್ದಾಬಾದ್’ ಎಂದು ಕೂಗಲು ಹೇಳಿದ. ಪುಟ್ಟ ಭಗತ್ ಸಿಂಗ್ (ಇವರ ಹೆಸರನ್ನು ಓದಿ ಇವರು ಹುತಾತ್ಮ ಭಗತ್ ಸಿಂಗ್ ಎಂದು ಗೊಂದಲ ಮಾಡಿಕೊಳ್ಳದಿರಿ.) ಸಮಾರಂಭದಲ್ಲಿನ ಪ್ರೇಕ್ಷಕರತ್ತ ತಿರುಗಿ ಮತ್ತೆ ಜೋರಾಗಿ ಘೋಷಣೆ ಕೂಗಿದರು: "ಬ್ರಿಟಾನಿಯಾ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್."
ಅವರ ಈ ಉದ್ದಟತನದ ಫಲವೂ ಅವರಿಗೆ ದೊರೆಯಿತು. ಅವರನ್ನು ಮುನ್ಷಿ ಬಾಬು ತಾವೇ ಥಳಿಸಿದರು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಹೊರಹಾಕಿದರು. ಅಲ್ಲಿದ್ದ ಇತರ ವಿದ್ಯಾರ್ಥಿಗಳು ಗಾಬರಿಯಿಂದ ಮೌನವಾಗಿಬಿಟ್ಟರು ಮತ್ತು ನಂತರ ಅಲ್ಲಿಂದ ಓಡಿಹೋದರು. ಸ್ಥಳೀಯ ಶಾಲೆಗಳ ಪ್ರಾಧಿಕಾರ - ನಾವು ಇಂದು ಬ್ಲಾಕ್ ಶಿಕ್ಷಣ ಅಧಿಕಾರಿ ಎಂದು ಕರೆಯುವಂತಹ ಅಧಿಕಾರಿ - ಈಗಿನ ಪಂಜಾಬ್‌ನ ಹೋಶಿಯಾರ್‌ಪುರ್ ಜಿಲ್ಲೆಯ ಈ ಭಾಗದ ಉಪ ಆಯುಕ್ತರ ಒಪ್ಪಿಗೆಯೊಂದಿಗೆ ಪತ್ರವನ್ನು ನೀಡಿದರು. ಪತ್ರವು ಬಾಲಕನನ್ನು ಶಾಲೆಯಿಂದ ಹೊರಹಾಕುವುದನ್ನು ದೃಢಪಡಿಸಿತು, 11 ವರ್ಷದ ಈ ಹುಡುಗನನ್ನು 'ಅಪಾಯಕಾರಿ' ಮತ್ತು 'ಕ್ರಾಂತಿಕಾರಿ' ವಿವರಣೆಯಲ್ಲಿ ತಿಳಿಸಲಾಗಿತ್ತು.
ಇದನ್ನು ಸರಳವಾಗಿ ಹೇಳುವುದಾದರೆ ಭಗತ್ ಸಿಂಗ್ ಝುಗ್ಗಿಂಯಾ ಅಲ್ಲಿ ಇದ್ದ ಬಹಳ ಕಡಿಮೆ ಶಾಲೆಗಳಲ್ಲೂ ಇನ್ನು ಮುಂದೆ ಪ್ರವೇಶ ಪಡೆಯದಂತೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು. ಅವರು ಇನ್ನು ಮುಂದೆ ಯಾವುದೇ ಶಾಲೆಯ ಗೇಟನ್ನು ದಾಟಿ ಹೋಗುವಂತಿರಲಿಲ್ಲ. ಅವರ ಹೆತ್ತವರಲ್ಲದೆ ಅನೇಕರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಬೇಡಿಕೊಂಡರು. ಆಗ ಒಳ್ಳೆಯ ಸಂಪರ್ಕಗಳನ್ನು ಹೊಂದಿದ್ದ ಜಮೀನ್ದಾರರಾಗಿದ್ದ ಗುಲಾಂ ಮುಸ್ತಫಾ ಅವರೂ ಭಗತ್ ಸಿಂಗ್ ಪರವಾಗಿ ಸಾಕಷ್ಟು ಕಠಿಣ ಪ್ರಯತ್ನಗಳನ್ನು ಮಾಡಿದರು. ಆದರೆ ಬ್ರಿಟಿಷರ ಗುಲಾಮರು ಕೆರಳಿದ್ದರು. ಒಂದು ಸಣ್ಣ ಹುಡುಗ ಅವರ ಘನತೆಯನ್ನು ಕೆಣಕಿದ್ದ. ಇದರ ನಂತರ ಭಗತ್ ಸಿಂಗ್ ಝುಗ್ಗಿಂಯಾ ತನ್ನ ಅಸಾಧಾರಣ ವರ್ಣರಂಜಿತ ಜೀವನದುದ್ದಕ್ಕೂ ಔಪಚಾರಿಕ ಶಿಕ್ಷಣಕ್ಕೆ ಮರಳಲಿಲ್ಲ.
ಆದರೆ ಅವರು ಅಧಿಕಾರದ ಮುಖದ ಮೇಲೆ ಬಲವಾದ ಹೊಡೆತ ನೀಡಿದವರ ಶಾಲೆಯಲ್ಲಿ ಮೊದಲೂ ಇದ್ದರು ಮತ್ತು ಈಗ ಅವರ 93ರ ವಯಸ್ಸಿನಲ್ಲೂ ಅಂತಹ ಶಾಲೆಯ ಒಬ್ಬ ಸ್ಟಾರ್ ಶಿಷ್ಯನಾಗಿ ಉಳಿದಿದ್ದಾರೆ.
ಹೋಶಿಯಾರ್‌ಪುರ್ ಜಿಲ್ಲೆಯ ರಾಮಗಢ ಎನ್ನುವ ಹಳ್ಳಿಯಲ್ಲಿರುವ ಅವರ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ ಅಂದಿನ ನಾಟಕವನ್ನು ನೆನಪಿಸಿಕೊಂಡು ನಗುತ್ತಿದ್ದರು. ಅಂದಿನ ಘಟನೆ ಅವರಲ್ಲಿ ಭಯ ಹುಟ್ಟಿಸಲಿಲ್ಲವೆ? ಅವರು ಹೇಳುತ್ತಾರೆ, "ಆಗ ಅದಕ್ಕೆ ನನ್ನ ಪ್ರತಿಕ್ರಿಯೆ ಏನಾಗಿತ್ತೆಂದರೆ - ಇನ್ನು ನಾನು ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಸೇರಿಕೊಳ್ಳಲು ಸ್ವತಂತ್ರ."












