ಮೇ ತಿಂಗಳು ಶುರುವಾಗುತ್ತಿದ್ದಂತೆ, ಅಜಯ್ ಕುಮಾರ್ ಸಾ ಜ್ವರ ಬಂದಿರುವುದನ್ನು ಗಮನಿಸಿದರು. ಜಾರ್ಖಂಡಿನ ಛತ್ರ ಜಿಲ್ಲೆಯ ಅಸರ್ಹಿಯ ಹಳ್ಳಿಯಲ್ಲಿ ವಾಸಿಸುತ್ತಿದ್ದು, ಇವರು ಎಂಟು ಕಿಲೋಮೀಟರ್ ದೂರದಲ್ಲಿರುವ ಇಟ್ಖೋರಿ ನಗರದಲ್ಲಿ ಡಾಕ್ಟರ್ ಓರ್ವರ ಖಾಸಗಿ ಕ್ಲಿನಿಕ್ ಗೆ ಭೇಟಿ ನೀಡಿದರು.
ಬಟ್ಟೆ ಮಾರಾಟಗಾರರಾದ 25-ವರ್ಷದ ಅಜಯ್ ಅವರಿಗೆ (ಮೇಲಿರುವ ಕವರ್ ಚಿತ್ರದಲ್ಲಿ, ಅವರ ಮಗನೊಡನೆ) ಕೋವಿಡ್ ಪರೀಕ್ಷೆ ಮಾಡದೆ, ಟೈಫಾಯಿಡ್ ಮತ್ತು ಮಲೇರಿಯಾ ತಗುಲಿದೆಯೆಂದು ಡಾಕ್ಟರ್ ನಿರ್ಣಯಿಸಿದರು. ಅಜಯ್ ಅವರ ಆಮ್ಲಜನಕ ಮಟ್ಟ ಪರೀಕ್ಷಿಸಿದ್ದರು – 75ರಿಂದ 80 ಶೇಕಡವಿತ್ತು. (ಸಾಧಾರಣವಾದ ಮಟ್ಟ 95ರಿಂದ 100). ನಂತರ, ಅಜಯ್ ಅವರನ್ನು ಮನೆಗೆ ಕಳುಹಿಸಲಾಯಿತು.
ಎರಡು-ಮೂರು ಘಂಟೆಗಳಾದ ಮೇಲೆ ಅಜಯ್‌ಗೆ ಉಸಿರಾಟ ಕಷ್ಟವಾಯಿತು. ಅಂದೇ ಮತ್ತೊಬ್ಬರು ವೈದ್ಯರನ್ನು ಕಾಣಲು ತೆರಳಿದರು, ಈ ಬಾರಿ ಹಜಾರಿಬಾಗ್ (ಅಸರ್ಹಿಯದಿಂದ ಅಂದಾಜು 45 ಕಿಲೋಮೀಟರ್ ದೂರದಲ್ಲಿ) ಅಲ್ಲಿರುವ ಇನ್ನೊಂದು ಖಾಸಗಿ ಕ್ಲಿನಿಕ್ ಗೆ ಹೋದರು. ಅಲ್ಲಿಯೂ, ಕೋವಿಡ್ ಅಲ್ಲದೆ, ಟೈಫಾಯಿಡ್ ಮತ್ತು ಮಲೇರಿಯಾ ಪರೀಕ್ಷೆಗಳನ್ನು ಮಾಡಿದರು.
“ಡಾಕ್ಟರ್ ನನ್ನನ್ನು ನೋಡಿ, ಕೊರೊನ ಕಾಯಿಲೆ ಬಂದಿದೆಯೆಂದರು. ನಾನು ಚಿಕಿತ್ಸೆ ನೀಡಿದರೆ, ಬಹಳ ಖರ್ಚಾಗುವುದೆಂದು ಹೇಳಿ, ಸಾದರ ಆಸ್ಪತ್ರೆಗೆ (ಹಜಾರಿಬಾಗ್ ನಲ್ಲಿರುವ ಸರ್ಕಾರಿ ಆಸ್ಪತ್ರೆ) ಹೋಗಲು ಹೇಳಿದರು. ಭಯ ಪಟ್ಟು, ಎಷ್ಟೇ ಖರ್ಚಾದರು ಕೊಡುತ್ತೇವೆ ಎಂದೆವು. ನಮಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಂಬಿಕೆಯಿಲ್ಲ. (ಕೋವಿಡ್) ಚಿಕಿತ್ಸೆಗೆ ಅಲ್ಲಿ ಹೋದವರಾರು ಬದುಕುವುದಿಲ್ಲ” ಎಂದು ಅಜಯ್, ಅದೇ ಹಳ್ಳಿಯ, ವಿಡಿಯೋ ಸಂಪಾದಕರಾದ, ಹೈಯುಲ್ ರಹ್ಮಾನ್ ಅನ್ಸಾರಿಗೆ ಹೇಳಿದರು.
ಮಹಾಮಾರಿಯ ಮೊದಲು, ಅಜಯ್ ಮಾರುತಿ ವ್ಯಾನಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಾ ಬಟ್ಟೆ ಮಾರಿ, ತಿಂಗಳಿಗೆ 5,000ದಿಂದ 6,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು
ಈ ವರದಿಯ ಸಹ-ಲೇಖಕರಾದ ಹೈಯುಲ್ ರಹ್ಮಾನ್ ಅನ್ಸಾರಿಯವರು, ಏಪ್ರಿಲ್ನಲ್ಲಿ ವರ್ಷಕ್ಕೆ ಎರಡನೇ ಬಾರಿ ಅಸರ್ಹಿಯಗೆ ಬಂದಿದ್ದರು. ಮುಂಬೈನಲ್ಲಿ ವಿಡಿಯೋ ಸಂಪಾದಕರಾಗಿ ಹೊಸ ಕೆಲಸವನ್ನು ಶುರು ಮಾಡಲು ತಾಯಾರಗುತ್ತಿದ್ದಂತೆಯೇ, ಮಹಾರಾಷ್ಟ್ರದಲ್ಲಿ 2021ರ ಲಾಕ್ಡೌನ್ ಘೋಷಿತವಾಯಿತು. ಮೇ 2020ರಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದಾಗ, ಮೊದಲನೇ ಬಾರಿ ಮನೆಗೆ ಬಂದಿದ್ದರು (ಪರಿಯ ಸಂಬಂಧಿತ ವರದಿಯನ್ನು ಇಲ್ಲಿ ನೋಡಿ). ಅವರು ಮತ್ತು ಅವರ ಪರಿವಾರ ತಮ್ಮ 10-ಎಕರೆ ಜಮೀನಿನ ಭತ್ತದ ಫಸಲಲ್ಲಿ ತಮಗೆ ಬೇಕಾದದ್ದನ್ನು ಇಟ್ಟುಕೊಂಡು ಮಿಕ್ಕಿದ್ದನ್ನು ಮಾರಿ ಜೀವನ ನಡೆಸುತ್ತಿದ್ದರು.
ಅಸರ್ಹಿಯದಲ್ಲಿ, 33 ತುಂಬಿದ ರಹ್ಮಾನ್, ಬಿಡುವಾಗಿದ್ದರು. ಆದರೆ ಹಳ್ಳಿಯಲ್ಲಿ ಅವರ ವಿಡಿಯೋ ಸಂಪಾದನೆ ಕುಶಲತೆಗೆ ಮಹತ್ವವವೇನಿಲ್ಲ, ಪರಿವಾರದ 10-ಎಕರೆ ಜಮೀನಿನಲ್ಲಿ ಭತ್ತ ಮತ್ತು ಮುಸುಕಿನ ಜೋಳದ ಬಿತ್ತನೆ ಶುರುವಾಗುವುದು ಜೂನಿನಲ್ಲಿ. ಅಲ್ಲಿಯವರೆಗೂ ಮಾಡಲು ಕೆಲಸವೇನಿರುವುದಿಲ್ಲ. ಮೀಡಿಯಾ ಹಿನ್ನೆಲೆ ಇರುವುದರಿಂದ – ಮಾಸ್-ಕಮ್ಯೂನಿಕೇಷನ್ ಅಲ್ಲಿ ಬಿ. ಎ. ಮತ್ತು ಮುಂಬೈಯಲ್ಲಿ ಒಂದು ದಶಕ ವಿಡಿಯೋ ಸಂಪಾದಕರಾಗಿ ಕೆಲಸ ಮಾಡಿದ್ಡು – ಅವರಿಗೆ ಅಸರ್ಹಿಯನಲ್ಲಿರುವ ಜನರ ಮೇಲೆ ಮಹಾಮಾರಿಯ ಪರಿಣಾಮದ ಬಗ್ಗೆ ವರದಿ ಮಾಡಲು ಇಷ್ಟವಿದೆಯೇ ಎಂದು ನಾವು ಕೇಳಿದೆವು. ಅವರು, ಈ ವಿಚಾರದಿಂದ ಉತ್ಸುಕರಾದರು.
ಈ ವಿಡಿಯೋದಲ್ಲಿ, ಅಜಯ್ ಕುಮಾರ್ ಸಾ ಅವರ ಕೋವಿಡ್ ಮುಖಾಮುಖಿ ಮತ್ತು ಬೆಳೆಯುತ್ತಿರುವ ಸಾಲದ ಹೊರೆಯ ಬಗ್ಗೆ ರಹ್ಮಾನ್ ತಿಳಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳೆಂದರೆ ಹೆದರುವ ಅಜಯ್ ಮತ್ತು ಪರಿವಾರ, ಹಜಾರಿಬಾಗ್ ನಲ್ಲಿರುವ ಖಾಸಗಿ ಕ್ಲಿನಿಕ್/ ನರ್ಸಿಂಗ್ ಹೋಂ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ, ಅಜಯ್ ಅವರಿಗೆ ಕೋವಿಡ್‌ಗಾಗಿ ಆಮ್ಲಜನಕ ಮತ್ತು ಔಷಧಿಗಳನ್ನು ಕೊಟ್ಟರು. ಆಸ್ಪತ್ರೆಯಲ್ಲಿ ಅವರು ಒಂದು ವಾರ ಕಳೆದರು, ಮೇ 13ರ ತನಕ. ಒಂದೂವರೆ ಲಕ್ಷ ಖರ್ಚಾಗುವುದೆಂದು ಅವರು ಊಹಿಸಿರಲಿಲ್ಲ. ಹಲವಾರು ಜನರಿಂದ – ಸಾಲಗಾರ, ತಾಯಿಯು ಸದಸ್ಯರಾದ ಮಹಿಳಾ ಸಂಘ, ಮತ್ತು ಅಜ್ಜಿಯ ಪರಿವಾರ – ಸಾಲ ಮಾಡಿ ಖರ್ಚನ್ನು ಒದಗಿಸಿದರು.
ಮಹಾಮಾರಿಯ ಮೊದಲು, ಅಜಯ್ ಮಾರುತಿ ವ್ಯಾನಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಾ ಬಟ್ಟೆ ಮಾರಿ, ತಿಂಗಳಿಗೆ 5,000-6,000 ರೂ. ಸಂಪಾದಿಸುತ್ತಿದ್ದರು. ಹಿಂದಿನ ವರ್ಷ ಮತ್ತು ಈ ವರ್ಷವೂ ಕೂಡ ಲಾಕಡೌನ್ ನಿಂದಾಗಿ, ವ್ಯವಹಾರವನ್ನು ಮುಚ್ಚ ಬೇಕಾಯಿತು. 2018ರ ಡಿಸೆಂಬರ್ ನಲ್ಲಿ, 3 ಲಕ್ಷ ಸಾಲ ಮಾಡಿ ವ್ಯಾನ್ ಖರೀದಿಸಿದ್ದರು, ಆ ಸಾಲವನ್ನು ಹಿಂದಿರುಗಿಸುವುದು ಇನ್ನೂ ಉಳಿದಿದೆ. ಕಳೆದ ವರ್ಷ, ಅವರ ಒಂದು ಎಕರೆ ಜಮೀನಿನಿಂದ ಬಂದ ಭತ್ತದ ಫಸಲು ಹಾಗೂ ಇನ್ನಷ್ಟು ಸಾಲಗಳನ್ನು ಮಾಡಿ ಬದುಕಿದರು. “ನಿಧಾನವಾಗಿ ಹಿಂದಿರುಗಿಸುತ್ತೇವೆ, ಸಂಪಾದನೆ ಶುರುವಾದ ಮೇಲೆ,” ಎಂದರು ಅಜಯ್, ರಹ್ಮಾನ ಬಳಿ.
ಅನುವಾದ: ಶ್ರೀನಾಥ್ ರಣ್ಯ