57 ವರ್ಷದ ಬಾಲಾಭಾಯಿ ಚಾವ್ಡಾ ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇದು ಫಲವತ್ತಾದ ಭೂಮಿಯೂ ಹೌದು. ಜೊತೆಗೆ ನೀರಾವರಿ ಸೌಲಭ್ಯವೂ ಇದೆ. ಕಳೆದ 25 ವರ್ಷಗಳಿಂದ ಅವರು ಈ ಭೂಮಿಯ ಮಾಲಿಕತ್ವವನ್ನು ಸಹ ಹೊಂದಿದ್ದಾರೆ. ಆದರೆ ಇಲ್ಲಿ ಒಂದೇ ಒಂದು ಸಮಸ್ಯೆಯಿದೆ. ಆ ಸಮಸ್ಯೆಯೆಂದರೆ ಅವರ ಆ ಹೊಲಕ್ಕೆ ಅವರು ಹೋಗುವಂತಿಲ್ಲ.
"ಭೂಮಿಯ ಒಡೆತನದ ಬಗ್ಗೆ ನನ್ನ ಬಳಿ ಪುರಾವೆಗಳಿವೆ," ಎಂದು ಅವರು ಹೇಳುತ್ತಾರೆ, ಪ್ರಸ್ತುತ ದುರ್ಬಲವಾಗಿ ಹಳದಿ ಬಣ್ಣಕ್ಕೆ ತಿರುಗಿರುವ ಭೂ ಹಕ್ಕುಪತ್ರಗಳನ್ನು ಬಿಚ್ಚಿ ತೋರಿಸುತ್ತಾ, "ಆದರೆ [ಭೂಮಿಯ] ಸ್ವಾಧೀನವು ಪ್ರಬಲ ಜಾತಿಯ ಜನರ ಬಳಿ ಇದೆ."
ಗುಜರಾತಿನಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿರುವ ಚಮ್ಮಾರ ಸಮುದಾಯದವರಾದ ಕಾರ್ಮಿಕ ಬಾಲಾಭಾಯಿ, ಈ ಕುರಿತು ಸಹಾಯಕ್ಕಾಗಿ ತನ್ನಿಂದ ಸಾಧ್ಯವಿರುವ ಎಲ್ಲರ ಮೊರೆ ಹೋಗಿದ್ದಾರೆ - ತಟ್ಟಲು ಇನ್ನು ಯಾವುದೇ ಬಾಗಿಲುಗಳು ಉಳಿದಿಲ್ಲ. "ಒಂದು ದಿನವನ್ನೂ ತಪ್ಪಿಸದೆ ಜಮೀನಿಗೆ ಹೋಗುತ್ತೇನೆ," ಎಂದು ಅವರು ಹೇಳುತ್ತಾರೆ. "ಅದನ್ನು ದೂರದಿಂದ ನೋಡಿ, ಅದು ನನಗೆ ದೊರಕಿದ್ದರೆ ನನ್ನ ಬದುಕು ಹೇಗಿರುತ್ತಿತ್ತು ಎಂದು ಕಲ್ಪನೆಗೆ ಜಾರುತ್ತೇನೆ..."
ಧರಂಗಧ್ರಾ ತಾಲ್ಲೂಕಿನ ಭರದ್ ಗ್ರಾಮದಲ್ಲಿರುವ ಈ ಕೃಷಿ ಭೂಮಿಯನ್ನು 1997ರಲ್ಲಿ ಗುಜರಾತಿನ ಭೂ ವಿತರಣಾ ನೀತಿಯ ಅಡಿಯಲ್ಲಿ ಬಾಲಾಭಾಯ್ ಅವರಿಗೆ ಹಂಚಿಕೆ ಮಾಡಲಾಯಿತು. 1960ರ ಗುಜರಾತ್ ಕೃಷಿ ಭೂಮಿಗಳ ಮಿತಿ ಕಾಯಿದೆಯಡಿ ಕೃಷಿ ಭೂ ಹಿಡುವಳಿಯ ಮೇಲೆ ಮಿತಿಗಳನ್ನು ಹೇರಿ ಸ್ವಾಧೀನಪಡಿಸಿಕೊಳ್ಳಲಾದ 'ಹೆಚ್ಚುವರಿ ಭೂಮಿಯನ್ನು' "ಸರ್ವರ ಒಳಿತನ್ನು ಪೂರೈಸಲು" ಮೀಸಲಿರಿಸಲಾಗಿದೆ.
ಸಂತಾನಿ ಜಮೀನ್ ಎಂದು ಕರೆಯಲ್ಪಡುವ ಈ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರಿ ಸ್ವಾಮ್ಯದ ಬಂಜರುಭೂಮಿಯೊಂದಿಗೆ, "ರೈತರ ಸಹಕಾರಿ ಸಂಘಗಳು, ಭೂರಹಿತ ವ್ಯಕ್ತಿಗಳು ಮತ್ತು ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ಮಾಡಲು ಭೂಮಿ ಅಗತ್ಯವಿರುವ ವ್ಯಕ್ತಿಗಳಿಗೆ," ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಸದಸ್ಯರಿಗೆ ಆದ್ಯತೆಯೊಂದಿಗೆ ಮೀಸಲಿಡಲಾಗಿದೆ.
ಆದರೆ ಈ ಯೋಜನೆಯು ಕಾಗದದ ಮೇಲೆ ಕಂಡಷ್ಟು ಆಚರಣೆಯಲ್ಲಿ ಕಾಣುವುದಿಲ್ಲ.
ಜಮೀನಿನ ಹಕ್ಕು ಪತ್ರ ಪಡೆದ ದಿನ ಬಾಲಾಭಾಯ್ ತಮ್ಮ ಜಮೀನಿನಲ್ಲಿ ಜೋಳ ಮತ್ತು ಸಜ್ಜೆ ಬೆಳೆಯುವ ಯೋಚನೆಯಲ್ಲಿದ್ದರು. ಅಲ್ಲದೆ ಅಲ್ಲೇ ಒಂದು ಸಣ್ಣ ಮನೆಯನ್ನೂ ಕಟ್ಟಿದರೆ ಕೃಷಿ ಕೆಲಸಗಳಿಗೆ ಅನುಕೂಲವಾಗುತ್ತದೆನ್ನುವ ಆಲೋಚನೆಯಲ್ಲಿದ್ದರು. ಆ ಸಮಯದಲ್ಲಿ ಅವರಿಗೆ 32 ವರ್ಷ ಪ್ರಾಯವಾಗಿತ್ತು. ಆಗಿನ್ನೂ ಕುಟುಂಬ ಮಾಡಿಕೊಂಡಿದ್ದರು. “ಆಗಷ್ಟೇ ನನಗೆ ಮೂರು ಚಿಕ್ಕ ಮಕ್ಕಳಿದ್ದವು,” ಎಂದು ಅವರು ಹೇಳುತ್ತಾರೆ. “ಆಗ ನಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ ಈಗ ಭೂಮಿ ಸಿಕ್ಕಿರುವುದರಿಂದಾಗಿ ನಾನು ಇನ್ನು ಇನ್ನೊಬ್ಬರ ಬಳಿ ದುಡಿಯಬೇಕಿಲ್ಲವೆಂದು ಸಂತಸದಲ್ಲಿದ್ದೆ. ಇನ್ನು ನನ್ನ ಕುಟುಂಬಕ್ಕೆ ಒಳ್ಳೆಯ ಜೀವನಮಟ್ಟವನ್ನು ಕೊಡಬಲ್ಲೆ ಎಂದುಕೊಂಡಿದ್ದೆ."








