ರಾಜಿಂದರ್ ಎರಡು ಎಲೆ ಮತ್ತು ಒಂದು ಮೊಗ್ಗಿಗಾಗಿ ತೀವ್ರವಾಗಿ ಹುಡುಕುತ್ತಿದ್ದಾರೆ. ಇಳಿಜಾರಿನ ಬೆಟ್ಟಸಾಲಿನಲ್ಲಿ ನೆಟ್ಟ ಚಹಾದ ಗಿಡಗಳ ಮೇಲೆ ಅವರ ಬೆರಳುಗಳು ಓಡಾಡುತ್ತಿವೆ. ಅವರ ಹೆಂಡತಿ ಸುಮ್ನಾ ದೇವಿ ಬುಟ್ಟಿ ಹಿಡಿದು ಅವರ ಪಕ್ಕದಲ್ಲಿ ನಿಂತಿದ್ದಾರೆ. ಹಿಮಾಲಯದ ಧೌಲಾಧರ್ ಶ್ರೇಣಿಯಲ್ಲಿನ ಈ ಚಹಾ ಗಿಡಗಳ ಪೊದೆಯ ಮೇಲೆ ಎತ್ತರದ ಓಹಿ ಮರಗಳು ನೆರಳನ್ನು ಚೆಲ್ಲುತ್ತಿವೆ.
ಇದು ಕೊಯ್ಲಿನ ಸಮಯವಾಗಿದ್ದರೂ ರಾಜಿಂದರ್ ಸಿಂಗ್ ಅವರಿಗೆ ಎಲೆಗಳು ದೊರಕಲಿಲ್ಲ. ಅವರು ಪ್ರತಿದಿನ ಕಾಂಗ್ರಾ ಜಿಲ್ಲೆಯ ತಾಂಡಾ ಗ್ರಾಮದ ಹೊಲಕ್ಕೆ ಬರುತ್ತಾರೆ, ಮತ್ತು ಸುಮ್ನಾ ಅಥವಾ ಅವರ 20 ವರ್ಷದ ಮಗ ಆರ್ಯನ್ ಅವರೊಂದಿಗೆ ಬರುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ಚಹಾವನ್ನು ಎಲೆಗಳನ್ನು ಕೀಳುವ ಕಾಲವಾಗಿದ್ದು, ಇದನ್ನು ಮೊದಲ ಕೊಯ್ಲು ಎಂದು ಕರೆಯಲಾಗುತ್ತದೆ. ಆದರೆ ಅವರಿಗೆ ಅಂದು ಕೊಯ್ಯಲು ಎಲೆಗಳೇ ಇದ್ದಿರಲಿಲ್ಲ.
“ನಿಮಗೆ ಸೆಕೆ ಎಷ್ಟಿದೆಯೆಂದು ತಿಳಿಯುತ್ತಿರಬಹುದು. ಮಳೆಯಂತೂ ಸುದ್ದಿಯೇ ಇಲ್ಲ!” ಎಂದು ಹಿಮಾಚಲ ಪ್ರದೇಶದ ಪಾಲಂಪುರ್ ತೆಹ್ಸಿಲ್ನಲ್ಲಿರುವ ತಮ್ಮ ಚಹಾ ಪೊದೆಗಳ ಬಗ್ಗೆ ಚಿಂತಿತರಾಗಿ ಅವರು ಹೇಳಿದರು.
ಕಳೆದ ಎರಡು ವರ್ಷಗಳಿಂದ ಕಳಪೆ ಮಳೆಯಾಗಿರುವುದರಿಂದ ರಾಜಿಂದರ್ ಅವರ ಆತಂಕವನ್ನು ಅರ್ಥಮಾಡಿಕೊಳ್ಳಬಹುದು. 2016ರ ಎಫ್ಎಒ ಅಂತರ ಸರ್ಕಾರಿ ವರದಿಯು, "ಅನಿಯಮಿತ ಮಳೆಯು ಚಹಾ ತೋಟಗಳ ಹಾನಿಗೆ ಕಾರಣವಾಗಿದೆ" ಎಂದು ಉಲ್ಲೇಖಿಸಿದೆ. ಫೆಬ್ರವರಿಯಿಂದ ಏಪ್ರಿಲ್ ತಿಂಗಳ ನಡುವೆ ಮಳೆಯ ಅಗತ್ಯವಿರುವ ಚಹಾದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ವರದಿ ಅಧ್ಯಯನ ಮಾಡುತ್ತದೆ. ಅದೂ ಅಲ್ಲದೆ, ಏಪ್ರಿಲ್ ತಿಂಗಳ ಮೊದಲ ಫಸಲಿಗೆ ಅತ್ಯಧಿಕ ಬೆಲೆ ಇರುತ್ತದೆ. ಸಾಮಾನ್ಯವಾಗಿ 800 ರೂ ಮತ್ತು ಸಾಂದರ್ಭಿಕವಾಗಿ ಕಿಲೋಗ್ರಾಂಗೆ 1,200 ರೂ. ತನಕ ಇರುತ್ತದೆ.
2022 ರಾಜಿಂದರ್ ಅವರ ಪಾಲಿಗೆ ವಿಶೇಷ ವರ್ಷವಾಗಿತ್ತು, ಅವರು ಇನ್ನೂ ಎರಡು ಹೆಕ್ಟೇರ್ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು ಮತ್ತು ಅವರು ಉಲ್ಲೇಖಿಸಿದಂತೆ, "ನನ್ನ ಆದಾಯ ಹೆಚ್ಚಾಗುತ್ತದೆ ಎಂದು ನಾನು ಭಾವಿಸಿದ್ದೆ." ಒಟ್ಟು ಪ್ರದೇಶವು ಈಗ ಮೂರು ಹೆಕ್ಟೇರ್ ಆಗಿದ್ದು, ಋತುವಿನ ಕೊನೆಯಲ್ಲಿ 4,000 ಕಿಲೋ ಚಹಾ ಎಲೆಯ ಕೊಯ್ಲು ಎದುರು ನೋಡುತ್ತಿದ್ದಾರೆ. ಅವರು ಗುತ್ತಿಗೆಗಾಗಿ 20,000 ರೂ.ಗಳನ್ನು ಖರ್ಚು ಮಾಡಿದರು ಮತ್ತು ಚಹಾ ಬೆಳೆಯಲ್ಲಿ ಕಾರ್ಮಿಕರ ವೇತನವು ಉತ್ಪಾದನಾ ವೆಚ್ಚದ 70 ಪ್ರತಿಶತದಷ್ಟಿದೆ ಎಂದು ಹೇಳುತ್ತಾರೆ. "ತೋಟವನ್ನು ನಿರ್ವಹಿಸಲು ಸಾಕಷ್ಟು ಶ್ರಮ ಮತ್ತು [ಒಳಸುರಿ] ವೆಚ್ಚಗಳು ಬೇಕಾಗುತ್ತವೆ" ಎಂದು ಅವರು ಗಮನಸೆಳೆದರು. ತದನಂತರ ಎಲೆಗಳನ್ನು ಸಂಸ್ಕರಿಸಲು ಮತ್ತಷ್ಟು ಖರ್ಚು ಮಾಡಬೇಕಾಗುತ್ತದೆ.


















