ಮುಂಜಾನೆ 9 ರ ಸುಮಾರಿಗೆ ಎಸ್ಲವತ್ ಬನ್ಯಾ ನಾಯಕ್ ವತ್ವರಪಲ್ಲೆ ಹಳ್ಳಿಯ ಬಳಿಯಿರುವ ಹೈದರಾಬಾದ್-ಶ್ರೀಶೈಲಂ ಹೆದ್ದಾರಿಯಲ್ಲಿ ಸುಮಾರು 150 ಹಸುಗಳ ಹಿಂಡನ್ನು ನಿಭಾಯಿಸುತ್ತಿದ್ದಾನೆ. ಈ ಹಿಂಡು ಪೂರ್ವಘಟ್ಟದ ನಲ್ಲಮಲ ಶ್ರೇಣಿಯ ಕೇಂದ್ರಭಾಗದಲ್ಲಿರುವ ಅಮ್ರಾಬಾದ್ ಹುಲಿ ಮೀಸಲು ಪ್ರದೇಶಕ್ಕೆ ನಿಧಾನವಾಗಿ ಪ್ರವೇಶಿಸುತ್ತಿವೆ. ಕೆಲವು ಜಾನುವಾರುಗಳು ಹುಲ್ಲು ಮೇಯುತ್ತಿದ್ದರೆ ಇನ್ನುಳಿದವುಗಳು ನವಿರಾದ ಎಲೆಗಳನ್ನು ಹೊಂದಿರುವ ಮರದ ಗೆಲ್ಲುಗಳನ್ನು ಎಟಕಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ.
75 ರ ಪ್ರಾಯದ ನಾಯಕ ಲಂಬಾಡಿ ಸಮುದಾಯಕ್ಕೆ ಸೇರಿದವನು. ಇಲ್ಲಿರುವ ಬಹುತೇಕ ಜಾನುವಾರು ತಳಿಗಾರರಂತೆ ಈತನ ಬಳಿಯೂ ತುರುಪು ಜಾತಿಯ ಜಾನುವಾರುಗಳೇ ಇವೆ. ಲಂಬಾಡಿ (ಒಂದು ಬಗೆಯ ಪರಿಶಿಷ್ಟ ಜಾತಿ), ಯಾದವ (ಗೊಲ್ಲ) (ಓ.ಬಿ.ಸಿ) ಮತ್ತು ಚೆಂಚು (ಹೆಸರಿಸಲೇಬೇಕಾಗಿರುವ ಒಂದು ದುರ್ಬಲ ಬುಡಕಟ್ಟು ಗುಂಪು) ಸಮುದಾಯಗಳು ಸಾಂಪ್ರದಾಯಿಕವಾಗಿ ತುರುಪು ತಳಿಯನ್ನು ನೋಡಿಕೊಳ್ಳುವ ತಳಿಗಾರರು. ಈ ತಳಿಯ ಜಾನುವಾರುಗಳಿಗೆ ಚಿಕ್ಕ ಮತ್ತು ಹರಿತವಾದ ಕೊಂಬುಗಳಿದ್ದರೆ, ಕಠಿಣವಾದ ಮತ್ತು ಸದೃಢವಾದ ಕಾಲುಗಳಿವೆ. ಒದ್ದೆಯಾದ, ಒಣಗಿದ, ಕಲ್ಲುಗಳಿಂದ ತುಂಬಿರುವ ಪ್ರದೇಶಗಳೆಂಬ ಭೇದವಿಲ್ಲದೆ ತರಹೇವಾರಿ ಪ್ರದೇಶಗಳಲ್ಲಿ ಇವುಗಳು ಸರಾಗವಾಗಿ ಸಾಗಬಲ್ಲವು. ಜೊತೆಗೇ ಹೆಚ್ಚಿನ ಭಾರವನ್ನೂ ಕೂಡ ಹೊರಬಲ್ಲವು. ಈ ಪ್ರದೇಶಗಳಲ್ಲಿರುವ ಭಾರೀ ಉಷ್ಣತೆಯನ್ನೂ ಕೂಡ ಇವುಗಳು ಕಿಂಚಿತ್ತು ನೀರಿನ ಸಹಾಯದಿಂದಷ್ಟೇ ದೀರ್ಘಕಾಲದವರೆಗೆ ಸಹಿಸಿಕೊಳ್ಳಬಲ್ಲಷ್ಟು ಸಾಮಥ್ರ್ಯವುಳ್ಳವು.
ಅಮ್ರಾಬಾದ್ ಉಪಜಿಲ್ಲೆಯು ತೆಲಂಗಾಣ-ಕರ್ನಾಟಕ ಗಡಿಭಾಗದ ಪೂರ್ವಭಾಗಕ್ಕಿರುವ ಹಳ್ಳಿಗಳ ಕಡೆಗಿದೆ. ಈ ಭಾಗಗಳಿಂದ ಜಾನುವಾರುಗಳನ್ನು ಕೊಳ್ಳಲೆಂದೇ ಬಹಳಷ್ಟು ಮಂದಿ ಬರುತ್ತಾರೆ. ಇನ್ನು ಜಾನುವಾರುಗಳ ಮೈ ಮೇಲೆ ಕಲೆಗಳಿರುವುದರಿಂದ ಇವುಗಳನ್ನು 'ಪೋಡಾ ತುರುಪು' ಎಂದೂ ಕರೆಯಲಾಗುತ್ತದೆ. ತೆಲುಗು ಭಾಷೆಯಲ್ಲಿ 'ಪೋಡಾ' ಎಂದರೆ ಕಲೆಗಳು ಮತ್ತು 'ತುರುಪು' ಎಂದರೆ ಪೂರ್ವದಿಕ್ಕು. ಟ್ರ್ಯಾಕ್ಟರ್ ಮತ್ತು ಇತರ ಕೃಷಿಸಂಬಂಧಿ ಯಂತ್ರೋಪಕರಣಗಳನ್ನು ಕೊಳ್ಳುವಷ್ಟು ಸ್ಥಿತಿವಂತರಾಗಿಲ್ಲದ ಅದೆಷ್ಟೋ ಮಂದಿ ಚಿಕ್ಕಪುಟ್ಟ ರೈತರಿಗೆ ಪೋಡಾ ತುರುಪು ಬಹಳ ಉಪಯುಕ್ತ ಜಾನುವಾರೆಂಬುದರಲ್ಲಿ ಸಂಶಯವಿಲ್ಲ.
ಪ್ರತೀವರ್ಷವೂ ದೀಪಾವಳಿಯ ನಂತರದ ಕೆಲ ವಾರಗಳಲ್ಲಿ, ಅಂದರೆ ನವೆಂಬರ್ ತಿಂಗಳಿನಲ್ಲಿ, ವ್ಯಾಪಾರಿಗಳು ಮತ್ತು ರೈತರು ಜಾನುವಾರುಗಳ ವ್ಯಾಪಾರಕ್ಕಾಗಿರುವ ಸ್ಥಳೀಯ ಉತ್ಸವವಾದ ಕುರುಮೂರ್ತಿ ಜತಾರಾಗೆ ಸೇರುತ್ತಾರೆ. ಅಮ್ರಾಬಾದ್ ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿ ಆಯೋಜಿಸಲಾಗುವ ತಿಂಗಳಿನುದ್ದಕ್ಕೂ ನಡೆಯುವ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಮಂದಿ ಸೇರುತ್ತಾರೆ. ನಾಯಕ್ ನಂಥಾ ತಳಿಗಾರರಿಂದ ಖರೀದಿಸಿದ 12 ರಿಂದ 18 ತಿಂಗಳ ಗಂಡು ಕರುಗಳನ್ನು ಇಲ್ಲಿ ಜೋಡಿಗೆ 25,000 - 30,000 ರೂಪಾಯಿಗಳವರೆಗೆ ಮಾರಲಾಗುತ್ತದೆ. ಉತ್ಸವದಲ್ಲಿ ನಾಯಕ್ ಸುಮಾರು ಐದು ಜೋಡಿಗಳನ್ನು ಮಾರಿದರೆ, ಉಳಿದ 1-2 ಜೋಡಿಗಳನ್ನು ವರ್ಷದ ಇತರ ಭಾಗದಲ್ಲಿ ಈತ ಮಾರುತ್ತಾನೆ. ಉತ್ಸವದಲ್ಲಿ ಖರೀದಿಗೆಂದು ಬರುವ ರೈತರು ಜೋಡಿಗೆ ಏನಿಲ್ಲವೆಂದರೂ 25000-40000 ಗಳಷ್ಟು ಬೆಲೆ ತೆತ್ತುತ್ತಾರೆ. ಕೆಲವೊಮ್ಮೆ ರೈತರೂ ಕೂಡ ವ್ಯಾಪಾರಿಗಳಾಗುವುದುಂಟು. ಉತ್ಸವದಲ್ಲಿ ಮಾರಾಟವಾಗದ ಜಾನುವಾರುಗಳನ್ನು ಮರಳಿ ಹಳ್ಳಿಗೆ ಕೊಂಡೊಯ್ದು ತಮ್ಮ ಹೊಲಗಳಲ್ಲಿ ಅವುಗಳನ್ನು ವರ್ಷವಿಡೀ ಮಾರಾಟಕ್ಕಿಡುವ ರೈತರೂ ಇದ್ದಾರೆ.
ಆದರೂ ಜಾನುವಾರುಗಳನ್ನು ಪೋಷಿಸುವ ಕಾರ್ಯವು ಬಹಳ ಸಮಯವನ್ನು ತೆಗೆದುಕೊಳ್ಳುವಂಥದ್ದು. ಕುರುಚಲು ಗಿಡ, ಹುಲ್ಲು ಮತ್ತು ಬಿದಿರುಗಳಿಂದ ತುಂಬಿರುವ ಅಮ್ರಾಬಾದ್ ಆಗಲೇ ಒಣಗಿರುವ ಮತ್ತು ಸಾಯುತ್ತಿರುವ ಅರಣ್ಯ. ಮೀಸಲು ಪ್ರದೇಶದಲ್ಲಿರುವ ಬಫರ್ ವಲಯಗಳಲ್ಲಿ ಜೂನ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಆಹಾರಕ್ಕೇನೂ ಕೊರತೆಯಿರುವುದಿಲ್ಲ. ಆದರೆ ನವೆಂಬರ್ ಮಾಸದ ನಂತರ ಮೇಯಲು ಯೋಗ್ಯವಾದ ಭೂಭಾಗವು ಒಣಗತೊಡಗುತ್ತದೆ. ಕೋರ್ ವಲಯಗಳಿಗೆ ಪ್ರವೇಶಿಸುವ ವಿಚಾರದಲ್ಲಿ ಅರಣ್ಯ ಇಲಾಖೆಯು ಹೇರುವ ನಿರ್ಬಂಧಗಳು ಜಾನುವಾರುಗಳಿಗೆ ನೀಡಬೇಕಾದ ಆಹಾರದ ಸವಾಲನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ.
ಇಂಥಾ ಸಂದರ್ಭಗಳಲ್ಲಿ ನಾಯಕ್ ತನ್ನ ಹಳ್ಳಿಯಾದ ಮುನ್ನನೂರನ್ನು ಬಿಟ್ಟು ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ತನ್ನ ಸಹೋದರಿಯ ಹಳ್ಳಿಯಾದ ವತ್ವರ್ಲಪಲ್ಲೆಗೆ ತೆರಳುತ್ತಾನೆ. ಇದು ತೆಲಂಗಾಣದ ಅಮ್ರಾಬಾದ್ ಮಂಡಲದ ಮೆಹಬೂಬ್ ನಗರದಲ್ಲಿದೆ (ಈಗ ನಾಗರ್ಕುರ್ನೂಲ್). ಇಂಥಾ ಸಂದರ್ಭಗಳಿಗೆಂದೇ ಆತ ಅರಣ್ಯದ ಪ್ರದೇಶದ ಪಕ್ಕದಲ್ಲೇ ಜಾನುವಾರುಗಳ ಆಹಾರಕ್ಕೆಂದು ಕಣಜದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ.
ಅನುವಾದ : ಪ್ರಸಾದ್ ನಾಯ್ಕ್