ಕೆಲಸದ ಅವಧಿಯು ಮುಗಿಯದಿದ್ದಾಗ್ಯೂ, ಮೊದಲ ಮಹಡಿಯ ಕೊಠಡಿಗೆ ಬೀಗ ಹಾಕಿದ್ದು, ನಿಶ್ಶಬ್ದವಾಗಿತ್ತು. ತಗಡು ಹಾಗೂ ಮರದಿಂದ ನಿರ್ಮಿಸಲಾದ ಪಕ್ಕದ ಗುಡಿಸಲಿನಲ್ಲಿ ಕುರ್ಚಿ, ಮೇಜು, ಲೋಹದ ಬೆಂಚು, ಕಬ್ಬಿಣಾಂಶದ ಸಿರಪ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ರಟ್ಟಿನ ಪಟ್ಟಿಗೆಗಳು ಹಾಗೂ ಬಿಸಾಡಿದ ಹೊದಿಕೆಗಳ ರಾಶಿಯ ಹೊರತಾಗಿ ಯಾರೊಬ್ಬರೂ ಇರಲಿಲ್ಲ. ತುಕ್ಕುಹಿಡಿದ ಹಳೆಯ ಬೋರ್ಡ್ ಸಹ ಅಲ್ಲಿಯೇ ಬಿದ್ದಿತ್ತಲ್ಲದೆ, ಬೀಗ ಜಡಿದ ಕೊಠಡಿಯ ಕಟ್ಟಡದ ಪ್ರವೇಶದ್ವಾರದಲ್ಲಿದ್ದ ಹೊಸ ಬೋರ್ಡಿನ ಮೇಲೆ, ಹೀಗೆ ಬರೆಯಲಾಗಿತ್ತು: ‘Govt. New Type Primary Health Centre, Shabri Mohalla, Dal SGR [Srinagar]’. ‘(ನೂತನ ಮಾದರಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಬ್ರಿ ಮೊಹಲ್ಲ, ದಾಲ್ ಎಸ್‌ಜಿಆರ್ [ಶ್ರೀನಗರ್])’
ಇಲ್ಲಿಂದ 10 ನಿಮಿಷಗಳ ದೋಣಿ ಪ್ರಯಾಣವು, ಸದಾ ಗಿಜಿಗುಡುತ್ತಿದ್ದು, ಸಾಮಾನ್ಯವಾಗಿ ತೆರೆದೇ ಇರುವ ನಜಿ಼ರ್ ಅಹ್ಮದ್ ಭಟ್ ಚಿಕಿತ್ಸಾಲಯಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ತಣ್ಣನೆಯ ಚಳಿಗಾಲದ ಮಧ್ಯಾಹ್ನ ಆತ, ತಮ್ಮ ಮರದ ಕಂಬಗಳ ಮೇಲಿನ ಮರದ ಚಿಕ್ಕ ಅಂಗಡಿಯಲ್ಲಿ, ಮಧ್ಯಾಹ್ನದ ಕೊನೆಯ ಗ್ರಾಹಕ-ರೋಗಿಯನ್ನು ನೋಡುತ್ತಿದ್ದಾರೆ (ಮತ್ತಷ್ಟು ಜನರ ಚಿಕಿತ್ಸೆಗಾಗಿ ಸಂಜೆ ಇಲ್ಲಿಗೆ ಮರಳುತ್ತಾರೆ). ಚುಚ್ಚುಮದ್ದುಗಳನ್ನು ನೀಡುವ ಒಳಕೋಣೆಯನ್ನು ಸಹ ಇದು ಒಳಗೊಂಡಿದೆ. ಹೊರಭಾಗದಲ್ಲಿನ ಬೋರ್ಡಿನ ಮೇಲೆ ‘Bhat Medicate Chemist and Druggist’ ಎಂದು ಬರೆಯಲಾಗಿದೆ.
ಸುಮಾರು 60ರ ವಯಸ್ಸಿನ ಹಫೀಜ಼ ದರ್ ಇಲ್ಲಿ ಬೆಂಚೊಂದರ ಮೇಲೆ ಕುಳಿತಿದ್ದಾರೆ. ನಝೀರ್ ‘ವೈದ್ಯರನ್ನು’ದೋಣಿಯಲ್ಲಿ ಕರೆದೊಯ್ಯಲು ಬಂದಿರುವ ಆಕೆಯ ಮೊಹಲ್ಲಾ, 10 ನಿಮಿಷಗಳ ದೋಣಿ ಪ್ರಯಾಣದಷ್ಟು ದೂರವಿದೆ. “ನನ್ನ ಅತ್ತೆಯವರು ಕೆಲವು ಚುಚ್ಚುಮದ್ದುಗಳನ್ನು (ಸಕ್ಕರೆ ಖಾಯಿಲೆಗಾಗಿ) ತೆಗೆದುಕೊಳ್ಳುವ ಅವಶ್ಯಕತೆಯಿದ್ದು, ಅವರಿಗೆ ವಯಸ್ಸಾಗಿರುವುದರಿಂದ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ. ನಝೀರ್ ಸಾಬ್ ಅನುಕಂಪದಿಂದ ನಮ್ಮ ಮನೆಯಲ್ಲೇ ಅದನ್ನು ಒದಗಿಸುತ್ತಾರೆ”ಎಂದ ಆಕೆ, ಆತನಿಗೆ ಒಳ್ಳೆಯದಾಗಲೆಂದು ಹಾರೈಸಿದರು. ಈ ರೈತಾಪಿ ಮಹಿಳೆ ಹಾಗೂ ಗೃಹಿಣಿಯ ಪತಿ, ಕೃಷಿಕರಾಗಿದ್ದು, ಅವರೂ ಸಹ ದಾಲ್ ಸರೋವರದಲ್ಲಿ ಶಿಕಾರ ಚಲಾಯಿಸುತ್ತಾರೆ. “ಅಲ್ಲಿ [NTPHC (ನೂತನ ಮಾದರಿಯ ಪ್ರಾಥಮಿಕ ಆರೋಗ್ಯ ಕೇಂದ್ರ)], ನಮಗೆ ವೈದ್ಯರು ಸಿಗುವುದಿಲ್ಲ. ಅವರು ಕೇವಲ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಮಾತ್ರ ಹಾಕುತ್ತಾರಲ್ಲದೆ, ಮಧ್ಯಾಹ್ನ ೪ರ ನಂತರ ಅಲ್ಲಿ ಯಾರೂ ಇರುವುದಿಲ್ಲ,” ಎಂಬುದಾಗಿಯೂ ಆಕೆ ತಿಳಿಸಿದರು.
ಕಾಶ್ಮೀರದಲ್ಲಿ ಆಗಸ್ಟ್ ೨೦೧೯ರಲ್ಲಿ, ಒಂದರ ನಂತರ ಮತ್ತೊಂದರಂತೆ ಜಾರಿಗೊಳಿಸಲಾದ ಕರ್ಫ್ಯೂ ಮತ್ತು ಲಾಕ್‌ಡೌನ್‌ಗಳ ಅವಧಿಯಾದ್ಯಂತ, ಸರೋವರದ ಮೇಲಿನ ದ್ವೀಪಗಳಲ್ಲಿ ವಾಸಿಸುತ್ತಿರುವ ಜನರಿಗೆ, ಸುಮಾರು ೨ ವರ್ಷಗಳ ಕಾಲ NTPHCಯಲ್ಲಿ, ವೈದ್ಯರನ್ನು ನೋಡಿದ ನೆನಪೇ ಇಲ್ಲ. ಇದಕ್ಕೆ ಹತ್ತಿರದಲ್ಲಿ ವಾಸಿಸುತ್ತಿದ್ದು, ಪ್ರವಾಸಿಗಳ ಛಾಯಾಚಿತ್ರಗ್ರಾಹಕರಾಗಿರುವ ೪೦ರ ವಯಸ್ಸಿನ ಮೊಹಮ್ಮದ್ ರಫೀಕ್ ಮಲ್ಲ ಎಂಬುವವರು, “ಕೆಲವು ವರ್ಷಗಳ ಹಿಂದೆ ಅಲ್ಲಿ ವೈದ್ಯರೊಬ್ಬರಿದ್ದು, ಉತ್ತಮವಾಗಿ ಕೆಲಸವನ್ನು ನಿರ್ವಹಿಸಿದ್ದರಾದರೂ, ಅವರನ್ನು ವರ್ಗಾಯಿಸಲಾಯಿತು. ೨೦೧೯ರಿಂದಲೂ ನಾವು ಯಾವುದೇ ವೈದ್ಯರನ್ನು ನೋಡಿರುವುದಿಲ್ಲ. ಅವರು (ಸಿಬ್ಬಂದಿಗಳು) ನಿಯಮಿತವಾಗಿ ಬರುವುದಿಲ್ಲವಷ್ಟೇ ಅಲ್ಲ, ಸಾಕಷ್ಟು ಸಮಯ ಅಲ್ಲಿರುವುದೂ ಇಲ್ಲ”ಎಂಬುದಾಗಿ ತಿಳಿಸಿದರು.
ಶ್ರೀನಗರದ ಮುಖ್ಯ ಆರೋಗ್ಯಾಧಿಕಾರಿಯವರ ಸಹಾಯಕ ನಿರ್ದೇಶಕರ, ಯೋಜನಾ ಇಲಾಖಾ ಕಛೇರಿಯ ಪ್ರಕಾರ, ಎಲ್ಲ ಹೊಸ ಮಾದರಿಯ ಪ್ರಾಥಮಿಕ ಕೇಂದ್ರಗಳಲ್ಲೂ, (ಕಾಶ್ಮೀರದಲ್ಲಿನ ‘ಉನ್ನತೀಕರಿಸಲಾದ’ ಉಪ-ಕೇಂದ್ರಗಳು) ವೈದ್ಯಾಧಿಕಾರಿಯಾಗಿ ಕನಿಷ್ಠ ಒಬ್ಬರು ಎಂ.ಬಿ.ಬಿ.ಎಸ್ ವೈದ್ಯರು, ಒಬ್ಬ ಔಷಧಿಕಾರರು, ಒಬ್ಬ ವಿವಿಧೋದ್ದೇಶಿತ ಮಹಿಳಾ ಆರೋಗ್ಯ ಕಾರ್ಯಕರ್ತೆ (FMPHW) ಮತ್ತು ಒಬ್ಬ ಶುಶ್ರೂಷಾ ಪರಿಚಾರಕರನ್ನು ಆರೋಗ್ಯ ಸೇವೆಗಳ ನಿರ್ದೇಶನಾಲಯವು ನಿಯೋಜಿತಗೊಳಿಸತಕ್ಕದ್ದು.










