ರೈತ ಮಹಿಳೆಅಯದ ಸುನಂದಾ ಸೂಪೆ ಜೂನ್ ಮತ್ತು ನಂತರದ ಮಾನ್ಸೂನ್ ತಿಂಗಳುಗಳು ಬಂದವೆಂದರೆ ಹೆದರತೊಡಗುತ್ತಾರೆ. ಇದಕ್ಕೆ ಕಾರಣ ಆ ಸಮಯದಲ್ಲಿ ಅವರ ಹೊಲ, ತೋಟಗಳಿಗೆ ದಾಳಿ ಮಾಡುವ ಸ್ಥಳೀಯವಾಗಿ ಮೋಟೆ ಗೋಗಲ್ಗೆ ಎಂದು ಕರೆಯಲಾಗುವ ದೈತ್ಯ ಆಫ್ರಿಕನ್ ಬಸವನಹುಳುಗಳು. ಕಳೆದ ವರ್ಷದ ಇದೇ ಸಮಯದಲ್ಲಿ ಅವರ ಒಂದು ಎಕರೆ ಜಮೀನನ್ನು ಈ ಹುಳುಗಳು ನಾಶಗೊಳಿಸಿದ್ದವು.
"ನಾವು ಏನನ್ನು ಬಿತ್ತಿದರೂ ಅವು ತಿನ್ನುತ್ತವೆ - ಭತ್ತ, ಸೋಯಾಬೀನ್, ಕಡಲೆಕಾಯಿ, ಕಾಲಾ ಘೆವ್ಡಾ [ಕಪ್ಪು ರಾಜ್ಮಾ], ರಾಜ್ಮಾ" ಎಂದು ಅವರು ಹೇಳುತ್ತಾರೆ. ಮಾವು, ಚಿಕೂ [ಸಪೋಟಾ], ಪಪ್ಪಾಯಿ ಮತ್ತು ಪೇರಳೆಯಂತಹ ಹಣ್ಣುಗಳು ಸಹ ಅವುಗಳಿಂದ ಸುರಕ್ಷಿತವಲ್ಲ. "ನಾವು ಈ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಸವನಹುಳುಗಳನ್ನು ನೋಡಬಹುದು" ಎಂದು 42 ವರ್ಷದ ರೈತ ಮಹಿಳೆ ಹೇಳುತ್ತಾರೆ.
ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿರುವ ಮಹಾದೇವ್ ಕೋಲಿ ಸಮುದಾಯದ ಸದಸ್ಯೆಯಾಗಿರುವ ಅವರು ತಮ್ಮ ತಾಯಿ ಮತ್ತು ಸಹೋದರನೊಂದಿಗೆ ಚಸ್ಕಾಮನ್ ಅಣೆಕಟ್ಟಿನ ಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಅವರ ಮನರ ಅಣೆಕಟ್ಟೆಯ ಒಂದು ಭಾಗದಲ್ಲಿದ್ದರೆ ಜಮೀನು ಇನ್ನೊಂದು ಭಾಗದಲ್ಲಿದೆ. ಮನೆಯಿಂದ ಜಮೀನಿಗೆ ಹೋಗಿ ಬರಲು ಅವರು ಒಂದು ಗಂಟೆ ಕಾಲ ದೋಣಿ ನಡೆಸಬೇಕು.
ದೈತ್ಯ ಆಫ್ರಿಕನ್ ಬಸವನಹುಳುಗಳು (Achatina fulica) ಭಾರತದಲ್ಲಿ ಆಕ್ರಮಣಕಾರಿ ಪ್ರಭೇದವಾಗಿದೆ ಎಂದು ಗ್ಲೋಬಲ್ ಇನ್ವೇಸಿವ್ ಸ್ಪೀಸೀಸ್ ಡೇಟಾಬೇಸ್ ಹೇಳುತ್ತದೆ, ಮತ್ತು ಇದು ವಿವಿಧ ಬೆಳೆಗಳನ್ನು ತಿನ್ನುತ್ತದೆ. ಮುಂಗಾರಿನ ಸಮಯದಲ್ಲಿ, ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ ಇವು ತಿವಾಯಿ ಬೆಟ್ಟದ ತಪ್ಪಲಿನಲ್ಲಿರುವ ಹೊಲಗಳನ್ನು ಆಕ್ರಮಿಸುತ್ತವೆ. ಕೆಲವೊಮ್ಮೆ ಅವು ಇನ್ನೂ ಕೆಲವು ತಿಂಗಳುಗಳವರೆಗೆ ಉಳಿಯಬಹುದು. 2022ರ ಕೊನೆಯಲ್ಲಿ ಈ ವರದಿಗಾರರೊಂದಿಗೆ ಮಾತನಾಡಿದ ಸುನಂದಾ, ತಾನು ಈಗ ಮೂರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಹೇಳುತ್ತಾರೆ.












