“ದಯವಿಟ್ಟು ಅವುಗಳ ಹತ್ತಿರ ಹೋಗಬೇಡಿ. ಅವು ಹೆದರಿ ಓಡಬಹುದು. ಆಮೇಲೆ ಅವುಗಳನ್ನು ಇಷ್ಟು ದೊಡ್ಡ ಜಾಗದಲ್ಲಿ ಹುಡುಕುವುದೇ ಒಂದು ಸವಾಲಾಗಿಬಿಡುತ್ತದೆ. ಅವು ಅವುಗಳ ಪಾಡಿಗೆ ಹೋಗಲಿ,” ಎಂದರು ಜೇಠಾಭಾಯಿ ರಾಬರಿ.
ಗ್ರಾಮೀಣ ಅಲೆಮಾರಿ ಸಮುದಾಯದ ಅವರು ಮಾತನಾಡುತ್ತಿದ್ದುದು ಅಮೂಲ್ಯವಾದ ಒಂಟೆಗಳ ಕುರಿತು. ಅವು ನೀರಿನಲ್ಲಿ ಮೇಯುತ್ತಿದ್ದವು.
ಒಂಟೆಗಳು ನೀರಿನಲ್ಲಿ ಈಜುತ್ತವೆಯೇ? ನಿಜವಾಗಿಯೂ ಹೌದೇ?
ಖಂಡಿತಾ ಹೌದು. ಜೇಠಾ ಬಾಯಿ ಅವರು ಉಲ್ಲೇಖಿಸುತ್ತಿರುವ ದೊಡ್ಡ ಜಾಗದ ಹೆಸರು ರಾಷ್ಟ್ರೀಯ ಸಾಗರ ಉದ್ಯಾನವನ ಮತ್ತು ಅಭಯಾರಣ್ಯ (MNP&S) ಇದು ಕಚ್ಛ್ ಕೊಲ್ಲಿಯ ದಕ್ಷಿಣ ಕರಾವಳಿಯುದ್ದಕ್ಕೂ ಇದೆ. ಮತ್ತು ಇಲ್ಲಿ, ಅಲೆಮಾರಿ ಪಶುಪಾಲಕ ಗುಂಪುಗಳ ಒಂಟೆಗಳ ಹಿಂಡು ಮ್ಯಾಂಗ್ರೋವ್ (ಕಾಂಡ್ಲ, ಉಪ್ಪುಂಜಿಗಿಡ) ಪೊದೆಗಳನ್ನು ಹುಡುಕುತ್ತಾ ದ್ವೀಪದಿಂದ ದ್ವೀಪಕ್ಕೆ ಈಜುತ್ತವೆ - ಇದು ಅವುಗಳ ಆಹಾರಕ್ಕೆ ಅವಶ್ಯಕ.
"ಈ ತಳಿಗಳು ದೀರ್ಘಕಾಲದವರೆಗೆ ಕಾಂಡ್ಲ ಗಿಡಗಳನ್ನು ತಿನ್ನದಿದ್ದರೆ ಅನಾರೋಗ್ಯಕ್ಕೆ ಒಳಗಾಗಬಹುದು, ದುರ್ಬಲಗೊಳ್ಳಬಹುದು ಮತ್ತು ಸಾಯಬಹುದು," ಎಂದು ಕಾರು ಮೇರು ಜಾಟ್ ಹೇಳುತ್ತಾರೆ. "ಈ ಕಾರಣದಿಂದಲೇ ಸಾಗರ ಉದ್ಯಾನದೊಳಗೆ, ನಮ್ಮ ಒಂಟೆಗಳ ಹಿಂಡುಗಳು ಕಾಂಡ್ಲ ಪೊದೆಗಳನ್ನು ಹುಡುಕುತ್ತಾ ಓಡಾಡುತ್ತವೆ."
MNP&S 42 ದ್ವೀಪಗಳನ್ನು ಒಳಗೊಂಡಿದೆ , ಅವುಗಳಲ್ಲಿ 37 ರಾಷ್ಟ್ರೀಯ ಸಾಗರ ಉದ್ಯಾನದ ಅಡಿಯಲ್ಲಿ ಬರುತ್ತವೆ ಮತ್ತು ಉಳಿದ 5 ಅಭಯಾರಣ್ಯ ಪ್ರದೇಶದ ಅಡಿಯಲ್ಲಿ ಬರುತ್ತವೆ. ಇಡೀ ವಲಯವು ಜಾಮನಗರ, ದೇವಭೂಮಿ ದ್ವಾರಕಾ (2013ರಲ್ಲಿ ಜಾಮ್ ನಗರದಿಂದ ಬೇರ್ಪಟ್ಟಿದೆ) ಮತ್ತು ಗುಜರಾತಿನ ಸೌರಾಷ್ಟ್ರದ ಪ್ರದೇಶದ ಮೊರ್ಬಿ ಜಿಲ್ಲೆಗಳಲ್ಲಿ ವ್ಯಾಪಿಸಿದೆ.
"ನಾವೆಲ್ಲರೂ ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ," ಎಂದು ಮೂಸಾ ಜಾಟ್ ಹೇಳುತ್ತಾರೆ. ಕಾರು ಮೇರ ಅವರಂತೆಯೇ, ಅವರು ರಾಷ್ಟ್ರೀಯ ಸಾಗರ ಉದ್ಯಾನವನದಲ್ಲಿ ವಾಸಿಸುವ ಫಕೀರಾನಿ ಜಾಟ್ ಕುಲದ ಸದಸ್ಯರು. MNP&S ನೊಳಗೆ ವಾಸಿಸುವ ಇನ್ನೊಂದು ಗುಂಪು ಕೂಡಾ ಇದೆ. ಅದು ಭೋಪಾ ರಾಬರಿ (ರೆಬಾರಿ ಎಂದೂ ಉಚ್ಚರಿಸಲಾಗುತ್ತದೆ). ಜೇಠಾಭಾಯ್ ಅದೇ ಕುಲಕ್ಕೆ ಸೇರಿದವರು. ಎರಡೂ ಗುಂಪುಗಳು ಸಾಂಪ್ರದಾಯಿಕ ಪಶುಪಾಲಕರು, ಅವರನ್ನು ಇಲ್ಲಿ 'ಮಾಲ್ಧಾರಿ' ಎಂದು ಕರೆಯಲಾಗುತ್ತದೆ. ಗುಜರಾತಿ ಭಾಷೆಯಲ್ಲಿ 'ಮಾಲ್' ಎನ್ನುವ ಪದವು ಪ್ರಾಣಿಗಳನ್ನು ಸೂಚಿಸುತ್ತದೆ, ಮತ್ತು 'ಧಾರಿ' ಎಂದರೆ ರಕ್ಷಕ ಅಥವಾ ಒಡೆಯ ಎಂದರ್ಥ. ಗುಜರಾತಿನಾದ್ಯಂತ, ಮಾಲ್ದಾರಿಗಳು ಹಸು, ಎಮ್ಮೆ, ಒಂಟೆ, ಕುದುರೆ, ಕುರಿ ಮತ್ತು ಆಡುಗಳನ್ನು ಸಾಕುತ್ತಾರೆ.
ಸುಮಾರು 1,200 ಜನರಿಗೆ ನೆಲೆಯಾಗಿರುವ ಸಾಗರ ಉದ್ಯಾನದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಈ ಎರಡೂ ಗುಂಪುಗಳ ಸದಸ್ಯರನ್ನು ನಾನು ಭೇಟಿಯಾಗುತ್ತಿದ್ದೇನೆ.
"ನಾವು ಈ ಭೂಮಿಯನ್ನು ಗೌರವಿಸುತ್ತೇವೆ" ಎಂದು ಮೂಸಾ ಜಾಟ್ ಹೇಳುತ್ತಾರೆ. "ಜಾಮ್ ನಗರದ ರಾಜನು ಯುಗಯುಗಗಳ ಹಿಂದೆಯೇ ನಮ್ಮನ್ನು ಇಲ್ಲಿ ನೆಲೆಸಲು ಆಹ್ವಾನಿಸಿದನು. ಎಂದರೆ 1982ರಲ್ಲಿ ಈ ಸ್ಥಳವನ್ನು ರಾಷ್ಟ್ರೀಯ ಸಾಗರ ಉದ್ಯಾನವನವೆಂದು ಘೋಷಿಸುವ ಬಹಳ ಮೊದಲು."
ಭುಜ್‌ನಲ್ಲಿ ಪಶುಪಾಲನಾ ಕೇಂದ್ರವನ್ನು ನಡೆಸುತ್ತಿರುವ NGO ಸಹಜೀವನದ ರಿತುಜಾ ಮಿತ್ರಾ ಅವರು ಈ ವಾದವನ್ನು ಬೆಂಬಲಿಸುತ್ತಾರೆ. "ಈ ಪ್ರದೇಶದ ರಾಜಕುಮಾರನು ಎರಡೂ ಕುಲಗಳ ಗುಂಪುಗಳನ್ನು ತನ್ನ ಹೊಸದಾಗಿ ರೂಪುಗೊಂಡ ನವನಗರ ರಾಜ್ಯಕ್ಕೆ ಕರೆದೊಯ್ದನು ಎಂದು ಹೇಳಲಾಗುತ್ತದೆ, ನಂತರ ಅದನ್ನು 'ಜಾಮ್ ನಗರ್' ಎಂದು ಕರೆಯಲಾಗುತ್ತದೆ. ಮತ್ತು ಅಂದಿನಿಂದ, ಆ ಕುರಿಗಾಹಿಗಳ ವಂಶಸ್ಥರು ಈ ಭೂಮಿಗಳಲ್ಲಿ ವಾಸಿಸುತ್ತಿದ್ದಾರೆ.
ಸಹಜೀವನದಲ್ಲಿ ಅರಣ್ಯ ಹಕ್ಕು ಕಾಯಿದೆಯ ರಾಜ್ಯ ಸಂಯೋಜಕರಾಗಿರುವ ರಿತುಜಾ ಹೇಳುತ್ತಾರೆ, "ಈ ಪ್ರದೇಶಗಳಲ್ಲಿನ ಕೆಲವು ಹಳ್ಳಿಗಳ ಹೆಸರುಗಳು ಆ ಜನರು ಬಹಳ ಕಾಲದಿಂದಲೂ ಅಲ್ಲಿ ವಾಸವಿರುವುದಮ್ಮಿ ಸೂಚಿಸುತ್ತದೆ. "ಅಂತಹ ಒಂದು ಹಳ್ಳಿಯ ಹೆಸರು ಊಂಠ್ಬೆಟ್ ಶಂಪಾರ್ – ಬೇರೆ ಭಾಷೆಗಳಲ್ಲಿ ಇದು ಸ್ಥೂಲವಾಗಿ 'ಒಂಟೆಗಳ ದ್ವೀಪ' ಎಂದು ಅನುವಾದಗೊಳ್ಳುತ್ತದೆ."
ಇದಲ್ಲದೆ, ಒಂಟೆಗಳು ಈಜಿನಲ್ಲಿ ಪಳಗಿದವರಂತೆ ವಿಕಸನಗೊಳ್ಳಲು ಬಹಳ ಸಮಯದವರೆಗೆ ಇಲ್ಲಿದ್ದಿರಬೇಕು. ಸಸೆಕ್ಸ್ ಸಂಸ್ಥೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಸಂಶೋಧಕಿ ಲೈಲಾ ಮೆಹ್ತಾ ಹೇಳುವಂತೆ: "ಒಂಟೆಗಳು ಸಾಂಪ್ರದಾಯಿಕವಾಗಿ ಕಾಂಡ್ಲ ಕಾಡುಗಳೊಂದಿಗೆ ಸಹಬಾಳ್ವೆ ನಡೆಸದೆ ಹೋಗಿದ್ದರೆ ಅವುಗಳಿಗೆ ಹೇಗೆ ಈಜಲು ಸಾಧ್ಯವಾಗುತ್ತಿತ್ತು?"
MNP&S ಆವರಣದಲ್ಲಿ ಸುಮಾರು 1,184 ಒಂಟೆಗಳು ಮೇಯುತ್ತಿರಬಹುದು ಎಂದು ರಿತುಜಾ ಹೇಳುತ್ತಾರೆ. ಮತ್ತು ಇವು 74 ಮಾಲ್ಧಾರಿ ಕುಟುಂಬಗಳ ಒಡೆತನದಲ್ಲಿವೆ.
ಕ್ರಿಸ್ತಶಕ 1540ರಲ್ಲಿ ಜಾಮನಗರವನ್ನು ಅಂದಿನ ನವನಗರದ ಸಂಸ್ಥಾನದ ರಾಜಧಾನಿಯಾಗಿ ಸ್ಥಾಪಿಸಲಾಯಿತು. ಮಾಲ್ದಾರಿಗಳು 17ನೇ ಶತಮಾನದ ಯಾವುದೋ ಒಂದು ಹಂತದಲ್ಲಿ ಇಲ್ಲಿಗೆ ಮೊದಲ ಬಾರಿಗೆ ಬಂದರು ಮತ್ತು ಅಂದಿನಿಂದ ಇಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ.
ಅವರು "ಈ ಭೂಮಿಯನ್ನು ಏಕೆ ಗೌರವಿಸುತ್ತಾರೆ" ಎಂದು ನೋಡುವುದು ಕಷ್ಟವೇನಲ್ಲ. ವಿಶೇಷವಾಗಿ ನೀವು ಗ್ರಾಮೀಣ ಅಲೆಮಾರಿಯಾಗಿದ್ದಲ್ಲಿ, ಅವರು ಇಲ್ಲಿನ ಬೆರಗುಗೊಳಿಸುವ ಸಮುದ್ರ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದರೊಂದಿಗೆ ವಾಸಿಸುತ್ತಾರೆ. ಈ ಉದ್ಯಾನವನವು ಹವಳದ ದಿಬ್ಬಗಳು, ಮ್ಯಾಂಗ್ರೋವ್ ಕಾಡುಗಳು, ಮರಳಿನ ಕಡಲತೀರಗಳು, ಕೆಸರುಗದ್ದೆಗಳು, ಕೊರಕಲುಗಳು, ಕಲ್ಲಿನ ಕಡಲತೀರಗಳು, ಕಡಲ ಹುಲ್ಲು ಹಾಸುಗಳು ಮತ್ತು ಇನ್ನೂ ಹಲವನ್ನು ಒಳಗೊಂಡಿದೆ.
ಈ ಪರಿಸರ ಪ್ರದೇಶದ ಅನನ್ಯತೆಯನ್ನು ಇಂಡೋ-ಜರ್ಮನ್ ಜೀವವೈವಿಧ್ಯ ಕಾರ್ಯಕ್ರಮ, GIZ ಪ್ರಕಟಿಸಿದ 2016ರ ಸಂಶೋಧನಾ ಪ್ರಬಂಧದಲ್ಲಿ ಬಹಳ ಚೆನ್ನಾಗಿ ದಾಖಲಿಸಲಾಗಿದೆ. ಈ ಪ್ರದೇಶವು 100ಕ್ಕೂ ಹೆಚ್ಚು ಜಾತಿಯ ಪಾಚಿಗಳು, 70 ಜಾತಿಯ ಸ್ಪಂಜುಗಳು (ಸಮುದ್ರ ಪಾಚಿ) ಮತ್ತು 70ಕ್ಕೂ ಹೆಚ್ಚು ರೀತಿಯ ಗಟ್ಟಿಯಾದ ಮತ್ತು ಮೃದುವಾದ ಹವಳಗಳಿಗೆ ನೆಲೆಯಾಗಿದೆ. ಇದಲ್ಲದೆ 200 ವಿಧದ ಮೀನುಗಳು, 27 ಬಗೆಯ ಸೀಗಡಿಗಳು, 30 ಬಗೆಯ ಏಡಿಗಳು ಮತ್ತು ನಾಲ್ಕು ಬಗೆಯ ಸಮುದ್ರ ಹುಲ್ಲುಗಳು ಸಹ ಇಲ್ಲಿವೆ.
ಇದು ಇಷ್ಟಕ್ಕೇ ಮುಗಿಯುವುದಿಲ್ಲ. ವರದಿಯು ದಾಖಲಿಸಿರುವಂತೆ, ಸಮುದ್ರ ಆಮೆಗಳು ಮತ್ತು ಸಮುದ್ರ ಸಸ್ತನಿಗಳ ತಲಾ ಮೂರು ಪ್ರಭೇದಗಳು, 200ಕ್ಕೂ ಹೆಚ್ಚು ರೀತಿಯ ಮೃದ್ವಂಗಿಗಳು, 90ಕ್ಕೂ ಹೆಚ್ಚು ವಿಧದ ಎರಡು ಚಿಪ್ಪಿನ ಪ್ರಾಣಿಗಳು, 55 ರೀತಿಯ ಉದರಪಾದಿಗಳು ಮತ್ತು 78 ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು.
ಇಲ್ಲಿ, ಫಕೀರಾಣಿ ಜಾಟರು ಮತ್ತು ರಾಬರಿಗಳು ತಲೆಮಾರುಗಳಿಂದ ಖರೈ ಒಂಟೆಗಳನ್ನು ಮೇಯಿಸಿದ್ದಾರೆ. ಗುಜರಾತಿ ಭಾಷೆಯಲ್ಲಿ 'ಖರೈ' ಎಂದರೆ 'ಉಪ್ಪು' ಎಂದರ್ಥ. ಖರೈ ಒಂಟೆ ಒಂದು ವಿಶೇಷ ತಳಿಯಾಗಿದ್ದು, ನೀವು ಸಾಮಾನ್ಯವಾಗಿ ಒಂಟೆಗಳನ್ನು ಕಾಣುವಂತಹ ಪ್ರದೇಶಗಳಿಗಿಂತಲೂ ತುಂಬಾ ಭಿನ್ನವಾದ ಪರಿಸರ ವಲಯಕ್ಕೆ ಯಶಸ್ವಿಯಾಗಿ ಇವು ಒಗ್ಗಿಕೊಂಡಿವೆ. ಅವುಗಳ ಆಹಾರವು ವಿವಿಧ ಸಸ್ಯಗಳು, ಪೊದೆಗಳು ಮತ್ತು ಬಹಳ ಮುಖ್ಯವಾಗಿ, ಕಾರು ಮೇರು ಜಾಟ್ ನಮಗೆ ಹೇಳಿದಂತೆ, ಮ್ಯಾಂಗ್ರೋವ್ ಸಸ್ಯಗಳನ್ನು ಒಳಗೊಂಡಿದೆ.
ಈ ಪ್ರಾಣಿಗಳು - ಈಜಲು ತಿಳಿದಿರುವ ಏಕೈಕ ಡ್ರೋಮೆಡರಿಗಳು (ಒಂಟಿ ಡುಬ್ಬದ ಅರಬ್ಬಿ ಒಂಟೆ, ಸವಾರಿ ಒಂಟೆ) – ಈ ತಳಿಗಳನ್ನು ಹೊಂದಿರುವ ನಿರ್ದಿಷ್ಟ ಕುಲದ ಗುಂಪುಗಳು ಇವೆರಡು ಮಾತ್ರ. ಒಂಟೆಯ ಹಿಂಡು ಸಾಮಾನ್ಯವಾಗಿ ಒಂಟೆಗಳೊಂದಿಗೆ ಈಜುವ ಇಬ್ಬರು ಮಾಲ್ಧಾರಿ ಪುರುಷರನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ, ಅವರಲ್ಲಿ ಒಬ್ಬರು ಆಹಾರ ಮತ್ತು ಕುಡಿಯುವ ನೀರನ್ನು ಸಾಗಿಸಲು ಮತ್ತು ಹಳ್ಳಿಗೆ ಮರಳಲು ಸಣ್ಣ ದೋಣಿಯನ್ನು ಬಳಸುತ್ತಾರೆ. ಇನ್ನೊಬ್ಬ ಪಶುಪಾಲಕ ಜಾನುವಾರುಗಳೊಂದಿಗೆ ದ್ವೀಪದಲ್ಲಿ ವಾಸಿಸುತ್ತಾನೆ, ಅಲ್ಲಿ ಅವನು ತನ್ನ ಲಘು ಆಹಾರ ಸೇವನೆಯನ್ನು ಒಂಟೆ ಹಾಲಿನೊಂದಿಗೆ ಪೂರೈಸುತ್ತಾನೆ, ಇದು ಅವರ ಸಮುದಾಯದ ಆಹಾರದ ಅತ್ಯಗತ್ಯ ಭಾಗವಾಗಿದೆ.
ಆದಾಗ್ಯೂ, ಮಾಲ್ಧಾರಿ ಸಮುದಾಯಗಳ ಪಾಲಿಗೆ ಬದುಕು ಕೆಟ್ಟ ತಿರುವಿನಲ್ಲಿ ಬಂದು ನಿಂತಿದೆ. "ನಮ್ಮನ್ನು ಮತ್ತು ನಮ್ಮ ಉದ್ಯೋಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ." ಎಂದು ಜೇಠಾಭಾಯಿ ರೆಬಾರಿ ಹೇಳುತ್ತಾರೆ. "ನಮಗೆ ಲಭ್ಯವಿದ್ದ ಹುಲ್ಲುಗಾವಲು ಪ್ರದೇಶ ಕುಗ್ಗಿದೆ, ಈ ಪ್ರದೇಶವನ್ನು ಹೆಚ್ಚು ಹೆಚ್ಚು ಅರಣ್ಯ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ. ಈ ಮೊದಲು, ನಾವು ಮ್ಯಾಂಗ್ರೋವ್ ಕಾಡುಗಳಿಗೆ ಮುಕ್ತ ಪ್ರವೇಶವನ್ನು ಹೊಂದಿದ್ದೆವು. 1995ರಿಂದ, ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ನಂತರ ನಮಗೆ ತೊಂದರೆ ನೀಡುವ ಉಪ್ಪಿನ ಪಾತ್ರಗಳಿವೆ. ಇದಲ್ಲದೆ, ವಲಸೆಗೆ ಯಾವುದೇ ಅವಕಾಶವಿಲ್ಲ. ಇವೆಲ್ಲವುಗಳ ಜೊತೆಗೆ - ಈಗ ನಾವು ಅತಿಯಾಗಿ ಮೇಯಿಸುತ್ತಿರುವ ಆರೋಪವನ್ನು ಎದುರಿಸುತ್ತಿದ್ದೇವೆ. ಅದು ಹೇಗೆ ಸಾಧ್ಯ?"
ಈ ಪ್ರದೇಶದಲ್ಲಿ ದೀರ್ಘಕಾಲದಿಂದ FRA ಕೆಲಸ ಮಾಡುತ್ತಿರುವ ರಿತುಜಾ ಮಿತ್ರಾ, ಪಶುಪಾಲಕರ ವಾದವನ್ನು ಬೆಂಬಲಿಸುತ್ತಾರೆ. "ಒಂಟೆಗಳ ಮೇಯುವ [ಅಥವಾ ಸೊಪ್ಪು-ಸದೆ ಮೇಯಿಸುವುದು] ಮಾದರಿಗಳನ್ನು ನೋಡಿದರೆ, ಅವು ಸಸ್ಯ ಪ್ರಭೇದಗಳನ್ನು ಮೇಲಿನಿಂದ ಕತ್ತರಿಸುತ್ತವೆ, ಇದು ನಿಜವಾಗಿಯೂ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ! ರಾಷ್ಟ್ರೀಯ ಸಾಗರ ಉದ್ಯಾನದ ಬೆಟ್‌ಗಳು [ದ್ವೀಪಗಳು] ಯಾವಾಗಲೂ ಅಳಿವಿನಂಚಿನಲ್ಲಿರುವ ಖರೈ ಒಂಟೆಗೆ ನೆಚ್ಚಿನ ಸ್ಥಳವಾಗಿವೆ, ಇದು ಮ್ಯಾಂಗ್ರೋವ್ ಮತ್ತು ಅವುಗಳ ಸಹ ಪ್ರಭೇದಗಳನ್ನು ತಿನ್ನುತ್ತದೆ.
ಅರಣ್ಯ ಇಲಾಖೆಯ ನಂಬಿಕೆ ಇದಕ್ಕೆ ತದ್ವಿರುದ್ಧವಾದುದು. ಕೆಲವು ವರದಿಗಳು, ಮತ್ತು ಕೆಲವು ಶಿಕ್ಷಣತಜ್ಞರ ಅಭಿಪ್ರಾಯಗಳು ಸಹ, ಒಂಟೆಗಳ ಸೊಪ್ಪು-ಸದೆ ತಿನ್ನುವಿಕೆ 'ಅತಿ ಮೇಯುವಿಕೆಗೆ' ಕಾರಣವಾಗುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಪ್ರತಿಪಾದಿಸುತ್ತವೆ.
2016ರ ಸಂಶೋಧನಾ ಪ್ರಬಂಧವು ಸೂಚಿಸುವಂತೆ, ಮ್ಯಾಂಗ್ರೋವ್ ಹೊದಿಕೆಯ ನಷ್ಟಕ್ಕೆ ಅನೇಕ ಕಾರಣಗಳಿವೆ. ಈ ಸಂಶೋಧನೆಯು ಆ ನಷ್ಟವನ್ನು ಕೈಗಾರಿಕೀಕರಣ ಮತ್ತು ಇತರ ಅಂಶಗಳ ಪರಿಣಾಮದೊಂದಿಗೆ ಸಂಪರ್ಕಿಸುತ್ತದೆ. ಆ ಹೊದಿಕೆಯ ಸವೆತಕ್ಕೆ ಮಾಲ್ದಾರಿಗಳು ಮತ್ತು ಅವರ ಒಂಟೆಗಳನ್ನು ಅದು ಎಲ್ಲಿಯೂ ದೂಷಿಸುವುದಿಲ್ಲ.
ಆ ಬಹು ಅಂಶಗಳು ಮಹತ್ವದ್ದಾಗಿವೆ.
ಖರೈ ಒಂಟೆಗಳು - ಈಜಲು ತಿಳಿದಿರುವ ಏಕೈಕ ಡ್ರೊಮೆಡರಿಗಳು - ಅವುಗಳನ್ನು ಹೊಂದಿರುವ ನಿರ್ದಿಷ್ಟ ಮಾಲ್ಧಾರಿ ಗುಂಪುಗಳು ಸಹ ಇವೆ
1980ರ ದಶಕದಿಂದ, ಜಾಮ್‌ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳು ವೇಗವಾಗಿ ಬೆಳೆದವು. "ಉಪ್ಪು ಕೈಗಾರಿಕೆಗಳು ಅಥವಾ ತೈಲ ಜೆಟ್ಟಿಗಳು ಅಥವಾ ಇತರ ರೀತಿಯ ಕೈಗಾರಿಕೀಕರಣದ ಪ್ರಭಾವವನ್ನು ನೋಡಿ," ಎಂದು ರಿತುಜಾ ಹೇಳುತ್ತಾರೆ. “ತಮ್ಮ ಕೆಲಸಕ್ಕಾಗಿ ಭೂಮಿಯನ್ನು ಪಡೆಯಲು ಉದ್ಯಮಿಗಳು ಹೆಚ್ಚು ಕಷ್ಟವನ್ನು ಎದುರಿಸುವುದಿಲ್ಲ - ಈಸ್ ಆಫ್ ಬಿಸ್ನೆಸ್! ಆದರೆ ಜಾನುವಾರು ಸಾಕಣೆದಾರರು ತಮ್ಮ ಜೀವನಾಧಾರದ ವ್ಯವಹಾರಕ್ಕೆ ಭೂಮಿ ಅಗತ್ಯವಿದ್ದಾಗ, ಈ ಖಾತೆಯು ತುಂಬಾ ಸಕ್ರಿಯವಾಗಿಬಿಡುತ್ತದೆ. ಮತ್ತು ವಾಸ್ತವವಾಗಿ ಇದು ಸಂವಿಧಾನದ 19(ಎಚ್) ವಿಧಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ವಿಧಿಯು ಪ್ರತಿಯೊಬ್ಬ ನಾಗರಿಕನಿಗೆ ಉದ್ಯೋಗದ ಸ್ವಾತಂತ್ರ್ಯವನ್ನು ನೀಡುತ್ತದೆ ಅಂದರೆ ಯಾವುದೇ ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ನಡೆಸುವ ಹಕ್ಕನ್ನು ನೀಡುತ್ತದೆ.
ರಾಷ್ಟ್ರೀಯ ಸಾಗರ ಉದ್ಯಾನವನದೊಳಗೆ ಪಶುಪಾಲಕರು ಜಾನುವಾರು ಮೇಯಿಸುವದನ್ನು ಮೇಯಿಸುವುದನ್ನು ನಿಷೇಧಿಸಿರುವುದರಿಂದ, ಒಂಟೆ ಸಾಕಾಣಿಕೆದಾರರು ಹೆಚ್ಚಾಗಿ ಅರಣ್ಯ ಇಲಾಖೆಯಿಂದ ಕಿರುಕುಳವನ್ನು ಎದುರಿಸುತ್ತಾರೆ. ಕಷ್ಟದಲ್ಲಿರುವ ಮಾಲ್ದಾರಿಗಳಲ್ಲಿ ಆದಂ ಜಾಟ್ ಕೂಡ ಒಬ್ಬರು. "ಒಂದೆರಡು ವರ್ಷಗಳ ಹಿಂದೆ, ಇಲ್ಲಿ ಒಂಟೆಗಳನ್ನು ಮೇಯಿಸುತ್ತಿದ್ದಕ್ಕಾಗಿ ಅರಣ್ಯ ಅಧಿಕಾರಿಗಳು ನನ್ನನ್ನು ಬಂಧಿಸಿದರು ಮತ್ತು 20,000 ರೂ.ಗಳ ದಂಡ ಹಾಕಿದರು," ಎಂದು ಅವರು ಹೇಳುತ್ತಾರೆ. ಇಲ್ಲಿರುವ ಇತರ ಪಶುಪಾಲಕರೂ ಇದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
"2006ರ ಕೇಂದ್ರ ಸರ್ಕಾರದ ಶಾಸನವು ಇನ್ನೂ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ." ಎಂದು ರಿತುಜಾ ಮಿತ್ರಾ ಹೇಳುತ್ತಾರೆ. ಅರಣ್ಯ ಹಕ್ಕುಗಳ ಕಾಯ್ದೆ 2006ರ ಅಡಿಯಲ್ಲಿ, ಸೆಕ್ಷನ್ 3 (1) (D) ಬಳಕೆಗಳು ಮತ್ತು ಮೇಯಿಸುವಿಕೆಯ ಸಮುದಾಯ ಹಕ್ಕುಗಳನ್ನು (ನೆಲೆಯಾದ ಅಥವಾ ಪರಿವರ್ತಿತ) ಮತ್ತು ಅಲೆಮಾರಿ ಅಥವಾ ಪಶುಪಾಲಕ ಸಮುದಾಯಗಳ ಸಾಂಪ್ರದಾಯಿಕ ಋತುಮಾನದ ಸಂಪನ್ಮೂಲ ಪ್ರವೇಶವನ್ನು ಒದಗಿಸುತ್ತದೆ.
"ಅದೇನೇ ಇದ್ದರೂ, ಈ ಮಾಲ್ದಾರಿಗಳನ್ನು ಪಶು ಮೇಯಿಸುವಿಕೆಯ ಕಾರಣಕ್ಕೆ ಅರಣ್ಯ ಇಲಾಖೆ ದಂಡಿಸುತ್ತದೆ, ಮತ್ತು ಆಗಾಗ್ಗೆ ಸಿಕ್ಕಿಬಿದ್ದಾಗ 20,000ರಿಂದ 60,000 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ." ಎಂದು ರಿತುಜಾ ಹೇಳುತ್ತಾರೆ, FRA ಅಡಿಯಲ್ಲಿ ಸ್ಥಾಪಿಸಲಾದ ವಿವಿಧ ಸುರಕ್ಷತಾ ಕ್ರಮಗಳು ಕಾಗದದ ಮೇಲಷ್ಟೇ ಇವೆ ಎಂದು ಹೇಳುತ್ತಾರೆ.
ತಲೆತಲಾಂತರಗಳಿಂದ ಇಲ್ಲಿ ವಾಸಿಸುತ್ತಿರುವ ಮತ್ತು ಈ ಸಂಕೀರ್ಣ ವಲಯವನ್ನು ಇತರರಿಗಿಂತ ಚೆನ್ನಾಗಿ ತಿಳಿದಿರುವ ಪಶುಪಾಲಕರನ್ನು ಒಳಗೊಳ್ಳದೆ ಮ್ಯಾಂಗ್ರೋವ್ ಕಾಡನ್ನು ವಿಸ್ತರಿಸಲು ಪ್ರಯತ್ನಿಸುವುದು ನಿರರ್ಥಕವಾಗಿ ಕಾಣುತ್ತದೆ. "ನಾವು ಈ ಭೂಮಿಯನ್ನು ಅರ್ಥಮಾಡಿಕೊಂಡಿದ್ದೇವೆ, ಇಲ್ಲಿನ ಪರಿಸರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು, ಮತ್ತು ಇಲ್ಲಿನ ಪ್ರಭೇದಗಳನ್ನು ಸಹ ಅರ್ಥಮಾಡಿಕೊಂಡಿದ್ದೇವೆ, ಕಾಂಡ್ಲಾ ಕಾಡುಗಳನ್ನು ರಕ್ಷಿಸಲು ಅವರು ಮಾಡುವ ಸರ್ಕಾರದ ನೀತಿಗಳಿಗೆ ನಾವು ವಿರುದ್ಧವಾಗಿಲ್ಲ," ಎಂದು ಜಗಭಾಯಿ ರಾಬರಿ ಹೇಳುತ್ತಾರೆ. "ನಾವು ಕೇಳುವುದು ಇಷ್ಟೇ: ಯಾವುದೇ ನೀತಿಗಳನ್ನು ರೂಪಿಸುವ ಮೊದಲು ದಯವಿಟ್ಟು ನಮ್ಮ ಮಾತುಗಳನ್ನು ಕೇಳಿ. ಇಲ್ಲದಿದ್ದರೆ ಈ ಪ್ರದೇಶದಲ್ಲಿ ವಾಸಿಸುವ ಸುಮಾರು 1,200 ಜನರ ಬದುಕು ಅಪಾಯಕ್ಕೆ ಸಿಲುಕುತ್ತವೆ, ಮತ್ತು ಈ ಎಲ್ಲಾ ಒಂಟೆಗಳ ಜೀವವೂ ಸಹ ಅಪಾಯಕ್ಕೆ ಸಿಲುಕುತ್ತದೆ."
ಈ ವರದಿಗೆ ಸಹಜೀವನ ಒಂಟೆ ಕಾರ್ಯಕ್ರಮದ ಮಾಜಿ ಸಂಯೋಜಕರಾದ ಮಹೇಂದ್ರ ಬನಾನಿ ಅವರು ತಮ್ಮ ಪರಿಣಿತಿಯನ್ನು ಧಾರೆಯೆರೆದು ನೀಡಿದ ಸಹಾಯಕ್ಕಾಗಿ ವರದಿಗಾರ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತಾರೆ.
ರಿತಾಯನ್ ಮುಖರ್ಜಿ ಅವರು ಪಶುಪಾಲನಾ ಕೇಂದ್ರದಿಂದ ಸ್ವತಂತ್ರ ಪ್ರಯಾಣ ಅನುದಾನದ ಮೂಲಕ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಬಗ್ಗೆ ವರದಿ ಮಾಡುತ್ತಾರೆ . ಈ ವರದಿಯ ವಿಷಯಗಳ ಮೇಲೆ ಕೇಂದ್ರವು ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ .
ಅನುವಾದ : ಶಂಕರ . ಎನ್ . ಕೆಂಚನೂರು