ಒಸ್ಮಾನಾಬಾದ್ ಜಿಲ್ಲೆಯ ದಡ ಮುಟ್ಟಿದ ಕೋವಿಡ್-19ರ ಎರಡನೇ ಅಲೆಯು, ಊರಿನ ಬಾಗಿಲು ತಟ್ಟುವುದಲ್ಲದೆ, ಬಾಗಿಲು ಮುರಿದು ಒಳ ನುಗ್ಗಿತು. ಜೊತೆಗೆ ತುಳಜಾಪುರ ತೆಹಸಿಲ್‌ನ ತುಳಜಾ ಭವಾನಿ ಮಂದಿರವೂ ವ್ಯಾಧಿಯನ್ನು ತೀವ್ರಗೊಳಿಸುವುದರಲ್ಲಿ ಪಾತ್ರಧಾರಿಯಾಯಿತು.
ಕೋವಿಡ್-19ರ ಬಾಹುಗಳಿಂದ ತಪ್ಪಿಸಿಕೊಂಡ ಜಯಸಿಂಗ್ ಪಾಟೀಲರು, ಮಂದಿರದಿಂದ ದೂರವಿರಲು ನಿಶ್ಚಯಿಸಿದ್ದಾರೆ. “ನಾನೂ ಶ್ರದ್ಧಾವಂತನೇ. ಜನರ ಶ್ರದ್ಧೆಯನ್ನು ಗೌರವಿಸುತ್ತೇನೆ, ಆದರೆ ಈ ಸರ್ವವ್ಯಾಪಿ ವ್ಯಾಧಿಯ ನಡುವೆ, ಮಂದಿರಗಳನ್ನು ತೆರೆಯುವುದು ಉಚಿತವಲ್ಲ,” ಎಂದರು.
45 ವರ್ಷದವರಾದ ಪಾಟೀಲರು ತುಳಜಾ ಭವಾನಿ ಟೆಂಪಲ್ ಟ್ರಸ್ಟಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. “ಈ ವರ್ಷದ ಫೆಬ್ರವರಿಯಲ್ಲಿ, ನಾನು ನೂರಾರು ಜನರ ಸಾಲನ್ನು ನಿಭಾಯಿಸುತ್ತಿದ್ದೆ.” ಮಹಾರಾಷ್ಟ್ರದ ಪ್ರಮುಖ ತೀರ್ಥಯಾತ್ರೆ ಸ್ಥಳಗಳಲ್ಲಿ ಪ್ರಸ್ತುತವಾಗಿರುವ ಈ ಮಂದಿರಕ್ಕೆ ಭಾರತದೆಲ್ಲೆಡೆಯಿಂದ ಸಾವಿರಾರು ಜನರು ಬರುತ್ತಾರೆ. “ಭಕ್ತರು ಮಂದಿರದೊಳಗೆ ಹೋಗುವುದನ್ನು ತಡೆಯಲು ಹೋದರೆ, ಕುಪಿತರಾಗಿ, ಮೇಲೆ ಬೀಳುತ್ತಿದ್ದರು. ಜನಜಂಗುಳಿಯನ್ನು ನಿಭಾಯಿಸುತ್ತಿರುವಾಗಲೇ ನನಗೆ ಕೋವಿಡ್-19 ತಗಲಿರಬೇಕು.”
ಆಸ್ಪತ್ರೆಯ ಐ.ಸಿ.ಯೂ.ನಲ್ಲಿ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ ಅವರ ರಕ್ತದ ಆಮ್ಲಜನಕ ಮಟ್ಟ ಹೆಚ್ಚು ಕಡಿಮೆ 75-80 ಶೇಕಡವಿತ್ತು – 92 ಶೇಕಡಕ್ಕಿಂತ ಕಡಿಮೆಯಿದ್ದರೆ ಅಪಾಯಕಾರಿ ಎಂದು ಡಾಕ್ಟರುಗಳು ಹೇಳುತ್ತಾರೆ. “ಹೇಗೋ ಬದುಕಿದೆ. ಹಲವಾರು ತಿಂಗಳುಗಳಾದರೂ, ಸುಸ್ತೆನಿಸುತ್ತದೆ,” ಎಂದರು ಜಯಸಿಂಗರು.











