“ನಿಮ್ಮನ್ನು ನಂಬಿ ನನ್ನ ಬದುಕಿನ ಕತೆಯನ್ನ ಹಂಚಿಕೊಳ್ಳಬಹುದಾ?”

ಇದೊಂದು ನೇರ ನಮ್ಮ ವಿಶ್ವಾರ್ಹತೆಯನ್ನೇ ಪ್ರಶ್ನಿಸುವ ಪ್ರಶ್ನೆ. ಆದರೆ ಹಾಗೆ ಪ್ರಶ್ನಿಸಿದವರಿಗೂ ಈ ರೀತಿ ಕೇಳಲು ಅವರದೇ ಕಾರಣವಿತ್ತು. ತಮಿಳು ನಾಡಿನ ವಿಲ್ಲುಪುರಂ ಜಿಲ್ಲೆಯ ಅಪರಿಚಿತ ಹಳ್ಳಿಯೊಂದರ ಜನನಿ (ಹೆಸರು ಬದಲಿಸಲಾಗಿದೆ) ತನ್ನ ಬದುಕನ್ನು ಕ್ಷಯರೋಗ ಸಂಪೂರ್ಣ ಬದಲಿಸಿಬಿಟ್ಟ ಕತೆಯನ್ನ ನನ್ನೊಡನೆ ಹಂಚಿಕೊಳ್ಳುವವರಿದ್ದರು. ಹೀಗಾಗಿ ಅವರು ಆ ಪ್ರಶ್ನೆ ಕೇಳಿದ್ದರು.

ಅವರು ಟಿ.ಬಿ. ಸೋಂಕಿಗೆ ಒಳಗಾದಾಗ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ನಾಲ್ಕು ತಿಂಗಳ ಮಗನಿದ್ದ. “ಟಿಬಿ ಇದೆಯೆಂದು ಗೊತ್ತಾಗಿದ್ದು 2020ರ ಮೇ ತಿಂಗಳಲ್ಲಿ. ಅದಕ್ಕೂ ಒಂದು ತಿಂಗಳಿಗೆ ಮೊದಲು ರೋಗಲಕ್ಷಣಗಳು ಕಾಣಿಸಿಕೊಂಡಿತ್ತು [ತೀವ್ರ ಕೆಮ್ಮು ಮತ್ತು ಜ್ವರ]” ಎಲ್ಲಾ ಮಾಮೂಲಿ ಪರೀಕ್ಷೆಗಳೂ ವಿಫಲಗೊಂಡ ನಂತರ ಡಾಕ್ಟರ್‌ ಟಿ.ಬಿ. ಟೆಸ್ಟ್‌ ಮಾಡಿಸುವಂತೆ ಸಲಹೆ ನೀಡಿದರು. “ಡಾಕ್ಟರ್‌ ಟಿಬಿ ಇದೆಯೆಂದು ಹೇಳಿದಾಗ ನಾನು ಕುಸಿದುಹೋದೆ. ನನಗೆ ಗೊತ್ತಿರುವ ಯಾರಿಗೂ ಟಿ.ಬಿ . ಇದ್ದಿರಲಿಲ್ಲ, ಇಂತಹದ್ದೊಂದು ಕಾಯಿಲೆ ನನಗೆ ಬರಬಹುದೆಂದು ಕನಸಲ್ಲೂ ಎಣಿಸಿರಲಿಲ್ಲ.”

“ಅದೂ ನಮ್ಮ ಊರಲ್ಲಿ ಕಳಂಕವೆಂದು ಭಾವಿಸಲಾಗುವ, ಅದು ಬಂದರೆ ಎಲ್ಲ ಸಾಮಾಜಿಕ ಚಟುವಟಿಕೆಗಳಿಂದ ಬಹಿಷ್ಕಾರಕ್ಕೊಳಪಡಿಸುವ ಕಾಯಿಲೆ ನನಗೆ ಬಂದಿತ್ತು. ಇದನ್ನು ಅರಗಸಿಕೊಳ್ಳುವುದು ಬಹಳ ಕಷ್ಟವಾಗಿತ್ತು.”

ಅಂದಿನಿಂದ ಒಂದು ಕಾಲದಲ್ಲಿ ಬಹಳ ಪ್ರೀತಿ ತೋರಿಸುತ್ತಿದ್ದ ಜನನಿಯ 27 ವರ್ಷದ ಗಂಡ ಹೆಂಡತಿಗೆ ಬಂದ ಕಾಯಿಲೆ ತನನಗೂ ಬರಬಹುದೆಂದು ಅಂತರ ಕಾಯ್ದುಕೊಳ್ಳತೊಡಗಿದ. “ಅವನು ಮಾನಸಿಕ ಮತ್ತು ದೈಹಿಕ ಎರಡೂ ಬಗೆಯಲ್ಲೂ ಹಿಂಸೆ ಮಾಡುತ್ತಿದ್ದ. ನಮ್ಮ ಮದುವೆಯಾದ ಒಂದು ವರ್ಷಕ್ಕೆ ಅವನ ಅಮ್ಮ ತೀರಿಕೊಂಡಿದ್ದರು. ಅದಕ್ಕೆ ಕಾರಣ ಯಾವುದೋ ಕಿಡ್ನಿ ಸಂಬಂಧಿ ಕಾಯಿಲೆಯಾಗಿತ್ತು. ಆದರೆ ನನ್ನ ಗಂಡ ಅವರ ಸಾವಿಗೂ ನಾನೇ ಕಾರಣವೆಂದು ದೂಷಿಸುತ್ತಿದ್ದ.”

ಆ ಸಮಯದಲ್ಲಿ ನಿಜವಾದ ಗಂಭೀರ ತೊಂದರೆಯಲ್ಲಿದ್ದ ವ್ಯಕ್ತಿಯೆಂದರೆ ಜನನಿಯೇ ಆಗಿದ್ದರು.

ಟಿ.ಬಿ. ಇಂದಿಗೂ ಭಾರತದಲ್ಲಿ ಅತಿ ಹೆಚ್ಚು ಜೀವಗಳನ್ನು ಬಲಿಪಡೆಯುತ್ತಿರುವ ಸೋಂಕಾಗಿದೆ.

Less than a month after contracting TB, Janani went to her parents’ home, unable to take her husband's abuse. He filed for divorce
Less than a month after contracting TB, Janani went to her parents’ home, unable to take her husband's abuse. He filed for divorce

ಸೋಂಕು ತಗುಲಿದ ಒಂದು ತಿಂಗಳಿಗೂ ಮೊದಲೇ ತನ್ನ ಗಂಡ ನೀಡುತ್ತಿದ್ದ ಹಿಂಸೆ ತಡೆಯಲಾಗದೆ ತನ್ನ ತವರಿಗೆ ಮರಳಿದರು. ಅವನು ಡಿವೋರ್ಸ್‌ಗಾಗಿ ಅರ್ಜಿ ಹಾಕಿದ್ದ .

ಕೋವಿಡ್ -19 ಉಲ್ಬಣಿಸುವ ಮೊದಲೇ, ಕ್ಷಯರೋಗವು 2019ರಲ್ಲಿ 26 ಲಕ್ಷ ಭಾರತೀಯರನ್ನು ಬಾಧಿಸಿದೆ, ಸುಮಾರು 450,000 ಇದಕ್ಕೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆ ವರ್ಷ ಟಿಬಿ ಸಂಬಂಧಿತ ಸಾವುಗಳ ಸಂಖ್ಯೆ 79,000 ಕ್ಕಿಂತ ಹೆಚ್ಚಿಲ್ಲ ಎಂದು ಡಬ್ಲ್ಯುಎಚ್‌ಒ ಅಂಕಿ ಅಂಶವನ್ನು ಭಾರತ ಸರ್ಕಾರ ಬಲವಾಗಿ ನಿರಾಕರಿಸಿ ಹೇಳಿಕೆ ನೀಡಿತ್ತು. ಕಳೆದ 15 ತಿಂಗಳುಗಳಲ್ಲಿ ಕೋವಿಡ್ -19 ಸೋಂಕಿನಿಂದ ಸಂಭವಿಸಿದ ಸಾವಿನ ಸಂಖ್ಯೆ 250,000.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2019ರಲ್ಲಿ ಜಗತ್ತಿನ 1 ಮಿಲಿಯನ್ ಕ್ಷಯ ರೋಗಿಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಸೋಂಕಿತರು ಭಾರತದಲ್ಲಿದ್ದರು. “2019ರಲ್ಲಿ, ವಿಶ್ವಾದ್ಯಂತ ಅಂದಾಜು 10 ಮಿಲಿಯನ್ ಜನರು ಕ್ಷಯರೋಗಕ್ಕೆ ತುತ್ತಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿದೆ.” ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಕ್ಷಯರೋಗದಿಂದ ಮರಣಿಸಿದ 14 ಲಕ್ಷ ಜನರಲ್ಲಿ ನಾಲ್ಕನೇ ಒಂದು ಭಾಗ ಭಾರತೀಯರು.

ಆರೋಗ್ಯ ಸಂಸ್ಥೆಯ ಪ್ರಕಾರ ಈ ಕಾಯಿಲೆ ಬ್ಯಾಕ್ಟೀರಿಯಾ ಮೂಲಕ ಹರಡುತ್ತದೆ (ಮೈಕೋಬ್ಯಾಕ್ಟೀರಿಯಂ ಟ್ಯುಬರೋಕ್ಯುಲೊಸಿಸ್). ಈ ಕಾಯಿಲೆಯು ಹೆಚ್ಚಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಗಾಳಿಯ ಮೂಲಕ ಹರಡುವ ಈ ರೋಗವು ಶ್ವಾಸಕೋಶದ ಟಿಬಿ ಇರುವ ವ್ಯಕ್ತಿಯು ಸೀನುವಾಗ, ಕೆಮ್ಮುವಾಗ ಅಥವಾ ಉಗುಳಿದಾಗ, ಟಿಬಿ ರೋಗಾಣುಗಳು ಹೊರಬಂದು ಹರಡುತ್ತವೆ. ವಿಶ್ವದ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಟಿಬಿ ಸೋಂಕನ್ನು ಹೊಂದಿದ್ದಾರೆ, ಇದರರ್ಥ ಈ ಜನರು ಟಿಬಿ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗಿದ್ದಾರೆ ಆದರೆ ಅವರಲ್ಲಿ ಕಾಯಿಲೆ ಇನ್ನೂ ಕಂಡುಬಂದಿಲ್ಲ ಮತ್ತು ಇವರಿಂದ ರೋಗ ಹರಡುವುದಿಲ್ಲ.

ಕ್ಷಯರೋಗದ ಕುರಿತು ಮುಂದುವರೆದು ವಿಶ್ವಸಂಸ್ಥೆ ಹೇಳುತ್ತದೆ, "ಇದು ಬಡತನ ಮತ್ತು ಆರ್ಥಿಕ ಸಂಕಷ್ಟದ ಕಾಯಿಲೆ." ಮತ್ತು, ಟಿಬಿ ಪೀಡಿತ ಜನರು ಸಾಮಾನ್ಯವಾಗಿ “ಖಂಡನೀಯತೆ, ಸಮಾಜದಿಂದ ಹೊರದೂಡುವಿಕೆ, ಕಳಂಕ ಮತ್ತು ತಾರತಮ್ಯವನ್ನು ಎದುರಿಸುತ್ತಾರೆ ..”

ಇದು ಎಷ್ಟು ನಿಜವೆನ್ನುವುದು ಜನನಿಗೆ ಪೂರ್ತಿಯಾಗಿ ಅರ್ಥವಾಗಿದೆ. ಅವರು ತನ್ನ ಬಳಿ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಶಿಕ್ಷಣದ ವಿಷಯದಲ್ಲಿ ಪದವಿಯನ್ನು ಹೊಂದಿದ್ದರೂ ಈ ಕಳಂಕ, ತಾರತಮ್ಯ, ಖಂಡನೀಯತೆ ಇವ್ಯಾವುದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದೆಲ್ಲವನ್ನೂ ಅನುಭವಿಸಲೇಬೇಕಾಯಿತು. ಅವರ ತಂದೆ ದಿನಗೂಲಿಯಾಗಿದ್ದು ಕೆಲಸ ದೊರೆತ ದಿನ ಮಾಡುತ್ತಾರೆ. ತಾಯಿ ಗೃಹಿಣಿ.

ಆದರೆ ಅವರು ಅನಾರೋಗ್ಯದಿಂದ ಸಂಪೂರ್ಣವಾಗಿ ಗುಣಮುಖರಾದ ನಂತರ ಸುಮ್ಮನೆ ಕೂರಲಿಲ್ಲ. ಈಗ ಜನನಿ ಜನರನ್ನು ಭಯಭೀತಗೊಳಿಸುವ ಟಿ.ಬಿ. ಕುರಿತು ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿಯಾನದ ಭಾಷೆಯಲ್ಲಿ ಹೇಳುವುದಾದರೆ ಅವರೀಗ "ಟಿಬಿ ವಾರಿಯರ್" ಅಥವಾ "ಟಿಬಿ ಲೀಡರ್". ಕ್ಷಯರೋಗ ತರುವ ಕಳಂಕ ಮತ್ತು ಸಾಮಾಜಿಕ ಬಹಿಷ್ಕಾರವನ್ನು ತೊಲಗಿಸುವತ್ತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

Janani has been meeting people in and around her village to raise awareness about TB and to ensure early detection.
PHOTO • Courtesy: Resource Group for Education and Advocacy for Community Health (REACH)

ಜನನಿ ತನ್ನ ಊರಿನ ಮತ್ತು ಅಕ್ಕ ಪಕ್ಕದ ಊರುಗಳ ಜನರನ್ನು ಭೇಟಿಯಾಗಿ ಟಿ.ಬಿ. ಕುರಿತು ಜಾಗೃತಿ ಮೂಡಿಸುವುದು ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆಯನ್ನು ಖಾತರಿಪಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ

ಜೂನ್ 2020ರಲ್ಲಿ, ಈ ಕಾಯಿಲೆಗೆ ತುತ್ತಾದ ಒಂದು ತಿಂಗಳೊಳಗೆ ಜನನಿ ತನ್ನ ಹೆತ್ತವರ ಮನೆಗೆ ಮರಳಿದರು. "ಗಂಡನ  ನಿಂದನೆಯನ್ನು ಇನ್ನು ಸಹಿಸಲಾಗದು ಎನ್ನಿಸಿಬಿಟ್ಟಿತ್ತು. ನನ್ನ ನಾಲ್ಕು ತಿಂಗಳ ಮಗುವನ್ನೂ ಅವನು ನಿಂದಿಸುತ್ತಿದ್ದ, ಅದರದು ಏನು ತಪ್ಪಿತ್ತು?" ಸಣ್ಣದೊಂದು ವರ್ಕ್‌ಶಾಪ್‌ ನಡೆಸುತ್ತಿರುವ ಪತಿ ಆ ಕೂಡಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ. ಇದರಿಂದ ಆಕೆಯ ಪೋಷಕರು "ಊಹಿಸಲಾಗದಷ್ಟು ಆಘಾತಕ್ಕೊಳಗಾಗಿದ್ದಾರು" ಎಂದು ಅವರು ಹೇಳುತ್ತಾರೆ.

ಜನನಿಯ ತವರಿನವರು ಅವರನ್ನು ಕೈಬಿಡಲಿಲ್ಲ, ಅವರನ್ನ ತಮ್ಮ  ಮನೆಗೆ ಸ್ವಾಗತಿಸಿದರು. ತನ್ನ ತವರಿಗೆ ಎಷ್ಟು ಋಣಿಯಾಗಿದ್ದರೂ ಸಾಲದೆನ್ನುತ್ತಾರೆ ಜನನಿ. "ನಾನು ಚಿಕ್ಕವಳಿರುವಾಗಲಾಗಲಿ ಅಥವಾ ಯುವತಿಯಾಗಿದ್ದಾಗಲಾಗಲಿ ನಮ್ಮ ಮನೆಯಲ್ಲಿ ನನ್ನನ್ನು ಕೃಷಿ ಕೆಲಸಗಳಿಗೆ ಕಳಿಸಿರಲಿಲ್ಲ. ಹಾಗೆ ಕೃಷಿ ಕೆಲಸಗಳಿಗೆ ಮಕ್ಕಳನ್ನು ಕಳಿಸುವುದು ನಮ್ಮಲ್ಲಿ ಸರ್ವೇಸಾಮಾನ್ಯ ಪದ್ಧತಿಯಾಗಿದೆ. ಆದರೆ ನಮ್ಮ ಪೋಷಕರು ಹಾಗೆ ಮಾಡದೆ ಎಲ್ಲ ಮಕ್ಕಳಿಗೂ ಸಮನಾಗಿ ವಿದ್ಯೆ ಕೊಡಿಸಿದರು." ಜನನಿಗೆ ಒಬ್ಬ ಅಣ್ಣ ಮತ್ತು ಸಹೋದರಿಯಿದ್ದಾರೆ. ಇಬ್ಬರೂ ಪದವೀಧರರು. ಪತಿಯಿಂದ ಬೇರ್ಪಟ್ಟ ನಂತರ ಜನನಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು.

2020ರ ಡಿಸೆಂಬರ್‌ನಲ್ಲಿ, ಕ್ಷಯರೋಗದಿಂದ ಸಂಪೂರ್ಣವಾಗಿ ಗುಣಮುಖರಾದ ನಂತರ, ತನ್ನ ಓದಿಗೆ ತಕ್ಕನಾದ ಕೆಲಸ ಹುಡುಕದಿರಲು ನಿರ್ಧರಿಸಿದ ಅವರು ತಮಿಳುನಾಡಿನಲ್ಲಿ ಎರಡು ದಶಕಗಳಿಂದ ಟ.ಬಿ. ನಿರ್ಮೂಲನೆ ಕ್ಷೇತ್ರದಲ್ಲಿ ಲಾಭೋದ್ದೇಶ ರಹಿತವಾಗಿ ಕೆಲಸ ಮಾಡುತ್ತಿರುವ ರಿಸೋರ್ಸ್ ಗ್ರೂಪ್ ಫಾರ್ ಎಜುಕೇಶನ್ ಅಂಡ್ ಅಡ್ವೊಕಸಿ ಫಾರ್ ಕಮ್ಯೂನಿಟಿ ಹೆಲ್ತ್ (ರೀಚ್) ಗೆ ಸೇರಿದರು.

ಅಂದಿನಿಂದ, ಜನನಿ ತನ್ನ ಹಳ್ಳಿ ಮತ್ತು ಸುತ್ತಮುತ್ತಲಿನ ಜನರ ಬಳಿ ತೆರಳಿ ಟಿಬಿ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. "ನಾನು ಹಲವಾರು ಸಭೆಗಳನ್ನು ನಡೆಸಿದ್ದೇನೆ, ಮೂರು ರೋಗಿಗಳಲ್ಲಿ ಆರಂಭಿಕ ಕ್ಷಯರೋಗವನ್ನು ಪತ್ತೆ ಮಾಡಿದ್ದೇನೆ ಮತ್ತು ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದ ಆದರೆ ನಿರಂತರ ರೋಗಲಕ್ಷಣಗಳನ್ನು ಹೊಂದಿರುವ 150 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಅನುಸರಿಸುತ್ತಿದ್ದೇನೆ."

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ: “ಕ್ಷಯವನ್ನು ಗುಣಪಡಿಸಬಹುದು ಮತ್ತು ತಡೆಯಬಹುದು. ಎಂಭತ್ತೈದು ಪ್ರತಿಶತದಷ್ಟು ಟಿಬಿ ರೋಗಿಗಳು 6 ತಿಂಗಳ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. 2000 ಇಸವಿಯಿಂದ ಟಿ.ಬಿ. ಚಿಕಿತ್ಸೆಯಿಂದ ಸುಮಾರು 6 ಕೋಟಿ ಸಾವುಗಳನ್ನು ತಡೆಯಲಾಗಿದೆ. ಆದರೆ ಆರೋಗ್ಯ ರಕ್ಷಣೆ ಇನ್ನೂ ಎಲ್ಲರಿಗೂ ತಲುಪಿಲ್ಲ ಮತ್ತು ಲಕ್ಷಾಂತರ ಜನರು ತಪಾಸಣೆ ಮತ್ತು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ.

*****

"ಕೋವಿಡ್‌ ಮತ್ತು ಲಾಕ್‌ಡೌನ್ ಸಮಯದಲ್ಲಿ ಈ ಕೆಲಸ ಮಾಡುವುದೊಂದು ಸವಾಲಾಗಿತ್ತು." ಎಂದು ತಮಿಳುನಾಡಿನ ತೇನ್‌ಕಾಸಿ ಜಿಲ್ಲೆಯ 36 ವರ್ಷದ ಬಿ. ದೇವಿ ಹೇಳುತ್ತಾರೆ. ಅವರೂ ಜನನಿಯಂತೆಯೇ ಸ್ವಾನುಭವದಿಂದಲೇ ʼಟಿ.ಬಿ. ವಾರಿಯರ್‌ʼ ಆಗಿ ಮಾರ್ಪಟ್ಟವರು. "7ನೇ ತರಗತಿಯಲ್ಲಿರುವಾಗ ನನಗೆ ಕ್ಷಯರೋಗವಿರುವುದು ಪತ್ತೆಯಾಯಿತು. ಅದಕ್ಕೂ ಮೊದಲು ನಾನು ಈ ಪದವನ್ನು ಕೇಳಿರಲಿಲ್ಲ." ಅವರ ಎಲ್ಲ ಹೋರಾಟಗಳ ನಡುವೆಯೂ ಅವರು 12 ನೇ ತರಗತಿಯವರೆಗೆ ಅಧ್ಯಯನ ಮಾಡುವಲ್ಲಿ ಯಶಸ್ವಿಯಾದರು.

ಆಕೆಯ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ರೋಗ ಗುಣವಾಗಲಿಲ್ಲ. “ನಂತರ ನಾವು ತೇನ್‌ಕಾಸಿಯ ಸರ್ಕಾರಿ ಆಸ್ಪತ್ರೆಗೆ ಹೋದೆವು, ಅಲ್ಲಿ ನನ್ನನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಆದರೆ ಈಗ ಅದರ ಬಗ್ಗೆ ಯೋಚಿಸುವಾಗ, ಚಿಕಿತ್ಸೆ ನನ್ನಲ್ಲಿ ಒಂದಿಷ್ಟೂ ಧೈರ್ಯ ತುಂಬಲಿಲ್ಲ. ನನ್ನ ಸಂಪರ್ಕಕ್ಕೆ ಬಂದವರು ಇಂತಹ ಅನುಭವ ಪಡೆಯಬಾರದೆನ್ನುವುದು ನನ್ನ ಬಯಕೆ ”ಎಂದು ದೇವಿ ಹೇಳುತ್ತಾರೆ.

The organisation's field workers and health staff taking a pledge to end TB and its stigma at a health facility on World TB Day, March 24. Right: The Government Hospital of Thoracic Medicine (locally known as Tambaram TB Sanitorium) in Chennai
PHOTO • Courtesy: Resource Group for Education and Advocacy for Community Health (REACH)
The organisation's field workers and health staff taking a pledge to end TB and its stigma at a health facility on World TB Day, March 24. Right: The Government Hospital of Thoracic Medicine (locally known as Tambaram TB Sanitorium) in Chennai
PHOTO • M. Palani Kumar

ಮಾರ್ಚ್ 24, ವಿಶ್ವ ಟಿಬಿ ದಿನದಂದು ಆರೋಗ್ಯ ಸೌಲಭ್ಯ  ಕೇಂದ್ರದದಲ್ಲಿ ಟಿಬಿ ಮತ್ತು ಅದರ ಕಳಂಕವನ್ನು ಕೊನೆಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಸಂಸ್ಥೆಯ ಕ್ಷೇತ್ರ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿ. ಬಲ: ಚೆನ್ನೈನ ಗವರ್ನಮೆಂಟ್‌ ಹಾಸ್ಪಿಟಲ್‌ ಆಫ್ ಥೊರಾಸಿಕ್ ಮೆಡಿಸಿನ್ (ಸ್ಥಳೀಯವಾಗಿ ತಂಬರಂ ಟಿಬಿ ಸ್ಯಾನಿಟೋರಿಯಂ ಎಂದು ಕರೆಯಲಾಗುತ್ತದೆ)

ದೇವಿ ತೇನ್‌ಕಾಸಿ ಜಿಲ್ಲೆಯ ವೀರಕೆರಲಂಪುದೂರ್ ಎಂಬ ತಾಲೂಕಿನವರು. ಆಕೆಯ ಪೋಷಕರು ಕೃಷಿ ಕಾರ್ಮಿಕರಾಗಿದ್ದರು. ತಮ್ಮ ಬಡತನದ ನಡುವೆಯೂ, ತನಗೆ ಟಿ.ಬಿ. ಸೋಂಕುಂಟಾದಾಗ ಪೋಷಕರು ಮತ್ತು ಸಂಬಂಧಿಕರು ಬೆಂಬಲ ನೀಡಿದ್ದರು ಎಂದು ಅವರು ಹೇಳುತ್ತಾರೆ. ಅವರ ಪೋಷಕರು ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರೊಂದಿಗೆ ಶೃದ್ಧೆಯಿಂದ ಹಲವು ತಿಂಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಿದರು "ಅವರು ನನ್ನನ್ನು ಚೆನ್ನಾಗಿ ನೋಡಿಕೊಂಡರು" ಎಂದು ಅವರು ಹೇಳುತ್ತಾರೆ.

ದೇವಿಯ ಪತಿ ಕೂಡ ಅವರೊಡನೆ ಸಹಾಯಕ ಮತ್ತು ತಾಳ್ಮೆಯ ಮನೋಭಾವದಿಂದ್ದರು. ಪತ್ನಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು ಅವರ ಆಲೋಚನೆಯೇ. ಹೀಗೆ ದೇವಿ ಟಿ.ಬಿ. ವಿರೋಧಿ ಅಭಿಯಾನಕ್ಕೆ ಸೇರಿ ತರಬೇತಿ ಪಡೆದ ನಂತರ ಜನನಿ ಕೆಲಸ ಮಾಡುತ್ತಿದ್ದ ಅದೇ ಸಂಸ್ಥೆಯಲ್ಲಿ ಸೇರಿದರು. ಸೆಪ್ಟೆಂಬರ್ 2020ರಿಂದ, ದೇವಿ ಕನಿಷ್ಠ 12 ಸಭೆಗಳನ್ನು ನಡೆಸಿ (ಪ್ರತಿ ಸಭೆಗೆ ಸರಾಸರಿ 20 ಜನರು) ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

“ತರಬೇತಿ ಪೂರ್ಣಗೊಳಿಸಿದ ನಂತರ, ನಾನು ಟಿಬಿ ರೋಗಿಗಳೊಂದಿಗೆ ಕೆಲಸ ಮಾಡಬಲ್ಲೆನೆಂಬ ವಿಶ್ವಾಸ ಮೂಡಿತು. ನಿಜ ಹೇಳಬೇಕೆಂದರೆ, ನನಗೆ ಬಹಳ ಸಂತೋಷವಾಯಿತು. ನನಗೆ ಸಿಗದೆ ಹೋಗಿದ್ದ ಒಂದಷ್ಟು ಸೇವೆಗಳನ್ನು ಜನರಿಗೆ ಒದಗಿಸಲು ಉತ್ಸುಕಳಾಗಿದ್ದೆ” ಪ್ರಸ್ತುತ, ದೇವಿ ತೇನ್‌ಕಾಸಿ ಜಿಲ್ಲೆಯ ಪುಲಿಯಂಗುಡಿ ಮಹಾನಗರ ಪಾಲಿಕೆಯ ಜನರಲ್ ಆಸ್ಪತ್ರೆಯಲ್ಲಿ 42 ಟಿಬಿ ರೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರಿಗೆ ಕಾಯಿಲೆ ಗುಣವಾಗಿದೆ ಎಂದು ಘೋಷಿಸಲಾಗಿದೆ. “ವಾಸ್ತವವಾಗಿ, ನಮ್ಮ ಮುಖ್ಯ ಕೆಲಸವೆಂದರೆ ಸಮಾಲೋಚನೆ ಮತ್ತು ರೋಗಿಗಳ ಆರೈಕೆ. ಒಬ್ಬ ವ್ಯಕ್ತಿಯು ಕ್ಷಯರೋಗದಿಂದ ಬಳಲುತ್ತಿದ್ದರೆ, ನಾವು ಅವರ ಕುಟುಂಬ ಸದಸ್ಯರನ್ನು ಸಹ ಪರೀಕ್ಷಿಸುತ್ತೇವೆ ಮತ್ತು ಅವರಿಗೆ ಸೋಂಕು ಹರಡದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.”

ದೇವಿ ಮತ್ತು ಜನನಿ ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇಂತಹ ಬಿಕ್ಕಟ್ಟುಗಳಲ್ಲಿ ಕೆಲಸ ಮಾಡುವುದು ಅವರಿಗೆ ಬಹಳ ಅಪಾಯಕಾರಿ. ಆದರೆ ಅವರು ಕೆಲಸ ಮಾಡುತ್ತಲೇ ಇದ್ದಾರೆ. ದೇವಿ ಹೇಳುತ್ತಾರೆ, “ಸಮಯ ಕಠಿಣವಾಗಿದೆ, ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ಕಫವನ್ನು ಪರೀಕ್ಷಿಸದಂತೆ ನಮ್ಮನ್ನು ತಡೆಯುತ್ತಾರೆ. ಅವರು ಇಲ್ಲದ ಸಮಯ ನೋಡಿ ತೊಂದರೆಯಾಗದಂತೆ ಪರಿಶೀಲಿಸಬೇಕಾಗಿದೆ"

ಈ ಸಾಂಕ್ರಾಮಿಕದಿಂದ ಎದುರಾಗುವ ಸವಾಲುಗಳು ಅಗಾಧವಾಗಿವೆ. ಯುರೋಪಿಯನ್ ರೆಸ್ಪಿರೇಟರಿ ಜರ್ನಲ್ನಲ್ಲಿನ ಅಧ್ಯಯನವನ್ನು ಉಲ್ಲೇಖಿಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ , "ಕೋವಿಡ್ -19 ಸಾಂಕ್ರಾಮಿಕವು ಆರೋಗ್ಯ ಸೇವೆಗಳಿಗೆ ತೊಡಕುಂಟುಮಾಡಿದೆ ಮತ್ತು ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿನ ವಿಳಂಬವು ಮುಂದಿನ ಐದು ವರ್ಷಗಳಲ್ಲಿ ಕ್ಷಯರೋಗ ಸಂಬಂಧಿತ ಸಾವಿನ ಸಂಖ್ಯೆಯನ್ನು 95,000 ಕ್ಕೆ ಹೆಚ್ಚಿಸಬಹುದು ಎಂದು ಹೇಳಿದೆ." ಈ ಸಮಸ್ಯೆಗಳು ಅಂಕಿ-ಅಂಶಗಳ ಮೇಲೂ ಪರಿಣಾಮ ಬೀರುತ್ತವೆ - ಸಾಂಕ್ರಾಮಿಕ ಪಿಡುಗು ಪ್ರಾರಂಭವಾದಾಗಿನಿಂದ ಟಿಬಿ ದಾಖಲಾತಿಗಳಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಅಲ್ಲದೆ ವಿಶ್ವಾಸಾರ್ಹ ಮಾಹಿತಿ ಲಭ್ಯವಿಲ್ಲದಿದ್ದರೂ, ಕೋವಿಡ್ -19ರ ಬಲಿಪಶುಗಳಲ್ಲಿ ಅನೇಕರು ಕ್ಷಯರೋಗವನ್ನು ಹೊಂದಿದ್ದರು ಎಂಬುದರಲ್ಲಿ ಸಂದೇಹವಿಲ್ಲ.

ತಮಿಳುನಾಡು ಭಾರತದ ಅತ್ಯಂತ ಹೆಚ್ಚು ಟಿ.ಬಿ. ಪೀಡಿತ ರಾಜ್ಯಗಳಲ್ಲಿ ಒಂದಾಗಿದೆ . ಭಾರತದ ಟಿಬಿ ಕುರಿತ ವರದಿ 2020 ರ ಪ್ರಕಾರ, 2019ರಲ್ಲಿ ರಾಜ್ಯದಲ್ಲಿ 1,10,845 ಟಿಬಿ ರೋಗಿಗಳಿದ್ದರು. ಅವರಲ್ಲಿ 77,815 ಪುರುಷರು, 33,905 ಮಹಿಳೆಯರು ಮತ್ತು 125 ಟ್ರಾನ್ಸ್‌ಜೆಂಡರ್.

ಇದರ ಹೊರತಾಗಿಯೂ, ಇತ್ತೀಚಿನ ದಿನಗಳಲ್ಲಿ ನೋಂದಾಯಿತ ಕ್ಷಯ ರೋಗಿಗಳ ಪಟ್ಟಿಯಲ್ಲಿ ರಾಜ್ಯ 14ನೇ ಸ್ಥಾನಕ್ಕೆ ಇಳಿದಿದೆ. ರೋಗದ ಬಗ್ಗೆ ವ್ಯಾಪಕ ಅನುಭವ ಹೊಂದಿರುವ ಚೆನ್ನೈ ಮೂಲದ ಆರೋಗ್ಯ ಕಾರ್ಯಕರ್ತರ ಪ್ರಕಾರ, ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. "ನಮ್ಮ ಗಮನಕ್ಕೆ ಬಂದಂತೆ. ಮೂಲಸೌಕರ್ಯ ಮತ್ತು ಬಡತನ ನಿವಾರಣೆ ಎರಡೂ ರಂಗಗಳಲ್ಲಿ ತಮಿಳುನಾಡು ಉತ್ತಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಕೈಗೊಂಡ ಕ್ರಮಗಳು ತುಲನಾತ್ಮಕವಾಗಿ ಉತ್ತಮವಾಗಿವೆ. ಆದರೆ ಸರ್ಕಾರಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವ ಸಾಧ್ಯತೆಯೂ ಇದೆ. ಕೆಲವು ಆಸ್ಪತ್ರೆಗಳಲ್ಲಿ, ಎದೆಯ ಎಕ್ಸರೇ ತೆಗೆದುಕೊಳ್ಳಲು ಬಹಳ ಕಷ್ಟಪಡಬೇಕಾಗುತ್ತದೆ [ಕೋವಿಡ್ -19 ಕಾರಣ ಆರೋಗ್ಯ ಸೇವೆಗಳ ಮೇಲಿನ ಒತ್ತಡದಿಂದಾಗಿ ಇದು ಈಗ ಮತ್ತಷ್ಟು ಜಟಿಲವಾಗಿದೆ]. ಕ್ಷಯರೋಗಕ್ಕೆ ಕಡ್ಡಾಯವಾಗಿರುವ ಎಲ್ಲಾ ಪರೀಕ್ಷೆಗಳನ್ನು ನಾವು ಮಾಡಲು ಸಾಧ್ಯವಿಲ್ಲ. ಪ್ರಸ್ತುತ, ರೋಗದ ವ್ಯಾಪ್ತಿಯ ಬಗ್ಗೆ ಒಂದು ಸಮೀಕ್ಷೆ ನಡೆಯುತ್ತಿದೆ, ಮತ್ತು ಫಲಿತಾಂಶಗಳು ತಿಳಿಯುವವರೆಗೆ, ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂಬುದರ ಕುರಿತು ನಮಗೆ ನಿಖರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ."

ಕ್ಷಯರೋಗ ಪೀಡಿತರಿಗೆ ಈಗಲೂ ಸಾಮಾಜಿಕ ಕಳಂಕ, ಅಪಮಾನಗಳನ್ನು ಎದುರಿಸಿ ನಿಲ್ಲುವ ವಿಷಯದಲ್ಲಿ ಹೇಳಲಾಗದಷ್ಟು ಸಮಸ್ಯೆಗಳಿವೆ. “ಸೋಂಕಿಗೀಡಾದ ಮಹಿಳೆಯರು ಪುರುಷರಿಗಿಂತ ಕಡಿಮೆ ಸಂಖ್ಯೆಯಲ್ಲಿರಬಹುದು, ಆದರೆ ರೋಗಕ್ಕೆ ಸಂಬಂಧಿಸಿದ ಸಾಮಾಜಿಕ ಅಪಮಾನಗಳು ಇಬ್ಬರಿಗೂ ಒಂದೇ ಆಗಿರುವುದಿಲ್ಲ. ಪುರುಷರನ್ನೂ ಈ ವಿಷಯದಲ್ಲಿ ದೂಷಿಸಲಾಗುತ್ತದೆಯಾದರೂ, ಮಹಿಳೆಯರ ವಿಷಯದಲ್ಲಿ ಇದು ಗಂಭೀರ ಮಟ್ಟದಲ್ಲಿರುತ್ತದೆ” ಎಂದು ರೀಚ್‌ನ ಉಪನಿರ್ದೇಶಕಿ ಅನುಪಮಾ ಶ್ರೀನಿವಾಸನ್ ಹೇಳುತ್ತಾರೆ.

ಜನನಿ ಮತ್ತು ದೇವಿ ಕೂಡ ಈ ಅಂಶವನ್ನು ಒಪ್ಪುತ್ತಾರೆ. ಬಹುಶಃ ಅವರು ಈ ದಾರಿಯನ್ನು ಆಯ್ದುಕೊಳ್ಳಲು ಇದು ಕೂಡ ಒಂದು ಕಾರಣ.

*****

ಇನ್ನೊಬ್ಬರನ್ನು ಭೇಟಿಯಾಗೋಣ. ಅವರೇ ಪೂಂಗೊಡಿ ಗೋವಿಂದರಾಜ್. ಟಿ.ಬಿ. ಕ್ಯಾಂಪೇನ್‌ ಲೀಡರ್‌ ಆಗಿರುವ ಪೂಂಗೋಡಿ (30) ಇದುವರೆಗೆ ಮೂರು ಬಾರಿ ಕ್ಷಯರೋಗಕ್ಕೆ ತುತ್ತಾಗಿದ್ದಾರೆ. "2014 ಮತ್ತು 2016ರಲ್ಲಿ, ನಾನು ಟಿಬಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ" ಎಂದು ಅವರು ಹೇಳುತ್ತಾರೆ. "ನನಗೆ 2018ರಲ್ಲಿ ಅಪಘಾತ ಸಂಭವಿಸಿದಾಗ ಚಿಕಿತ್ಸೆಯ ಸಮಯದಲ್ಲಿ ಬೆನ್ನುಮೂಳೆಯ ಟಿಬಿ ಇದೆಯೆಂದು ವೈದ್ಯರು ಹೇಳಿದರು. ಈ ಬಾರಿ ನಾನು ಚಿಕಿತ್ಸೆಯನ್ನು ಪೂರ್ಣಗೊಳಿಸಿ ಸಂಪೂರ್ಣ ಗುಣಮುಕ್ತಳಾಗಿದ್ದೇನೆ.”

12ನೇ ತರಗತಿ ಉತ್ತೀರ್ಣರಾದ ನಂತರ ಪೂಂಗೊಡಿ ನರ್ಸಿಂಗ್‌ನಲ್ಲಿ ಬಿಎಸ್ಸಿ ಮಾಡುತ್ತಿದ್ದರು. ಆದರೆ ಅವರು ಅದನ್ನು ಅರ್ಧಕ್ಕೆ ಬಿಡಬೇಕಾಯಿತು. “ನಾನು 2011, 12 ಮತ್ತು 13ರಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಮಗುವನ್ನು ಹೊಂದಿದ್ದೆ ಮೂರು ಮಕ್ಕಳೂ ಹುಟ್ಟುವಾಗಲೇ ತೀರಿಕೊಂಡಿದ್ದವು,” ಎಂದು ಅವರು ಹೇಳುತ್ತಾರೆ. "ನನ್ನ ಆರೋಗ್ಯದಿಂದಾಗಿ ನಾನು ನರ್ಸಿಂಗ್‌ನಿಂದ ಹೊರಗುಳಿಯಬೇಕಾಯಿತು." ಓದು ನಿಲ್ಲಲು ಅವರ ಅನಾರೋಗ್ಯ ಮಾತ್ರ ಕಾರಣವಲ್ಲ. ಅವರ ತಾಯಿ ಕೂಡ ಕ್ಷಯರೋಗದಿಂದ 2011ರಲ್ಲಿ ನಿಧನರಾದರು. ಆಕೆಯ ತಂದೆ ಪ್ರಸ್ತುತ ಸಲೂನ್‌ನಲ್ಲಿ ಕೇಶ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಪೂಂಗೊಡಿಯ ಪತಿ ಖಾಸಗಿ ಕಂಪನಿಯಲ್ಲಿ ಸಣ್ಣ ಕೆಲಸ ಮಾಡುತ್ತಾನೆ. ಅವರು ಕ್ಷಯರೋಗಕ್ಕೆ ತುತ್ತಾದ ನಂತರ ಅವನು 2018ರಲ್ಲಿ ಅವರನ್ನು ತೊರೆದು ಹೋದನು. ಅಂದಿನಿಂದ ಅವರು ತನ್ನ ತವರಿನಲ್ಲಿದ್ದಾರೆ.

Poongodi Govindaraj (left) conducting a workshop (right); she is a campaign leader from Vellore who has contracted TB three times
PHOTO • Courtesy: Resource Group for Education and Advocacy for Community Health (REACH)
Poongodi Govindaraj (left) conducting a workshop (right); she is a campaign leader from Vellore who has contracted TB three times
PHOTO • Courtesy: Resource Group for Education and Advocacy for Community Health (REACH)

ಕಾರ್ಯಾಗಾರವನ್ನು ನಡೆಸುತ್ತಿರುವ ಪೂಂಗೊಡಿ ಗೋವಿಂದರಾಜ್ (ಎಡ) (ಬಲ); ಅವರು ವೆಲ್ಲೂರಿನ ಕ್ಯಾಂಪೇನ್ ಲೀಡರ್‌ ಆಗಿದ್ದು, ಮೂರು ಬಾರಿ ಟಿಬಿಗೆ ತುತ್ತಾಗಿದ್ದಾರೆ

ಪೂಂಗೊಡಿಯವರ ಕುಟುಂಬ ಒಂದು ಕಾಲದಲ್ಲಿ ಒಂದಿಷ್ಟು ಆಸ್ತಿಯನ್ನು ಹೊಂದಿತ್ತಾದರೂ ಆಸ್ಪತ್ರೆ ಖರ್ಚಿಗಾಗಿ ಎಲ್ಲವನ್ನೂ ಮಾರಬೇಕಾಯಿತು. ನಂತರ ಪತಿ ತೊರೆದ ಸಮಯದಲ್ಲಿ ವಿಚ್ಛೇದನ ಪ್ರಕರಣಕ್ಕೂ ಹಣ ಖರ್ಚು ಮಾಡಬೇಕಾಯಿತು. "ಪ್ರಸ್ತುತ ನನ್ನ ತಂದೆ ಬೆಂಬಲವಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಟಿ.ಬಿ. ಕುರಿತು ಜಾಗೃತಿ ಮೂಡಿಸುತ್ತಿರುವವರಲ್ಲಿ ನಾನೂ ಒಬ್ಬಳೆನ್ನುವುದು ನನಗೆ ಸಂತಸ ನೀಡುವ ಸಂಗತಿ." ಎಂದು ಅವರು ಹೇಳುತ್ತಾರೆ. ಕ್ಷಯರೋಗವು ಪೂಂಗೊಡಿಯವರ ತೂಕವನ್ನು ತೀವ್ರವಾಗಿ ಕಡಿಮೆಯಾಗಿಸಿದ್ದು ಅವರೀಗ 35 ಕೇಜಿ ತೂಕವಿದ್ದಾರೆ. "ಮೊದಲು ನಾನು 70 ಕೇಜಿಯಷ್ಟಿದ್ದೆ. ಅದೇನೇ ಇರಲಿ, ಇಂದು ನಾನು ಟಿ.ಬಿ. ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇನೆ. ಇಲ್ಲಿಯವರೆಗೆ, ನಾನು ಕ್ಷಯರೋಗವೆಂದರೇನು ಮತ್ತು ಅದನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ 2,500 ಜನರಿಗೆ ಕಲಿಸಿದ್ದೇನೆ. 80 ಟಿ.ಬಿ. ರೋಗಿಗಳ ಚಿಕಿತ್ಸೆಯನ್ನು ನಾನು ಮೇಲ್ವಿಚಾರಣೆ ಮಾಡಿದ್ದೇನೆ ಮತ್ತು ಅವರಲ್ಲಿ 20 ಮಂದಿ ಇಲ್ಲಿಯವರೆಗೆ ಚೇತರಿಸಿಕೊಂಡಿದ್ದಾರೆ.” ಇದುವರೆಗೂ ಕೆಲಸ ಮಾಡಿದ ಅನುಭವವಿಲ್ಲದ ಪೂಂಗೊಡಿ "‘ವುಮನ್ ಟಿಬಿ ಲೀಡರ್’ ಆಗಿ ಕೆಲಸ ಮಾಡುವುದು ಮನಸಿಗೆ ನೆಮ್ಮದಿ, ಶಾಂತಿ ಮತ್ತು ತೃಪ್ತಿ ನೀಡುತ್ತಿದೆ. ನನ್ನ ಗಂಡನಿರುವ ಊರಿನಲ್ಲೇ ಅವನೆದುರು ಇಂತಹದ್ದೊಂದು ಕೆಲಸ ಮಾಡುವುದು ಅಪಾರವಾದುದೇನನ್ನೋ ಸಾಧಿಸಿದ ಹೆಮ್ಮೆಯ ಭಾವ ಮೂಡಿಸುತ್ತದೆ."

*****

ಸಾದಿಪೋಮ್ ವಾ ಪೆಣ್ಣೆ (ಸಾಧಿಸೋಣ ಬನ್ನಿ ಮಹಿಳೆಯರೇ) ಕಾರ್ಯಕ್ರಮದ ಅಡಿಯಲ್ಲಿ, ಕ್ಷಯರೋಗದ ಪತ್ತೆಹಚ್ಚುವಿಕೆಯ ಕೆಲಸಕ್ಕಾಗಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತದೆ. ರೀಚ್‌ನಿಂದ ಪ್ರಾರಂಭಿಸಲ್ಪಟ್ಟ ಈ ಕಾರ್ಯಕ್ರಮವನ್ನು ತಮಿಳುನಾಡಿನ ನಾಲ್ಕು ಜಿಲ್ಲೆಗಳಾದ ವೆಲ್ಲೂರು, ವಿಲ್ಲುಪುರಂ, ತಿರುನೆಲ್ವೇಲಿ ಮತ್ತು ಸೇಲಂನಲ್ಲಿ ಜಾರಿಗೆ ತರಲಾಗುತ್ತಿದೆ.

ಕಾರ್ಯಕ್ರಮದ ಅಡಿಯಲ್ಲಿ ಸುಮಾರು 400 ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು ಜನರು ತಮ್ಮ ಗ್ರಾಮ ಅಥವಾ ವಾರ್ಡ್‌ನಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಅವರನ್ನು ಸಂಪರ್ಕಿಸಬಹುದು. ತರಬೇತಿಯನ್ನು ದೂರವಾಣಿ ಮೂಲಕ ನೀಡಲಾಗುತ್ತದೆ. ಪೂಂಗೊಡಿಯಂತಹ ಇತರ 80 ಮಹಿಳೆಯರಿಗೆ ಟಿ.ಬಿ. ಲೀಡರ್‌ ಆಗಿ ತರಬೇತಿ ನೀಡಲಾಗುತ್ತಿದೆ. ಅವರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಕ್ಷಯರೋಗದ ಪರೀಕ್ಷೆ ಮಾಡುತ್ತಾರೆ ಎಂದು ಅನುಪಮಾ ಶ್ರೀನಿವಾಸನ್ ಹೇಳುತ್ತಾರೆ.

ಸಮಸ್ಯೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಸಂಖ್ಯೆಯಲ್ಲಿ ಇದು ಸಣ್ಣದಾಗಿ ಕಾಣಬಹುದಾದರೂ ಜನನಿ, ದೇವಿ ಮತ್ತು ಪೂಂಗೊಡಿ ಮತ್ತು ಇತರ ಮಹಿಳೆಯರ ಪಾಲಿಗೆ ಇದು ಬಹಳ ಮಹತ್ವದ್ದಾಗಿದೆ. ಅವರು ವರು ಸಾವಿರಾರು ಟಿಬಿ ರೋಗಿಗಳನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ತಲುಪುತ್ತಾರೆ. ಇದು ಕೇವಲ ವೈದ್ಯಕೀಯ ವಿಷಯವನ್ನು ಮೀರಿ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದೊಡನೆ ಸಂಬಂಧವನ್ನು ಹೊಂದಿದೆ. ಮತ್ತು ಈ ಸೋಂಕಿಗೆ ಒಳಗಾದವರ ಆತ್ಮವಿಶ್ವಾಸದ ಮೇಲೆ ಈ ಕಾಯಿಲೆ ಬೀರುವ ಪರಿಣಾಮವನ್ನು ಅಳೆಯಲಾಗದು.

"ಇಲ್ಲಿ ಕೆಲಸ ಮಾಡುವುದು ಸಂತೋಷ ತಂದಿದೆ" ಎಂದು ಜನನಿ ತನ್ನ ದಿನಚರಿಯ ಬಗ್ಗೆ ಹೇಳುತ್ತಾರೆ. ಅವರು ರೀಚ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ಎರಡು ತಿಂಗಳ ನಂತರ, ಅವರ ಪತಿ (ಮತ್ತು ಅವರ ಕುಟುಂಬ) ಅವರ ಬಳಿಗೆ ಮರಳಿ ಬಂದರು. "ಈಗ ನಾನು ಹಣವನ್ನು ಸಂಪಾದಿಸುತ್ತಿರುವುದರಿಂದ ಬಂದಿರಬಹುದು - ಏಕೆಂದರೆ ಅವನು ಯಾವಾಗಲೂ ನನ್ನನ್ನು ಕೆಲಸಕ್ಕೆ ಬಾರದವಳು ಎಂದು ಮೂದಲಿಸುತ್ತಿದ್ದ - ಅಥವಾ ಅವನನ್ನು ಒಂಟಿತನ ಕಾಡಿರಬಹುದು ಜೊತೆಗೆ ಅವನಿಗೆ ನನ್ನ ಯೋಗ್ಯತೆ ತಿಳಿದಿರಬಹುದು. ಅದೇನೇ ಆಗಲಿ, ವಿಚ್ಛೇದನ ಪ್ರಕರಣದ ನಂತರವೂ ನಾವು ಒಂದಾಗಲು ಸಾಧ್ಯವಾಗಿದ್ದಕ್ಕಾಗಿ ಎಂದು ನನ್ನ ಪೋಷಕರು ಸಂತೋಷದಲ್ಲಿದ್ದಾರೆ.”

ತನ್ನ ಹೆತ್ತವರ ಸಂತೋಷಕ್ಕಾಗಿ, ಜನನಿ ಈ ವರ್ಷದ ಫೆಬ್ರವರಿಯಲ್ಲಿ ಪತಿಯೊಡನೆ ಹೋದರು. “ಇಲ್ಲಿಯವರೆಗೆ ಅವನು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನಾನು ಟಿ.ಬಿ. ನನ್ನ ಬದುಕನ್ನು ನಾಶಪಡಿಸಿತೆಂದು ನೊಂದುಕೊಂಡಿದ್ದೆ ಆದರೆ ಈ ಕಾಯಿಲೆ ನನ್ನ ಬದುಕಿಗೆ ಹೊಸ ಅರ್ಥ ನೀಡಿತು. ನನ್ನನ್ನು ಬಹುತೇಕ ಕೊಂದೇ ಹಾಕಿದ್ದ ಕಾಯಿಲೆಯೇ ನಾನು ಜನರಲ್ಲಿ ಅದರ ಕುರಿತು ಜಾಗೃತಿ ಮೂಡಿಸುವಂತೆ ಮಾಡಿತು.”

ಕವಿತಾ ಮುರಳೀಧರನ್ ಅವರು ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯ ವಿಷಯಗಳ ಕುರಿತು ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಷನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ ಎನ್. ಕೆಂಚನೂರು

Kavitha Muralidharan

ਕਵਿਥਾ ਮੁਰਲੀਧਰਨ ਚੇਨੱਈ ਅਧਾਰਤ ਸੁਤੰਤਰ ਪੱਤਰਕਾਰ ਅਤੇ ਤਰਜ਼ਾਮਕਾਰ ਹਨ। ਪਹਿਲਾਂ ਉਹ 'India Today' (Tamil) ਵਿੱਚ ਸੰਪਾਦਕ ਸਨ ਅਤੇ ਉਸ ਤੋਂ ਪਹਿਲਾਂ 'The Hindu' (Tamil) ਵਿੱਚ ਰਿਪੋਰਟਿੰਗ ਸੈਕਸ਼ਨ ਦੀ ਹੈਡ ਸਨ। ਉਹ ਪਾਰੀ (PARI ) ਦੀ ਵਲੰਟੀਅਰ ਹਨ।

Other stories by Kavitha Muralidharan
Illustrations : Priyanka Borar

ਪ੍ਰਿਯੰਗਾ ਬੋਰਾਰ ਨਵੇਂ ਮੀਡਿਆ ਦੀ ਇੱਕ ਕਲਾਕਾਰ ਹਨ ਜੋ ਅਰਥ ਅਤੇ ਪ੍ਰਗਟਾਵੇ ਦੇ ਨਵੇਂ ਰੂਪਾਂ ਦੀ ਖੋਜ ਕਰਨ ਲਈ ਤਕਨੀਕ ਦੇ ਨਾਲ਼ ਪ੍ਰਯੋਗ ਕਰ ਰਹੀ ਹਨ। ਉਹ ਸਿੱਖਣ ਅਤੇ ਖੇਡ ਲਈ ਤਜਰਬਿਆਂ ਨੂੰ ਡਿਜਾਇਨ ਕਰਦੀ ਹਨ, ਇੰਟਰੈਕਟਿਵ ਮੀਡਿਆ ਦੇ ਨਾਲ਼ ਹੱਥ ਅਜਮਾਉਂਦੀ ਹਨ ਅਤੇ ਰਵਾਇਤੀ ਕਲਮ ਅਤੇ ਕਾਗਜ਼ ਦੇ ਨਾਲ਼ ਵੀ ਸਹਿਜ ਮਹਿਸੂਸ ਕਰਦੀ ਹਨ।

Other stories by Priyanka Borar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru