“ನಾನು ನಿಮಗೆ ಏನೆಂದು ಹೇಳಲಿ? ನನ್ನ ಬೆನ್ನು ಮುರಿದುಹೋಗಿದೆ ಮತ್ತು ಪಕ್ಕೆಲುಬು ಹೊರ ಚಾಚಿಕೊಂಡಿದೆ ”ಎಂದು ಬೀಬಾಬಾಯಿ ಲೊಯರೆ ಹೇಳುತ್ತಾರೆ. "ನನ್ನ ಹೊಟ್ಟೆ ಇಂಗಿದೆ, ಕಳೆದ 2 - 3 ವರ್ಷಗಳಲ್ಲಿ ನನ್ನ ಹೊಟ್ಟೆ ಮತ್ತು ಬೆನ್ನು ಒಂದಾಗಿವೆ. ಮತ್ತು ನನ್ನ ಮೂಳೆಗಳು ಟೊಳ್ಳಾಗಿವೆ ಎಂದು ಡಾಕ್ಟರ್ ಹೇಳುತ್ತಾರೆ.”
ನಾವು ಮುಲ್ಶಿ ಬ್ಲಾಕ್‌ನ ಹದಶಿ ಗ್ರಾಮದಲ್ಲಿರುವ ಅವರ ಮನೆಯ ಪಕ್ಕದಲ್ಲಿ ಟಿನ್ ಶೀಟ್‌ನಿಂದ ತಯಾರಿಸಿದ ಮಂದ ಬೆಳಕಿನ ಅಡುಗೆಮನೆಯಲ್ಲಿ ಕುಳಿತಿದ್ದೇವೆ. ಸುಮಾರು 55 ವರ್ಷ ವಯಸ್ಸಿನ ಬೀಬಾಬಾಯಿ, ಉಳಿದಿರುವ ಅಕ್ಕಿಯನ್ನು ಬಾಣಲೆಯಲ್ಲಿ ಮಣ್ಣಿನ ಒಲೆಯ ಮೇಲೆ ಬಿಸಿ ಮಾಡುತ್ತಿದ್ದಾರೆ. ಅವರು ನನಗೆ ಕುಳಿತುಕೊಳ್ಳಲು ಮರದ ಪಾಟ್ (ಮಣೆ) ನೀಡಿ ಅವರ ಕೆಲಸಗಳನ್ನು ಮುಂದುವರಿಸುತ್ತಾರೆ. ಅವರು ಪಾತ್ರೆಗಳನ್ನು ತೊಳೆಯಲು ಎದ್ದಾಗ, ಅವರ ಸೊಂಟ ಸಂಪೂರ್ಣವಾಗಿ ಬಾಗಿರುವುದನ್ನು ನಾನು ನೋಡಿದೆ, ಅವರ ಗಲ್ಲವು ಅವಳ ಬಹುತೇಕ ಮೊಣಕಾಲುಗಳನ್ನು ಮುಟ್ಟಬಹುದು. ಮತ್ತು ಅವರು ತನ್ನ ಕಾಲುಗಳನ್ನು ಮಡಚಿಕೊಂಡು ಕುಳಿತಾಗ, ಅವಳ ಮೊಣಕಾಲುಗಳು ಅವರ ಕಿವಿಯನ್ನು ಸ್ಪರ್ಶಿಸುತ್ತವೆ.
ಕಳೆದ 25 ವರ್ಷಗಳಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ನಾಲ್ಕು ಶಸ್ತ್ರಚಿಕಿತ್ಸೆಗಳು ಬೀಬಾಬಾಯಿಯನ್ನು ಈ ಸ್ಥಿತಿಗೆ ತಂದಿವೆ. ಮೊದಲಿಗೆ, ಅವರು ಟ್ಯೂಬೆಕ್ಟಮಿ ಮಾಡಿಸಿಕೊಂಡರು, ನಂತರಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದರು ನಂತರ ಹಿಸ್ಟೆರೆಕ್ಟಮಿ ಮತ್ತೆ ಅದಾದ ನಂತರ ಅವರ ಕರುಳು, ಹೊಟ್ಟೆಯ ಮತ್ತು ಸ್ನಾಯುಗಳ ಭಾಗದ ಕೊಬ್ಬು ಹೊರಹಾಕುವ ಶಸ್ತ್ರಚಿಕಿತ್ಸೆ.
“ನಾನು 12 ಅಥವಾ 13 ನೇ ವಯಸ್ಸಿನಲ್ಲಿ ಮದುವೆಯಾಗಿದ್ದೆ, ನಾನು ವಯಸ್ಸಿಗೆ ಬಂದ ಮೊದಲ ಐದು ವರ್ಷಗಳವರೆಗೆ ಗರ್ಭಧರಿಸಲಿಲ್ಲ ”ಎಂದು ಬೀಬಾಬಾಯಿ ಹೇಳುತ್ತಾರೆ, ಅವರು ಶಾಲೆಗೆ ಹೋಗಿಲ್ಲ. ಪತಿ ಮಹಿಪತಿ ಲೊಯರೆ ಅಥವಾ ಎಲ್ಲರೂ ಕರೆಯುವಂತೆ ಅಪ್ಪಾ, ಅವರಿಗಿಂತ 20 ವರ್ಷ ಹಿರಿಯರು ಮತ್ತು ನಿವೃತ್ತ ಜಿಲ್ಲಾ ಪರಿಷತ್ ಶಾಲಾ ಶಿಕ್ಷಕರಾಗಿದ್ದು, ಅವರನ್ನು ಪುಣೆ ಜಿಲ್ಲೆಯ ಮುಲ್ಶಿ ಬ್ಲಾಕ್‌ನ ವಿವಿಧ ಹಳ್ಳಿಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಲೊಯರೆ ಕುಟುಂಬವು ತಮ್ಮ ಕೃಷಿಭೂಮಿಯಲ್ಲಿ ಭತ್ತ, ಕಡಲೆ, ಬೀನ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತದೆ. ಅವರು ಒಂದು ಜೋಡಿ ಎತ್ತುಗಳು, ಎಮ್ಮೆ ಮತ್ತು ಹಸು ಮತ್ತು ಅದರ ಕರುವನ್ನು ಸಹ ಹೊಂದಿದ್ದಾರೆ ಮತ್ತು ಹಾಲು ಅವರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಮಹಿಪತಿಯವರಿಗೂ ಪಿಂಚಣಿ ಬರುತ್ತದೆ.
ನನ್ನ ಎಲ್ಲಾ ಮಕ್ಕಳು ಮನೆಯಲ್ಲಿಯೇ ಹುಟ್ಟಿದರು, ”ಎಂದು ಬೀಬಾಬಾಯಿ ಮುಂದುವರೆಸುತ್ತಾರೆ. ಅವರ ಒದಲ ಮೊದಲ ಮಗ ಗಂಡು ಅವನು ಹುಟ್ಟುವಾಗ ಬೀಬಾ ಬಾಯಿಯವರಿಗೆ ಕೇವಲ 17 ವರ್ಷ. "ಆ ಸಮಯದಲ್ಲಿ ನಮ್ಮ ಹಳ್ಳಿಯಲ್ಲಿ ಒಳ್ಳೆಯ ರಸ್ತೆಗಳಾಗಲಿ, ವಾಹನಗಳಾಗಲಿ ಇರಲಿಲ್ಲ ಎತ್ತಿನ ಗಾಡಿಯಲ್ಲಿ ನನ್ನ ತವರಿಗೆ ಹೋಗುತ್ತಿದ್ದಾಗ (ಬೆಟ್ಟಸಾಲಿನ ಹಿಂದಿನ ಹಳ್ಳಿ) ನನ್ನ ನೀರು ಒಡೆದು ಹೋಯಿತು ಅಲ್ಲೇ ನೋವು ಶುರುವಾಗಿ ನನಗೆ ಎತ್ತಿನ ಗಾಡಿಯಲ್ಲೇ ಹೆರಿಗೆಯಾಯಿತು!" ಬೀಬಾಬಾಯಿ ನೆನಪಿಸಿಕೊಳ್ಳುತ್ತಾರೆ. ನಂತರ ಪೆರಿನಿಯಲ್ ಟಿಯರ್‌ಗೆ ಅವರು ಎಪಿಸಿಯೋಟಮಿ ಮಾಡಿಸಿಕೊಳ್ಳಬೇಕಾಯಿತು. ಇದನ್ನು ಎಲ್ಲಿ ಮಾಡಿಸಿಕೊಂಡಿದ್ದೆಂದು ಅವರಿಗೆ ನೆನಪಿಲ್ಲ.







