ಅದನ್ನು ನೋಡಲು ಒಂದಿಷ್ಟು ಅಸಹಜವಾಗಿತ್ತು - ಆದರೆ ದೆಹಲಿಯ ಜಿಟಿ ಕರ್ನಾಲ್ ಬೈಪಾಸ್ ಬಳಿ ನಮ್ಮ ಕಣ್ಣ ಮುಂದೆಯೇ ಆ ಘಟನೆ ನಡೆಯುತ್ತಿತ್ತು.
ಒಂದು ಗುಂಪು ದೆಹಲಿಯತ್ತ ನಿಗದಿತ ಮಾರ್ಗದ ಮೂಲಕ ಸಾಗುತ್ತಿದ್ದರೆ, ಇನ್ನೊಂದು ಗುಂಪು ದೆಹಲಿಯಿಂದ ಸಿಂಘುವಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು. ಈ ಎರಡೂ ಗುಂಪುಗಳು ಹೆದ್ದಾರಿಯಲ್ಲಿ ಪರಸ್ಪರ ಎದುರುಬದುರಾಗಿ ಹಾದು ಹೋದವು ಮತ್ತು ಈ ದೃಶ್ಯವು ವಾಸ್ತವವಾಗಿ ಗೊಂದಲಗಳಿಗೆ ಒಂದು ರೂಪಕದಂತಿತ್ತು. ದೆಹಲಿಯಿಂದ ಹಿಂದಿರುಗಿದ ಗುಂಪು ತಮ್ಮ ನಾಯಕರ ಕರೆಯನ್ನು ಅನುಸರಿಸಿ ಹಿಂದಿರುಗುತ್ತಿತ್ತು. ಅವರಲ್ಲಿ ಕೆಲವರು ದೆಹಲಿ ಪೊಲೀಸರು ನಿಗದಿಪಡಿಸಿದ ಮಾರ್ಗವನ್ನು ಬಿಟ್ಟು ಬೇರೆ ರೀತಿಯಲ್ಲಿ ದೆಹಲಿಯನ್ನು ಪ್ರವೇಶಿಸಲು ತಮ್ಮ ನಾಯಕರು ನಿರ್ಧರಿಸಿದ್ದಾರೆಂದು ಭಾವಿಸಿ ಬೆಳಿಗ್ಗೆ ಗೊಂದಲದಿಂದ ದೆಹಲಿಗೆ ಪ್ರವೇಶಿಸಿದ್ದರು.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ ಮೂಲಕ ಅಪ್ಪಳಿಸಿದ ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ತಮ್ಮದೇ ಆದ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಆಯೋಜಿಸಿದ್ದರು, ಅಂದು ಅವರು ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ, ಗಾಜಿಪುರ, ಚಿಲ್ಲಾ ಮತ್ತು ಮೇವತ್‌ನ ವಿವಿಧ ಸ್ಥಳಗಳಿಂದ ಪೆರೇಡ್ ಹೊರಟಿದ್ದರು. ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ಶಹಜಹಾನ್ಪುರದಲ್ಲಿಯೂ ಒಂದು ಮೆರವಣಿಗೆ ನಡೆದಿತ್ತು, ಅಲ್ಲಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಫ್ಲೋಟ್‌ಗಳು ಸುಮಾರು 60 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸುತ್ತಿದ್ದವು. ಅಖಿಲ ಭಾರತ ಕಿಸಾನ್ ಸಭೆಯ ಪ್ರಕಾರ, ಇದು ಜನರೇ ಆಚರಿಸುತ್ತಿರುವ ದೇಶದ ಗಣರಾಜ್ಯೋತ್ಸವದ ಅತಿದೊಡ್ಡ ಮತ್ತು ಜನಪ್ರಿಯ ಆಚರಣೆಯಾಗಿದೆ.
ಇದೊಂದು ಬೃಹತ್, ಶಾಂತಿಯುತ, ಶಿಸ್ತುಬದ್ಧ ಮತ್ತು ಸಂಪೂರ್ಣ ಅಭೂತಪೂರ್ವ ಆಚರಣೆಯಾಗಿತ್ತು, ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರು ಮತ್ತು ಅನೇಕರು ಈ ದಿನ ಗಣರಾಜ್ಯವನ್ನು ನಿಜವಾದ ಅರ್ಥದಲ್ಲಿ ವಹಿಸಿಕೊಂಡರು. ಇದೇ ರೀತಿಯ ಕಾರ್ಯಕ್ರಮಗಳು ಮತ್ತು ರ‍್ಯಾಲಿಗಳು ಇಲ್ಲಿ ಮಾತ್ರವಲ್ಲದೆ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ನಡೆದವು.
ಆದರೆ ಈ ಎಲ್ಲದರ ನಡುವೆ, ಒಂದು ಸಣ್ಣ ಬಣವೊಂದರ ಅತಿರೇಕದ ಮತ್ತು ಆಘಾತಕಾರಿ ವರ್ತನೆಯು ಮಾಧ್ಯಮಗಳ ಗಮನವನ್ನು ಪ್ರಜಾಪ್ರಭುತ್ವದ ಅತಿದೊಡ್ಡ ಆಚರಣೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ದೆಹಲಿಯ ಗಡಿಯಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ 32 ಕೃಷಿ ಒಕ್ಕೂಟಗಳನ್ನು ಒಳಗೊಂಡ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ), ದೆಹಲಿಗೆ ಪ್ರವೇಶಿಸಿದ ಗುಂಪುಗಳ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯವನ್ನು ಹಾಗೂ ನಿಗದಿತ ಮಾರ್ಗದಿಂದ ದೂರ ಸರಿದಿದ್ದನ್ನು ಬಲವಾಗಿ ಖಂಡಿಸಿದೆ. "ಇದು ಶಾಂತಿಯುತ ಮತ್ತು ಶಕ್ತಿಯುತವಾಗಿರುವ ರೈತ ಚಳವಳಿಯನ್ನು ನಾಶಮಾಡುವ ಆಳವಾದ ಪಿತೂರಿಯ ಭಾಗ" ಎಂದು ಎಸ್‌ಕೆಎಂ ಈ ಕ್ರಮವನ್ನು ಖಂಡಿಸಿತು.



















