"ಇದು ಅಡುಗೆಮನೆಯಿಂದ ಶುರುವಾಯಿತು," ಎಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದ ನಿವಾಸಿ ಅಜಿತ್ ರಾಘವ್ 2023ರ ಜನವರಿ 3ರ ಬೆಳಗ್ಗೆ ನಡೆದ ದುರದೃಷ್ಟಕರ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.
ಜೀಪ್ ಟ್ಯಾಕ್ಸಿ ಡ್ರೈವರ್ ಆಗಿರುವ 37 ವರ್ಷದ ಅವರು ಹೇಳುವ ಪ್ರಕಾರ, ಮೊದಲು ಅಡುಗೆಮನೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡವು ನಂತರ ಇದು ಮನೆಯ ಇತರ ಭಾಗಗಳಿಗೆ ಹರಡಿತು. ಅವರ ಎರಡು ಅಂತಸ್ತಿನ ಸಾಧಾರಣ ಮನೆಯಲ್ಲಿ, ಕನಿಷ್ಟ ಬಿರುಕುಗಳಿರುವ ಏಕೈಕ ಕೋಣೆಯನ್ನು ಕೂಡಲೇ ತಾತ್ಕಾಲಿಕ ಅಡುಗೆಮನೆಯಾಗಿ ಪರಿವರ್ತಿಸಲಾಯಿತು. ಎಂಟು ಜನರ ಕುಟುಂಬವು ತುರ್ತಾಗಿ ಮನೆಯಿಂದ ಹೊರಬಂದಿತು.
"ನಮ್ಮ ಇಬ್ಬರು ಹಿರಿಯ ಹೆಣ್ಣುಮಕ್ಕಳಾದ 12 ವರ್ಷದ ಐಶ್ವರ್ಯಾ ಮತ್ತು 9 ವರ್ಷದ ಸೃಷ್ಟಿಯನ್ನು ನನ್ನ ಅಕ್ಕನೊಂದಿಗೆ ಇರಲು ಕಳುಹಿಸಿದೆ," ಎಂದು ರಾಘವ್ ಹೇಳುತ್ತಾರೆ. ಕುಟುಂಬದ ಉಳಿದವರು - ರಾಘವ್, ಅವರ ಪತ್ನಿ ಗೌರಿ ದೇವಿ, ಆರು ವರ್ಷದ ಮಗಳು ಆಯೇಷಾ ಮತ್ತು ರಾಘವ್ ಅವರ ಇಬ್ಬರು ವಯಸ್ಸಾದ ಚಿಕ್ಕಮ್ಮಂದಿರು - ಇಲ್ಲಿಯೇ ಊಟ ಮಾಡುತ್ತಾರೆ. ಆದರೆ ಸಂಜೆಯ ಹೊತ್ತಿಗೆ ಅವರು ಹಿಮಾಲಯದ ಈ ಪಟ್ಟಣದಲ್ಲಿ ತಾತ್ಕಾಲಿಕ ಆಶ್ರಯವೆಂದು ಗೊತ್ತುಪಡಿಸಲಾಗಿರುವ ಹತ್ತಿರದ ಸಂಸ್ಕೃತ ಮಹಾವಿದ್ಯಾಲಯ ಶಾಲೆಯಲ್ಲಿ ಮಲಗಲು ಹೊರಡುತ್ತಾರೆ. ಸರಿಸುಮಾರು 25-30 ಸ್ಥಳಾಂತರಗೊಂಡ ಕುಟುಂಬಗಳಿಗೆ ಇಲ್ಲಿ ನೆಲೆ ಒದಗಿಸಲಾಗಿದೆ.
ಚಮೋಲಿ ಜಿಲ್ಲಾಡಳಿತ ಜನವರಿ 21, 2023ರಂದು ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಜೋಶಿಮಠದ ಒಂಬತ್ತು ವಾರ್ಡುಗಳಲ್ಲಿ 181 ಕಟ್ಟಡಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದೆ, ಮತ್ತು 863 ಕಟ್ಟಡಗಳಲ್ಲಿ ಎದ್ದು ಕಾಣುವ ಬಿರುಕು ಕಂಡುಬಂದಿದೆ. ರಾಘವ್ ತನ್ನ ನೆರೆಹೊರೆಯ ಮನೆಗಳಲ್ಲಿನ ಬಿರುಕುಗಳನ್ನು ಪರಿಗೆ ತೋರಿಸಿದರು. "ಇಲ್ಲಿರುವ ಪ್ರತಿಯೊಂದು ಮನೆಯ ಕತೆಯೂ ಜೋಶಿಮಠದ ಕಥೆಯಾಗಿದೆ," ಎಂದು ಈ ಪರಿಸ್ಥಿತಿಗೆ ಕಾರಣವಾದ ಅನಿಯಂತ್ರಿತ ಬೆಳವಣಿಗೆಯನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ.
ಜೋಶಿಮಠದಲ್ಲಿನ ಕಟ್ಟಡಗಳ ಗೋಡೆಗಳು, ಛಾವಣಿಗಳು ಮತ್ತು ಮಹಡಿಗಳಲ್ಲಿ 2023ರ ಜನವರಿ 3 ರಂದು ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು ಎಂದು ರಾಘವ್ ಹೇಳುತ್ತಾರೆ. ಕೆಲವೇ ದಿನಗಳಲ್ಲಿ ಅದು ತೀವ್ರ ಬಿಕ್ಕಟ್ಟಿಗೆ ಕಾರಣವಾಯಿತು. ಅದೇ ಸಮಯದಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್ಆರ್‌ಎಸ್‌ಸಿ) ಜೋಶಿಮಠದಲ್ಲಿ ಕುಸಿಯುತ್ತಿರುವ ಭೂಮಿಯ ವಿಸ್ತಾರವನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ ಅದರಲ್ಲಿ 2022ರ ಡಿಸೆಂಬರ್ ಅಂತ್ಯ ಮತ್ತು ಜನವರಿ 2023ರ ಅಂತ್ಯದ ನಡುವೆ 5.4 ಸೆಂ. ಕುಸಿದಿರುವುದನ್ನು ಕಾಣಬಹುದಾಗಿತ್ತು. ಆದರೆ ಪ್ರಸ್ತುತ ಆ ಚಿತ್ರ ಎನ್‌ಆರ್‌ಎಸ್‌ಸಿ ವೆಬ್‌ಸೈಟಿನಲ್ಲಿ ಲಭ್ಯವಿಲ್ಲ.
ರಾಘವ್ ವಾಸಿಸುವ ಸಿಂಗ್ದಾರ್ ವಾರ್ಡಿನಲ್ಲಿ, 151 ರಚನೆಗಳನ್ನು ಗೋಚರ ಬಿರುಕುಗಳುಳ್ಳವು ಎಂದು ಗುರುತಿಸಲಾಗಿದೆ; 98 ಅಸುರಕ್ಷಿತ ವಲಯದಲ್ಲಿವೆ. ಅವೆಲ್ಲವೂ ವಾಸಿಸಲು ಸೂಕ್ತವಲ್ಲ ಮತ್ತು ಅವುಗಳ ಸುತ್ತಮುತ್ತ ಇರುವುದು ಅಸುರಕ್ಷಿತ ಎಂದು ಸೂಚಿಸಲು ಜಿಲ್ಲಾ ಅಧಿಕಾರಿಗಳು ಈ ರಚನೆಗಳನ್ನು ಕೆಂಪು ಕ್ರಾಸ್ ಗುರುತಿನಿಂದ ನಿಂದ ಗುರುತಿಸಿದ್ದಾರೆ.
















