ಒಂಟಿತನವು ಜಿಗರ್ ದೇದ್ ಪಾಲಿಗೆ ಹೊಸದಲ್ಲ. ಅವರು ಶ್ರೀನಗರದ ದಾಲ್ ಸರೋವರದ ಘಾಟ್‌ನಲ್ಲಿ ತನ್ನ ದೋಣಿಯ ಪಕ್ಕದ ಮರದ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ. ಮೊದಲು ಪತಿ ನಿಧನರಾದರು ಮತ್ತು ನಂತರ ಅವರ ಮಗ. ಇದೆಲ್ಲ ಮುಗಿದು ಆಗಲೇ ಮೂವತ್ತು ವರ್ಷವಾಗಿದೆ. ಈ ಅವಧಿಯಲ್ಲಿ ಅವರು ಹಲವು ರೀತಿಯ ಕಷ್ಟಗಳನ್ನು ಒಬ್ಬರೇ ಎದುರಿಸಿದ್ದಾರೆ.
ಆದರೂ, ಅವರು ಹೇಳುತ್ತಾರೆ, “ನಾನು ಕಳೆದ ಮೂವತ್ತು ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ, ಆದರೆ ಹಿಂದೆಂದೂ ನಾನು ಕಳೆದ ಒಂದು ವರ್ಷದಲ್ಲಿ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸಿಲ್ಲ. ಶಟ್‌ಡೌನ್‌ನ ನಂತರ ಒಂದಿಷ್ಟು ಪ್ರವಾಸಿಗರು ಬರಲು ಪ್ರಾರಂಭಿಸಿದ್ದರು ಆದರೆ ತಕ್ಷಣ ಈ ಕರೋನಾ ಬಂದು ಲಾಕ್ ಡೌನ್ ಪ್ರಾರಂಭವಾಯಿತು. ಈಗ ನಾವೆಲ್ಲರೂ ಸೆರೆಯಾಳುಗಳಂತೆ ಬದುಕುತ್ತಿದ್ದೇವೆ.
ಆಗಸ್ಟ್ 5, 2019 ರಂದು ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿತು ಮತ್ತು ಅದರ ನಂತರ ವಿಧಿಸಲಾದ ನಿಷೇಧವು ಇಲ್ಲಿನ ಜನರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. "ಅಂದಿನಿಂದ, ಒಬ್ಬ ಪ್ರವಾಸಿಯೂ ಬಂದಿಲ್ಲ" ಎಂದು ಜಿಗರ್ ಹೇಳುತ್ತಾರೆ. ಆ ಸಮಯದಲ್ಲಿ, ಸ್ಥಳೀಯರನ್ನು ಹೊರತುಪಡಿಸಿ ಎಲ್ಲರೂ ಹಿಂತಿರುಗಬೇಕು ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು, ಸಹಜವಾಗಿ ಪ್ರವಾಸಿಗರು ಸಹ ಮರಳಿದರು. "ಇದರಿಂದ ನಾವು ಅಕ್ಷರಶಃ ಕುಸಿದು ಹೋದೆವು" ಎಂದು ಅವರು ಹೇಳುತ್ತಾರೆ. "ಇದು ನನ್ನ ವ್ಯವಹಾರದ ದೊಡ್ಡ ನಷ್ಟಕ್ಕೆ ಕಾರಣವಾಗಿದ್ದಲ್ಲದೆ ಈಗಾಗಲೇ ನಾಶವಾಗಿದ್ದ ಬದುಕನ್ನು ಇನ್ನಷ್ಟು ದುಸ್ತರಗೊಳಿಸಿತು."
ಅಂದು ಬದುಕು ಸರ್ವನಾಶವಾಗಿ ತಾನು ದೀರ್ಘಕಾಲದ ಒಂಟಿ ಜೀವನದ ಪ್ರಪಾತಕ್ಕೆ ತಳ್ಳಲ್ಪಟ್ಟಿದ್ದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ ಜಿಗರ್ "ಅಂದು ನನ್ನ ತಂಗಿಯ ನಿಶ್ಚಿತಾರ್ಥವಿತ್ತು. ಕುಟುಂಬದವರೆಲ್ಲ ಒಂದೆಡೆ ಸೇರಿ ಹಾಡು, ನೃತ್ಯಗಳ ನಡುವೆ ಸಂಭ್ರಮದಲ್ಲಿದ್ದರು. ಆಗ ನನ್ನ ಪತಿ ಅಲಿ ಮಹಮದ್ ತುಲ್ಲಾ ನನ್ನ ಬಳಿ ಬಂದು ತನಗೆ ಎದೆ ನೋವೆಂದು ಹೇಳಿದರು. ನಂತರ ಅವರನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಂಡಾಗ ಅವರ ದೇಹವು ತಣ್ಣಗಾಗುತ್ತಿರುವಂತೆ ಅನ್ನಿಸಿತು... ಆ ಕ್ಷಣಕ್ಕೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು" ಎಂದು ಜಿಗರ್ ಹೇಳುತ್ತಾರೆ. ಅವರು ಸುಮಾರು ಎಂಬತ್ತರ ಹರೆಯದಲ್ಲಿರಬಹುದು.
50ರ ಪ್ರಾಯದಲ್ಲಿದ್ದ ಅಲಿ ಮೊಹಮ್ಮದ್ ಅವರ ಏಕೈಕ ಮಗ ಮಂಜೂರ್‌ನನ್ನು ಜಿಗರ್ ಅವರೊಂದಿಗೆ ಬಿಟ್ಟು "ವ್ಯಥೆಯ ಜೀವನ ನಡೆಸುವಂತೆ ಮಾಡಿ ಹೋದರು." ಪ್ರೀತಿಯಿಂದ ಮನ್ನಾ ಎಂದು ಕರೆಯಲ್ಪಡುತ್ತಿದ್ದ ಮಂಜೂರ್‌ಗೆ ಆಗ ಕೇವಲ 17 ವರ್ಷವಾಗಿತ್ತು. ಆಗ ಅವರು ತಮ್ಮ ಜೀವನೋಪಾಯಕ್ಕಾಗಿ ನಾಲ್ಕು ಕೋಣೆಗಳ ಇಂದೂರ್ ಹೊಂದಿದ್ದರು. ಅದನ್ನು ಅವರ ಗುಡಿಸಲಿನಿಂದ ಸ್ವಲ್ಪ ದೂರದ ಚಿಕ್ಕ ಸೇತುವೆಯ ಬಳಿ ನಿಲ್ಲಿಸಲಾಗಿತ್ತು.
"ನಮ್ಮ ಮಗನು ನಮ್ಮ ದೋಣಿಯಲ್ಲಿ ಉಳಿಯಲು ಪ್ರವಾಸಿಗರನ್ನು ಕರೆತರಲು ಹೊರಡುವ ಮೊದಲು, ಅವನು ನಮ್ಮ ನೆರೆಹೊರೆಯವರಿಗೆ ನನ್ನನ್ನು ನೋಡಿಕೊಳ್ಳಲು ಹೇಳುತ್ತಿದ್ದನು, ಏಕೆಂದರೆ ನಾನು ಅವನ ತಂದೆಯನ್ನು ನೆನೆದು ಅಳುತ್ತಿರುತ್ತೇನೆಂದು ಅವನಿಗೆ ತಿಳಿದಿತ್ತು" ಎಂದು ತನ್ನ ಒಂದು ಕೋಣೆಯ ಗುಡಿಸಲಿನಲ್ಲಿ ಕುಳಿತು ಹೊರಗರ ನೋಡುತ್ತಾ ಜಿಗರ್ ಹೇಳುತ್ತಾರೆ. ಅವರ ಕೋಣೆಯ ಮರದ ಗೋಡೆಯಲ್ಲಿ ಅವರ ಪತಿ ಮತ್ತು ಮಗನ ಫೋಟೊ ನೇತು ಹಾಕಲಾಗಿತ್ತು.
ಅಲಿ ತೀರಿಕೊಂಡ ಕೇವಲ ಏಳು ತಿಂಗಳ ಅಂತರದಲ್ಲಿ ಮಗ ಮಂಜೂರ್ ಕೂಡಾ ತೀರಿಕೊಂಡ. ಅವರು ಪತಿ ತೀರಿಕೊಂಡ ದುಃಖದಲ್ಲಿರುವಾಗಲೇ ಮಗನ ಸಾವೂ ಸಿಡಿಲಿನಂತೆ ಎರಗಿತ್ತು. ಜಿಗರ್‌ಗೆ ತನ್ನ ಮಗ ತೀರಿಕೊಂಡ ದಿನ ಮತ್ತು ಕಾರಣ ನೆನಪಿಲ್ಲ. ಆದರೆ ತನ್ನ ಮಗನ ಸಾವಿಗೆ ಕಾರಣ ಅವನ ತಂದೆಯ ಸಾವಿನ ನೆನಪು ಎನ್ನುವುದು ಅವರ ನಂಬಿಕೆ.
"ಅಂದು ನನ್ನ ಇಡೀ ಪ್ರಪಂಚವೇ ನನ್ನ ಕಣ್ಣುಗಳ ಮುಂದೆ ತಲೆಕೆಳಗಾಗಿತ್ತು" ಎಂದು ಅವರು ಹೇಳುತ್ತಾರೆ. "ನನ್ನ ಬದುಕಿನ ಇಬ್ಬರು ನಾಯಕರು ತಮ್ಮ ನೆನಪುಗಳಿಂದ ತುಂಬಿದ ಬೋಟ್‌ಹೌಸ್‌ನೊಂದಿಗೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದರು. ಈ ನೆನಪುಗಳು, ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತವೆ. ನನ್ನ ಕಾಯಿಲೆಗಳಿಂದಾಗಿ, ನನ್ನ ಹೆಚ್ಚಿನ ನೆನಪುಗಳು ಮರೆಯಾದವು, ಆದರೆ ನನ್ನನ್ನು ಕಾಡುವ ಈ ನೆನಪುಗಳು ಪ್ರತಿದಿನವೂ ಹೊಸದಾಗಿ ಮೂಡುತ್ತವೆ.”











