“ಹೈದರಾಬಾದಿಗೆ ವಲಸೆ ಹೋದವರು ಅಲ್ಲಿ ಸಿಕ್ಕ ಕೆಲಸ ಮಾಡತೊಡಗಿದೆವು. ನಮ್ಮ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಸಲುವಾಗಿ ನಾವು ಸಾಕಷ್ಟು ಹಣ ಗಳಿಸಲು ಬಯಸಿದ್ದೆವು,” ಎಂದು ಗುಡ್ಲಾ ಮಂಗಮ್ಮ ಹೇಳುತ್ತಾರೆ. ಅವರು ಮತ್ತು ಅವರ ಪತಿ ಗುಡ್ಲಾ ಕೋಟಯ್ಯ ಅವರು 2000ರಲ್ಲಿ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ತಮ್ಮ ಗ್ರಾಮವನ್ನು ತೊರೆದು ರಾಜ್ಯ ರಾಜಧಾನಿ ಹೈದರಾಬಾದಿಗೆ ಬಂದಿದ್ದರು. ಆಗ ಮೊದಲ ಮಗು ಕಲ್ಪನಾ ಜನಿಸಿ ಸ್ವಲ್ಪ ಸಮಯಷ್ಟೇ ಆಗಿತ್ತು.
ಆದರೆ ನಗರವು ಅವರ ಪಾಲಿಗೆ ಉದಾರಿಯಾಗಿರಲಿಲ್ಲ. ಯಾವುದೇ ಕೆಲಸ ಸಿಗದ ಕಾರಣ ಕೋಟಯ್ಯ ಜಾಡಮಾಲಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಅನಿವಾರ್ಯವಾಗಿ ತೊಡಗಿಸಿಕೊಂಡರು.
ಹೈದರಾಬಾದಿನಲ್ಲಿ, ಕೋಟಯ್ಯ ಅವರ ಸಾಂಪ್ರದಾಯಿಕ ಬಟ್ಟೆ ಒಗೆಯುವ ವೃತ್ತಿಯನ್ನು ಕೇಳುವವರೇ ಇರಲಿಲ್ಲ - ಅವರು ಚಕಲಿ ಸಮುದಾಯಕ್ಕೆ ಸೇರಿದವರು (ತೆಲಂಗಾಣದಲ್ಲಿ ಇತರೇ ಹಿಂದುಳಿದ ವರ್ಗ). "ನಮ್ಮ ಪೂರ್ವಜರು ಬಟ್ಟೆಗಳನ್ನು ಒಗೆಯುತ್ತಿದ್ದರು ಮತ್ತು ಇಸ್ತ್ರಿ ಮಾಡುತ್ತಿದ್ದರು. ಆದರೆ ಈಗ ನಮಗೆ ಬಹಳ ಕಡಿಮೆ ಕೆಲಸವಿದೆ; ಪ್ರತಿಯೊಬ್ಬರೂ ತಮ್ಮದೇ ಆದ ವಾಷಿಂಗ್ ಮೆಷಿನ್ ಗಳು ಮತ್ತು ಇಸ್ತ್ರಿ ಪೆಟ್ಟಿಗೆಗಳನ್ನು ಹೊಂದಿದ್ದಾರೆ," ಮಂಗಮ್ಮ, ಅವರಿಬ್ಬರೂ ಕೆಲಸವನ್ನು ಪಡೆಯಲು ಏಕೆ ಕಷ್ಟಪಡುತ್ತಿದ್ದರು ಎಂದು ವಿವರಿಸುತ್ತಾರೆ.
ಕೋಟಯ್ಯ ಮೊದಲಿಗೆ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸಗಳಿಗಾಗಿ ಪ್ರಯತ್ನಿಸಿದರು. “ನಿರ್ಮಾಣ ಸ್ಥಳಗಳು ಯಾವಾಗಲೂ ಮನೆಯಿಂದ ದೂರವಿರುತ್ತಿದ್ದವು. ದುಡಿದ ಹಣದಲ್ಲಿ ಪ್ರಯಾಣಕ್ಕೂ ಖರ್ಚು ಮಾಡಬೇಕಿತ್ತು, ಹೀಗಾಗಿ ಅವರಿಗೆ ಜಾಡಮಾಲಿ ಕೆಲಸವೇ ಉತ್ತಮವಾಗಿ ಕಾಣುತ್ತಿತ್ತು,” ಎನ್ನುವ ಮಂಗಮ್ಮ ಪತಿ ಈ ಕೆಲಸವನ್ನೇ ಹೆಚ್ಚು ಮಾಡುತ್ತಿದ್ದರು ಎನ್ನುತ್ತಾರೆ. ಈ ಕೆಲಸದಿಂದ ಅವರಿಗೆ 250 ರೂಪಾಯಿ ಕೂಲಿ ಸಿಗುತ್ತಿತ್ತು.
ಮೇ 1, 2016ರಂದು, ಕೋಟಯ್ಯ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಹೆಂಡತಿಯ ಬಳಿ ಚರಂಡಿ ಸ್ವಚ್ಛಗೊಳಿಸಲು ಹೋಗುತ್ತಿರುವುದಾಗಿ ಹೇಳಿ ಹೋಗಿದ್ದರು. ಸ್ನಾನ ಮಾಡಿ ಒಳಗೆ ಬರಲು ಮನೆಯ ಹೊರಗೆ ಸ್ನಾನಕ್ಕಾಗಿ ಒಂದು ಬಕೆಟ್ ನೀರು ಇಡುವಂತೆ ಸೂಚಿಸಿದ್ದರು. “ನನ್ನ ಗಂಡ ಸಫಾಯಿ ಕಾರ್ಮಿಕನಾಗಿರಲಿಲ್ಲ [ಮುನ್ಸಿಪಲ್ ನೈರ್ಮಲ್ಯ ಕಾರ್ಮಿಕ]. ಅವರು ನಮಗೆ ಹಣದ ಅಗತ್ಯವಿದ್ದ ಕಾರಣಕ್ಕಾಗಿ ಈ ಕೆಲಸಕ್ಕೆ ಹೋಗುತ್ತಿದ್ದರು,” ಎನ್ನುತ್ತಾರೆ ಮಂಗಮ್ಮ.














