ಅವರ ಮುರಿದ ಕೈಗೆ ಕಟ್ಟಿದ ಬ್ಯಾಂಡೇಜಿನ ಹಗ್ಗದಿಂದಾಗಿ ಕಿರಿಕಿರಿಯಾಗುತ್ತಿತ್ತು. ಅವರು ಅದನ್ನು ಹೊರಗೆಳೆದು, ತನ್ನ ತಲೆ ಮೇಲಿನ ಟೋಪಿ ಸರಿಮಾಡಿಕೊಂಡು, ತನ್ನ ಬಳಿಯಿದ್ದ ನೀಲಿ ಡೈರಿ ಮತ್ತು ಪೆನ್ನು ಹುಡುಕಲು ಪ್ರಾರಂಭಿಸಿದರು. ಅವರು ಬಹಳ ಅವಸರದಲ್ಲಿರುವಂತೆ ಕಾಣುತ್ತಿತ್ತು.
"ಮಾಜ್ಹಾ ನಾವ್ ನಾರಾಯಣ್ ಗಾಯಕವಾಡ್. ಮೀ ಕೊಲ್ಹಪುರತಾನ ಆಲೋಯ್. ತುಮ್ಹಿ ಕುತುನ್ ಆಲೇ? [ನನ್ನ ಹೆಸರು ನಾರಾಯಣ್ ಗಾಯಕವಾಡ್. ನಾನು ಕೊಲ್ಹಾಪುರದಿಂದ ಬಂದಿದ್ದೇನೆ. ನೀವು ಎಲ್ಲಿಂದ ಬಂದಿದ್ದೀರಿ?],” ಎಂದು ಕೊಲ್ಹಾಪುರದ ಜಂಬಾಲಿ ಗ್ರಾಮದ 73 ವರ್ಷದ ರೈತ ಕೇಳಿದರು
ಅವರು ದಕ್ಷಿಣ ಮುಂಬೈಯ ಆಜಾದ್ ಮೈದಾನದಲ್ಲಿ ಟೆಂಟ್ ನೆರಳಿನಲ್ಲಿ ಕುಳಿತಿದ್ದ ಅಹ್ಮದ್‌ನಗರ ಜಿಲ್ಲೆಯ ಬುಡಕಟ್ಟು ಸಮುದಾಯದ ರೈತರ ಗುಂಪಿನೊಂದಿಗೆ ಮಾತನಾಡುತ್ತಾ ಈ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯದ 21 ಜಿಲ್ಲೆಗಳ ರೈತರು ಜನವರಿ 24-26ರಂದು ಮುಂಬೈಗೆ ಬಂದಿದ್ದರು. ನಾರಾಯಣರಾವ್ ಅವರು ತನ್ನ ಮುರಿದ ಕೈಯೊಂದಿಗೆ ಶಿರೋಲ್ ತಾಲ್ಲೂಕಿನ ತಮ್ಮ ಹಳ್ಳಿಯಿಂದ 400 ಕಿ.ಮೀ ಪ್ರಯಾಣಿಸಿ ಅಲ್ಲಿಗೆ ಬಂದಿದ್ದರು.
ತನ್ನನ್ನು ಪರಿಚಯಿಸಿಕೊಂಡ ನಂತರ, ತಾನು ಮತ್ತು ಇತರ ರೈತರು ಅವರ ಊರುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. "ನಾನು ಒಬ್ಬ ಕೃಷಿಕ, ಹಾಗಾಗಿ ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಅವರು ಜನವರಿ 25ರಂದು ನಮ್ಮನ್ನು ಭೇಟಿಯಾದ ಸಮಯದಲ್ಲಿ ಹೇಳಿದ್ದರು. ಅವರು ತನ್ನ ಮುರಿದ ಬಲಗೈ ನೋಯುತ್ತಿದ್ದರೂ ಅದರಲ್ಲೇ ಅಲ್ಲಿನ ಮಾತುಕತೆಯ ಅಂಶಗಳನ್ನು ತನ್ನ ಡೈರಿಯಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು, "ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಅದಕ್ಕಾಗಿಯೇ ನಾನು ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.
ನಂತರ, ಅವರು ಆಜಾದ್ ಮೈದಾನದಲ್ಲಿ 10 ಜಿಲ್ಲೆಗಳ 20ಕ್ಕೂ ಹೆಚ್ಚು ರೈತರೊಂದಿಗೆ ಮಾತನಾಡಿದ್ದಾಗಿ ಹೇಳಿದರು.
ನಾರಾಯಣ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯ ತೆಂಗಿನ ಗರಿಯೊಂದು ಅವರ ಮೇಲೆ ಬಿದ್ದು ಗಾಯಗೊಂಡರು. ಅವರು ತಮ್ಮ ಊರಿನಲ್ಲಿ ಕಬ್ಬು ಮತ್ತು ಜೋಳದ ಬೇಸಾಯ ನಡೆಸುತ್ತಾರೆ. ಜೊತೆಗೆ ಯಾವುದೇ ರಸಗೊಬ್ಬರ ಬಳಸದೆ ತರಕಾರಿಗಳನ್ನು ಸಹ ಬೆಳೆಯುತ್ತಾರೆ. ಅವರು ಮೊದಲಿಗೆ ತನಗಾದ ಗಾಯವನ್ನು ನಿರ್ಲಕ್ಷಿಸಿದರಾದರೂ ವಾರದ ನಂತರವೂ ನೋವು ಕಡಿಮೆಯಾಗದಿದ್ದಾಗ ಜಾಂಬಲಿಯ ಖಾಸಗಿ ವೈದ್ಯರೊಬ್ಬರ ಬಳಿ ಹೋದರು. "ಪರೀಕ್ಷಿಸಿದ ವೈದ್ಯರು ಕೈ ಉಳುಕಿರುವುದರಿಂದ ಹೇಳಿ ಪಟ್ಟಿ (ಕ್ರೇಪ್ ಬ್ಯಾಂಡೇಜ್) ಕಟ್ಟಿಸಲು ಹೇಳಿದರು." ಎಂದು ಅವರು ಹೇಳಿದರು.
ಆದರೆ ಆಗಲೂ ನೋವು ಕಡಿಮೆಯಾಗದಿದ್ದ ಕಾರಣ ಅವರು ಏಳು ದಿನಗಳ ನಂತರ ತಮ್ಮ ಊರಿನಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಶಿರೋಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಹೋದರು. "ಅಲ್ಲಿನ ವೈದ್ಯರು ಎಕ್ಸ್‌ರೇ ಪರೀಕ್ಷೆಯ ನಂತರ ʼನೀವು ಎಂತಹ ಮನುಷ್ಯ? ಕೈ ಮುರಿದು ಒಂದು ವಾರವಾಗಿದೆ ಆದರೂ ಹೀಗೆ ಒಂದಿಷ್ಟೂ ಪರಿಜ್ಞಾನವಿಲ್ಲದೆ ತಿರುಗಾಡುತ್ತಿದ್ದೀರಿʼ ಎಂದು ವೈದ್ಯರು ಬಯ್ದಿದ್ದರು" ಎಂದು ನಾರಾಯಣ್ ನನ್ನ ಬಳಿ ಹೇಳಿದರು. ಪಿಎಚ್‌ಸಿಯಲ್ಲಿ ಪ್ಲಾಸ್ಟರ್ ಮಾಡಲು ಬೇಕಾದ ಸಲಕರಣೆಗಳು ಇಲ್ಲದ ಕಾರಣ ಡಾಕ್ಟರ್ ಅವರನ್ನು ಶಿರೋಲ್‌ನಿಂದ 15 ಕಿ.ಮೀ ದೂರದಲ್ಲಿರುವ ಸಾಂಗ್ಲಿಯ ಸಿವಿಲ್ ಆಸ್ಪತ್ರೆಗೆ ಹೋಗುವಂತೆ ಶಿಫಾರಸ್ಸು ಮಾಡಿದರು. ಅಲ್ಲಿ ಅದೇ ದಿನ ಸಂಜೆ ಅವರ ಕೈಗೆ ಪ್ಲಾಸ್ಟರ್ ಹಾಕಲಾಯಿತು.
ಅವರು ಜನವರಿ 24ರಂದು ತಮ್ಮ ಮನೆಯಿಂದ ಆಜಾದ್ ಮೈದಾನಕ್ಕೆಂದು ಹೊರಟು ನಿಂತಾಗ ಅವರ ಕುಟುಂಬವು ಅವರನ್ನು ತಡೆಯಲು ಪ್ರಯತ್ನಿಸಿತು, ಆದರೆ ಅದರಿಂದ ಅವರ ಹೋಗುವ ಉತ್ಸಾಹವೇನೂ ಕಡಿಮೆಯಾಗಲಿಲ್ಲ. "ನಾನು ಅವರಿಗೆ ಹೇಳಿದೆ, ನೀವು ನನ್ನನ್ನು ತಡೆದರೆ ಮುಂಬೈಗೆ ಹೋಗುವುದು ಮಾತ್ರವಲ್ಲ ಮತ್ತೆ ಮನೆಗೆ ವಾಪಸ್ ಬರವುದೇ ಇಲ್ಲ" ಎಂದು ಹೇಳಿದೆ. ನಂತರ ಬ್ಯಾಂಡೇಜಿನ ಹಗ್ಗವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಮುಂಬೈಗೆ ಹೊರಟೇಬಿಟ್ಟರು.
ನಾರಾಯಣ ಅವರೊಂದಿಗೆ ಹೊಲದಲ್ಲಿ ಕೆಲಸ ಮಾಡುವ ಅವರ 66 ವರ್ಷದ ಪತ್ನಿ ಕುಸುಮ್ ಅವರು ಪತಿಯ ಪ್ರಯಾಣಕ್ಕಾಗಿ 3 ಭಕ್ರಿಗಳು ಮತ್ತು ಲಾಲ್ ಚಟ್ನಿ (ಕೆಂಪು ಮೆಣಸಿನಕಾಯಿಯಿಂದ ಮಾಡಿದ್ದು) ಮತ್ತು ಸಕ್ಕರೆ ಮತ್ತು ತುಪ್ಪವನ್ನು ಕಟ್ಟಿ ಕೊಟ್ಟಿದ್ದರು. ತನ್ನ ಪತಿ ಅದರಲ್ಲಿ ಅರ್ಧದಷ್ಟೂ ತಿನ್ನುವುದಿಲ್ಲವೆಂದು ಅವರಿಗೆ ತಿಳಿದಿತ್ತು. ಮುಂಬೈ ಪ್ರತಿಭಟನೆಯ ನಂತರ ನಾನು ಜಂಬಾಲಿಗೆ ಭೇಟಿ ನೀಡಿದಾಗ "ಅವರು ಯಾವಾಗಲೂ ತಮ್ಮ ಬಳಿಯಿರುವ ಆಹಾರವನ್ನು ಪ್ರತಿಭಟನಾಕಾರರಿಗೆ ಹಂಚುತ್ತಾರೆ" ಎಂದು ಕುಸುಮ್ ಹೇಳಿದ್ದರು. ಅವರು ಎರಡು ದಿನಕ್ಕೆ ಕೇವಲ ಎರಡು ರೊಟ್ಟಿಗಳನ್ನು ಮಾತ್ರ ತಿಂದು ಉಳಿದ ರೊಟ್ಟಿಗಳನ್ನು ಅಲ್ಲಿದ್ದ ಆದಿವಾಸಿ ಸಮಮುದಾಯದ ರೈತ ಮಹಿಳೆಯರಿಗೆ ಹಂಚಿದ್ದರು. "ನಾವು ಬೂರ್ಜ್ವಾಗಳಲ್ಲ. ದೂರದ ಹಳ್ಳಿಗಳಿಂದ ರೈತರು ಹೋರಾಟಕ್ಕೆಂದು ನಡೆದು ಬಂದು ಸೇರಿದ್ದಾರೆ. ನಾನು ಅವರಿಗೆ ಮಾಡಬಹುದಾದ ಕನಿಷ್ಟ ಉಪಕಾರವೆಂದರೆ ನನ್ನಲ್ಲಿರುವ ಆಹಾರವನ್ನು ಹಂಚಿಕೊಳ್ಳುವುದು" ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಜೊತೆ ಸಂಯೋಜಿತವಾದ ಅಖಿಲ ಭಾರತ ಕಿಸಾನ್ ಸಭೆಯ ಸದಸ್ಯರೂ ಆಗಿರುವ ನಾರಾಯಣ್ ಹೇಳಿದರು.
ನವೆಂಬರ್ 24ರಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರಿಗೆ ಮಹಾರಾಷ್ಟ್ರದ ರೈತರು ತಮ್ಮ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಜನವರಿ 24ರಿಂದ 26ರವರೆಗೆ ಮುಂಬಯಿಯಲ್ಲಿ ಧರಣಿಯನ್ನು ಸಂಯುಕ್ತ ಶೆತಕರಿ ಕಾಮಗಾರ್ ಮೋರ್ಚಾ ಆಯೋಜಿಸಿತ್ತು.
ರೈತರು ವಿರೋಧಿಸುತ್ತಿರುವ ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.
ರೈತರು ಈ ಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಆಜಾದ್ ಮೈದಾನದಲ್ಲಿ, ತನ್ನ ಓರಗೆಯ ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲೆಂದು ಧರಣಿ, ಹೋರಾಟಗಳಲ್ಲಿ ನಾರಾಯಣ ಅವರು ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. "ನಾನು ಯಾವಾಗಲೂ ಅವರ ಜೀವನದ ಕುರಿತು ಇನ್ನಷ್ಟು ತಿಳಿಯುವ ಉದ್ದೇಶದಿಂದ ಅವರೊಡನೆ ಮಾತನಾಡುತ್ತೇನೆ" ಎಂದು ಅವರು ಹೇಳಿದರು. ಹಲವು ವರ್ಷಗಳಲ್ಲಿ ಅವರು ಭಾರತದೆಲ್ಲೆಡೆ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸಿ ನೂರಾರು ರೈತರನ್ನು ಭೇಟಿಯಾಗಿದ್ದಾರೆ ಮತ್ತು ಅವರಲ್ಲಿ ಹಲವರು ಸ್ನೇಹಿತರಾಗಿದ್ದಾರೆ. ಅವರು ದೆಹಲಿ, ಬಿಹಾರದ ಸಮಸ್ತಿಪುರ, ತೆಲಂಗಾಣದ ಖಮ್ಮಮ್ ಮತ್ತು ತಮಿಳುನಾಡಿನ ಕನ್ಯಾಕುಮಾರಿಯ ತನಕ ಹೋಗಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಮುಂಬೈ, ನಾಗ್ಪುರ, ಬೀಡ್ ಮತ್ತು ಔರಂಗಬಾದ್‌ಗಳಲ್ಲಿ ನಡೆದ ಹೋರಾಟಗಳಲ್ಲೂ ಭಾಗಿಯಾಗಿದ್ದಾರೆ.
2020ರ ಸೆಪ್ಟೆಂಬರ್‌ನಲ್ಲಿ ಹೊಸ (ಕೃಷಿ) ಕಾನೂನು ಜಾರಿಗೆ ಬಂದ ನಂತರ ಕೊಲ್ಹಾಪುರ ಜಿಲ್ಲೆಯಲ್ಲಿ 10 ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾಗಿ ಅವರು ವಿವರಿಸುತ್ತಾರೆ. ಕಳೆದ ನಾಲ್ಕು ತಿಂಗಳಲ್ಲಿ ನಾರಾಯಣ ಅವರು ಕೊಲ್ಹಾಪುರದ ವಿವಿಧ ಗ್ರಾಮಗಳಾದ ಜಂಬಾಲಿ, ನಂದನಿ, ಹಾರೋಲಿ, ಅರ್ಜುನ್ವಾಡ್, ಧರಂಗುಟ್ಟಿ, ಶಿರಧಾನ್ ಮತ್ತು ತಕ್ವಾಡೆ ಮುಂತಾದೆಡೆ ರೈತರೊಂದಿಗೆ ಮಾತನಾಡಿದ್ದಾರೆ. “ನಾನು ನೂರಾರು ರೈತರೊಂದಿಗೆ ಮಾತನಾಡಿದ್ದೇನೆ, ಆದರೆ ಅವರಲ್ಲಿ ಯಾರೂ ಈ ಕಾನೂನಿನ ಪರವಾಗಿಲ್ಲ. ಈ ಕಾನೂನುಗಳನ್ನು ಮಾಡುವ ಅವಶ್ಯಕತೆಯೇನಿತ್ತು?" ಎಂದ ಅವರ ಮಾತಿನಲ್ಲಿ ಸಿಟ್ಟು ತುಂಬಿತ್ತು.
2020 ರ ಡಿಸೆಂಬರ್ 8ರಂದು, ರೈತರು ಮತ್ತು ಕೃಷಿ ಕಾರ್ಮಿಕರು ಭಾರತದಾದ್ಯಂತ ಒಂದು ದಿನದ ಬಂದ್ ಘೋಷಿಸಿದ ಸಮಯ ಅವರು ಶಿರೋಲ್ ತಾಲ್ಲೂಕಿನ ಕುರುಂದವಾಡ್ ಪಟ್ಟಣದಲ್ಲಿದ್ದರು. "ರ‍್ಯಾಲಿ ನಡೆಸಲು ಅನುಮತಿ ನಿರಾಕರಿಸಲಾಯಿತಾದರೂ ನಗರದ ಜನರು ರೈತರನ್ನು ಬೆಂಬಲಿಸಿ ತಮ್ಮ ಅಂಗಡಿಗಳನ್ನು ಮುಚ್ಚಿದರು. ಇಲ್ಲದೇ ಹೋದರೆ ಕುರುಂದವಾಡ್‌ನಲ್ಲಿ ಅಂಗಡಿಗಳು ಮುಚ್ಚಿರುವುದನ್ನು ಎಂದಿಗೂ ನೋಡಲು ಸಾಧ್ಯವಿಲ್ಲ." ಎಂದು ಅವರು ಹೇಳಿದರು.
ಹತ್ತಿರದ ಹಳ್ಳಿಗಳ ರೈತರನ್ನು ಭೇಟಿಯಾಗಲು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿ, ನಾರಾಯಣ ಅವರು ಬೆಳಿಗ್ಗೆ 4 ಗಂಟೆಗೆ ಎದ್ದು ಕೆಲಸ ಪ್ರಾರಂಭಿಸಿ 10 ಗಂಟೆಯ ಹೊತ್ತಿಗೆ ತನ್ನ ಕೆಲಸ ಮುಗಿದ ನಂತರ ತನ್ನ ಮೋಟಾರ್ ಸೈಕಲ್ಲಿನಲ್ಲಿ ಊರುಗಳ ಕಡೆಗೆ ಹೊರಡುತ್ತಿದ್ದರು. ನಂತರ ಸಂಜೆ ಐದು ಗಂಟೆಗೆ ಮನೆಗೆ ಹಿಂದಿರುಗಿ ಹೊಲದಲ್ಲಿ ಬೆಳೆ ತಿನ್ನಲು ಬರುವ ಹಕ್ಕಿಗಳನ್ನು ಓಡಿಸಲು ಹೋಗುವುದಾಗಿ ಅವರು ಹೇಳುತ್ತಾರೆ.
ಡಿಸೆಂಬರ್ 20ರಂದು ಅವರು ಜಂಬಾಲಿಯಿಂದ 500 ಕಿ.ಮೀ ದೂರದಲ್ಲಿರುವ ನಾಸಿಕ್‌ಗೆ ತೆರಳಿ ಅಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದು ಸೇರಿದ್ದ 2,000 ರೈತರ ದೊಡ್ಡ ತಂಡವನ್ನು ಸೇರಿಕೊಂಡರು, ಅವರು ಮರುದಿನ ಅಲ್ಲಿಂದ ದೆಹಲಿಗೆ ತೆರಳಬೇಕಿತ್ತು. ನಾರಾಯಣ್ ರೈತರೊಡನೆ ಮಧ್ಯಪ್ರದೇಶದ ಗಡಿಯವರೆಗೆ ಹೋಗಿದ್ದರು. ಅಲ್ಲಿಂದ ಹೊಲಗಳಲ್ಲಿ ಕೆಲಸವಿದ್ದ ಮತ್ತು ಚಳಿಯನ್ನು ತಾಳಿಕೊಳ್ಳಲು ಸಾಧ್ಯವಿಲ್ಲದ ರೈತರೊಡನೆ ಊರಿಗೆ ಮರಳಿದರು. "ದೆಹಲಿಯ ರೈತರು ಸ್ಫೂರ್ತಿಯ ದೊಡ್ಡ ಮೂಲವಾಗಿದ್ದಾರೆ. ಅವರು ಇಡೀ ದೇಶವನ್ನು ಒಂದುಗೂಡಿಸಿದ್ದಾರೆ. ನಾನು ದೆಹಲಿಗೆ ಹೋಗಬೇಕೆಂದು ಬಯಸಿದ್ದೆ, ಆದರೆ ಚಳಿ ಮತ್ತು ತೀವ್ರ ಬೆನ್ನುನೋವಿನಿಂದಾಗಿ ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.
ನಾರಾಯಣ್ ಇತರ ರೀತಿಯಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ 2020ರ ನಡುವೆ ಅವರು 250 ಪೋಸ್ಟ್‌ಕಾರ್ಡ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದು ರೈತರ ಸಮಸ್ಯೆಗಳ ಕುರಿತು ಅವರ ಗಮನ ಸೆಳೆದಿದ್ದಾರೆ. ಮೂರು "ಕರಾಳ ಕಾನೂನುಗಳನ್ನು" ರದ್ದುಪಡಿಸಬೇಕು, ಸ್ವಾಮಿನಾಥನ್ ಆಯೋಗದ ವರದಿಯಂತೆ ಎಂಎಸ್ಪಿ ಅನುಷ್ಠಾನಗೊಳಿಸಬೇಕು ಮತ್ತು 2020ರಲ್ಲಿ ತಂದಂತಹ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ತಮ್ಮ ಪತ್ರಗಳಲ್ಲಿ ಒತ್ತಾಯಿಸಿದ್ದಾರೆ. ಸ್ವಾಮಿನಾಥನ್ ಆಯೋಗ ದ ಶಿಫಾರಸುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ವಿಫಲವಾದ ಕುರಿತು ಸೂಕ್ಷ್ಮವಾಗಿ ಗಮನಸಿದ್ದಾರೆ. “ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಎಂಎಸ್‌ಪಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು 2015ರಲ್ಲಿ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿತ್ತು. ಈಗ ಅವರು ಈ ಕಾನೂನುಗಳಿಂದಾಗಿ ಎಂಎಸ್‌ಪಿ ಕೊನೆಯಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಅವರನ್ನು ನಂಬಲು ಹೇಗೆ ಸಾಧ್ಯ?"
ಅದರ ನಂತರ, ಅವರ ತಾಲ್ಲೂಕಿನ ವಿವಿಧ ಊರುಗಳ ಅನೇಕ ರೈತರು ಪ್ರಧಾನಿಗೆ ಪೋಸ್ಟ್‌ಕಾರ್ಡ್‌ಗಳನ್ನು ಬರೆಯಲು ಪ್ರಾರಂಭಿಸಿದ್ದಾರೆಂದು ಅವರು ನನಗೆ ಹೇಳಿದರು. “ರೈತರು ಈ ಕಾನೂನುಗಳು ಅರ್ಥವಾಗಿಲ್ಲವೆಂದು ಜನರು ಹೇಳುತ್ತಾರೆ. ನಾವು ಪ್ರತಿದಿನ ಹೊಲಗಳಲ್ಲಿ ಕೆಲಸ ಮಾಡುತ್ತೇವೆ, ನಮಗೆ ಅರ್ಥವಾಗುವುದಿಲ್ಲವೆಂದರೆ ಹೇಗೆ? " ಅವರು ಆಶ್ಚರ್ಯದಿಂದ ಕೇಳಿದರು.
ಹೊಸ ಕಾನೂನುಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಹೊಂದುವ ಸಲುವಾಗಿ ನಾರಾಯಣ್ ಅವರು ಆಕ್ಟಿವಿಸ್ಟ್‌ಗಳು ಮತ್ತು ಕಾನೂನು ತಜ್ಞರೊಂದಿಗೆ ಸಹ ಚರ್ಚಿಸುತ್ತಿದ್ದಾರೆ. “ಈ ಕಾನೂನುಗಳು ಎಲ್ಲರಿಗೂ ಅಪಾಯಕಾರಿ. ವಿವಾದದ ಸಂದರ್ಭದಲ್ಲಿ, ನಾವು ಈಗ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.
ಕೃಷಿಕರಲ್ಲದವರಿಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕೆನ್ನುವುದು ಅವರ ಬಲವಾದ ಅಭಿಪ್ರಾಯ. "ವಿಚಾರ್ ಪ್ರಭೋದನ್ ಕೇಲಾ ಪಾಹಿಜೆ ಪೂರ್ಣ ದೇಶತ್ [ಇಡೀ ದೇಶವನ್ನೇ ಜಾಗೃತಗೊಳಿಸಬೇಕಿದೆ]."
ಜನವರಿ 25ರಂದು, ರೈತರು ಆಜಾದ್ ಮೈದಾನದಿಂದ ದಕ್ಷಿಣ ಮುಂಬೈಯಲ್ಲಿರುವ ಮಹಾರಾಷ್ಟ್ರದ ರಾಜ್ಯಪಾಲರ ನಿವಾಸಕ್ಕೆ ಮೆರವಣಿಗೆ ಆರಂಭಿಸಿದಾಗ, ಕೊಲ್ಹಾಪುರ ಜಿಲ್ಲೆಯ ರೈತರ ವಸ್ತುಗಳನ್ನು ನೋಡಿಕೊಳ್ಳುವ ಸಲುವಾಗಿ ನಾರಾಯಣ್ ಅಲ್ಲಿಯೇ ಉಳಿದಿದ್ದರು.
ಅವರು ತಮ್ಮ ನೋಟ್‌ಬುಕ್‌ನಲ್ಲಿ, 'ಭೂ ಮಾಲೀಕತ್ವ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಮತ್ತು ಎಪಿಎಂಸಿ ಮಂಡಿಗಳು' ಹೀಗೆ ರೈತರ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. “ಕೃಷಿ ಕಾನೂನುಗಳು ಮೊದಲು ಎಪಿಎಂಸಿಯನ್ನು ನಾಶಮಾಡುತ್ತವೆ, ನಂತರ ಭಾರತೀಯ ರೈತರನ್ನು ಕೊಲ್ಲುತ್ತವೆ. ಈ ಮೂರು ಕಾನೂನುಗಳು ನಮ್ಮೆಲ್ಲರನ್ನೂ ಕಾರ್ಪೊರೇಟ್ ಸಂಸ್ಥೆಗಳ ಕೂಲಿ ಕಾರ್ಮಿಕರನ್ನಾಗಿ ಮಾಡುತ್ತವೆ” ಎಂದು ಅವರು ನನ್ನೊಂದಿಗೆ ಹೇಳಿದರು.
ಅನುವಾದ - ಶಂಕರ ಎನ್. ಕೆಂಚನೂರು