ಈ ವರದಿಯನ್ನು ಪರಿಸರವಾದಿ ಮತ್ತು ಛಾಯಾಗ್ರಾಹಕ ರಾಧೇಶ್ಯಾಮ್ ಬಿಷ್ಣೋಯ್ ಅವರ ನೆನಪಿಗೆ ಸಮರ್ಪಿಸಲಾಗಿದೆ.
ರಾಧೇಶ್ಯಾಮ್ ಅವರು ಮೇ 23, 2025 ರಂದು ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರು ಭದಾರಿಯಾ ಮಾತಾ ಒರಾಣ್ (ದೇವರಕಾಡು)ಗೆ ತಡರಾತ್ರಿ ಕಳ್ಳಬೇಟೆಗಾರರು ನುಗ್ಗಿರುವ ಮಾಹಿತಿಯ ಬೆನ್ನಟ್ಟಿ ಹೊರಟಿದ್ದರು, ಇದು ಐಯುಸಿಎನ್ ಕೆಂಪು ಪಟ್ಟಿಯಲ್ಲಿರುವ ಚಿಂಕಾರಾ (ಗಝೆಲ್ಲಾ ಬೆನೆಟ್ಟಿಯೈ) ಪ್ರಾಣಿಗಳ ಆವಾಸಸ್ಥಾನ. ರಾಧೇಶ್ಯಾಮ್ ಅವರೊಂದಿಗೆ ಅರಣ್ಯ ಅಧಿಕಾರಿಗಳೂ ಇದ್ದರು, ಅವರು ಸಹ ಈ ಮುಖಾಮುಖಿ ಡಿಕ್ಕಿಯಲ್ಲಿ ಮೃತಪಟ್ಟರು.
ರಾಜಸ್ಥಾನದ ಪೋಕರಣ್ ತೆಹಸಿಲ್ನಲ್ಲಿ ವಾಸಿಸುತ್ತಿದ್ದ ವನ್ಯಜೀವಿ ಛಾಯಾಗ್ರಾಹಕ ಮತ್ತು ಪರಿಸರವಾದಿಯಾಗಿದ್ದ ರಾಧೇಶ್ಯಾಮ್, ಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ಇತರ ಪಕ್ಷಿಗಳು, ಚಿಂಕಾರಾ ಮತ್ತು ಈ ಪ್ರದೇಶದ ಇತರ ಪ್ರಾಣಿಗಳಿಗಾಗಿ ಟ್ರ್ಯಾಕಿಂಗ್ ಮತ್ತು ಅತಿಕ್ರಮಣ ವಿರೋಧಿ ಸಂರಕ್ಷಣಾ ಪ್ರಯತ್ನಗಳಲ್ಲಿ ತೀವ್ರವಾಗಿ ತೊಡಗಿದ್ದ, ಭಾವುಕ ಪರಿಸರವಾದಿಯಾಗಿದ್ದರು. ಅವರು ತಮ್ಮ ಜ್ಞಾನ ಮತ್ತು ಛಾಯಾಚಿತ್ರಗಳನ್ನು ಸಂಪರ್ಕಿಸಿದ ಯಾರೊಂದಿಗಾದರೂ ಉದಾರವಾಗಿ ಹಂಚಿಕೊಳ್ಳುತ್ತಿದ್ದರು. ಇದೀಗ ಅವರ ಮರಣದೊಂದಿಗೆ ಈ ವಲಯದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ. ರಾಧೇಶ್ಯಾಮ್ ಅವರಿಗೆ 30 ವರ್ಷ ವಯಸ್ಸಾಗಿತ್ತು ಮತ್ತು ಅವರು ಧೋಲಿಯಾ ಗ್ರಾಮದಲ್ಲಿ ತಮ್ಮ ಪತ್ನಿ, ಎರಡು ಹಸುಕಂದಮ್ಮಗಳು ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರ ನೆನಪು ಅವರ ಪರಿಚಿತ ವಲಯದಲ್ಲಿ ಸದಾ ಹಸಿರಾಗಿರುತ್ತದೆ.

















