ಶೋಭಾ ಸಾಹ್ನಿ ತನ್ನ ಮಗನ ಸಾವಿಗೆ ಕಾರಣವೇನೆನ್ನುವುದು ತನಗೆ ತಿಳಿದಿದೆ ಎಂದು ಭಾವಿಸಿದ್ದರು. ಆದರೆ ಏಳು ತಿಂಗಳುಗಳ ನಂತರವೂ ಆಕೆಗೆ ಕಾರಣದ ಕುರಿತು ಸ್ಪಷ್ಟತೆ ಇಲ್ಲ.
ಅದು ಫೆಬ್ರವರಿ ತಿಂಗಳ ಒಂದು ಶಾಂತ ಮಧ್ಯಾಹ್ನವಾಗಿತ್ತು. ಬ್ರಹ್ಮಸಾರಿ ಗ್ರಾಮದ ಮೂವತ್ತು ವರ್ಷದ ಶೋಭಾ ತನ್ನ ಆರು ವರ್ಷದ ಮಗ ಆಯುಷ್ ಅನಾರೋಗ್ಯಕ್ಕೆ ತುತ್ತಾದ ದಿನವನ್ನು ನೆನಪಿಸಿಕೊಳ್ಳುತ್ತಾ ತನ್ನ ಒಂದು ಕೋಣೆಯ ಮನೆಯ ಹೊಸ್ತಿಲಲ್ಲಿ ಕುಳಿತಿದ್ದರು. "ಅವನು ಜ್ವರದಿಂದ ಬಳಲುತ್ತಿದ್ದ, ನಂತರ ಹೊಟ್ಟೆನೋಯುತ್ತಿರುವುದಾಗಿ ಹೇಳಿದ" ಎಂದು ಅವರು ಹೇಳಿದರು.
ಜುಲೈ 2021ರ ಕೊನೆಯಲ್ಲಿ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಅವರ ಹಳ್ಳಿಯಲ್ಲಿ ಮಳೆಯಿಂದ ಪ್ರವಾಹ ಉಂಟಾದ ನಂತರ ಇದು ಸಂಭವಿಸಿತು. ಇಲ್ಲಿ ಪ್ರವಾಹಗಳು ಸಂಭವಿಸುವುದು ಸಾಮಾನ್ಯವಾಗಿದೆ. "ಇದು ಪ್ರತಿ ವರ್ಷ ನಡೆಯುತ್ತದೆ. ಆದರೆ ನೀರು ಹೊರಹೋಗಲು ಯಾವುದೇ ಮಾರ್ಗವಿಲ್ಲ" ಎಂದು ಅವರು ಹೇಳಿದರು.
ಪ್ರತಿ ಬಾರಿ ಮಳೆ ಬಂದಾಗ ಇಡೀ ಬ್ರಹ್ಮಸಾರಿ ನೀರಿನಲ್ಲಿ ಮುಳುಗುತ್ತದೆ. ಹಸುವಿನ ಸಗಣಿ ಮತ್ತು ಮಾನವ ಮಲಮೂತ್ರ - ಬಯಲು ಮಲವಿಸರ್ಜನೆಯಿಂದಾಗಿ - ಗ್ರಾಮದಾದ್ಯಂತ ಮಳೆ ನೀರಿನಲ್ಲಿ ಸೇರಿಕೊಳ್ಳುತ್ತದೆ. “ನೀರಿನಲ್ಲಿ ಸತ್ತ ಹುಳುಗಳು ಮತ್ತು ಸೊಳ್ಳೆಗಳು ಇವೆ. ನಮ್ಮ ಅಡುಗೆ ಕೋಣೆಗೆ ಕೊಳಕು ನೀರು ನುಗ್ಗುತ್ತಿದೆ" ಎಂದು ಶೋಭಾ ಹೇಳಿದರು. "ನಾವು ಎಷ್ಟೇ ತಡೆಯಲು ಪ್ರಯತ್ನಿಸಿದರೂ ನಮ್ಮ ಮಕ್ಕಳು ಅದೇ ನೀರಿನಲ್ಲಿ ಆಟವಾಡುತ್ತಾರೆ.ಇಲ್ಲಿನ ಜನರು ಮಳೆಗಾಲದಲ್ಲಿ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ."
ಕಳೆದ ವರ್ಷ ಅವರ ಮಗ ಸಾವನ್ನಪ್ಪಿದ್ದ. ನಾವು ಮೊದಲು ಬರ್ಹಲ್‌ಗಂಜ್ ಮತ್ತು ಸಿಕ್ರಿಗಂಜ್‌ನಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದೆವು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಶೋಭಾ ಹೇಳಿದರು.
ಜ್ವರ ಬಂದ ಒಂದು ವಾರದ ನಂತರ ಶೋಭಾ ಆಯುಷ್‌ನನ್ನು 7 ಕಿ.ಮೀ ದೂರದಲ್ಲಿರುವ ಬೇಲ್‌ಘಾಟ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಕರೆದೊಯ್ಯಲಾಯಿತು. ಅಲ್ಲಿ ಅವರು ಮಗುವನ್ನು ಗೋರಖ್‌ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿಗೆ (ಬಿಆರ್‌ಡಿ ವೈದ್ಯಕೀಯ ಕಾಲೇಜು) ಕರೆದೊಯ್ಯಲು ಸಲಹೆ ನೀಡಿದರು. ಇದು ಬ್ರಹ್ಮಸಾರಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ.










