ಸೋಹನ್ ಸಿಂಗ್ ಟೀಟಾ ಅವರ ಮುಗಿಯದ ಬದುಕಿಸಬೇಕೆನ್ನಿಸುವ ಛಲವು ನೀರಿನೊಳಗೆ ಮತ್ತು ಹೊರಗೆ ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ಭುಲೆ ಚಕ್ ಎನ್ನುವ ಹಳ್ಳಿಯ ಮತ್ತು ಸುತ್ತಮುತ್ತಲಿನ ಬೀದಿಗಳಲ್ಲಿ ಹೊಗೆಯ ಮೋಡಗಳ ನಡುವಿನಿಂದ ಹೊರಬರುವ ದೇವರಂತೆ ಕಾಣುವ ಅವರು ತಮ್ಮ ಮೋಟಾರು ಬೈಕಿನಲ್ಲಿ ವಿವಿಧ ಬಗೆಯ ಪೌಷ್ಟಿಕ ತರಕಾರಿಗಳನ್ನು ಮಾರುವುದನ್ನು ಕಾಣಬಹುದು. ಆದರೆ ಅವರು ಖ್ಯಾತರಾಗಿರುವುದು ತಮ್ಮ ನೀರಿನಲ್ಲಿ ಮುಳುಗೇಳುವ ನೈಪುಣ್ಯದಿಂದ. ಸೋಹನ್ ಆಗಾಗ ಪಂಜಾಬಿನ ಗುರುದಾಸಪುರ ಜಿಲ್ಲೆಯ ತನ್ನ ಹಳ್ಳಿಯಲ್ಲಿನ ಕಾಲುವೆಗಳಿಗೆ ಆಗಾಗ ಡೈವ್ ಮಾಡುತ್ತಿರುತ್ತಾರೆ.
“ಮುಳುಗುತ್ತಿರುವ ಜನರನ್ನು ರಕ್ಷಿಸುವುದು ನನ್ನ ಕೆಲಸವೇನಲ್ಲ. ಆದರೂ ನಾನಿದನ್ನು ಮಾಡುತ್ತೇನೆ,” ಎನ್ನುತ್ತಾರೆ 42 ವರ್ಷದ ಸೋಹನ್. ಅವರು ಇದನ್ನು ಹಿಂದಿನ 20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. “ನಿಮಗೆ ʼನೀರೆಂದರೆ ಜೀವʼ ಎನ್ನಿಸಬಹುದು. ಆದರೆ ನಾನು ಅದು ಒಂದು ಸಾವಿರ ಸಲ ಜನರ ಪಾಲಿಗೆ ಮೃತ್ಯುವಾಗಿದ್ದನ್ನು ಕಂಡಿದ್ದೇನೆ,” ಎನ್ನುತ್ತಾರೆ ತಾವು ನೀರಿನಿಂದ ಹೊರ ಹಾಕಿದ ಹೆಣಗಳನ್ನು ಲೆಕ್ಕ ಹಾಕುತ್ತಾ ಸೋಹನ್.
ಗುರುದಾಸಪುರ ಅಥವಾ ಅದರ ನೆರೆಯ ಪಟಾಣ್ ಕೋಟ್ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಕಾಲುವೆಗಳಿಗೆ ಬಿದ್ದವರನ್ನು ರಕ್ಷಿಸಲು ಅಥವಾ ಶವವನ್ನು ಹೊರತೆಗೆಯುವ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಮೊದಲು ನೆನಪಾಗುವ ಹೆಸರು ಸೋಹನ್ ಅವರದು. ಬಿದ್ದಿರುವ ವ್ಯಕ್ತಿ ಆಕಸ್ಮಿಕವಾಗಿ ಬಿದ್ದಿರುವುದೋ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿರುವುದೋ ಎನ್ನುವುದನ್ನು ತಿಳಿದುಕೊಳ್ಳಲು ಕಾಯದೆ ಸೋಹನ್ ಮೊದಲು ನೀರಿಗೆ ಹಾರುತ್ತಾರೆ. “ಆ ಕ್ಷಣಕ್ಕೆ ನೀರಿಗೆ ಬಿದ್ದ ವ್ಯಕ್ತಿಯನ್ನು ಜೀವಂತವಾಗಿ ಮೇಲೆ ತರುವುದಷ್ಟೇ ನನ್ನ ಆದ್ಯತೆಯಾಗಿರುತ್ತದೆ,” ಎನ್ನುತ್ತಾರೆ ಸೋಹನ್. ಆದರೆ ಒಂದು ವೇಳೆ ಅವರು ತೀರಿಕೊಂಡಿದ್ದರೆ, “ಸಂಬಂಧಿಕರು ಕೊನೆಯ ಬಾರಿಗೆ ಅವರ ಮುಖವನ್ನು ನೋಡಬೇಕೆಂದು ನಾನು ಬಯಸುತ್ತೇನೆ," ಎಂದು ಶಾಂತವಾಗಿ ಹೇಳುವ ಅವರ ದನಿಯಲ್ಲಿ ಒಂದು ಸಾವಿರ ಜನರ ಜೀವ ಹೋದ ನೋವು ತುಂಬಿಕೊಂಡಿತ್ತು.
ಸೋಹನ್ ತಿಂಗಳಿಗೆ ಕನಿಷ್ಟವೆಂದರೂ 2-3 ಹೆಣಗಳನ್ನು ಕಾಲುವೆಗಳಿಂದ ತೆಗೆಯುತ್ತಾರೆ. ಈ ಕುರಿತಾದ ತನ್ನ ಅನುಭವದ ಕುರಿತು ಮಾತನಾಡುವಾಗ ಅವರು ತತ್ವಜ್ಞಾನದ ಮೊರೆ ಹೋಗುತ್ತಾರೆ. ಅವರು ಹೇಳುವಂತೆ, “ಬದುಕೆನ್ನುವುದು ಸುಂಟರಗಾಳಿ ಇದ್ದಂತೆ, ಅದೊಂದು ಚಕ್ರ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿಯೇ ಆರಂಭವೂ ಆಗುತ್ತದೆ.”









