ರಾಮ ಅಡೆಲ್ಲು ಗಂದೇವಾಡರ ಮನಸ್ಸು ಆತಂಕಗೊಂಡಿದೆ, ಕದಡಿ ಹೋಗಿದೆ, ಅದೇಕೆಂದು ಅವರಿಗೆ ಗೊತ್ತು. ಕೋವಿಡ್- 19ರ ಯಮಸ್ವರೂಪಿ ಎರಡನೇ ಅಲೆಯ ತೀವ್ರತೆ ಕಡಿಮೆಯಾದರೂ, ಅದರ ಕರಿನೆನಪುಗಳನ್ನು ಮರೆಯಲಾಗುತ್ತಿಲ್ಲ. “ಈಗ ಸ್ವಲ್ಪ ದಿನಗಳಿಂದ ಸ್ಮಶಾನ ಸ್ವಲ್ಪ ವಿಶ್ರಾಂತವಾಗಿದೆ. ಆದರೆ ಮೂರನೆ ಅಲೆ ಬಂದರೆ ಏನು ಗತಿ? ಮತ್ತೆ ಆ ವಿನಾಶಕಾರಿ ಗಂಡಾಂತರವನ್ನು ಎದುರಿಸಲು ನನ್ನ ಕೈಲಿ ಸಾಧ್ಯವಿಲ್ಲ’ ಎಂದು ಹೇಳಿದರು.
ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದಲ್ಲಿನ ಕಪಿಲಧರ ಸ್ಮಶಾನ ಭೂಮಿಯಲ್ಲಿ 60ರ ಪ್ರಾಯದ ರಾಮ ಅವರು ಕೆಲಸ ಮಾಡುವರು. ಸ್ಮಶಾನದ ಆವರಣದಲ್ಲಿಯೇ ತನ್ನ ಕುಟುಂಬದೊಂದಿಗೆ: ಅವರ ತಾಯಿ ಆದಿಲಬಾಯಿ (78 ವ); ಹೆಂಡತಿ ಲಕ್ಷ್ಮಿ (40 ವ) ಮತ್ತು ಅವರ ನಾಲ್ಕು ಹೆಣ್ಣು ಮಕ್ಕಳಾದ ರಾಧಿಕಾ, 18, ಮನಿಷಾ, 12 ಮತ್ತು ಸತ್ಯಶೀಲ, 10, ಮತ್ತು ಸಾರಿಕಾ, 3, ವಾಸವಾಗಿದ್ದಾರೆ. ರಾಧಿಕಾರ 22 ರ ಹರೆಯದ ಗಂಡ, ಗಣೇಶ ಕೂಡ ಅವರೊದಿಗಿದ್ದಾರೆ.
ಸ್ಮಶಾನ ನಿರ್ವಹಿಸುವುದೇ ರಾಮಾರವರ ಕೆಲಸ. “ನಾನು ಹೆಣಗಳಿಗೆ ಚಿತೆ ಸಿದ್ದ ಮಾಡುವುದು, ಹೆಣ ಸುಟ್ಟ ಮೇಲೆ ಉಳಿದ ಬೂದಿಯನ್ನು ತೆಗೆದು ಹಾಕುವುದು ಮುಂತಾದ ಕೆಲಸ ಮಾಡುತ್ತೇನೆ. ತಿಂಗಳಿಗೆ ನಗರಸಭೆಯಿಂದ (ಉಸ್ಮಾನಾಬಾದ್) ರೂ. 5000 ಕೊಡುತ್ತಾರೆ.” ಎಂದರು ರಾಮಾರವರು. ಗಣೇಶರಚರು ಸಹ ಈ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಈ ಈರ್ವರ ದುಡಿಮೆಯ ಹಣವೇ ಕುಟುಂಬದ ವರಮಾನದ ಒಂದೇ ಒಂದು ಮೂಲ”
ರಾಮಾರವರು ಮತ್ತು ಅವರ ಕುಟುಂಬ ಸುಮಾರು 12 ವರ್ಷಗಳ ಕೆಳಗೆ ಉಸ್ಮಾನಾಬಾದ್ ನಗರದಿಂದ 200 ಕಿಮೀ ದೂರದ ನಾಂದೇಡದಿಂದ ಬಂದವರು. ಇವರು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಗುರುತಿಸಲ್ಪಟ್ಟ ಮಸಣಜೋಗಿ ಸಮುದಾಯಕ್ಕೆ ಸೇರಿದವರು. ಮಸಣಜೋಗಿಗಳ ಕುಲಕಸುಬು ಸ್ಮಶಾನದಲ್ಲಿ ಕೆಲಸ ಮಾಡುವುದು ಮತ್ತು ಭಿಕ್ಷೆ ಬೇಡುವುದು. ಗಂದೇವಾಡ ಜನರಂತೆ ಕೆಲವು ಕುಟುಂಬಗಳು ಸ್ಮಶಾನಗಳಲ್ಲಿಯೇ ವಾಸಿಸುತ್ತಾರೆ.
“ನನ್ನ ಜೀವಮಾನ ಪೂರ್ತಿ” ನಾನು ಸ್ಮಶಾನದಲ್ಲೇ ಕೆಲಸ ಮಾಡಿದ್ದೇನೆ ಎಂದರು ರಾಮಾರವರು. ಆದರೆ ಈ ಕೋವಿಡ್ ಬಂದ ಮೇಲೆ ನೋಡಿದಷ್ಟು ಹೆಣಗಳನ್ನು ನಾನು ಯಾವಾಗಲೂ ನೋಡಿಲ್ಲ. “ಅದರಲ್ಲೂ ಎರಡನೇ ಅಲೆಯ ಸಮಯದಲ್ಲಿ (ಮಾರ್ಚಿ- ಮೇ 2021) ನೋಡಿದಷ್ಟು ಹೆಣಗಳನ್ನು ನಾನು ಯಾವಾಗಲೂ ನೋಡಿಯೇ ಇಲ್ಲ. ರೋಗದಿಂದ ಸತ್ತ ಶವಗಳು ದಿನಪೂರ್ತಿ ಉರಿಯುತ್ತಲೇ ಇದ್ದವು. ಬೆಳಗಿನಿಂದ ಸಂಜೆಯವರೆಗೂ ನಾವು ಹೊಗೆ ಕುಡಿದುಕೊಂಡೇ ಇರುತ್ತಿದ್ದೆವು. ನನಗೆ ಅಚ್ಚರಿಯಾದುದೇನೆಂದರೆ ನಮ್ಮಲ್ಲಿ ಯಾರೂ ಕೋವಿಡ್ ನಿಂದ ಸಾಯಲಿಲ್ಲ ಅನ್ನುವುದು” ಎಂದರು.
ಕೊನೆಗೂ ಅನೇಕ ದಿನಗಳ ಮೇಲೆ ಈ ಪಿಡುಗು ಒಳ್ಳೆಯ ಗಾಳಿಗಾಗಿ ಏದುಸಿರು ಬಿಡುತ್ತಿದ್ದ ಕುಟುಂಬವನ್ನು ಬಿಟ್ಟು ತೊಲಗಿತು. ಸ್ಮಶಾನದ ಗೇಟಿನ ಬಳಿ ಇರುವ ಟಿನ್ ಶೀಟಿನ ಜೋಪಡಿಮನೆಯು, ಚಿತೆಗಳು ಉರಿಯುವ ಬಯಲಿನಿಂದ ಸುಮಾರು 100-150 ಮೀ ದೂರದಲ್ಲಿದೆ. ಜೋಪಡಿಯ ಎದುರಿಗೆ ಸೌದೆಯ ರಾಶಿಯನ್ನು ಒಟ್ಟಲಾಗಿದೆ ಮತ್ತು ಮನೆಯಿಂದ ಕೆಳಗಿನ ತಗ್ಗಿನಲ್ಲಿ ಸುಮಾರು ಒಂದು ಡಜನ್ ಹೆಜ್ಜೆಗಳಷ್ಟು ದೂರದಲ್ಲಿ ಚಿತೆಗಳನ್ನು ಸಿದ್ದಪಡಿಸಲಾಗುತ್ತದೆ. ಉರಿಯುವ ಹೆಣಗಳ ಕೆಟ್ಟ ಹೊಗೆಯು ಮೇಲೇರುತ್ತದೆ ಮತ್ತು ಜೋಪಡಿಯ ಕಡೆಗೆ ಸಾಗುತ್ತದೆ.
ಕೋವಿಡ್ ನಿಂದ ಮರಣ ಪ್ರಮಾಣವು ಗರಿಷ್ಟಮಟ್ಟ ಮುಟ್ಟಿದ ಸಮಯದಲ್ಲಿ, ಗಂದೇವಾಡರ ಈ ಮನೆಯು ಯಾವಾಗಲೂ ಹೊಗೆಯಿಂದ ತುಂಬಿರುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆಯ ನಂತರ- ದಿನಕ್ಕೆ ಎರಡು ಸಲ ಉಸ್ಮಾನಾಬಾದಿನ ಸರಕಾರಿ ಆಸ್ಪತ್ರೆಯಿಂದ ಅಂತ್ಯಸಂಸ್ಕಾರಕ್ಕಾಗಿ ಶವಗಳನ್ನು ಕಳಿಸುತ್ತಾರೆ. ಪ್ರತಿ ಸರತಿಯ ಶವಗಳು ಬರುವ ಮುಂಚೆ ರಾಮ ಮತ್ತು ಗಣೇಶರವರು ಚಿತೆಗಳನ್ನು ಸಿದ್ದ ಮಾಡಬೇಕು.
“ಆ ತಿಂಗಳುಗಳಲ್ಲಿ ಸ್ಮಶಾನವು ದಿನಕ್ಕೆ 15- 20 ಶವಗಳನ್ನು ಸುಟ್ಟಿರುವುದನ್ನು ನೋಡಿದೆ. ಒಂದು ದಿನ ನಾವು 29 ಶವಗಳನ್ನು ನೋಡಿದ್ದೇವೆ.” ಎಂದರು ಗಣೇಶರವರು. ಮುಂದುವರೆದು “ಮೊದಲನೆ ಅಲೆಯಲ್ಲಿ (2020 ರ ಏಪ್ರಿಲ್ಲಿನಿಂದ ಜುಲೈ ಪ್ರಾರಂಭದವರೆಗೆ) ದಿನಕ್ಕೆ 5 ರಿಂದ 6 ಹೆಣಗಳು ಬರುತ್ತಿದ್ದವು. ಆಗ ಅದೇ ಜಾಸ್ತಿ ಅಂದುಕೊಂಡಿದ್ದೆವು. ಮತ್ತೆ ನಾವು ಅಷ್ಟೊಂದನ್ನು ನಿಭಾಯಿಸುವುದು ಕಷ್ಟ. ಆ ದಣಿವು ಮತ್ತು ಒತ್ತಡ ತಡೆಯಲಾಗದು.
ಎಷ್ಟೋ ದಿನಗಳು, ಬೆಳಿಗ್ಗೆ ಏಳುವಾಗಲೇ ಸತ್ತವರ ಸಂಬಂಧಿಕರ ನೋವಿನ ಆಕ್ರಂದನವಿರುತ್ತಿತ್ತು. ಮತ್ತು ಮಲಗುವಾಗ ಕಣ್ಣಿನಲ್ಲಿ ಉರಿ ಇರುತ್ತಿತ್ತು. ಕರೋನಾ ವೈರಸ್ ಸೋಂಕು ಕಡಿಮೆಯಾದ ಮೇಲೆ ಸ್ವಲ್ಪ ಆರಾಮವಾಗಿ ಉಸಿರಾಡುತ್ತಿದ್ದರೂ, ಅವರ ಮನೆಯನ್ನು ಸುತ್ತಿಕೊಂಡಿದ್ದ ಗಬ್ಬುನಾತವನ್ನು ರಾಮಾರವರು ಮರೆಯಲಾಗುತ್ತಿಲ್ಲ.
ಅಕ್ಟೋಬರ್, 14 ರಂದು ಉಸ್ಮಾನಾಬಾದ್ ಜಿಲ್ಲೆಯಲ್ಲಿ ಸುಮಾರು 390 ಕೋವಿಡ್- 19 ಸಕ್ರಿಯ ಪ್ರಕರಣಗಳಿದ್ದವು. ಮಾರ್ಚಿ 2020 ರಿಂದ 67,000 ಪಾಸಿಟಿವ್ ಪ್ರಕರಣಗಳು ಮತ್ತು 2,000 ಕ್ಕಿಂತ ಹೆಚ್ಚು ಸಾವುಗಳು ವರದಿಯಾಗಿವೆ.
ಸ್ಮಶಾನದಲ್ಲಿ ಸಂಬಂಧಿಕರ ನೋವಿನ ಆಕ್ರಂದನ ರಾಮರವರನ್ನು ಈಗಲೂ ಕಾಡುತ್ತದೆ. ಆದರೆ ಶವ ಸುಡುವ ಜಾಗದಲ್ಲಿ ಒಟ್ಟಿಗೆ ಗುಂಪಾಗಿ ನಿಂತುಬಿಡುತ್ತಾರೆ ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಾರೆ. “ಅವರನ್ನು ಮಾತಾಡಿಸುವಾಗ ಸೂಕ್ಷ್ಮತೆಯಿಂದ ಮಾತಾಡಿಸಬೇಕು. ನಿಮ್ಮ ಕೆಲಸ ನೀವು ಮಾಡುತ್ತಲೇ ಅವರನ್ನು ಆದಷ್ಟು ಸುರಕ್ಷಿತ ದೂರದಲ್ಲಿ ನಿಲ್ಲಿಸಬೇಕು. ಕೆಲವೊಮ್ಮೆ ಜನ ಅರ್ಥಮಾಡಿಕೊಳ್ಳುತ್ತಾರೆ, ಕೆಲವೊಮ್ಮೆ ನಮ್ಮೊಂದಿಗೆ ಜಗಳಕ್ಕಿಳಿಯುತ್ತಾರೆ” ಎಂದರು.
ಆದರೆ ಇವೆಲ್ಲವುಗಳು ರಾಮಾರವರ ಕುಟುಂಬದ ಮೇಲೆ - ಅದರಲ್ಲೂ ಎರಡನೇ ಅಲೆಯಲ್ಲಿ- ಗಾಢ ಪರಿಣಾಮ ಬೀರಿವೆ. ಪ್ರತಿಸಲ ಅಂಬ್ಯುಲೆನ್ಸ್ ಸ್ಮಶಾನದ ಜಲ್ಲಿರಸ್ತೆಯ ಏರುಹಾದಿಯಲ್ಲಿ ಬರುವ ಶಬ್ದ ಕೇಳಿದ ಕೂಡಲೆ, ಮೂರು ವರ್ಷದ ಸಾರಿಕಾ ‘ಹೊಗೆ, ಹೊಗೆ’ ಎಂದು ಚೀರುತ್ತಾಳೆ. “ಹೆಣವನ್ನು ಅಂಬ್ಯುಲೆನ್ಸಿನಿಂದ ಕೆಳಗಿಳಿಸುವ ಮೊದಲೇ ಕಣ್ಣುಗಳನ್ನು ಉಜ್ಜಿಕೊಳ್ಳಲು ಶುರು ಮಾಡುತ್ತಾಳೆ.” ಕಿಟಕಿ ಬಾಗಿಲುಗಳನ್ನು ಮುಚ್ಚಿದರೂ ಹೊಗಯು ಅದೇಗೋ ಒಳಗೆ ಬಂದುಬಿಡುತ್ತದೆ ಎಂದು ಹೇಳುತ್ತಾ ಹೋದರು ಗಣೇಶ್. “ಎರಡನೇ ಅಲೆ ಕಡಿಮೆಯಾದ ಮೇಲೆ ಸ್ವಲ್ಪ ಸುಧಾರಿಸಿದೆ. ಹಾಗಾಗಿ ಈಗ ಅವಳು ಮೊದಲಿನಂತೆ ಮಾಡುವುದಿಲ್ಲ. ಆದರೆ ಇಂತ ವಾತಾವರಣದಲ್ಲಿ ಬೆಳೆದರೆ ಮುಂದೆ ಅವಳ ಮೇಲೆ ಪರಿಣಾಮ ಬೀರಬಹುದು. ಗಾಬರಿ ಹುಟ್ಟಿಸುತ್ತಿದೆ ಮೂರನೆ ಅಲೆಯ ಸಾಧ್ಯತೆ”
ಪ್ರತಿದಿನ ಬೆಳಿಗ್ಗೆ, ರಾಮಾ ಮತ್ತವರ ಕುಟುಂಬ ಜಿಲ್ಲಾಡಳಿತವು ವರದಿ ಮಾಡಿದ ಕೋವಿಡ್-19 ಅಂಕಿ ಅಂಶಗಳನ್ನು ಅವರ ಮೊಬೈಲಿನಲ್ಲಿ ಗಮನಿಸುತ್ತಿರುತ್ತಾರೆ. “ಪ್ರತಿದಿನ ಏಳುವುದು, ಕೋವಿಡ್ ಸಂಖ್ಯೆಗಳನ್ನು ನೋಡುವುದು, ನಿರಾಳತೆಯಿಂದ ಉಸಿರು ಬಿಡುವುದು. ಅಬ್ಬಾ, ಅಂತೂ ಕೊನೆಗೂ ತಾಪತ್ರಯ ಕಮ್ಮಿಯಾಯಿತು. ಆದರೆ ಒಂದು ವೇಳೆ ಮೂರನೆ ಅಲೆ ಬಂದರೆ ಅಥವಾ ಸಂಖ್ಯೆಗಳು (ಕೋವಿಡ್ ಪ್ರಕರಣ) ಹೆಚ್ಚಾದರೆ, ಮೊದಲು ಗೊತ್ತಾಗುವುದು ನಮಗೇನೆ” ಎಂದರು ರಾಮರವರು.
ಇಲ್ಲಿಯತನಕ ಈ ಕುಟುಂಬವು ಸಾಂಕ್ರಾಮಿಕದಿಂದ ಸುರಕ್ಷಿತವಾಗಿದ್ದರೂ, ರಾಮಾರವರ ತಾಯಿ ಅದರಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಹೇಳುತ್ತಾರೆ. “ನಮಗೆಲ್ಲರಿಗೂ ಈಮಧ್ಯೆ ಒಮ್ಮೆ ಕಾಯಿಲೆಯಾಗಿತ್ತು. ಮೊದಲಿನಷ್ಟು ಶವಗಳು ಈಗ ಬರುವುದಿಲ್ಲವಾದರೂ, ನಾವು ಈಗಲೂ ಕೆಮ್ಮುತ್ತಿದ್ದೇವೆ. ತಲೆ ಭಾರವೆನಿಸುತ್ತದೆ ಮತ್ತು ತಿರುಗುತ್ತಲೇ ಇರುತ್ತದೆ. ಯಾವಾಗಲೂ ತಲೆಸುತ್ತು ಇರುತ್ತದೆ. ಇನ್ನೊಂದು ಕೋವಿಡ್ ಅಲೆಯನ್ನು ನಿಭಾಯಿಸಲು ನಮ್ಮ ಕೈಲಿ ಆಗುವುದಿಲ್ಲವೇನೋ ಎನ್ನಿಸುತ್ತಿದೆ, ಹಾಗೂ ಯಮನ ಮರಣ ಪಾಶದಲ್ಲಿ ಸಿಕ್ಕಿ ಬಿದ್ದಿದ್ದೇವೆ ಎನ್ನಿಸುತ್ತಿದೆ” ಎಂದರು ಆದಿಲಬಾಯಿ.
ಇಲ್ಲಿ ಹೀಗೆ ಬದುಕುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯೇ ಇಲ್ಲ. “ನಾವು ಎಲ್ಲಿಗೆ ಹೋಗಲಿ?” ಎಂದು ಕೇಳಿದರು ರಾಮಾರವರು. ಮುಂದುವರೆದು “ಮನೆಬಾಡಿಗೆ ಕಟ್ಟುವಷ್ಟು ಹಣ ನಮ್ಮಲ್ಲಿಲ್ಲ. ನನ್ನ ಜೀವನದಲ್ಲಿ ಈ ಕೆಲಸ ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡಿಲ್ಲ” ಎಂದರು.
ಸ್ಮಶಾನದ ಪಕ್ಕದಲ್ಲಿರುವ ನಗರಸಭೆಯ ಅರ್ಧ ಎಕರೆ ಜಮೀನಿನಲ್ಲಿ ಕುಟುಂಬವು ಕೇವಲ ಅವರಿಗಾಗುವಷ್ಟು ಜೋಳ ಮತ್ತು ಸಜ್ಜೆಯನ್ನು ಬೆಳೆದುಕೊಳ್ಳುತ್ತದೆ. “ನಮ್ಮ ಕೈಗೆ ಹಣ ಸಿಗುವುದು ಶವಸಂಸ್ಕಾರದ ಕೆಲಸದಿಂದ (ರೂ. 5000). ಅದಿಲ್ಲದೆ ನಾವು ಬದುಕೋಕೆ ಸಾಧ್ಯವಿಲ್ಲ” ಎಂದರು ಆದಿಲಬಾಯಿ.
ಬೇರಾವುದೇ ವರಮಾನವಿಲ್ಲದಿದ್ದರೂ, ಬದಲಾದ ಹೊಸ ಪರಿಸ್ಥಿತಿಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಸಮಯದಲ್ಲೂ ಮನೆಯವರು ಹೇಗೋ ನಿಭಾಯಿಸುತ್ತಿದ್ದಾರೆ. “ನಮ್ಮ ಹತ್ತಿರ ಯಾವುದೇ ಸುರಕ್ಷಾ ಕಿಟ್ ಇಲ್ಲ. ನಮ್ಮ ಹತ್ತಿರ ಸ್ಯಾನಿಟೈಸರ್ ಇಲ್ಲ. ಎಲ್ಲಾ ಕೆಲಸಗಳನ್ನು ಬರಿ ಕೈಯಲ್ಲೇ ಮಾಡುತ್ತೇವೆ.” ಎಂದರು ಆದಿಲಬಾಯಿ. ಎಲ್ಲರಿಗಿಂತ ಅವರಿಗೆ ಅವರ ಮೊಮ್ಮೊಕ್ಕಳ ಬಗ್ಗೆ ಹೆಚ್ಚು ಚಿಂತೆಯಿದೆ. “ಅವರು ಈ ಸ್ಮಶಾನದಲ್ಲೇ ಬೆಳೆದು ಸ್ಮಶಾನದ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ” ಎಂದು ಆತಂಕದಿಂದಲೇ ಹೇಳಿದರು.
ಈ ವರದಿಯು ಪತ್ರಕರ್ತರಿಗೆ ಕೊಡುವ ಪುಲಿಟ್ಜರ್ ಕೇಂದ್ರದ ಸಹಯೋಗದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಸರಣಿವರದಿಗಳ ಒಂದು ಭಾಗ.
ಅನುವಾದ : ಮಂಜಪ್ಪ ಬಿ . ಎಸ್