ಅಲ್ಲಿ ಸಣ್ಣದೊಂದು ಧೂಳಿನ ಮೋಡ ಮತ್ತು ಎಂಜಿನ್ನಿನ ಫಟ್ ಫಟ್ ಸದ್ದು ವಾತಾವರಣದಲ್ಲಿತ್ತು. ಅಷ್ಟು ಹೊತ್ತಿಗೆ ನೀಲಿ ಸೀರೆ ದೊಡ್ಡ ಮೂಗು ನತ್ತು ಮತ್ತು ಇಷ್ಟಗಲ ನಗೆತೊಟ್ಟ ಅಡೈಕಲಾಸೆಲ್ವಿ ತಮ್ಮ ದ್ವಿಚಕ್ರ ವಾಹನದಲ್ಲಿ ನಮ್ಮೆದುರು ಬಂದರು. ಕೆಲವು ನಿಮಿಷಗಳ ಹಿಂದೆ ಅವರು ನಮಗೆ ತಮ್ಮ ಬೀಗ ಹಾಕಿದ ಮನೆಯೆದುರು ಕಾಯುವಂತೆ ಹೇಳಿದ್ದರು. ಅವರು ತಮ್ಮ ಮೆಣಸಿನ ಹೊಲದಲ್ಲಿದ್ದರು. ಅದು ಮಾರ್ಚ್ ತಿಂಗಳ ನಡುಹಗಲಾಗಿದ್ದರೂ ರಾಮನಾಥಪುರದ ಸೂರ್ಯ ಆಗಲೇ ಬೆಂಕಿ ಕಾರಲು ಆರಂಭಿಸಿದ್ದ. ಆ ಹೊತ್ತು ನಮ್ಮ ನೆರಳುಗಳು ಚಿಕ್ಕದಾಗಿದ್ದರೆ ನಮ್ಮ ಬಾಯಾರಿಕೆ ದೈತ್ಯವಾಗಿ ಬೆಳೆದಿತ್ತು. ಪೇರಳೆ ಮರದ ನೆರಳಿನಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ ಅಡೈಕಲಾಸೆಲ್ವಿ ಬೇಗ ಬೇಗನೆ ಬೀಗ ತೆಗೆದು ಮನೆಯೊಳಗೆ ಕರೆದು ಕುಡಿಯಲು ನೀರು ಕೊಟ್ಟರು. ನಂತರ ಕುಳಿತು ಮಾತುಕತೆಗೆ ತೊಡಗಿಕೊಂಡೆವು.
ನಾವು ಅವರ ಬೈಕಿನ ಮೂಲಕ ಮಾತುಕತೆ ಆರಂಭಿಸಿದೆವು. ಅವರ ವಯಸ್ಸಿನ, ಒಂದು ಸಣ್ಣ ಹಳ್ಳಿಯಿಂದ ಬಂದ ಒಬ್ಬ ಮಹಿಳೆ, ಗಾಡಿಯನ್ನು ಓಡಿಸುವುದು ಸಾಮಾನ್ಯ ಮಾತಲ್ಲ. "ಆದರೆ ಇದು ತುಂಬಾ ಉಪಯುಕ್ತವಾಗಿದೆ" ಎಂದು 51 ವರ್ಷದ ಅವರು ನಗುತ್ತಾರೆ. ಅವರು ಅದನ್ನು ಓಡಿಸಲು ಬಹಳ ಬೇಗನೆ ಕಲಿತಿದ್ದರು. "ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ ಸಹೋದರ ನನಗೆ ಕಲಿಸಿದನು. ನನಗೆ ಸೈಕಲ್ ಓಡಿಸಲು ಗೊತ್ತಿತ್ತು, ಹಾಗಾಗಿ ಇದು ಕಷ್ಟವಾಗಿರಲಿಲ್ಲ."
ದ್ವಿಚಕ್ರ ವಾಹನ ಇಲ್ಲದೆ ಹೋಗಿದ್ದರೆ, ಬದುಕು ಕಷ್ಟಕರವಾಗುತ್ತಿತ್ತು ಎಂದು ಅವರು ಹೇಳುತ್ತಾರೆ. "ನನ್ನ ಪತಿ ಅನೇಕ ವರ್ಷಗಳಿಂದ ಮನೆಯಿಂದ ದೂರವಿದ್ದರು. ಅವರು ಮೊದಲು ಸಿಂಗಾಪುರದಲ್ಲಿ ಮತ್ತು ನಂತರ ದುಬೈ ಮತ್ತು ಕತಾರಿನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡಿದರು. ನಾನು ನನ್ನ ಹೆಣ್ಣುಮಕ್ಕಳನ್ನು ಬೆಳೆಸಿದೆ ಮತ್ತು ಹೊಲವನ್ನು ನೋಡಿಕೊಳ್ಳುತ್ತಿದ್ದೇನೆ." ಏಕಾಂಗಿಯಾಗಿ.
ಜೆ. ಅಡೈಕಲಾಸೆಲ್ವಿ ಮೊದಲಿನಿಂದಲೂ ಬೇಸಾಯಗಾರರಾಗಿದ್ದವರು. ನಮ್ಮೆದುರು ನೆಲದ ಮೇಲೆ ಚಂಕ್ಕಂಬಕ್ಕಳ ಹಾಕಿ ಕುಳಿತ ಅವರ ಕೈಗಳು ಅವರ ಮೊಣಕಾಲಿನ ಮೇಲಿದ್ದವು. ನೆಟ್ಟಗೆ ಕುಳಿತಿದ್ದ ಅವರ ಎರಡೂ ಕೈಗಳಲ್ಲಿ ಒಂದೊಂದು ಬಳೆಯಿದ್ದವು. ಅವರು ಶಿವಂಗಂಗೈ ಜಿಲ್ಲೆಯ ಕಲಾಯಾರ್ ಕೋಯಿಲ್ ಎನ್ನುವಲ್ಲಿನ ಕೃಷಿಕುಟುಂಬವೊಂದರಲ್ಲಿ ಜನಿಸಿದರು. ಇದು ಮುಡುಕುಲತೂರು ಬ್ಲಾಕ್‌ನ ಪಿ. ಮುತ್ತುವಿಜಯಪುರಂ ಎಂಬ ಕುಗ್ರಾಮದಿಂದ ರಸ್ತೆ ಮಾರ್ಗವಾಗಿ ಒಂದೂವರೆ ಗಂಟೆ ದೂರದಲ್ಲಿದೆ. "ನನ್ನ ಸಹೋದರರು ಶಿವಗಂಗೈನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಅನೇಕ ಬೋರ್ ವೆಲ್ ಗಳನ್ನು ಹೊಂದಿದ್ದಾರೆ. ಮತ್ತು ಇಲ್ಲಿ, ನಾನು ನೀರಾವರಿಗಾಗಿ ಗಂಟೆಗೆ 50 ರೂಪಾಯಿಗಳಿಗೆ ನೀರನ್ನು ಖರೀದಿಸುತ್ತೇನೆ." ರಾಮನಾಥಪುರಂನಲ್ಲಿ ನೀರು ದೊಡ್ಡ ವ್ಯವಹಾರವಾಗಿದೆ.




























